ಕೊಚ್ಚಿ ಹಿನ್ನೀರಲ್ಲಿ ಮೆಟ್ರೊ ಸೇವೆ !

Update: 2019-01-01 04:15 GMT
ಸಾಂದರ್ಭಿಕ ಚಿತ್ರ

ಕೊಚ್ಚಿನ್, ಜ. 1: ಗ್ರೇಟರ್ ಕೊಚ್ಚಿ ಜಲ ಸಾರಿಗೆ ಜಾಲಕ್ಕೆ ಮರುಹುಟ್ಟು ನೀಡಲು ಕೊಚ್ಚಿ ಮೆಟ್ರೊ ರೈಲ್ ಲಿಮಿಟೆಡ್ (ಕೆಎಂಆರ್‌ಎಲ್) ಮುಂದಾಗಿದೆ. ತಲಾ 100 ಮಂದಿ ಪ್ರಯಾಣಿಸುವ ಎಲೆಕ್ಟ್ರಿಕ್ ಬೋಟ್‌ಗಳನ್ನು ಹಿನ್ನೀರಿನಲ್ಲಿ ಈ ವರ್ಷದ ಡಿಸೆಂಬರ್‌ನಿಂದ ಆರಂಭಿಸುವುದಾಗಿ ಹೊಸ ವರ್ಷದ ಸಂದರ್ಭದಲ್ಲಿ ಕೆಎಂಆರ್‌ಎಲ್ ಘೋಷಿಸಿದೆ.

ಪ್ರತಿ ದೋಣಿಯ ವೆಚ್ಚ 4.6 ಕೋಟಿ ರೂಪಾಯಿ ಆಗಿದ್ದು, ಸಂಪೂರ್ಣ ಹವಾನಿಯಂತ್ರಿತ ದೋಣಿ ಇದಾಗಿರುತ್ತದೆ. 750 ಕೋಟಿ ರೂಪಾಯಿ ಅಂದಾಜು ವೆಚ್ಚದ ಈ ಮಹತ್ವಾಕಾಂಕ್ಷಿ ಜಲ ಮೆಟ್ರೊ ಯೋಜನೆ ಮುಂದಿನ ಮೂರು ವರ್ಷಗಳಲ್ಲಿ ಸಂಪೂರ್ಣವಾಗಿ ಸೌರವಿದ್ಯುತ್‌ನಿಂದ ಚಾಲಿತವಾಗಲಿವೆ. ಈ ಬೋಟ್‌ಗಳ ನಿರ್ಮಾಣಕ್ಕೆ ಫೆಬ್ರವರಿಯಲ್ಲಿ ಟೆಂಡರ್ ಆಹ್ವಾನಿಸಲಾಗುತ್ತಿದೆ.

ಈ ಯೋಜನೆಯನ್ನು ಫೇಮ್ (ಎಲೆಕ್ಟ್ರಿಕ್ ವಾಹನಗಳ ಕ್ಷಿಪ್ರ ಉತ್ಪಾದನೆ ಮತ್ತು ಅಳವಡಿಕೆ) ಕಾರ್ಯಕ್ರಮದಡಿ ಸೇರಿಸುವಂತೆ, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎ.ಪಿ.ಎಂ. ಮುಹಮ್ಮದ್ ಹನೀಶ್ ಸುದ್ದಿಗಾರರಿಗೆ ತಿಳಿಸಿದರು.

ಕೊಚ್ಚಿ ಜಲ ಮೆಟ್ರೊ ಯೋಜನೆಯನ್ನು ಜರ್ಮನ್ ಕೆಎಫ್‌ಡಬ್ಲ್ಯು ನೆರವಿನೊಂದಿಗೆ ಆರಂಭಿಸಲಾಗುತ್ತಿದೆ. ಯೋಜನೆಗೆ ಬ್ಯಾಂಕ್ 576 ಕೋಟಿ ರೂಪಾಯಿ ಧೀರ್ಘಾವಧಿ ಸಾಲ ನೀಡುತ್ತಿದೆ. ರಾಜ್ಯ ಸರ್ಕಾರ ಸಾಲವಾಗಿ 102 ಕೋಟಿ ರೂಪಾಯಿ ನೀಡಲಿದ್ದು, ಭೂಸ್ವಾಧೀನಕ್ಕೆ ತಗಲುವ 72 ಕೋಟಿಯನ್ನು ರಾಜ್ಯ ಸರ್ಕಾರ ಭರಿಸಲಿದೆ. ಹೀಗೆ 750 ಕೋಟಿ ರೂಪಾಯಿಯ ಯೋಜನೆಗೆ ಹಣಕಾಸು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News