ಭೀಮಾ ಕೋರೆಗಾಂವ್ ಯುದ್ಧಕ್ಕೆ 201 ವರ್ಷ: ಸ್ಮಾರಕದತ್ತ ತೆರಳಿದ ಲಕ್ಷಾಂತರ ದಲಿತರು

Update: 2019-01-01 18:20 GMT

ಪುಣೆ,ಜ.1: ಭೀಮಾ ಕೋರೆಗಾಂವ್ ಯುದ್ಧದ 201ನೇ ವರ್ಷದ ವಿಜಯೋತ್ಸವವನ್ನು ಆಚರಿಸಲು ಜನವರಿ ಒಂದರಂದು ಮಹಾರಾಷ್ಟ್ರದ ಪುಣೆಯ ಸಣ್ಣ ಗ್ರಾಮದತ್ತ ಸಾಗರೋಪಾದಿಯಲ್ಲಿ ದೇಶದ ಮೂಲೆಮೂಲೆಯಿಂದ ಲಕ್ಷಾಂತರ ದಲಿತರು ಆಗಮಿಸಿದರು. ಕಳೆದ ವರ್ಷ ನಡೆದ ಹಿಂಸಾಚಾರ ಮರುಕಳಿಸದಿರುವಂತೆ ತಡೆಯಲು ಸರಕಾರ ಭೀಮಾ ಕೋರೆಗಾಂವ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು.

ವಿವಿಧೆಡೆಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ನಿರ್ಮಿಸಿದ್ದ ಪೊಲೀಸ್ ಇಲಾಖೆ ಸ್ಥಳದಲ್ಲಿ 20,000 ಪೊಲೀಸರನ್ನು ನಿಯೋಜಿಸಿತ್ತು. ಯುದ್ಧ ಸ್ಮಾರಕ ವಿಜಯಸ್ತಂಭ ಇರುವ ಪೆರ್ನೆ ಗ್ರಾಮದಲ್ಲಿ 5,000 ಪೊಲೀಸರು, 1200 ಹೋಂಗಾರ್ಡ್‌ಗಳು, ರಾಜ್ಯ ಮೀಸಲು ಪೊಲೀಸ್ ಪಡೆಯ 12 ಕಂಪೆನಿಗಳು ಮತ್ತು 2,000 ದಲಿತ ಸ್ವಯಂಸೇವಕರನ್ನು ನಿಯೋಜಿಸಲಾಗಿದ್ದು, 500 ಸಿಸಿ ಕ್ಯಾಮರಾ, 11 ಡ್ರೋನ್ ಕ್ಯಾಮರಾ ಮತ್ತು 40 ವಿಡಿಯೊ ಕೆಮರಾಗಳನ್ನು ಅಳವಡಿಸಲಾಗಿತ್ತು. ಗ್ರಾಮದ ಸುತ್ತಮುತ್ತ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ಜನವರಿ 1, 1818ರಲ್ಲಿ ನಡೆದ ಭೀಮಾ ಕೋರೆಗಾಂವ್ ಯುದ್ಧದಲ್ಲಿ ಬ್ರಿಟಿಶ್ ಸೇನೆಯನ್ನು ಪ್ರತಿನಿಧಿಸಿದ್ದ ದಲಿತರು ಪೇಶ್ವೆಯ ಪಡೆಯನ್ನು ಸದೆಬಡಿದಿತ್ತು. ಈ ವಿಜಯದ ಸ್ಮರಣಾರ್ಥವಾಗಿ ಬ್ರಿಟಿಷರು ವಿಜಯ್ ಸ್ತಂಭವನ್ನು ಸ್ಥಾಪಿಸಿದ್ದರು. ಮಂಗಳವಾರ ಬೆಳಿಗ್ಗೆ ಬಾರಿಪ ಬಹುಜನ ಮಹಾಸಂಘದ ನಾಯಕ, ಡಾ. ಬಿ.ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಪ್ರಥಮವಾಗಿ ಜಯ ಸ್ತಂಭದತ್ತ ತೆರಳಿ ಶ್ರದ್ಧಾಂಜಲಿ ಅರ್ಪಿಸಿದರು. ಸ್ಮಾರಕದ ಮೇಲೆ ಪುಷ್ಟಗುಚ್ಛವನ್ನು ಇರಿಸಿದ ಅವರು ಇಡೀ ಕಾರ್ಯಕ್ರಮ ಶಾಂತಿಯುತ ನಡೆಯುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ಕಳೆದ ವರ್ಷ ಭೀಮಾ-ಕೋರೆಗಾಂವ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ದಲಿತರು ಮತ್ತು ಮೇಲ್ಜಾತಿಯವರ ಮಧ್ಯೆ ನಡೆದ ಹಿಂಸಾಚಾರದಲ್ಲಿ ಓರ್ವ ಮೃತಪಟ್ಟರೆ ಕನಿಷ್ಟ 40 ಮಂದಿ ಗಾಯಗೊಂಡಿದ್ದರು. ಈ ಹಿಂಸಾಚಾರದ ಕಾವು ನಿಧಾನವಾಗಿ ಇಡೀ ದೇಶದಲ್ಲಿ ವ್ಯಾಪಿಸಿತ್ತು.

► ಅನುಮತಿ ನೀಡದಿದ್ದರೂ ರ್ಯಾಲಿ ನಡೆಸಿದ ಭೀಮ್ ಆರ್ಮಿ

ಪುಣೆಯಿಂದ ಭೀಮಾ ಕೋರೆಗಾಂವ್‌ಗೆ ಬೈಕ್ ರ್ಯಾಲಿ ನಡೆಸಲು ಭೀಮ್ ಆರ್ಮಿಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದರೂ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಬೈಕ್ ರ್ಯಾಲಿ ನಡೆಸಿದರು. “ನಾನು ವಿಜಯಸ್ತಂಭವನ್ನು ನೋಡಲು ತೆರಳಿದ್ದೆ, ನನ್ನ ಹಿಂದೆ ಜನರು ಸೇರಿಕೊಂಡರು” ಎಂದು ಆಝಾದ್ ತಿಳಿಸಿದ್ದಾರೆ.

ವಿಜಯಸ್ತಂಭದತ್ತ ತೆರಳಲು ಹಲವು ಧಾರ್ಮಿಕ ನಾಯಕರು ಮತ್ತು ಸಂಘಟನೆಗಳಿಗೆ ಸರಕಾರ ಅನುಮತಿ ನೀಡಿರಲಿಲ್ಲ. ಬಲಪಂಥೀಯ ನಾಯಕರಾದ ಮಿಲಿಂದ್ ಎಕ್ಬೊಟೆ ಮತ್ತು ಸಂಭಾಜಿ ಭಿಡೆ ಹಾಗೂ ದಲಿತ ಸಂಘಟನೆ ಕಬೀರ್ ಕಲಾ ಮಂಚ್‌ಗೆ ಸ್ಮಾರಕದತ್ತ ತೆರಳಲು ಅನುಮತಿ ನಿರಾಕರಿಸಲಾಗಿತ್ತು.

ಕಳೆದ ವರ್ಷದಂತಲ್ಲದೆ, ಈ ವರ್ಷ ಸುತ್ತಮುತ್ತಲ ಗ್ರಾಮಗಳ ಜನರು ಶ್ರದ್ಧಾಂಜಲಿ ಸಮಾರಂಭಕ್ಕೆ ಎಲ್ಲ ರೀತಿಯ ನೆರವನ್ನು ನೀಡಿದರು. ಕಳೆದ ವರ್ಷಕ್ಕಿಂತ ಈ ವರ್ಷ ಸ್ಮಾರಕದತ್ತ ಆಗಮಿಸಿದ ಜನರ ಸಂಖ್ಯೆಯೂ ಹೆಚ್ಚಾಗಿತ್ತು. ಇದಕ್ಕೆ ಕಾರಣ, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಪಿ.ಬಿ ಸಾವಂತ್ ಮತ್ತು ಉಚ್ಚ ನ್ಯಾಯಾಲಯ ನಿವೃತ್ತ ನ್ಯಾಯಾಧೀಶ ಬಿ.ಜಿ ಕೊಲ್ಸೆ ಹಾಗೂ ಕಬೀರ್ ಕಲಾ ಮಂಚ್‌ನ ಕೆಲವು ವಿದ್ಯಾರ್ಥಿಗಳು ಭೀಮಾ ಕೋರೆಗಾಂವ್ ಯುದ್ಧದ ಇತಿಹಾಸವನ್ನು ಮಹಾರಾಷ್ಟ್ರದ ಗ್ರಾಮೀಣ ಜನರಿಗೆ ತಿಳಿಸಿರುವುದಾಗಿದೆ ಎಂದು ಪ್ರಕಾಶ್ ಅಂಬೇಡ್ಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News