ನನ್ನ ಆದ್ಯತೆ ನನ್ನ ಜಾತಿ: ವಿವಾದ ಸೃಷ್ಟಿಸಿದ ರಾಜಸ್ಥಾನ ಸಚಿವೆ

Update: 2019-01-02 07:09 GMT

ಜೈಪುರ, ಜ.2: ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ನೂತನ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮಮತಾ ಭೂಪೇಶ್ ಸಾರ್ವಜನಿಕ ಸಮಾರಂಭದಲ್ಲಿ, "ನನ್ನ ಮೊದಲ ಆದ್ಯತೆ ನನ್ನ ಸಮುದಾಯ" ಎಂದು ಘೋಷಿಸುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ.

ಭೂಪೇಶ್, ಗೆಹ್ಲೋಟ್ ಸಂಪುಟದಲ್ಲಿ ಸ್ಥಾನ ಪಡೆದಿರುವ ಪರಿಶಿಷ್ಟ ಜಾತಿಯ ಏಕೈಕ ವ್ಯಕ್ತಿ ಹಾಗೂ ಏಕೈಕ ಮಹಿಳೆ. ಅಲ್ವಾರ್ ಜಿಲ್ಲೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುವ ವೇಳೆ ಸಚಿವೆ, ನನ್ನ ಸಮುದಾಯಕ್ಕಾಗಿ ಶ್ರಮಿಸುವುದೇ ನನ್ನ ಮೊದಲ ಆದ್ಯತೆ ಎಂದು ಹೇಳಿದರು.

"ಯಾವಾಗ ನನ್ನ ಅಗತ್ಯ ಇದೆಯೋ ಆಗ ನಾನು ಬೆನ್ನು ತೋರಿಸುವುದಿಲ್ಲ. ಇದನ್ನು ನಿಮಗೆ ಮನವರಿಕೆ ಮಾಡಲು ಬಯಸುತ್ತೇನೆ. ಏಕೆಂದರೆ ನನ್ನ ಮೊದಲ ಆದ್ಯತೆ ನಮ್ಮ ಜಾತಿ; ಬಳಿಕ ಸಮಾಜ ಹಾಗೂ ಸಮಾಜದ ಎಲ್ಲರಿಗಾಗಿ" ಎಂದು ಸ್ಪಷ್ಟಪಡಿಸಿದರು.

ವಿರೋಧ ಪಕ್ಷವಾದ ಬಿಜೆಪಿ ಭೂಪೇಶ್ ಹೇಳಿಕೆಯನ್ನು ಕಟುವಾಗಿ ಟೀಕಿಸಿದೆ. "ಕೆಲ ದಿನಗಳ ಹಿಂದಷ್ಟೇ ಎಲ್ಲ ನಾಗರಿಕನ್ನು ಸಮಾನವಾಗಿ ಕಾಣುವುದಾಗಿ ಪ್ರತಿಜ್ಞೆ ಕೈಗೊಂಡಿದ್ದ ಸಚಿವೆ ಇದೀಗ, ಮೊದಲ ಆದ್ಯತೆ ಜಾತಿ; ನಂತರ ಸಮಾಜಕ್ಕೆ ಎಂದು ಹೇಳಿಕೆ ನೀಡಿದ್ದಾರೆ. ಇದು ರಾಜ್ಯ ಸರ್ಕಾರ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ತೋರಿಸುತ್ತದೆ. ಚುನಾವಣಾ ಪ್ರಚಾರದಲ್ಲಿ ಕೂಡಾ ಕಾಂಗ್ರೆಸ್ ಜಾತಿ ಮತ್ತು ಧರ್ಮದ ಆಧಾರದಲ್ಲಿ ಮತ ಪಡೆಯಲು ಪ್ರಯತ್ನಿಸಿತ್ತು" ಎಂದು ಬಿಜೆಪಿ ವಕ್ತಾರ ಮುಖೇಶ್ ಪಾರೀಕ್ ಹೇಳಿದ್ದಾರೆ.

ಆದರೆ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಚಿವೆ ಸಮರ್ಥಿಸಿಕೊಂಡಿದ್ದಾರೆ. ರಾಜ್ಯದ ಪ್ರತಿಯೊಬ್ಬರೂ ಗೌರವಯುತವಾಗಿ ಬಾಳಬೇಕು ಎನ್ನುವುದು ನನ್ನ ಇಚ್ಛೆ. ಪ್ರತಿಯೊಬ್ಬರ ಕಲ್ಯಾಣಕ್ಕೂ ಶ್ರಮಿಸುತ್ತೇನೆ ಎಂದು ಅವರು ಸಮುಜಾಯಿಷಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News