ಅಮೆರಿಕ: ಸರಕಾರ ಬಂದ್ ನಿಲ್ಲಿಸಲು ಡೆಮಾಕ್ರಟಿಕರಿಂದ ಪ್ರಸ್ತಾಪ
ವಾಶಿಂಗ್ಟನ್, ಜ. 2: ಅಮೆರಿಕ ಸರಕಾರದ ಆಂಶಿಕ ಬಂದನ್ನು ಕೊನೆಗೊಳಿಸುವ ಉದ್ದೇಶದ ಪ್ರಸ್ತಾಪವೊಂದನ್ನು ಸಂಸತ್ತು ಕಾಂಗ್ರೆಸ್‌ನ ಪ್ರತಿಪಕ್ಷ ಡೆಮಾಕ್ರಟಿಕ್ ಸಂಸದರು ಮಂಡಿಸಿದ್ದಾರೆ. ಆದರೆ, ಇದರಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಮಹತ್ವಾಕಾಂಕ್ಷೆಯ 35,000 ಕೋಟಿ ರೂಪಾಯಿ ಯೋಜನೆಯಾಗಿರುವ ಮೆಕ್ಸಿಕೊ ಗಡಿ ಗೋಡೆಗೆ ಹಣ ನೀಡುವ ಪ್ರಸ್ತಾಪವಿಲ್ಲ.
ಹಾಗಾಗಿ, ಸಹಜವಾಗಿಯೇ ಇದನ್ನು ಟ್ರಂಪ್ ತಿರಸ್ಕರಿಸಿದ್ದಾರೆ.
ಪ್ರಸ್ತಾಪವನ್ನು ಸೋಮವಾರ ನಿಯೋಜಿತ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮತ್ತು ಸೆನೆಟ್ ಅಲ್ಪಮತ ನಾಯಕ ಚಕ್ ಶೂಮರ್ ಮಂಡಿಸಿದ್ದಾರೆ. ಪ್ರಸ್ತಾಪವು ಎರಡು ಪ್ರತ್ಯೇಕ ಶಾಸನಾತ್ಮಕ ಅಂಶಗಳನ್ನು ಹೊಂದಿವೆ. ಅವುಗಳೆಂದರೆ, ಒಂದು, ಬಂದಾಗಿರುವ ಆರು ಇಲಾಖೆಗಳಿಗೆ ಇಡೀ ವರ್ಷದ ಬಜೆಟ್ ನೀಡುವುದು ಹಾಗೂ, ಎರಡನೆಯದು, ಗಡಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಆಂತರಿಕ ಭದ್ರತಾ ಇಲಾಖೆಗೆ ಫೆಬ್ರವರಿವರೆಗೆ ನಿಧಿ ಒದಗಿಸುವುದು.
‘‘ಟ್ರಂಪ್ ಬಂದನ್ನು ಅಧ್ಯಕ್ಷ ಟ್ರಂಪ್ ಎರಡನೇ ವಾರಕ್ಕೆ ಕೊಂಡೊಯ್ದಿದ್ದಾರೆ. ಅವರು ಈಗ ಶ್ವೇತಭವನದಲ್ಲಿ ಕುಳಿತು ಟ್ವೀಟ್ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಎರಡೂ ಸದನಗಳಲ್ಲಿ ಅಂಗೀಕಾರಗೊಳ್ಳುವ ಯಾವುದೇ ಪ್ರಸ್ತಾಪವನ್ನು ಅವರು ಸೂಚಿಸುತ್ತಿಲ್ಲ. ಆದರೆ, ನಮ್ಮ ದೇಶವನ್ನು ಈ ಬಿಕ್ಕಟ್ಟಿನಿಂದ ಪಾರು ಮಾಡಲು ಡೆಮಾಕ್ರಟಿಕರು ಪ್ರಯತ್ನಿಸುತ್ತಿದ್ದಾರೆ’’ ಎಂದು ಸೋಮವಾರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯೊಂದರಲ್ಲಿ ಪೆಲೋಸಿ ಮತ್ತು ಡೆಮಾಕ್ರಟಿಕ್ ಸೆನೆಟರ್ ಚಕ್ ಶೂಮರ್ ಹೇಳಿದ್ದಾರೆ.
► ಟ್ರಂಪ್ ನಕಾರ
ಡೆಮಾಕ್ರಟಿಕರ ಪ್ರಸ್ತಾಪಕ್ಕೆ ರಿಪಬ್ಲಿಕನ್ ಪಕ್ಷದ ಟ್ರಂಪ್ ನಿರೀಕ್ಷೆಯಂತೆಯೇ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
‘‘ನಾನು ಶಂಕಿಸಿರುವಂತೆಯೇ, ಡೆಮಾಕ್ರಟಿಕರು ಮೆಕ್ಸಿಕೊ ಗೋಡೆಗೆ ಹಣ ಕೊಟ್ಟಿಲ್ಲ. ಗೋಡೆಯಿಲ್ಲದೆ ನೈಜ ಗಡಿ ಭದ್ರತೆಯನ್ನು ಸಾಧಿಸಲು ಸಾಧ್ಯವಿಲ್ಲ. ನಮ್ಮ ದೇಶವು ಅಂತಿಮವಾಗಿ ಗಟ್ಟಿಯಾದ ಹಾಗೂ ಸುಭದ್ರ ದಕ್ಷಿಣದ ಗಡಿಯನ್ನು ಹೊಂದಬೇಕು’’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.