ಸಂವಿಧಾನದ ಘನತೆ ಎತ್ತಿ ಹಿಡಿದ ಕೇರಳದ ಮಹಿಳೆಯರು

Update: 2019-01-03 04:05 GMT

ಕೇರಳದ ಮಹಿಳೆಯರು ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ್ದಾರೆ. ಎದೆ ಮುಚ್ಚಿಕೊಳ್ಳುವ ಬಟ್ಟೆಗಾಗಿ ಶತಮಾನದ ಹಿಂದೆ ಬ್ರಾಹ್ಮಣ ಶಾಹಿಯ ವಿರುದ್ಧ ಹೋರಾಡಿ ಗೆದ್ದ ಹೆಣ್ಣುಮಕ್ಕಳು ಶಬರಿಮಲೆ ದೇವಾಲಯ ಪ್ರವೇಶಿಸಿ ತಮ್ಮ ಹಕ್ಕು ಪ್ರತಿಪಾದಿಸಿದ್ದಾರೆ. ಮಾತ್ರವಲ್ಲ ಸುಪ್ರೀಂ ಕೋರ್ಟ್ ತೀರ್ಪಿನ ಘನತೆ ಗೌರವ ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದಿದ್ದಾರೆ. ಯಾವುದೇ ಬೆಲೆ ತೆತ್ತಾದರೂ ಸುಪ್ರೀಂ ಕೋರ್ಟ್ ತೀರ್ಪು ಜಾರಿಗೆ ತರಲೇಬೇಕೆಂದು ಸಂಕಲ್ಪಮಾಡಿದ್ದ ಕೇರಳದ ಎಡರಂಗ ಸರಕಾರ ತನ್ನ ಮಾತು ಉಳಿಸಿಕೊಂಡಿದೆ. ಮಂಗಳವಾರ ಕೇರಳದ ಐವತ್ತು ಲಕ್ಷ ಮಹಿಳೆಯರು ಕಾಸರಗೋಡಿನಿಂದ ತಿರುವನಂತಪುರದವರೆಗೆ ಮಹಿಳಾ ಕೋಟೆ ನಿರ್ಮಿಸಿದ್ದರು.

ಇದರ ಬೆನ್ನಲ್ಲೇ ಬುಧವಾರ ಬೆಳಗಿನ ಜಾವ ಬಿಂದು ಮತ್ತು ಕನಕದುರ್ಗಾ ಎಂಬಿಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪನ ದೇಗುಲ ಪ್ರವೇಶಿಸಿ ಸಂಪ್ರದಾಯವಾದಿಗಳ ಕಂದಾಚಾರದ ಕರ್ಮಠ ಗೋಡೆಯನ್ನು ಕೆಡವಿದರು. ಕೇರಳದ ಶಬರಿಮಲೆ ಅಯ್ಯಪ್ಪನ ದೇವಾಲಯದಲ್ಲಿ 10 ವರ್ಷಗಳ ಮೇಲಿನ 50 ವರ್ಷಗಳ ಒಳಗಿನ ಮಹಿಳೆಯರಿಗೆ ಪ್ರವೇಶವಿಲ್ಲ ಎಂಬುದು ದೇವರು ಮಾಡಿದ ಕಟ್ಟುಪಾಡಲ್ಲ. ಮನುಷ್ಯರೇ ಮಾಡಿಕೊಂಡ ಕಟ್ಟುಪಾಡು. ಪುರುಷ ಪ್ರಧಾನ ಸಮಾಜದ ಅನಿಷ್ಟ, ಅವೈಜ್ಞಾನಿಕ, ಅಮಾನವೀಯ ನಂಬಿಕೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದಕ್ಕೆ ಜಾಗವಿಲ್ಲ.

ಸುಪ್ರೀಂಕೋರ್ಟ್ ಈ ದೇಗುಲದಲ್ಲಿ ಯಾವುದೇ ತಾರತಮ್ಯವಿಲ್ಲದೆ ಮಹಿಳೆಯರಿಗೆ ಪ್ರವೇಶ ನೀಡಬೇಕೆಂದು ಇತ್ತೀಚೆಗೆ ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೆ ತರುವುದು ಯಾವುದೇ ಚುನಾಯಿತ ಸರಕಾರದ ಕರ್ತವ್ಯ. ಅಂತಲೇ ಕೇರಳದ ಪಿಣರಾಯಿ ವಿಜಯನ್ ನಾಯಕತ್ವದ ಎಡರಂಗ ಸರಕಾರ ಈ ತೀರ್ಪಿನ ಪರವಾಗಿ ಬದ್ಧ್ದತೆ ಪ್ರಕಟಿಸಿದೆ. ಕೇರಳದಲ್ಲಿ ಕಾಲೂರಲು ಯತ್ನಿಸಿ ವಿಫಲಗೊಳ್ಳುತ್ತಲೇ ಇರುವ ಬಿಜೆಪಿ ಸೇರಿದಂತೆ ಸಂಘ ಪರಿವಾರಕ್ಕೆ ಇದೇ ಬೇಕಾಗಿತ್ತು. ಇದನ್ನೇ ನೆಪ ಮಾಡಿಕೊಂಡು ಕೇರಳ ಸರಕಾರದ ವಿರುದ್ಧ ಚಳವಳಿ ಎಂಬ ಹೆಸರಿನ ಬೀದಿ ದೊಂಬಿ ಆರಂಭಿಸಿತು. ದೊಂಬಿ, ಕಲ್ಲುತೂರಾಟದಿಂದ ಅಯ್ಯಪ್ಪನ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆಯೂ ಕಡಿಮೆಯಾಯಿತು. ದೇಗುಲದ ಆದಾಯವೂ ಕುಸಿಯಿತು. ಆದರೂ ಬಿಜೆಪಿಯ ಗೂಂಡಾಗಿರಿ ನಿಲ್ಲಲಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ದೊಂಬಿ ಮಾಡಬಾರದೆಂದು ತಮ್ಮ ಪಕ್ಷದ ಕೇರಳ ಘಟಕಕ್ಕೆ ಬುದ್ಧ್ದಿ ಹೇಳಬೇಕಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೇರಳಕ್ಕೆ ಬಂದು ರಾಜ್ಯ ಸರಕಾರದ ವಿರುದ್ಧ ದೊಂಬಿ, ಹಿಂಸಾಚಾರಕ್ಕೆ ಪ್ರಚೋದಿಸಿದರು. ಪ್ರಧಾನಿ ಸ್ಥಾನದಲ್ಲಿರುವ ವ್ಯಕ್ತಿ ಇಷ್ಟೆಲ್ಲ ಹಿಂಸಾಚಾರ ನಡೆದರೂ ಬಾಯಿಗೆ ಬೀಗ ಹಾಕಿಕೊಂಡಿದ್ದರು. ಈಗ ಅವರು ಒಮ್ಮ್ಮೆಲೇ ಎಚ್ಚೆತ್ತು ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮಾತಾಡಿದ್ದಾರೆ.

ದೇವಾಲಯದಲ್ಲಿ 10 ರಿಂದ 50 ವಯೋಮಾನದ ವರೆಗಿನ ಮಹಿಳೆಯರು ಪ್ರವೇಶಿಸಬಾರದೆಂಬುದು ಆ ದೇವಾಲಯದ ಸಂಪ್ರದಾಯ. ಪ್ರತಿಯೊಂದು ದೇವಾಲಯಕ್ಕೂ ತನ್ನದೇ ಆದ ಸಂಪ್ರದಾಯ ಇರುತ್ತದೆ, ಅದನ್ನು ಪಾಲಿಸಬೇಕು ಎಂಬ ಅರ್ಥದಲ್ಲಿ ಮಾತಾಡಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೊಂದಿಲ್ಲ. ಸಂವಿಧಾನವನ್ನೇ ಸಮಾಧಿ ಮಾಡಿ ಮನುವಾದ ತರಲು ಹೊರಟವರಿಂದ ಇನ್ನೆಂತಹ ಮಾತು ನಿರೀಕ್ಷಿಸಲು ಸಾಧ್ಯ? ಮನುವಾದ ತರಲು ಹೊರಟವರು ಒಂದು ಮಾತು ನೆನಪಿನಲ್ಲಿಟ್ಟುಕೊಳ್ಳಬೇಕು. ಕೇರಳಕ್ಕೆ ತನ್ನದೇ ಆದ ಸಮಾಜ ಸುಧಾರಣಾ ಹೋರಾಟದ ಇತಿಹಾಸವಿದೆ. ದೇವಾಲಯ ಪ್ರವೇಶಕ್ಕೆ ಸಂಬಂಧಿಸಿದಂತೆ ವೈಕಂ ಮತ್ತು ಗುರುವಾಯೂರು ಚಳವಳಿಗಳು ಈ ರಾಜ್ಯದಲ್ಲಿ ನಡೆದಿವೆ. ನಾರಾಯಣಗುರುಗಳು, ಅಯ್ಯನ್ ಕಾಳಿ, ಚಟ್ಟಾಂಬಿಸ್ವಾಮಿ, ಕೇಳಪ್ಪನ್, ಎಕೆಜಿ ಅವರಂಥ ಸಮಾಜ ಸುಧಾರಕರು, ಹೋರಾಟಗಾರರು ನಡೆದಾಡಿದ ನೆಲವಿದು. ಇಂತಹ ಪರಂಪರೆ ಹೊಂದಿರುವ ಕೇರಳದಲ್ಲಿ ಸಂಘ ಪರಿವಾರದ ಮನುವಾದಿ ಹೇಯ ಮೌಲ್ಯಗಳಿಗೆ ಅವಕಾಶವಿಲ್ಲ. ಇದು ಕೇರಳದಲ್ಲಿ ಮತ್ತೆ ಸ್ಪಷ್ಟವಾಗಿದೆ. ಜನತೆ ಸಂವಿಧಾನದ ಘನತೆ ಗೌರವಗಳನ್ನು ಎತ್ತಿ ಹಿಡಿದಿದ್ದಾರೆ. ಕಂದಾಚಾರಗಳನ್ನು ತಿರಸ್ಕರಿಸಿದ್ದಾರೆ.

ದಕ್ಷಿಣದಲ್ಲಿ ತನ್ನ ನೆಲೆ ಕಂಡುಕೊಳ್ಳಲು ಬಾಬಾಬುಡಾನಗಿರಿ, ಶಬರಿಮಲೆಯಂತಹ ಸಮಸ್ಯೆಗಳನ್ನು ಉಂಟು ಮಾಡಿ ಜನರ ಶಾಂತಿ ಮತ್ತು ನೆಮ್ಮದಿಗೆ ಭಂಗ ತಂದ ಬಿಜೆಪಿಗೆ ಜನರ ಬಳಿ ಹೋಗಲು ಬೇರೆ ವಿಷಯಗಳಿಲ್ಲ. ಇವರದೇ ಕೇಂದ್ರ ಸರಕಾರ ನೋಟು ಅಮಾನ್ಯೀಕರಣ, ಜಿಎಸ್‌ಟಿ, ಬೆಲೆ ಏರಿಕೆಯಂತಹ ಸಮಸ್ಯೆಗಳಿಂದಾಗಿ ಜನರ ತಿರಸ್ಕಾರಕ್ಕೆ ಗುರಿಯಾಗಿದೆ. ಜನತೆಗೆ ನೀಡಿದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಅಂತಲೇ ಇತ್ತೀಚಿನ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಂಡಿತು. ಮೋದಿ ಪ್ರಭಾವ ಕಳೆಗುಂದಿದೆ. ಅದಕ್ಕಾಗಿ ಅದು ದೇವರು ಮತ್ತು ಧರ್ಮಗಳನ್ನು ತನ್ನ ರಾಜಕೀಯ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಂಘಪರಿವಾರದ ಸಂಪ್ರದಾಯವಾದಿ ಕೋಮುವಾದಿ ಶಕ್ತಿಗಳೊಂದಿಗೆ ಅಲ್ಲಿ ಕೇರಳದ ಸಮಯ ಸಾಧಕ ಕಾಂಗ್ರೆಸ್ ಕೂಡಾ ಸೇರಿಕೊಂಡಿದೆ. ಈ ವಿಷಯದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರಿಗೂ, ರಾಜ್ಯ ನಾಯಕರಿಗೂ ತಾಳಮೇಳವಿಲ್ಲ. ಬಿಜೆಪಿ ಪರ ನಿಲುವು ತಾಳಿದರೆ ಹಿಂದೂಗಳ ಮತ ಬೀಳುತ್ತವೆ ಎಂಬುದು ಕಾಂಗ್ರೆಸ್‌ನ ಅವಕಾಶವಾದಿ ನಿಲುವಾಗಿದೆ.

ಕೇರಳದಲ್ಲಿ ಹಿಂದುಳಿದ ಈಳವ (ಈಡಿಗ-ಬಿಲ್ಲವ) ಸಮಾಜದ ಪಿಣರಾಯಿ ವಿಜಯನ್ ಮುಖ್ಯ ಮಂತ್ರಿಯಾಗಿರುವುದನ್ನು ಸಹಿಸದ ಮೇಲ್ಜಾತಿಯ ಮೇಲ್ವರ್ಗಗಳ ಪಟ್ಟಭದ್ರ ಹಿತಾಸಕ್ತಿಗಳು ಈ ದೊಂಬಿಯಲ್ಲಿ ಸಂಘಪರಿವಾರದ ಜೊತೆ ಸೇರಿವೆ. ಕೇರಳ ಬಿಜೆಪಿಯ ಇತ್ತೀಚಿನ ಮುಖಪತ್ರದಲ್ಲಿ ಶೆೇಂದಿ ಇಳಿಸುವವರು ಮುಖ್ಯಮಂತ್ರಿಯಾದರೆ ಹೀಗಾಗುತ್ತದೆ ಎಂಬರ್ಥದ ವ್ಯಂಗ್ಯ ಚಿತ್ರ ವಿವಾದ ಉಂಟು ಮಾಡಿದೆ. ಈಗ ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರ ದೇವಾಲಯ ಪ್ರವೇಶವನ್ನು ವಿರೋಧಿಸುವವರು ನಾಳೆ ಇದೇ ಸಂಪ್ರದಾಯದ ಹೆಸರಿನಲ್ಲಿ ದಲಿತರ, ಅಸ್ಪಶ್ಯರ ದೇಗುಲ ಪ್ರವೇಶವನ್ನು ವಿರೋಧಿಸುತ್ತಾರೆ. ಇವರು ಕಟ್ಟಲು ಹೊರಟ ಹಿಂದೂ ರಾಷ್ಟ್ರ ಇದೇ ಅಪಾಯಕಾರಿ ಅಂಶಗಳನ್ನು ಒಳಗೊಂಡಿದೆ. ಕೇರಳದ ಶಬರಿಮಲೆ ದೇಗುಲದ ಪ್ರವೇಶಕ್ಕೆ ಸಂಬಂಧಿಸಿದಂತೆ ರಾಜ್ಯವನ್ನು ಶತಮಾನಗಳ ಹಿಂದಿನ ಕತ್ತಲಯುಗಕ್ಕೆ ಕೊಂಡೊಯ್ಯಲು ಯತ್ನಿಸಿ ವಿಫಲಗೊಂಡ ಕರ್ಮಠ ಮನುವಾದಿ, ಕೋಮುವಾದಿ ವ್ಯಕ್ತಿಗಳನ್ನು ಹಿಮ್ಮೆಟ್ಟಿಸಿದ ಕೇರಳದ ಜನತೆೆ, ಮಹಿಳೆಯರು, ಹಾಗೂ ಅಲ್ಲಿನ ಎಡರಂಗ ಸರಕಾರಕ್ಕೆ ಅಭಿನಂದನೆಗಳು,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News