ಕಣ್ಣಿನ ಪೊರೆಯ ಸಮಸ್ಯೆಯ ಕುರಿತ ಈ ಸುಳ್ಳುಗಳನ್ನು ನಂಬಬೇಡಿ.......

Update: 2019-01-03 11:52 GMT

2017ರಲ್ಲಿ ನಡೆಸಲಾದ ಅಧ್ಯಯನವೊಂದರಂತೆ ವಿಶ್ವಾದ್ಯಂತ ಸುಮಾರು 95 ಮಿಲಿಯ ಜನರು ಕ್ಯಾಟರಾಕ್ಟ್ ಅಥವಾ ಕಣ್ಣಿನ ಪೊರೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದನ್ನು ಮೋತಿಬಿಂದು ಎಂದೂ ಕರೆಯಲಾಗುತ್ತದೆ. ಮಧ್ಯಮ ಆದಾಯ ಮತ್ತು ಕಡಿಮೆ ಆದಾಯದ ದೇಶಗಳಲ್ಲಿ ಕ್ಯಾಟರಾಕ್ಟ್ ಅಂಧತ್ವಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿದೆ. 2020ರ ವೇಳೆಗೆ ಭಾರತದಲ್ಲಿ ಕ್ಯಾಟರಾಕ್ಟ್ ಪೀಡಿತರ ಸಂಖ್ಯೆ 8.25 ಮಿಲಿಯಕ್ಕೆ ತಲುಪುಲಿದೆ ಎಂದು ಅಂದಾಜಿಸಲಾಗಿದೆ. ಕ್ಯಾಟರಾಕ್ಟ್ ಎಂದರೇನು?

ಕಣ್ಣಿನ ನೈಸರ್ಗಿಕ ಮಸೂರವು ಸ್ಫಟಿಕದಂತಹ ವಸ್ತುವಾಗಿದ್ದು ಬೆಳಕಿಗೆ ಪಾರದರ್ಶಕವಾಗಿರುತ್ತದೆ. ಕ್ಯಾಟರಾಕ್ಟ್‌ನಿಂದ ಬಳಲುತ್ತಿರುವವರಲ್ಲಿ ಈ ಮಸೂರದೊಳಗೆ ಅಪಾರದರ್ಶಕತೆಯುಂಟಾಗಿರುತ್ತದೆ ಅಥವಾ ಪೊರೆಯು ಬೆಳೆದಿರುತ್ತದೆ. ಇದು ಒಳಬರುವ ಬೆಳಕಿನ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ ಮಾತ್ರವಲ್ಲ,ದೃಷ್ಟಿಯನ್ನು ಮಸುಕುಗೊಳಿಸುತ್ತದೆ.

ಶೇ.90ರಷ್ಟು ರೋಗಿಗಳು ‘ಸೆನೈಲ್’ ವಿಧದ ಕ್ಯಾಟರಾಕ್ಟ್‌ನಿಂದ ಬಳುತ್ತಿದ್ದು,ಇದರಲ್ಲಿ ವ್ಯಕ್ತಿಗೆ ವಯಸ್ಸಾಗುತ್ತ ಹೋದಂತೆ ಕಣ್ಣಿನ ಮಸೂರದ ಅಪಾರದರ್ಶಕತೆಯೂ ಹೆಚ್ಚುತ್ತ ಹೋಗುತ್ತದೆ. ಕ್ಯಾಟರಾಕ್ಟ್ ಹೆಚ್ಚಾಗಿ 50 ವರ್ಷಕ್ಕಿಂತ ಹೆಚ್ಚು ವಯಸ್ಸಾದವರನ್ನು ಬಾಧಿಸುತ್ತದೆ ಮತ್ತು ವಯಸ್ಸಿನೊಂದಿಗೆ ರೋಗಬಾಧೆಯೂ ಹೆಚ್ಚುತ್ತದೆ. ಧೂಮ್ರಪಾನ, ಅಲ್ಟ್ರಾವಯಲೆಟ್ ಕಿರಣಗಳು,ಮಧುಮೇಹ,ಕುಪೋಷಣೆ,ಕಣ್ಣಿನ ಗಾಯ,ಸ್ಟಿರಾಯ್ಡಿ ಔಷಧಿಗಳು ಮತ್ತು ಕ್ಯಾಟರಾಕ್ಟ್‌ನ ಕುಟುಂಬ ಇತಿಹಾಸ ಇವೂ ಈ ರೋಗಕ್ಕೆ ಕಾರಣವಾಗುತ್ತವೆ.

ಕ್ಯಾಟರಾಕ್ಟ್ ಕ್ರಮೇಣ ದೃಷ್ಟಿಯನ್ನು ನಷ್ಟಗೊಳಿಸುತ್ತದೆ. ಅದು ಕಣ್ಣುಗಳಲ್ಲಿ ನೋವು ಅಥವಾ ಉರಿಯ ಅನುಭವವನ್ನುಂಟು ಮಾಡುವುದಿಲ್ಲ. ಆದರೆ ಕಾಲಕ್ರಮೇಣ ದೃಷ್ಟಿಯನ್ನು ಮಸುಕುಗೊಳಿಸುತ್ತದೆ ಮತ್ತು ಗೋಚರತೆಯನ್ನು ಕುಂದಿಸುತ್ತದೆ ಹಾಗೂ ಬಿಸಿಲು ಮತ್ತು ಉಜ್ವಲ ಬೆಳಕನ್ನು ನೋಡುವುದು ಕಷ್ಟವಾಗುತ್ತದೆ. ಆರಂಭಿಕ ಹಂತಗಳಲ್ಲಿ ಚಿಕಿತ್ಸೆ ಪಡೆಯದಿದ್ದರೆ ಕ್ಯಾಟರಾಕ್ಟ್ ಅಂಧತ್ವವನ್ನುಂಟು ಮಾಡುತ್ತದೆ. ಕ್ಯಾಟರಾಕ್ಟ್ ಕುರಿತಂತೆ ಹಲವಾರು ಸಾಮಾನ್ಯ ಮಿಥ್ಯೆಗಳು ಹುಟ್ಟಿಕೊಂಡಿವೆ. ಇವುಗಳ ಹಿಂದಿನ ಸತ್ಯವಿಲ್ಲಿದೆ......

► ಕ್ಯಾಟರಾಕ್ಟ್ ವೃದ್ಧರಿಗೆ ಮಾತ್ರ ಬರುತ್ತದೆ

ಕ್ಯಾಟರಾಕ್ಟ್ ಸಾಮಾನ್ಯವಾಗಿ ವಯಸ್ಸಾದ ಜನರಲ್ಲಿ ಕಂಡುಬರುತ್ತದೆಯಾದರೂ,ಅದು ಯಾವುದೇ ವಯಸ್ಸಿನ ವ್ಯಕ್ತಿಯನ್ನು ಕಾಡಬಹುದು. ಅದು ಜನ್ಮಜಾತವಾಗಿರಬಹುದು,ಜನನದ ವೇಳೆ ಉಂಟಾಗಬಹುದು ಅಥವಾ ವಂಶವಾಹಿಯಲ್ಲಿರಬಹುದು. ಧೂಮ್ರಪಾನ,ಕಣ್ಣಿನ ಗಾಯ,ಪೌಷ್ಟಿಕಾಂಶಗಳ ಕೊರತೆ,ಮಧುಮೇಹ,ಒತ್ತಡ,ಅಧಿಕ ರಕ್ತದೊತ್ತಡ ಮತ್ತು ಗ್ಲುಕೋಮಾದಂತಹ ಇತರ ಕಾರಣಗಳಿಂದಲೂ ಕ್ಯಾಟರಾಕ್ಟ್ ಉಂಟಾಗಬಹುದು.

► ಆಹಾರ ಕ್ರಮ,ಯೋಗ ಮತ್ತು ವ್ಯಾಯಾಮದಿಂದ ಕ್ಯಾಟರಾಕ್ಟ್ ತಡೆಯಬಹುದು

ಇದು ಹೆಚ್ಚಿನ ಜನರು ನಂಬಿರುವ ಸಾಮಾನ್ಯ ಮಿಥ್ಯೆಗಳಲ್ಲೊಂದಾಗಿದೆ. ಅದರೆ ಇದು ಸತ್ಯವಲ್ಲ. ಔಷಧಿಗಳು,ಆಹಾರ ಕ್ರಮ,ಯೋಗ ಅಥವಾ ವ್ಯಾಯಾಮದಿಂದ ಕ್ಯಾಟರಾಕ್ಟ್‌ನ್ನು ತಡೆಯಲು ಸಾಧ್ಯವಿಲ್ಲ. ವಾಸ್ತವದಲ್ಲಿ ಕ್ಯಾಟರಾಕ್ಟ್‌ಗೆ ತಡೆ ಎನ್ನುವುದೇ ಇಲ್ಲ. ಆದರೆ ನಿಯಮಿತವಾಗಿ ಕಣ್ಣುಗಳ ತಪಾಸಣೆ,ಧೂಮ್ರಪಾನ ವರ್ಜನೆ,ಉತ್ಕರ್ಷಣ ನಿರೋಧಕ ಗಳು ಸಮೃದ್ಧವಾಗಿರುವ ಆಹಾರಗಳ ಸೇವನೆ,ಆರೋಗ್ಯಕರ ದೇಹತೂಕವನ್ನು ಕಾಯ್ದುಕೊಳ್ಳುವಿಕೆ ಮತ್ತು ತಂಪು ಕನ್ನಡಕಗಳನ್ನು ಧರಿಸುವ ಮೂಲಕ ಅಲ್ಟ್ರಾವಯಲೆಟ್ ಕಿರಣಗಳಿಂದ ರಕ್ಷಣೆ ಇವು ಕ್ಯಾಟರಾಕ್ಟ್ ಉಂಟಾಗುವ ಅಪಾಯವನ್ನು ತಗ್ಗಿಸುತ್ತವೆ.

► ಐ ಡ್ರಾಪ್‌ಗಳು ಕ್ಯಾಟರಾಕ್ಟ್‌ನ್ನು ತಡೆಯುತ್ತವೆ/ಕರಗಿಸುತ್ತವೆ

ಐ ಡ್ರಾಪ್‌ಗಳು ಅಥವಾ ಕಣ್ಣಿಗೆ ಹನಿಗಳ ರೂಪದಲ್ಲಿ ಹಾಕುವ ಔಷಧಿಗಳ ಉತ್ಪಾದಕರು ಎಷ್ಟೇ ಬಡಾಯಿ ಕೊಚ್ಚಿಕೊಳ್ಳುತ್ತಿರಲಿ, ಕ್ಯಾಟರಾಕ್ಟ್‌ನ್ನು ತಡೆಯಬಲ್ಲ,ಗುಣಪಡಿಸುವ ಅಥವಾ ಕರಗಿಸುವ ಐ ಡ್ರಾಪ್ ಇಲ್ಲವೇ ಇಲ್ಲ. ವಾಸ್ತವದಲ್ಲಿ ಇಂತಹ ಯಾವುದೇ ಐ ಡ್ರಾಪ್‌ನ್ನು ಆಹಾರ ಮತ್ತು ಔಷಧಿ ಆಡಳಿತ ಇಲಾಖೆಯು ಅನುಮೋದಿಸಿಲ್ಲ. ಕ್ಯಾಟರಾಕ್ಟ್ ವ್ಯಕ್ತಿಗೆ ವಯಸ್ಸು ಹೆಚ್ಚಾದಂತೆ ಅಥವಾ ಈಗಾಗಲೇ ತಿಳಿಸಿರುವಂತೆ ಇತರ ಕಾರಣಗಳಿಂದಾಗಿ ಬರುವ ರೋಗವಾಗಿದ್ದು,ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯವಾಗುತ್ತದೆ.

► ಕ್ಯಾಟರಾಕ್ಟ್‌ನ್ನು ಪೂರ್ವ ಸ್ಥಿತಿಗೆ ತರಬಹುದು

ಇದು ಇನ್ನೊಂದು ಅಪ್ಪಟ ಸುಳ್ಳು. ವಯಸ್ಸಾದಂತೆ ನೈಸರ್ಗಿಕವಾಗಿ ಅಥವಾ ರೋಗಗಳಿಂದ ಕಣ್ಣಿನ ಮಸೂರವನ್ನು ಪೊರೆಯು ಆವರಿಸಿಕೊಳ್ಳುವುದರಿಂದ ಕ್ಯಾಟರಾಕ್ಟ್‌ನ್ನು ಪೂರ್ವ ಸ್ಥಿತಿಗೆ ತರಲು ಸಾಧ್ಯವಿಲ್ಲ ಮತ್ತು ಇದೇ ಕಾರಣದಿಂದ ಕ್ಯಾಟರಾಕ್ಟ್‌ನ್ನು ತಡೆಯಲು ಸಾಧ್ಯವಿಲ್ಲ. ಆದರೆ ಸರಳ ಕ್ರಮಗಳಿಂದ ಮಸೂರಕ್ಕ ಹಾನಿಯಾಗುವ ಪ್ರಕ್ರಿಯೆಯನ್ನು ವಿಳಂಬಿಸಬಹುದು. ಸಮತೋಲಿತ ಆಹಾರ ಸೇವನೆ,ಧೂಮ್ರಪಾನ ವರ್ಜನೆ,ಅಲ್ಟ್ರಾವಯಲೆಟ್ ಕಿರಣಗಳಿಂದ ರಕ್ಷಣೆಗಾಗಿ ತಂಪು ಕನ್ನಡಕಗಳ ಧಾರಣೆ ಇವು ಈ ಸರಳ ಕ್ರಮಗಳಲ್ಲಿ ಸೇರಿವೆ.

► ಕ್ಯಾಟರಾಕ್ಟ್ ಮರುಕಳಿಸುತ್ತದೆ

ಕಣ್ಣಿನ ಮಸೂರದ ಜೀವಕೋಶಗಳು ಸತ್ತು ಸಂಗ್ರಹಗೊಳ್ಳುವ ಮೂಲಕ ಪೊರೆ ರೂಪುಗೊಳ್ಳಲು ಕಾರಣವಾಗುತ್ತದೆ ಮತು ಇದು ದೃಷ್ಟಿಯನ್ನು ಮಸುಕಾಗಿಸುತ್ತದೆ. ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ವ್ಯಕ್ತಿಯ ದೋಷಪೂರಿತ ಮಸೂರವನ್ನು ತೆಗೆದು ಅದರ ಬದಲಿಗೆ ಕೃತಕ ಮಸೂರವನ್ನು ಅಳವಡಿಸಲಾಗುತ್ತದೆ. ಹೀಗಾಗಿ ಕ್ಯಾಟರಾಕ್ಟ್ ಮರುಕಳಿಸುವುದಿಲ್ಲ. ಆದರೆ ಕೆಲವು ಪ್ರಕರಣಗಳಲ್ಲಿ ಮಸೂರವನ್ನು ಹಿಡಿದಿಟ್ಟುಕೊಳ್ಳುವ ವಪೆಯು ಅಪಾರದರ್ಶಕ ಗೊಳ್ಳಬಹುದು ಮತ್ತು ಇದನ್ನು ಸೆಕೆಂಡರಿ ಕ್ಯಾಟರಾಕ್ಟ್ ಎಂದು ಕರೆಯುತ್ತಾರೆ. ಇದನ್ನು ನೋವುರಹಿತ ಲೇಸರ್ ಶಸ್ತ್ರಚಿಕಿತ್ಸೆಯಿಂದ ಸುಲಭವಾಗಿ ಗುಣಪಡಿಸಬಹುದು.

► ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಯು ಯಾತನಾದಾಯಕ ಮತ್ತು ಅಪಾಯಕಾರಿ

ಇದೊಂದು ಸಾಮಾನ್ಯ ತಪ್ಪುಗ್ರಹಿಕೆಯಾಗಿದ್ದು,ಇದೇ ಕಾರಣದಿಂದ ಹೆಚ್ಚಿನವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಹಿಂಜರಿಯುತ್ತಾರೆ. ವಾಸ್ತವದಲ್ಲಿ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಯು ಅತ್ಯಂತ ಸುರಕ್ಷಿತ ಶಸ್ತ್ರಚಿಕಿತ್ಸೆಗಳಲೊಂದಾಗಿದ್ದು, ಶೇ.95ರಷ್ಟು ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗುತ್ತವೆ.

► ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳಲು ತಿಂಗಳುಗಳೇ ಬೇಕು

ಹೆಚ್ಚಿನ ಜನರಲ್ಲಿ ಶಸ್ತ್ರಚಿಕಿತ್ಸೆಯಾದ ಬಳಿಕ ತಕ್ಷಣವೇ ದೃಷ್ಟಿಯಲ್ಲಿ ಸುಧಾರಣೆ ಕಂಡು ಬರುತ್ತದೆ. ಆದರೆ ಕೆಲವರಲ್ಲಿ ಶಸ್ತ್ರಚಿಕಿತ್ಸೆಯ ಬಳಿಕ ಕೆಲವು ವಾರಗಳಲ್ಲಿ ಕ್ರಮೇಣ ಸುಧಾರಣೆಯಾಗುತ್ತದೆ. ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯ ಮರುದಿನ ಕಣ್ಣಿನ ಪಟ್ಟಿಯನ್ನು ತೆಗೆಯಲಾಗುತ್ತದೆ ಮತ್ತು ವ್ಯಕ್ತಿಯು ಸಾಮಾನ್ಯ ದೈನಂದಿನ ಚಟುವಟಿಕೆಗಳನ್ನು ಆರಂಭಿಸಬಹುದಾಗಿದೆ. ಆದರೆ ಶಸ್ತ್ರಚಿತ್ಸೆಯ ಬಳಿಕ ಕನಿಷ್ಠ ಮೂರು ವಾರಗಳ ಕಾಲ ಬಗ್ಗುವುದನ್ನಾಗಲೀ ಭಾರವಾದ ವಸ್ತುಗಳನ್ನು ಎತ್ತುವುದನ್ನಾಗಲೀಮಾಡಬಾರದು. ಅಲ್ಲದೆ ಕಣ್ಣನ್ನು ಉಜ್ಜಿಕೊಳ್ಳುವುದನ್ನು ಮತ್ತು ಒತ್ತುವುದನ್ನು ಮಾಡಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News