ಅಭಿವ್ಯಕ್ತಿ ಸ್ವಾತಂತ್ರ್ಯ, ಅಸಮ್ಮತಿಯ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ: ನಾಸಿರುದ್ದೀನ್ ಶಾ

Update: 2019-01-04 17:03 GMT

ಮುಂಬೈ, ಜ. 3: ಭಾರತದಲ್ಲಿ ಮಕ್ಕಳ ಸುರಕ್ಷೆ ಬಗ್ಗೆ ಕಳವಳ ವ್ಯಕ್ತಪಡಿಸಿ ವಿವಾದಕ್ಕೆ ಒಳಗಾದ ಕೆಲವು ದಿನಗಳ ಬಳಿಕ ಬಾಲಿವುಡ್ ನಟ ನಾಸಿರುದ್ದೀನ್ ಶಾ, ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುತ್ತಿರುವ ವಿರುದ್ಧ ಧ್ವನಿ ಎತ್ತಿದ್ದಾರೆ. ಆ್ಯಮ್ನೆಸ್ಟಿ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಶಾ ಕಲಾವಿದರು, ನಟ-ನಟಿಯರ ಅಭಿವ್ಯಕ್ತಿ ಸ್ವಾಂತ್ರಂತ್ರ್ಯವನ್ನು ಹತ್ತಿಕುತ್ತಿರುವ ಹಾಗೂ ಪತ್ರಕರ್ತರ ಧ್ವನಿಯನ್ನು ಅಡಗಿಸುತ್ತಿರುವ ಬಗ್ಗೆ ಮಾತನಾಡುವುದು ಕೇಳಿ ಬಂದಿದೆ.

2 ನಿಮಿಷ ಹಾಗೂ 14 ಸೆಕೆಂಡ್‌ಗಳ ಈ ವೀಡಿಯೊದಲ್ಲಿ ಭಾರತದ ಸಂವಿಧಾನವನ್ನು ಅಳವಡಿಸಿಕೊಂಡಿರುವ ಬಗ್ಗೆ ಅವರು ಮಾತು ಆರಂಭಿಸಿದ್ದಾರೆ. ಅನಂತರ ಬಡವರ ದಮನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “1949 ಜನವರಿ 26ರಂದು ಭಾರತದ ಸಂವಿಧಾನ ಅಳವಡಿಸಿಕೊಳ್ಳಲಾಯಿತು. ಆರಂಭದಲ್ಲಿ ಇದರ ಮುಖ್ಯ ಮೌಲ್ಯ ಭಾರತದ ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಒದಗಿಸುವ ಉದ್ದೇಶ ಹೊಂದಿತ್ತು. ಅಭಿವ್ಯಕ್ತಿ, ನಂಬಿಕೆ ಹಾಗೂ ಆರಾಧನೆ, ಚಿಂತನೆಗೆ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಇತ್ತು. ಪ್ರತಿಯೊಬ್ಬರನ್ನೂ ಸಮಾನರಾಗಿ ಪರಿಗಣಿಸಲಾಗಿತ್ತು. ಪ್ರತಿಯೊಬ್ಬರಿಗೂ ಗೌರವದಿಂದ ಜೀವಿಸುವ ಹಕ್ಕು ಇತ್ತು. ದೇಶದಲ್ಲಿ ಬಡವರ ಮನೆ, ಭೂಮಿ, ಜೀವನ ಉಳಿಸಲು ನೆರವು ನೀಡುವವರಿಗೆ, ಅವರ ಹಕ್ಕುಗಳ ಬಗ್ಗೆ ಮಾತನಾಡುವವರಿಗೆ, ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತುವವರಿಗೆ ಸಂವಿಧಾನ ರಕ್ಷಣೆ ನೀಡುತ್ತಿತ್ತು. ಆದರೆ, ಇಂದು ಹಕ್ಕುಗಳಿಗಾಗಿ ಆಗ್ರಹಿಸುವುದನ್ನು ಪ್ರತಿಬಂಧಿಸಲಾಗುತ್ತಿದೆ. ಕಲಾವಿದರು, ನಟ- ನಟಿಯರು, ಬುದ್ಧಿಜೀವಿಗಳು, ಕವಿಗಳನ್ನು ಹತ್ತಿಕ್ಕಲಾಗುತ್ತಿದೆ. ಪತ್ರಕರ್ತರನ್ನು, ಧ್ವನಿಯನ್ನು ನಿಗ್ರಹಿಸಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ದ್ವೇಷದ ಗೋಡೆಗಳನ್ನು ಕಟ್ಟಲಾಗುತ್ತಿದೆ. ಅಮಾಯಕರು ಬಲಿಯಾಗುತ್ತಿದ್ದಾರೆ. ದೇಶ ಅಮಾನುಷ ದ್ವೇಷ ಹಾಗೂ ಕ್ರೂರತೆಯಲ್ಲಿ ಕೊಚ್ಚಿ ಹೋಗುತ್ತಿದೆ. ಅನ್ಯಾಯದ ವಿರುದ್ಧ ನಿಲ್ಲುವವರ ಕಚೇರಿ ಮೇಲೆ ದಾಳಿ ಮಾಡಲಾಗುತ್ತಿದೆ, ಅವರ ಪರವಾನಿಗೆ ರದ್ದು ಮಾಡಲಾಗುತ್ತಿದೆ, ಬ್ಯಾಂಕ್ ಖಾತೆ ಸ್ತಂಭನಗೊಳಿಸಲಾಗುತ್ತಿದೆ. ಅವರ ಧ್ವನಿ ಅಡಗಿಸಲಾಗುತ್ತಿದೆ. ಇದೆಲ್ಲ ಮಾಡುತ್ತಿರುವುದು ಕೇವಲ ಅವರು ಸತ್ಯ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ” ಎಂದು ಶಾ ವೀಡಿಯೊದಲ್ಲಿ ಹೇಳಿದ್ದಾರೆ.

ವೀಡಿಯೊದಲ್ಲಿ ಶಾ ದುರ್ಬಲರು ಹಾಗೂ ದಮನಿತರ ಹಕ್ಕುಗಳ ಕುರಿತು ಪ್ರಶ್ನಿಸುವ ಮೂಲಕ ಕೊನೆಗೊಂಡಿದೆ. “ನಮ್ಮ ಸಂವಿಧಾನ ಎತ್ತ ಸಾಗುತ್ತಿದೆ ? ಭಿನ್ನಮತಕ್ಕೆ ಅವಕಾಶವಿಲ್ಲದ ದೇಶದ ಕನಸನ್ನು ನಾವು ಕಂಡಿದ್ದೇವೆಯೇ ?, ಶ್ರೀಮಂತರು ಹಾಗೂ ಪ್ರಭಾವಶಾಲಿಗಳ ಧ್ವನಿಯನ್ನು ಮಾತ್ರ ಕೇಳಬೇಕೇ ? ಎಲ್ಲಿ ಒಂದು ಕಾಲದಲ್ಲಿ ಕಾನೂನು ಇತ್ತೋ, ಈಗ ಅಲ್ಲಿ ಗಾಢ ಅಂಧಕಾರ ತುಂಬಿದೆ, ಎಂದು ಶಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News