ವರ್ಷಾಂತ್ಯದಲ್ಲಿ ಗುರಿ ತಲುಪದ ವಿದ್ಯುತ್ ಸಂಪರ್ಕ: ಪ್ರತಿಕ್ರಿಯಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ, ಜ. 4: ಅಂತಿಮ ಗಡುವಾದ ಮಾರ್ಚ್ 31ರ ಒಳಗೆ ಪ್ರತಿ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ ತಲುಪುವ ದಿಶೆಯಲ್ಲಿ ಇದೆ. ಡಿಸೆಂಬರ್ 31 ವಿದ್ಯುತ್ ಸಚಿವಾಲಯದ ಕೇವಲ ‘ಆಂತರಿಕ ಗುರಿ’ ಎಂದು ಕೇಂದ್ರ ಸರಕಾರ ಹೇಳಿದೆ.
ವರ್ಷಾಂತ್ಯದ ಒಳಗೆ ಸಂಪೂರ್ಣ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿತ್ತು. ಆದರೆ, ಕೆಲವು ರಾಜ್ಯಗಳು ಆಂತರಿಕ ದಿನಾಂಕದ ಗಡುವಿನಲ್ಲಿ ಗುರಿ ಸಾಧಿಸಲು ಸಫಲವಾಗಿಲ್ಲ. ಅಧಿಕೃತ ಗಡುವಿನ ದಿನಾಂಕದ ಮೊದಲು ಈ ರಾಜ್ಯಗಳು ತನ್ನ ಗುರಿ ಸಾಧಿಸಲು ಸಫಲವಾಗುವ ಸಾಧ್ಯತೆ ಇದೆ ಎಂದು ವಿದ್ಯುತ್ ಸಚಿವಾಲಯ ತಿಳಿಸಿದೆ.
ಎರಡು ಗಡುವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಉಲ್ಲೇಖಿಸಿದ್ದಾರೆ. 2018ರ ಒಳಗೆ ಕೇಂದ್ರ ಸರಕಾರ ಪೂರ್ಣ ಪ್ರಮಾಣದ ವಿದ್ಯುತ್ ಸಂಪರ್ಕ ಸಾಧಿಸಲಿದೆ ಎಂದು ವಿದ್ಯುತ್ ಸಚಿವ ಆರ್.ಕೆ. ಸಿಂಗ್ ನವೆಂಬರ್‌ನಲ್ಲಿ ಹೇಳಿದ್ದರು. ಆದರೆ, ಈ ಅಂತಿಮ ಗಡು ದಾಟಿದೆ. ದೇಶದ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಕೇಂದ್ರ ಸರಕಾರ ‘ಪ್ರತಿ ಮನೆಗೆ ವಿದ್ಯುತ್ ಯೋಜನೆ’ ಆರಂಭಿಸಿದ್ದು, 31 ಡಿಸೆಂಬರ್ 2018ರ ಒಳಗೆ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಎಪ್ರಿಲ್‌ನಲ್ಲಿ ಸಚಿವಾಲಯ ತಿಳಿಸಿತ್ತು.
ಕಳೆದ ವರ್ಷ ಇದೇ ಸಂದರ್ಭ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಿಂಗ್, 2019 ಮಾರ್ಚ್ ಗಡುವಿನ ಒಳಗೆ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವುದನ್ನು ಪೂರ್ಣಗೊಳಿಸಲಾಗುವುದು ಎಂದಿದ್ದರು.