ಅಪಘಾತದಲ್ಲಿ ಗಾಯಗೊಂಡಿದ್ದ ಮುಸ್ಲಿಂ ಮಹಿಳೆಗೆ ತನ್ನ ಪೇಟಾವನ್ನು ಬ್ಯಾಂಡೇಜಿನಂತೆ ಸುತ್ತಿದ ಸಿಖ್ ಯುವಕ

Update: 2019-01-05 08:52 GMT

ಶ್ರೀನಗರ, ಜ.5: ಅಪಘಾತವೊಂದರಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವವಾಗುತ್ತಿರುವುದನ್ನು ಕಂಡು ಆಕೆಯ ಸಹಾಯಕ್ಕೆ ಧಾವಿಸಿದ ಸಿಖ್ ಯುವಕನೊಬ್ಬ, ತಕ್ಷಣ ತನ್ನ ಪೇಟವನ್ನು ತೆಗೆದು ಅದನ್ನು ಬ್ಯಾಂಡೇಜಿನಂತೆ ಆಕೆಯ ಗಾಯಕ್ಕೆ ಸುತ್ತಿ ಮಾನವೀಯತೆ ಮೆರೆದ ಬಗ್ಗೆ ವರದಿಯಾಗಿದೆ.

ಮಹಿಳೆಯ ಪಾಲಿಗೆ ಆಪತ್ಬಾಂಧವನಾಗಿ ಬಂದ ಯುವಕನ ಹೆಸರು ಮಂಜೀತ್ ಸಿಂಗ್. ಇಪ್ಪತ್ತರ ಹರೆಯದ ಈತ ತ್ರಾಲ್ ಎಂಬಲ್ಲಿನ ದೇವಾರ್ ನಿವಾಸಿ. ಅವಂತಿಪುರ ಸಮೀಪ ಟ್ರಕ್ ಒಂದು ಢಿಕ್ಕಿ ಹೊಡೆದ ಕಾರಣ 45 ವರ್ಷದ ಮಹಿಳೆಯ ಒಂದು ಕಾಲಿಗೆ ತೀವ್ರ ಗಾಯಗಳುಂಟಾಗಿ ಆಕೆ ರಸ್ತೆಗೆ ಬೀಳುತ್ತಿದ್ದಂತೆಯೇ ಟ್ರಕ್ ಚಾಲಕ ತನ್ನ ವಾಹನ ನಿಲ್ಲಿಸದೆ ಪರಾರಿಯಾಗಿದ್ದ.  ಮಂಜೀತ್ ತಕ್ಷಣ ಆಕೆಯ ಬಳಿ ಧಾವಿಸಿ  ತನ್ನ ಪೇಟಾ ತೆಗೆದು ಆಕೆಯ ರಕ್ತ ಒಸರುತ್ತಿದ್ದ ಗಾಯದ ಸುತ್ತ ಅದನ್ನು ಕಟ್ಟಿ ಬಿಟ್ಟಿದ್ದ. “ನನ್ನ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೂ ಮಾಡುವ ಕೆಲಸವನ್ನಷ್ಟೇ ನಾನು ಮಾಡಿದ್ದೇನೆ'' ಎಂದು ಮಂಜೀತ್ ಹೇಳುತ್ತಾನೆ.

ಮಂಜೀತ್ ತನ್ನ ಅಂಗವಿಕಲೆ ತಾಯಿ, ಸೋದರಿ ಮತ್ತು ಹಿರಿಯ  ಸೋದರನೊಂದಿಗೆ ವಾಸಿಸುತ್ತಿದ್ದು, ಕುಟುಂಬದ ಏಕೈಕ ಆಧಾರಸ್ಥಂಭವಾಗಿದ್ದಾನೆ, ಆತನ ತಂದೆ ಕರ್ನೈಲ್ ಸಿಂಗ್ ಜನವರಿ 2018ರಲ್ಲಿ ನಿಧನರಾಗಿದ್ದರು. ಶೇರ್-ಇ-ಕಾಶ್ಮೀರ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯಲ್ಲಿ ದಿನಗೂಲಿ ಕಾರ್ಮಿಕರಾಗಿದ್ದ ಅವರ ನಿಧನಾನಂತರ ಅವರ ಕೆಲಸ ಮಂಜೀತ್ ಗೆ ದೊರಕಿತ್ತು. ಆದರೆ ಆತನ ಸೇವೆಯನ್ನು ಇನ್ನೂ ಖಾಯಂಗೊಳಿಸಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News