ಸೊಹ್ರಾಬುದ್ದೀನ್, ಪ್ರಜಾಪತಿ ಎನ್ ಕೌಂಟರ್ ನಕಲಿ ಎಂದು ಹೇಳಿದ್ದು ಗುಜರಾತ್ ಪೊಲೀಸರು, ಅದೂ ಮೋದಿ ಸಿಎಂ ಆಗಿದ್ದಾಗ!

Update: 2019-01-05 17:10 GMT

ಸೊಹ್ರಾಬುದ್ದೀನ್ ಶೇಖ್- ತುಳಸಿ ಪ್ರಜಾಪತಿ ಎನ್‍ ಕೌಂಟರ್ ಪ್ರಕರಣಗಳ ತನಿಖೆ ರಾಜಕೀಯ ಪ್ರೇರಿತ ಹಾಗೂ ಪಕ್ಷಪಾತದಿಂದ ಕೂಡಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿರುವುದು ನಿಜಕ್ಕೂ ವಿಚಿತ್ರ. ಏಕೆಂದರೆ ಈ ಪ್ರಕರಣದ ಪ್ರಮುಖ ಸನ್ನಿವೇಶಗಳನ್ನು ಸಿದ್ಧಪಡಿಸಿದ್ದೇ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಅವರ ಅಧೀನದಲ್ಲಿದ್ದ ಪೊಲೀಸ್ ಇಲಾಖೆ!

ಗುಜರಾತ್ ಪೊಲೀಸರು ತಮ್ಮದೇ ಅಧಿಕಾರಿಗಳ ವಿರುದ್ಧದ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾರರು ಎಂಬ ಕಾರಣಕ್ಕಾಗಿಯೇ ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸುವಂತೆ ಸೊಹ್ರಾಬುದ್ದೀನ್ ಕುಟುಂಬ ಸುಪ್ರೀಂ ಕೋರ್ಟ್‍ ಮೊರೆ ಹೋಗಿತ್ತು.

ಗುಜರಾತ್ ಹಿಡಿತದಿಂದ ಪ್ರಕರಣವನ್ನು ತೆಗೆಯಬೇಕು ಎಂಬ ನಿರ್ಧಾರದ ಬಳಿಕವಷ್ಟೇ ಸಿಬಿಐ ಈ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಈ ಕಾರಣದಿಂದ ವಿಚಾರಣೆಯನ್ನು ಕೂಡಾ ಮುಂಬೈಗೆ ಸ್ಥಳಾಂತರಿಸಲಾಯಿತು. ಇದೆಲ್ಲ ನಡೆದದ್ದು ಸುಪ್ರೀಂಕೋರ್ಟ್‍ನ ಮೇಲಸ್ತುವಾರಿಯಲ್ಲಿ.

ಅಂದರೆ, ಸುಪ್ರೀಂಕೋರ್ಟ್ ಕೂಡಾ ಈ ಪ್ರಕರಣದ ಮೇಲ್ವಿಚಾರಣೆಯಲ್ಲಿ ಪಕ್ಷಪಾತ ಎಸಗಿದೆ ಎಂಬ ಅರ್ಥದಲ್ಲಿ ಮೋದಿ ಹಾಗೂ ಜೇಟ್ಲಿ ಮಾತನಾಡುತ್ತಿದ್ದಾರೆಯೇ?

ಪ್ರಕರಣ ರಾಜಕೀಯಗೊಂಡಿದೆಯೇ?

ಈ ರಾಜಕೀಯ ಧ್ರುವೀಕರಣದ ಸಂದರ್ಭದಲ್ಲಿ ರಾಜಕೀಯ ಪಕ್ಷಪಾತದ ಆರೋಪವನ್ನು ಸುಲಭವಾಗಿ ಮಾಡಬಹುದು. ಒಂದರ್ಥದಲ್ಲಿ, ಈ ತ್ರಿವಳಿ ಹತ್ಯೆ ಪ್ರಕರಣವನ್ನು ತೀರ್ಪಿನ ಮೂಲಕವೇ ರಾಜಕೀಯಗೊಳಿಸಲಾಗಿದೆ; ವಿಚಾರಣಾ ನ್ಯಾಯಾಧೀಶರೇ ಸಿಬಿಐ ಪೂರ್ವನಿರ್ಧರಿತ ತನಿಖೆ ನಡೆಸಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ತೀರ್ಪಿನಲ್ಲಿ ಈ ನಿರ್ಣಯಕ್ಕೆ ಬರಲು ಪ್ರಮುಖ ಕಾರಣವೆಂದರೆ, ದೊಡ್ಡಸಂಖ್ಯೆಯ ಅಂದರೆ 210 ಮಂದಿಯ ಪೈಕಿ 92 ಸಾಕ್ಷಿಗಳು ನೀಡಿದ ವ್ಯತಿರಿಕ್ತ ಸಾಕ್ಷಿಯನ್ನೇ ಪರಿಗಣಿಸಿರುವುದು. ಸೊಹ್ರಾಬುದ್ದೀನ್ ಹೈದರಾಬಾದ್‍ಗೆ ಹೋಗಿದ್ದು, ಅಲ್ಲಿಂದ ಸಾಂಗ್ಲಿಗೆ ಪ್ರಯಾಣಿಸುತ್ತಿದ್ದಾಗ, ಅವನನ್ನು ಹಾಗೂ ಪತ್ನಿ ಕೌಸರ್‍ ಬೀಯವರನ್ನು ಅಪಹರಿಸಿ ನಂತರ ಹತ್ಯೆ ಮಾಡಲಾಯಿತು ಎಂಬ ಪ್ರಾಸಿಕ್ಯೂಶನ್‍ ನ ಸರಳ ವಾದವನ್ನು ಕೂಡಾ ನ್ಯಾಯಾಲಯ ಒಪ್ಪಿಕೊಂಡಿಲ್ಲ.

ಇಲ್ಲಿ ಕುತೂಹಲದ ವಿಚಾರವೆಂದರೆ ಸೊಹ್ರಾಬುದ್ದೀನ್ ಶೇಖ್ ಮತ್ತು ಕೌಸರ್ ಬೀ ಅವರ ಅಂತಿಮ ಪ್ರವಾಸದ ಕುರಿತಂತೆ ಸಿಬಿಐ ಮಾಡಿರುವ ಆರೋಪದ ಬಹುತೇಕ ಅಂಶಗಳ ತನಿಖೆಯನ್ನು ಮೋದಿ ಗುಜರಾತ್ ಸಿಎಂ ಆಗಿದ್ದ ಅವಧಿಯಲ್ಲಿ ಗುಜರಾತ್ ಪೊಲೀಸರೇ ನಡೆಸಿದ್ದರು.

2010ರಲ್ಲಿ ಈ ಪ್ರಕರಣವನ್ನು ಅಂತಿಮವಾಗಿ ಸಿಬಿಐಗೆ ಹಸ್ತಾಂತರಿಸಿದಾಗ, ಗುಜರಾತ್ ಸರ್ಕಾರ ಈ ನಿಲುವನ್ನು ಕಟುವಾಗಿ ವಿರೋಧಿಸಿತ್ತು. ಪ್ರಕರಣದ ಬಗ್ಗೆ ಈಗಾಗಲೇ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯದ ಕಟಕಟೆಗೆ ತರಲು ತಾನು ಬದ್ಧ ಎಂದು ಪ್ರತಿಪಾದಿಸಿತ್ತು.

ಆದರೆ ಗುಜರಾತ್ ಸರ್ಕಾರದ ವಾದವನ್ನು ಮನ್ನಿಸದ ಸುಪ್ರೀಂಕೋರ್ಟ್, ಈ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತು. ಸುಪ್ರೀಂ ಕೋರ್ಟ್ ಆದೇಶದಂತೆ ಹಾಗೂ ಅದರದ್ದೇ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯುತ್ತಿದ್ದ ವೇಳೆ ಸಂತ್ರಸ್ತರ ಕುಟುಂಬಗಳು, ಆರೋಪಿಗಳು, ಸಿಬಿಐ ಹಾಗೂ ಗುಜರಾತ್ ಸರ್ಕಾರದ ಪ್ರತಿನಿಧಿಗಳು ಪ್ರತಿ ವಿಚಾರಣೆಯಲ್ಲೂ ಹಾಜರಿದ್ದರು.

ವಿಚಾರಣಾ ನ್ಯಾಯಾಲಯ ತನ್ನ ತೀರ್ಪಿನಲ್ಲಿ ನಿರ್ಣಯಕ್ಕೆ ಬಂದಿರುವಂತೆ ಸಿಬಿಐ ಒತ್ತಾಯಪೂರ್ವಕವಾಗಿ ಸಾಕ್ಷಿಗಳ ಬಳಿ ತನಗೆ ಬೇಕಾದ್ದನ್ನು ಹೇಳಿಸಿದೆ. ಕುತೂಹಲವೆಂಬಂತೆ ಆರೋಪಿಗಳಾಗಲೀ, ಗುಜರಾತ್ ಸರ್ಕಾರವಾಗಲೀ, ಈ ದೊಡ್ಡ ಮಟ್ಟದ ಪುರಾವೆ ತಿರುಚುವಿಕೆ ಬಗ್ಗೆ ನ್ಯಾಯಾಲಯದ ಗಮನ ಸೆಳೆಯಲಿಲ್ಲ.

ಇದಕ್ಕೆ ವಿರುದ್ಧವಾಗಿ ಕನಿಷ್ಠ ಒಬ್ಬ ಸಾಕ್ಷಿ ಅಝಂ ಖಾನ್ ವಿಚಾರಣೆ ವೇಳೆ ನೀಡಿದ ಹೇಳಿಕೆಯಲ್ಲಿ, "ಹಿಂದೆ ಸಿಬಿಐ ಎದುರು ಹಾಗೂ ಮ್ಯಾಜಿಸ್ಟ್ರೇಟರ ಮುಂದೆ ನೀಡಿದ ಹೇಳಿಕೆಗೆ ತದ್ವಿರುದ್ಧ ಹೇಳಿಕೆ ನೀಡಬೇಕು ಎಂದು ಗುಜರಾತ್ ಪೊಲೀಸರು ಒತ್ತಡ ತಂದಿದ್ದರು" ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡುವ ವೇಳೆ ಸುಪ್ರೀಂಕೋರ್ಟ್ ಹೇಳಿದ ಈ ಅಂಶಗಳು ಇಲ್ಲಿ ಉಲ್ಲೇಖಾರ್ಹ:

"ಗುಜರಾತ್‍ನ ಹಿರಿಯ ಪೊಲೀಸ್ ಅಧಿಕಾರಿಗಳು ಇದರಲ್ಲಿ ಒಳಗೊಂಡಿರುವುದರಿಂದ ಮತ್ತು ಈ ಪೈಕಿ ಕೆಲವರು ಈಗಾಗಲೇ ಕಸ್ಟಡಿಯಲ್ಲಿರುವುದರಿಂದ ಹಾಗೂ ಬಹುತೇಕ ಪೊಲೀಸ್ ಅಧಿಕಾರಿಗಳ ವಿರುದ್ಧವೇ ಇರುವ ಆರೋಪದ ಬಗ್ಗೆ ರಾಜ್ಯ ಪೊಲೀಸ್ ಅಧಿಕಾರಿಗಳು ಈ ಪ್ರಕರಣದ ತನಿಖೆ ನಡೆಸುವುದು ಮುಂದುವರಿದಲ್ಲಿ, ಸಂತ್ರಸ್ತರು ಹಾಗೂ ಸಾರ್ವಜನಿಕರ ಮನಸ್ಸಿನಲ್ಲಿ ವಿಶ್ವಾಸ ಮೂಡಿಸುವುದು ಕಷ್ಟ. ಈ ಎಲ್ಲ ಸನ್ನಿವೇಶಗಳ ಹಿನ್ನೆಲೆಯಲ್ಲಿ ಹಾಗೂ ರಾಜ್ಯ ಪೊಲೀಸ್ ಅಧಿಕಾರಿಗಳೇ ಈ ಅಪರಾಧದಲ್ಲಿ ಶಾಮೀಲಾಗಿರುವುದರಿಂದ, ನಾವು ಕಣ್ಣು ಮುಚ್ಚಿ ಕುಳಿತುಕೊಂಡು, ರಾಜ್ಯ ಪೊಲೀಸರೇ ತನಿಖೆ ಮುಂದುವರಿಸುವಂತೆ ಹಾಗೂ ಆರೋಪಪಟ್ಟಿ ಸಲ್ಲಿಸುವಂತೆ ಆದೇಶ ನೀಡುವಂತಿಲ್ಲ. ಸೂಕ್ತ ಹಾಗೂ ನ್ಯಾಯಸಮ್ಮತ ತನಿಖೆ ದೃಷ್ಟಿಯಿಂದ, ಈ ಪ್ರಕರಣದ ತನಿಖೆಯನ್ನು ತೆಗೆದುಕೊಳ್ಳುವಂತೆ ಮನವಿ ಮಾಡಬೇಕು ಮತ್ತು ತನಿಖಾ ವರದಿಯನ್ನು, ಈ ತೀರ್ಪಿನ ಪ್ರತಿ ತಲುಪಿದ ಮತ್ತು ಅಪರಾಧಕ್ಕೆ ಸಂಬಂಧಿಸಿದ ದಾಖಲೆಗಳು ಕೈಗೆ ಬಂದ ಆರು ತಿಂಗಳ ಒಳಗಾಗಿ ನೀಡಬೇಕು ಎನ್ನುವುದು ನಮ್ಮ ಅನಿಸಿಕೆ"….

ಒಬ್ಬ ವ್ಯಕ್ತಿ ತಪ್ಪಿತಸ್ಥ ಅಥವಾ ಅಮಾಯಕ ಎನ್ನುವುದು ರಾಜಕೀಯ ಚರ್ಚೆಯ ವಿಷಯವಾಗಲಾರದು, ಇದನ್ನು ನ್ಯಾಯಾಲಯಕ್ಕೇ ಬಿಟ್ಟುಬಿಡಬೇಕು. ಈ ತೀರ್ಪನ್ನು ಪ್ರಶ್ನಿಸಬಹುದಾಗಿದೆ. ಸಂತ್ರಸ್ತರು ಖಂಡಿತಾ ಇದರ ದುರ್ಬಲತೆಗಳನ್ನು ಎತ್ತಿ ತೋರಿಸಬಹುದು ಹಾಗೂ ನಿರಪರಾಧಿಗಳು ಖಂಡಿತವಾಗಿಯೂ ಇದರ ಒಳ್ಳೆಯ ಅಂಶಗಳನ್ನು ಎತ್ತಿಹಿಡಿಯಬಹುದು. ಆದಾಗ್ಯೂ ಸಾರ್ವಜನಿಕರಿಗೆ ಮತ್ತು ರಾಜಕೀಯ ಚರ್ಚೆಯ ವಿಷಯವೆಂದರೆ ಈ ತೀರ್ಪಿಗೆ ಕಾರಣವಾದ ಪ್ರಕ್ರಿಯೆ.

ಇದು ಸುಪ್ರೀಂಕೋರ್ಟ್ ನೇರವಾಗಿ ತನಿಖೆಯಲ್ಲಿ ಮಧ್ಯಪ್ರವೇಶ ಮಾಡಿದ ಪ್ರಕರಣವಾಗಿದ್ದು, ಇದರ ತನಿಖೆಯ ಮೇಲ್ವಿಚಾರಣೆಯನ್ನು ವಹಿಸಿದ್ದು, ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು. ಏಕೆಂದರೆ ಗುಜರಾತ್ ಪೊಲೀಸರು ತನಿಖೆ ವೇಳೆ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ ಎನ್ನುವುದು ಕೋರ್ಟ್‍ ಗೆ ಮನವರಿಕೆಯಾಗಿತ್ತು. ತನಿಖೆಯನ್ನು ಮುಂಬೈಗೆ ವರ್ಗಾಯಿಸಿ, ಒಬ್ಬರೇ ನ್ಯಾಯಾಧೀಶರು ತನಿಖೆ ನಡೆಸುವಂತೆ ಸೂಚಿಸಿತ್ತು.

ತನಿಖೆ ವಿರೂಪ?

ಈ ತೀರಾ ವಿಚಿತ್ರ ಪ್ರಕರಣಕ್ಕೆ ಭಾರತದಲ್ಲಿ ಸಾಮಾನ್ಯ ಎನಿಸಿದ ಸಮಸ್ಯೆ ಕಾಡಿತು. ಅದೆಂದರೆ ಸಾಕ್ಷಿಗಳು ತಿರುಗಿ ಬೀಳುವುದು. ವ್ಯತಿರಿಕ್ತ ಹೇಳಿಕೆ ನೀಡದ ಸಾಕ್ಷಿಗಳನ್ನು ಅದು ಅಸಮಂಜಸ ಎಂಬ ಕಾರಣದಿಂದ ನ್ಯಾಯಾಲಯ ಪರಿಗಣಿಸಿಲ್ಲ. ಏಕೆಂದರೆ ತನಿಖೆ ಸುದೀರ್ಘವಾಗಿದೆ ಹಾಗೂ ಸಾಕ್ಷಿಗಳಿಗೆ ಸುರಕ್ಷತೆಯ ಭಯ ಇದೆ ಎಂಬ ಕಾರಣಕ್ಕೆ ಇದನ್ನು ಅಸಮಂಜಸ ಎಂದು ಪರಿಗಣಿಸಲಾಯಿತು.

ಆದರೆ ವಾಸ್ತವ ಅಂಶವೆಂದರೆ ಗುಜರಾತ್ ಪೊಲೀಸರಿಗೆ ನೀಡದ ಹಲವು ಹೆಚ್ಚುವರಿ ವಿವರಗಳನ್ನು ಸಾಕ್ಷಿಗಳು ಸಿಬಿಐ ಮುಂದೆ ತೆರೆದಿಟ್ಟಿದ್ದಾರೆ. ಗುಜರಾತ್ ಪೊಲೀಸರು ನಡೆಸಿದ ತನಿಖೆ ತೃಪ್ತಿಕರವಾಗಿಲ್ಲ ಎಂದು ಸುಪ್ರೀಂಕೋರ್ಟ್ ಕೂಡಾ ಅಭಿಪ್ರಾಯಪಟ್ಟಿತ್ತು. ವಾಸ್ತವವಾಗಿ ಸೊಹ್ರಾಬುದ್ದೀನ್ ಅವರ ಸಹೋದರ ರುಬಾಬುದ್ದೀನ್ ನೀಡಿದ ಸಾಕ್ಷ್ಯದಂತೆ, ತನ್ನನ್ನು ಹತ್ಯೆ ಮಾಡುವುದು ಖಚಿತ ಎಂಬ ಕಾರಣಕ್ಕೆ ತುಳಸೀರಾಮ್ ಆತನಿಗೆ ಸಹಿ ಮಾಡಿದ ಖಾಲಿ ಹಾಳೆಗಳನ್ನು ನೀಡಿ, ಸೂಕ್ತ ಎನಿಸಿದ ಉದ್ದೇಶಕ್ಕೆ ಬಳಸಿಕೊಳ್ಳುವಂತೆ ತಿಳಿಸಿದ್ದ. ಆತನ ಸಹಿ ದೃಢಪಟ್ಟರೂ, ಈ ಹೇಳಿಕೆಯನ್ನು ಕೋರ್ಟ್ ನಂಬಿಲ್ಲ.

ತುಳಸೀರಾಮ್‍ ಗೆ ಜೀವಭಯ ಇತ್ತು ಹಾಗೂ ಈ ಬಗ್ಗೆ ಆತ ತನ್ನನ್ನು ಜೈಲಿನಲ್ಲಿ ಇರಿಸಿದ್ದ ಉದಯಪುರ ನ್ಯಾಯಾಲಯಕ್ಕೆ ದೂರನ್ನೂ ನೀಡಿದ್ದ ಎಂದು ತುಳಸೀರಾಂ ವಕೀಲರು ವಾದಿಸಿದ್ದರು. ಆದರೆ ತುಳಸೀರಾಂನನ್ನು ಪ್ರತಿನಿಧಿಸುತ್ತಿರುವುದಾಗಿ ದೃಢಪಡಿಸುವ ವಕಾಲತ್‍ ನಾಮ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಈ ವಾದವನ್ನು ಕೋರ್ಟ್ ನಂಬಲಿಲ್ಲ.

ಇನ್ನೊಂದು ಪ್ರಮುಖ ಅಂಶವೆಂದರೆ ನ್ಯಾಯಾಂಗ ಅಧಿಕಾರಿಗಳ ಇನ್ನೊಂದು ವರ್ಗ ಅಂದರೆ, ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಂಡ ಮ್ಯಾಜಿಸ್ಟ್ರೇಟರು. ಆದರೆ ಇದನ್ನು ಕೂಡಾ ಅಭಿಯೋಜಕರು ತಿರಸ್ಕರಿಸಿದ್ದಾರೆ. ಇವರು ಸತ್ಯಾಂಶಗಳ ಹೇಳಿಕೆಯಲ್ಲೇ ದಾಖಲಿಸಿಕೊಂಡಿದ್ದಾರೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಇದರ ಗುಣಮಟ್ಟ ಮತ್ತು ಮೌಲ್ಯದ ವಿಚಾರಕ್ಕೆ ಹೋಗದಿದ್ದರೂ, ಇದನ್ನು ಸಾರಾಸಗಟಾಗಿ ನಿರ್ಲಕ್ಷಿಸುವಂತಿಲ್ಲ.

ಈ ಪ್ರಕರಣದಲ್ಲಿ ಎಲ್ಲ ಆರೋಪಿಗಳು ಪೊಲೀಸ್ ಸಿಬ್ಬಂದಿಯಾಗಿರುವುದರಿಂದ, ಅರ್ಧದಷ್ಟು ಸಾಕ್ಷಿಗಳು ವ್ಯತಿರಿಕ್ತ ಹೇಳಿಕೆ ನೀಡಿರುವುದು, ತನಿಖೆ ಬಗ್ಗೆ ಅಥವಾ ಅಭಿಯೋಜಕರ ನಡತೆ ಬಗ್ಗೆ ಸಂಶಯಕ್ಕೆ ಕಾರಣವಾಗಿದೆ.

ಸಾಕ್ಷಿಗಳನ್ನು ರಕ್ಷಿಸುವ ಪ್ರಯತ್ನ ಎಲ್ಲೂ ನಡೆದಿಲ್ಲ. ಮ್ಯಾಜಿಸ್ಟ್ರೇಟರ ಮುಂದೆ ದಾಖಲಿಸಿದ ಹೇಳಿಕೆಗಳನ್ನು ವಿಚಾರಣೆ ವೇಳೆ ಪ್ರದರ್ಶಿಸಲೂ ಇಲ್ಲ ಹಾಗೂ ಬಹಳಷ್ಟು ಮಂದಿ ಸಾಕ್ಷಿಗಳ ಪರಿಶೀಲನೆಯನ್ನೂ ನಡೆಸಿಲ್ಲ. ಇವರಿಗೆ ಅಭಿಯೋಜಕರು ಸಮನ್ಸ್ ನೀಡಿಲ್ಲ. ಅಂತಿಮ ವಿಚಾರಣೆ ನಡೆಯುವ 15 ದಿನ ಮೊದಲು ಸಾಕ್ಷ್ಯವನ್ನು ಮುಗಿಸಿತು.

ಯಾವ ಆರೋಪಿಗಳೂ ತಮ್ಮ ಸಮರ್ಥನೆಗಾಗಿ ಪುರಾವೆ ಪ್ರಸ್ತುತಪಡಿಸುವ ಪ್ರಮೇಯವೇ ಬರಲಿಲ್ಲ. ಅಷ್ಟರ ಮಟ್ಟಿಗೆ ಅಭಿಯೋಜನೆ ದುರ್ಬಲವಾಗಿತ್ತು. ಸಿಬಿಐ ತಮ್ಮ ಹೇಳಿಕೆಗಳನ್ನು ತಪ್ಪಾಗಿ ದಾಖಲಿಸಿಕೊಂಡಿದೆ ಎಂದು ಸಾಕ್ಷಿಗಳು ಹೇಳಿರುವ ಬಗ್ಗೆ ತೀರ್ಪಿನಲ್ಲಿ ಕಳವಳ ವ್ಯಕ್ತಪಡಿಸಲಾಗಿದ್ದು, ವ್ಯತಿರಿಕ್ತ ಹೇಳಿಕೆ ನೀಡಿದ ಸಾಕ್ಷಿಗಳು ಭಯ ಅಥವಾ ಒತ್ತಡದಿಂದ ಮುಕ್ತರಾಗಿದ್ದಾರೆಯೇ ಎಂಬ ಬಗ್ಗೆ ಯಾವುದೇ ಗಮನ ಹರಿಸಿಲ್ಲ.

ಇದು ಬರಡು ಕಳಕಳಿಯಂತೂ ಅಲ್ಲ. ಉದಾಹರಣೆಗೆ ಪ್ರಕರಣದ ಸಾಕ್ಷಿಗಳಲ್ಲೊಬ್ಬರಾದ ಅಝಂ ಖಾನ್ ತಮ್ಮ ಹೇಳಿಕೆ ನೀಡುವ ಕೆಲ ತಿಂಗಳ ಮೊದಲು ರಾಜಸ್ಥಾನ ಹೈಕೋರ್ಟ್‍ ನಿಂದ ರಕ್ಷಣೆ ಕೋರಿದ್ದ. ಒಬ್ಬ ಆರೋಪಿ ಹಾಗೂ ಉದಯಪುರದಲ್ಲಿ ಕರ್ತವ್ಯದಲ್ಲಿರುವ ಮತ್ತೊಬ್ಬ ಹಾಲಿ ಪೊಲೀಸ್ ಅಧಿಕಾರಿ ತಮ್ಮ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ವಾದಿಸಿದ್ದ. ಅಝಂ ಖಾನ್ ಸಾಕ್ಷಿ ನೀಡುವ ದಿನ ಮುಂಜಾನೆ ಕೂಡಾ ಒಬ್ಬ ಆರೋಪಿ ಬೆದರಿಕೆ ಹಾಕಿದ್ದ. ಪ್ರಕರಣದಲ್ಲಿ ದೋಷಮುಕ್ತರಾಗಿದ್ದ ಡಿ.ಜಿ.ವಂಝಾರಾ ಹೆಸರನ್ನು ಹೇಳಿದ ಬಳಿಕ ಆತ ಚಿತ್ರಹಿಂಸೆ ನೀಡಿದ್ದಾಗಿ ಅಝಂ ಖಾನ್ ದೂರಿದ್ದ.

ತಾನು ನೀಡಿದ ಸಾಕ್ಷಿಯಲ್ಲಿ ಬಹುತೇಕ ಪ್ರಮುಖ ಅಂಶಗಳನ್ನು ಬಿಟ್ಟುಬಿಡಲಾಗಿದ್ದು, ಹೊಸದಾಗಿ ಸುಪ್ರೀಂಕೋರ್ಟ್ ಜಾರಿಗೆ ತಂದಿರುವ ಸಾಕ್ಷಿ ಸುರಕ್ಷಾ ಯೋಜನೆಯಡಿ ಮರುಪರಿಶೀಲನೆ ನಡೆಸಬೇಕು ಎಂದು ನ್ಯಾಯಾಲಯಕ್ಕೆ ಮನವಿಯನ್ನೂ ಮಾಡಿಕೊಂಡಿದ್ದ. ಹೀಗೆ ಕಿರುಕುಳ ಅನುಭವಿಸಿದವರು ಇವರೊಬ್ಬರು ಮಾತ್ರವಲ್ಲ; ತುಳಸೀರಾಂ ಪ್ರಜಾಪತಿಯ ತಾಯಿಯನ್ನು ಹಾಜರುಪಡಿಸಲು ವಾರೆಂಟ್ ಹೊರಡಿಸಿದರೂ, ಸಿಬಿಐಗೆ ಅವರನ್ನು ಪತ್ತೆ ಮಾಡುವುದು ಸಾಧ್ಯವಾಗಿಲ್ಲ.

ಆದರೆ ಅವರನ್ನು thewire.in ಸುಲಭವಾಗಿ ಪತ್ತೆ ಮಾಡಿದ್ದು, ಆಕೆ ತಮ್ಮ ವೇದನೆ ಹಾಗೂ ಬಳಲಿಕೆಯನ್ನು ಬಣ್ಣಿಸಿದ್ದರು. ಈ ಸುದ್ದಿಯ ಲಿಂಕ್ ಇಲ್ಲಿದೆ.

ಇನ್‍ ಸ್ಪೆಕ್ಟರ್ ವಿ.ಎಲ್.ಸೋಳಂಕಿ ಕೂಡಾ ಸಾರ್ವಜನಿಕವಾಗಿ ಹೇಳಿಕೆ ನೀಡಿ, ಈ ಪ್ರಕರಣದಲ್ಲಿ ಸಾಕ್ಷಿ ನುಡಿಯಲು ಭಯವಾಗುತ್ತಿದೆ ಎಂದು ಆಪಾದಿಸಿ, ಸೂಕ್ತ ರಕ್ಷಣೆ ಕೋರಿದ್ದರು. ಆದರೆ ಸಿಬಿಐ ಅವರಿಗೆ ರಕ್ಷಣೆ ನೀಡಿಲ್ಲ. ಬಳಿಕ ಅವರು ನ್ಯಾಯಾಲಯಕ್ಕೆ ನೇರವಾಗಿ ಹಾಜರಾಗಿ, ಸಿಬಿಐಗೆ ತನಿಖೆ ವೇಳೆ ನೀಡಿದ ಹೇಳಿಕೆಯ ಸಾರಾಂಶವನ್ನು ಸಲ್ಲಿಸಿದರು.

ಈ ಎಲ್ಲ ಆರೋಪಪಟ್ಟಿಗಳನ್ನು ಓದಿದಾಗ, ಈ ಪ್ರಕರಣದ ಸುಮಾರು 500 ಸಾಕ್ಷಿಗಳ ಪೈಕಿ ಕೇವಲ 210 ಮಂದಿಯನ್ನು ಮಾತ್ರ ಪರಿಶೀಲಿಸಿರುವುದು ಕಂಡುಬರುತ್ತದೆ. ಅಝಂ ಖಾನ್, ಮಹೇಂದ್ರ ಝಾಲಾ ಮತ್ತು ತನಿಖಾಧಿಕಾರಿ ರಜನೀಶ್ ರಾಯ್ ಸೇರಿದಂತೆ ಹೆಚ್ಚುವರಿ ಸಾಕ್ಷಿಗಳಿಗೆ ಸಮನ್ಸ್ ನೀಡುವುದು ಅಗತ್ಯವಿಲ್ಲ. ಏಕೆಂದರೆ ಇವರು ನೀಡಿರುವ ಹೇಳಿಕೆಗಳು ಈಗಾಗಲೇ ಆರೋಪಮುಕ್ತರಾಗಿರುವವರಿಗೆ ಸಂಬಂಧಿಸಿದ್ದು ಎಂದು ಸಿಬಿಐ ಪರ ವಕೀಲರು ವಾದಿಸಿದ್ದರು.

ಈ ಸಾಕ್ಷಿಗಳು ತಮ್ಮ ಸಂಪೂರ್ಣ ಹೇಳಿಕೆ ನೀಡಲು ಅವಕಾಶ ನೀಡಿದ್ದರೆ, ಈ ಪಿತೂರಿಯನ್ನು ಸಾಬೀತುಪಡಿಸಲು ಅಗತ್ಯವಾದ ಸಾಂದರ್ಭಿಕ ಪುರಾವೆಗಳ ಸರಣಿ ಪೂರ್ಣವಾಗುತ್ತಿತ್ತು. ಆದರೆ ಅದು ನಿರೂಪಿತವಾಗಿಲ್ಲ; ಏಕೆಂದರೆ ಅನುಮೋದನೆ ಲಭ್ಯವಾಗಿಲ್ಲ ಎಂಬ ತಾಂತ್ರಿಕ ಕಾರಣದಿಂದ ಅವರೆಲ್ಲ ದೋಷಮುಕ್ತರಾಗಿದ್ದಾರೆ. ಇದಾದ ಬಳಿಕ, ಅವರಿಗೆ ಸಂಬಂಧಿಸಿದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿಲ್ಲ. ಇದು ಅಭಿಯೋಜಕರ ಪ್ರಕರಣ ಮತ್ತಷ್ಟು ದುರ್ಬಲವಾಗಲು ಕಾರಣವಾಯಿತು.

ಇಲ್ಲಿ ಪ್ರಮುಖ ಅಂಶವೆಂದರೆ ಎಲ್ಲ ಅಗತ್ಯ ಪುರಾವೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಹಾಗೂ ಆ ಬಳಿಕ ಅಪ್ರಸ್ತುತ ಎನಿಸುವುದನ್ನು ಬದಿಗಿರಿಸುವುದು ನ್ಯಾಯಾಲಯದ ಜವಾಬ್ದಾರಿ. ನ್ಯಾಯಾಲಯದ ಮುಂದೆ ಅಪೂರ್ಣ ಚಿತ್ರಣ ಬಿಂಬಿಸುವ ಮೂಲಕ ಸಿಬಿಐನ ಅಭಿಯೋಜಕರು ತಮ್ಮ ಉದ್ದೇಶ ಈಡೇರಿಸಿಕೊಂಡರು. ಸಾಕ್ಷಿಗಳಿಗೆ ಯಾವುದೇ ಬೆಂಬಲ ಒದಗಿಸಲು ವಿಫಲವಾದದ್ದು, ದೊಡ್ಡ ಸಂಖ್ಯೆಯ ಸಾಕ್ಷಿಗಳು ವ್ಯತಿರಿಕ್ತ ಹೇಳಿಕೆ ನೀಡಲು ಕಾರಣವಾಯಿತು.

Writer - ಸರೀಂ ನವೀದ್, thewire.in

contributor

Editor - ಸರೀಂ ನವೀದ್, thewire.in

contributor

Similar News