ಪಿಸ್ತೂಲ್ ಹಿಡಿದು ನರ್ತಿಸಿದ್ದ ಜೆಡಿಯು ಮಾಜಿ ಶಾಸಕ: ದೂರು ದಾಖಲು

Update: 2019-01-05 18:14 GMT

 ಹೊಸದಿಲ್ಲಿ, ಜ.5: ಇತ್ತೀಚೆಗೆ ಹೊಸವರ್ಷದ ಸಂಭ್ರಮಾಚರಣೆ ಸಂದರ್ಭ ಮಹಿಳೆಯೊಬ್ಬಳು ಗುಂಡೇಟಿಗೆ ಬಲಿಯಾದ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದ್ದು ಈ ಕಾರ್ಯಕ್ರಮದಲ್ಲಿ ಬಿಹಾರದ ಜೆಡಿಯು ಮಾಜಿ ಶಾಸಕ ರಾಜು ಸಿಂಗ್ ಒಂದು ಕೈಯಲ್ಲಿ ಪಿಸ್ತೂಲ್, ಇನ್ನೊಂದರಲ್ಲಿ ಮದ್ಯದ ಬಾಟಲಿ ಹಿಡಿದು ನೃತ್ಯ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

    ರಾಜು ಸಿಂಗ್ ದಕ್ಷಿಣ ದಿಲ್ಲಿಯ ಮಂಡಿ ಗ್ರಾಮದಲ್ಲಿ ಫಾರ್ಮ್‌ಹೌಸ್ ಹೊಂದಿದ್ದು ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇಬ್ಬರು ಡಿಜೆ(ಡಿಸ್ಕ್ ಜಾಕಿ)ಗಳು ಘಟನೆಯನ್ನು ವಿವರಿಸಿದ್ದಾರೆ. ಸಂಭ್ರಮಾಚರಣೆ ಸಂದರ್ಭ ರಾಜು ಸಿಂಗ್ ಕೈಯಲ್ಲಿದ್ದ ಪಿಸ್ತೂಲಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದೇ ವೇಳೆ ಅಲ್ಲಿ ಡ್ಯಾನ್ಸ್ ಮಾಡುತ್ತಿದ್ದ 42 ವರ್ಷದ ಅರ್ಚನಾ ಗುಪ್ತಾ ಎಂಬ ಮಹಿಳೆ ಗುಂಡೇಟಿನಿಂದ ತೀವ್ರ ಗಾಯಗೊಂಡು ಬಿದ್ದಿದ್ದು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಗುರುವಾರ ಮೃತರಾಗಿದ್ದಾರೆ.

 ಗುಪ್ತಾ ರಕ್ತದ ಮಡುವಿನಲ್ಲಿ ಬಿದ್ದ ಬಳಿಕವೂ ಆ ಸ್ಥಳದಲ್ಲಿ ರಾಜು ಸಿಂಗ್ ಸುಮಾರು 1 ಗಂಟೆ ಹೊತ್ತು ಮದ್ಯಪಾನ ಮಾಡುತ್ತಾ ಕಾಲ ಕಳೆದಿದ್ದರು ಎಂದು ಡಿಜೆಗಳು ಪೊಲೀಸರಿಗೆ ತಿಳಿಸಿದ್ದಾರೆ.

  ಅರ್ಚನಾ ಗುಪ್ತಾರ ಸಾವಿಗೆ ಕಾರಣವಾದ ಬುಲೆಟ್ ರಾಜು ಸಿಂಗ್‌ನ ಪಿಸ್ತೂಲಿನಿಂದ ಹಾರಿಸಲ್ಪಟ್ಟಿದೆ ಎಂಬುದು ಮಹಿಳೆಯ ಮರಣೋತ್ತರ ಪರೀಕ್ಷೆಯ ವರದಿಯಿಂದ ದೃಢಪಟ್ಟಿದೆ. ರಾಜು ಸಿಂಗ್ ಮತ್ತು ಆತನ ಬಾಡಿಗಾರ್ಡ್ ಬುಧವಾರ ಬಿಹಾರಕ್ಕೆ ಪಲಾಯನ ಮಾಡುವ ಪ್ರಯತ್ನದಲ್ಲಿದ್ದಾಗ ಪೊಲೀಸರು ಅವರನ್ನು ಬಂಧಿಸಿ ಇಬ್ಬರನ್ನೂ ಹೆಚ್ಚಿನ ತನಿಖೆಗಾಗಿ ಉ.ಪ್ರದೇಶದ ಕುಶಿನಗರಕ್ಕೆ ಕರೆದೊಯ್ದಿದ್ದಾರೆ.

ಅಲ್ಲದೆ ಸಾಕ್ಷನಾಶಕ್ಕೆ ಪ್ರಯತ್ನಿಸಿದ ಮತ್ತು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಅತಿಥಿಗಳಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಗುರುವಾರ ಸಿಂಗ್‌ನ ಪತ್ನಿ ಹಾಗೂ ಸಿಂಗ್‌ನ ಮತ್ತೊಬ್ಬ ಸಹಾಯಕನನ್ನು ಬಂಧಿಸಲಾಗಿದೆ.

 ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಫೂಟೇಜ್‌ನಲ್ಲಿ ಸಿಂಗ್‌ನ ಕೈಯಲ್ಲಿ ಪಿಸ್ತೂಲ್ ಮತ್ತು ಆತನ ಸಹಾಯಕ ಹರಿಯ ಕೈಯಲ್ಲಿ ರೈಫಲ್ ಕಂಡುಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News