ಭಾರತವನ್ನು ಕೊಳ್ಳೆ ಹೊಡೆದಿದ್ದ ಬ್ರಿಟನ್

Update: 2019-01-06 18:37 GMT

 1858ರಲ್ಲಿ ಬ್ರಿಟಿಷ್ ಸರಕಾರವು ಭಾರತದ ಆಡಳಿತದ ಚುಕ್ಕಾಣಿಯನ್ನು ತನ್ಮ ಕೈಗೆತ್ತಿಕೊಂಡ ಬಳಿಕ ಸಾಮ್ರಾಜ್ಯಶಾಹಿಗಳು ತೆರಿಗೆ ಹಾಗೂ ಖರೀದಿ ವ್ಯವಸ್ಥೆಗೆ ಸಾಮ್ರಾಜ್ಯಶಾಹಿಗಳು ವಿಶೇಷವಾದ ನೂತನ ತಿರುವನ್ನು ನೀಡಿದರು. ಈಸ್ಟ್ ಇಂಡಿಯಾ ಕಂಪೆನಿಯ ಏಕಸ್ವಾಮ್ಯವು ಮುರಿದುಬಿದ್ದ ಬಳಿಕ, ಭಾರತೀಯ ಉತ್ಪಾದಕರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಇತರ ದೇಶಗಳಿಗೆ ರಫ್ತು ಮಾಡಲು ಅವಕಾಶ ದೊರೆಯಿತು.


ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿಯು ಎಷ್ಟು ಅಸಹನೀಯವಾಗಿತ್ತೆಂದರೆ, ಸ್ವತಃ ಬ್ರಿಟನ್‌ಗೂ ಅದರಿಂದ ಯಾವುದೇ ಮಹತ್ವದ ಪ್ರಯೋಜನವಾಗಿಲ್ಲವೆಂಬ ಮಾತನ್ನು ಬ್ರಿಟನ್‌ನಲ್ಲಿ ಸಾಮಾನ್ಯವಾಗಿ ಹೇಳಲಾಗುತ್ತಿದೆ. ಏನೇ ಇರಲಿ, ಭಾರತದಲ್ಲಿ ಆಡಳಿತ ನಡೆಸುತ್ತಿದ್ದುದರಿಂದ ಬ್ರಿಟನ್ ದೊಡ್ಡ ಬೆಲೆಯನ್ನೇ ತೆರಬೇಕಾಗಿಬಂದಿತ್ತು. ಆದಾಗ್ಯೂ ಬ್ರಿಟಿಷ್ ಚಕ್ರಾಧಿಪತ್ಯವು ಅವೆಲ್ಲವನ್ನೂ ಸಹಿಸಿಕೊಂಡು ಬಂದಿತ್ತು. ಬ್ರಿಟಿಷರ ಔದಾರ್ಯಕ್ಕೆ ಇದು ಉಜ್ವಲ ನಿದರ್ಶನವಾಗಿದೆಯೆಂದು ಬ್ರಿಟಿಷರು ಹೇಳಿಕೊಳ್ಳುತ್ತಲೇ ಬಂದಿದ್ದರು.

ಖ್ಯಾತ ಅರ್ಥಶಾಸ್ತ್ರಜ್ಞೆ ಉತ್ಸಾ ಪಟ್ನಾಯಕ್ ಅವರ ನೂತನ ಸಂಶೋಧನೆಯು, ಈ ಆಖ್ಯಾನಕ್ಕೆ ಮಾರಕವಾದ ಹೊಡೆತವನ್ನು ನೀಡಿದೆ. ತೆರಿಗೆ ಹಾಗೂ ವ್ಯಾಪಾರದ ಕುರಿತಂತೆ ಎರಡು ಶತಮಾನಗಳ ವಿಸ್ತೃತ ದತ್ತಾಂಶವನ್ನು ಸಂಗ್ರಹಿಸಿರುವ ಪಟ್ನಾಯಕ್ 1765ರಿಂದ 1938ರ ಅವಧಿಯಲ್ಲಿ ಭಾರತದಿಂದ ಬರೋಬ್ಬರಿ 45 ಟ್ರಿಲಿಯನ್ ಡಾಲರ್ ಹಣವನ್ನು ಹೀರಿಕೊಂಡಿತ್ತು. ಇದು ಭಾರೀ ದೊಡ್ಡ ಮೊತ್ತವಾಗಿದೆ. ಪ್ರಸಕ್ತ ದೃಷ್ಟಿಕೋನದಿಂದ ನೋಡುವುದಾದರೆ, 45 ಟ್ರಿಲಿಯನ್ ಡಾಲರ್ ಹಣವು ಈಗಿನ ಬ್ರಿಟನ್‌ನ ಒಟ್ಟು ವಾರ್ಷಿಕ ಆಂತರಿಕ ಉತ್ಪನ್ನಕ್ಕಿಂತ 17 ಪಟ್ಟು ಅಧಿಕವಾದುದಾಗಿದೆ.

ವ್ಯಾಪಾರ ವ್ಯವಸ್ಥೆಯ ಮೂಲಕ ಇದು ಸಂಭವಿಸಿತ್ತು. ವಸಾಹತುಶಾಹಿ ಯುಗಕ್ಕೆ ಮುನ್ನ ಬ್ರಿಟನ್ ದೇಶವು ಭಾರತೀಯ ಉತ್ಪಾದಕರಿಂದ ಜವಳಿ ಹಾಗೂ ಭತ್ತ ಮತ್ತಿತರ ದವಸ,ಧಾನ್ಯ,ಸಾಮಗ್ರಿಗಳನ್ನು ಖರೀದಿಸುತ್ತಿತ್ತು ಹಾಗೂ ಅವರಿಗೆ ಆಗಿನ ಕಾಲದಲ್ಲಿ ಸಾಮಾನ್ಯವಾಗಿ ಪ್ರಚಲಿತದಲ್ಲಿದ್ದ ಹಾಗೆ ಇತರ ಯಾವುದೇ ದೇಶದಲ್ಲಿದ್ದಂತೆ ಬೆಳ್ಳಿಯ ರೂಪದಲ್ಲಿ ಖರೀದಿಸುತ್ತಿತ್ತು. ಆದರೆ 1765ರ ವೇಳೆಗೆ ಈಸ್ಟ್ ಇಂಡಿಯಾ ಕಂಪೆನಿಯು ಭಾರತೀಯ ಉಪಖಂಡದ ನಿಯಂತ್ರಣವನ್ನು ಸಾಧಿಸಿದ ಬಳಿಕ ಹಾಗೂ ಭಾರತೀಯ ವ್ಯಾಪಾರದ ಏಕಸ್ವಾಮ್ಯತೆಯನ್ನು ಸಾಧಿಸಿದ ಬಳಿಕ ಎಲ್ಲವೂ ಬದಲಾಗಿಬಿಟ್ಟಿತು.

ಈಸ್ಟ್ ಇಂಡಿಯಾ ಕಂಪೆನಿಯು ಭಾರತದಲ್ಲಿ ತೆರಿಗೆಗಳನ್ನು ಸಂಗ್ರಹಿಸಲು ಆರಂಭಿಸಿತು. ಆನಂತರ ಜಾಣತನದಿಂದ ಈ ಆದಾಯದ ಒಂದು ಭಾಗವನ್ನು (ಮೂರನೆ ಒಂದರಷ್ಟು), ಬ್ರಿಟಿಷರ ಬಳಕೆಗಾಗಿ ಭಾರತೀಯ ಉತ್ಪನ್ನಗಳ ಖರೀದಿಗೆ ಧನಸಹಾಯ ನೀಡಲು ಬಳಸಿಕೊಂಡಿತು. ಬೇರೆ ಮಾತಿನಲ್ಲಿ ಹೇಳುವುದಾದರೆ, ಬ್ರಿಟಿಷ್ ವ್ಯಾಪಾರಿಗಳು ತಮ್ಮದೇ ಕಿಸೆಯಿಂದ ಭಾರತೀಯ ಉತ್ಪನ್ನಗಳಿಗೆ ಹಣ ನೀಡುವ ಬದಲು ಅವುಗಳನ್ನು ಉಚಿತವಾಗಿ ಪಡೆದುಕೊಳ್ಳುತ್ತಿದ್ದರು. ರೈತರು ಹಾಗೂ ನೇಕಾರರಿಂದ ಕಂದಾಯದ ರೂಪದಲ್ಲಿ ಪಡೆದ ಹಣದಿಂದಲೇ ಅವರ ಉತ್ಪನ್ನಗಳನ್ನು ಈಸ್ಟ್ ಇಂಡಿಯಾ ಕಂಪೆನಿ ಖರೀದಿಸುತ್ತಿತ್ತು.

ಇದೊಂದು ದೊಡ್ಡ ಮಟ್ಟದ ಹಗರಣ ಮಾತ್ರವಲ್ಲ ಮಹಾದರೋಡೆಯೇ ಆಗಿತ್ತು. ಆದಾಗ್ಯೂ ಹೆಚ್ಚಿನ ಸಂಖ್ಯೆಯ ಭಾರತೀಯರಿಗೆ ಏನು ನಡೆಯುತ್ತಿತ್ತೆಂಬುದೇ ಅರಿವಿರಲಿಲ್ಲ. ಯಾಕೆಂದರೆ ರೈತರು, ನೇಕಾರರ ತೆರಿಗೆಗಳನ್ನು ಸಂಗ್ರಹಿಸುತ್ತಿದ್ದ ಏಜೆಂಟ್, ಅವರ ಉತ್ಪನ್ನಗಳನ್ನು ಖರೀದಿಸುವಾಗ ಕಾಣಿಸಿಕೊಳ್ಳುತ್ತಿರಲಿಲ್ಲ. ಒಂದು ವೇಳೆ ತೆರಿಗೆ ಸಂಗ್ರಹಿಸುವ ಮತ್ತು ಉತ್ಪನ್ನಗಳನ್ನು ಖರೀದಿಸುವ ವ್ಯಕ್ತಿ ಒಬ್ಬನೇ ಆಗಿರುತ್ತಿದ್ದಲ್ಲಿ, ಭಾರತೀಯರಿಗೆ ಖಂಡಿತವಾಗಿಯೂ ವಂಚನೆ ನಡೆಯುತ್ತಿರುವುದು ಅರಿವಿಗೆ ಬರುತ್ತಿತ್ತು.

ಭಾರತದಿಂದ ಕಳವು ಮಾಡಲಾದ ಕೆಲವು ಉತ್ಪನ್ನಗಳನ್ನು ಬ್ರಿಟನ್‌ನಲ್ಲಿ ಖರೀದಿಸಲಾಗುತ್ತಿತ್ತು ಹಾಗೂ ಉಳಿದವನ್ನು ಬೇರೆಡೆಗೆ ಮರುರಫ್ತು ಮಾಡಲಾಗುತ್ತಿತ್ತು. ಮರುರಫ್ತು ವ್ಯವಸ್ಥೆಯು, ಯುರೋಪ್‌ನಿಂದ ಬ್ರಿಟನ್‌ನ ಕೈಗಾರೀಕರಣಕ್ಕೆ ಅತ್ಯಗತ್ಯವಾಗಿದ್ದ ಕಬ್ಬಿಣ, ಡಾಮರು ಹಾಗೂ ಮರದಂತಹ ಆಯಕಟ್ಟಿನ ಸಾಮಗ್ರಿಗಳು ಸೇರಿದಂತೆ ಆಮದು ವಸ್ತುಗಳ ಹರಿವಿಗೆ ಆರ್ಥಿಕ ನೆರವು ನೀಡಲು ಅವಕಾಶ ಒದಗಿಸಿತ್ತು. ನಿಜಕ್ಕೂ, ಕೈಗಾರಿಕಾ ಕ್ರಾಂತಿಯು ಭಾರತದಿಂದ ವ್ಯೆಹಾತ್ಮಕ ಕಳವಿನ ಒಂದು ದೊಡ್ಡ ಭಾಗವನ್ನು ಕೈಗಾರಿಕಾ ಕ್ರಾಂತಿಯು ಅವಲಂಬಿಸಿತ್ತು.

 ಇವೆಲ್ಲಕ್ಕೂ ಮಿಗಿಲಾಗಿ, ಬ್ರಿಟಿಷರು ಮೊದಲ ಹಂತದಲ್ಲಿ ತಾವು ಖರೀದಿಸಿದ್ದಕ್ಕಿಂತಲೂ ಇತರ ದೇಶಗಳಿಗೆ ಕದ್ದ ಉತ್ಪನ್ನಗಳನ್ನು ಮಾರಾಟ ಮಾಡಲು ಶಕ್ತರಾಗಿದ್ದರು. ಇದರಿಂದ ಅವರು ಸಾಮಾಗ್ರಿಗಳ ಮೂಲವೌಲ್ಯದ ಶೇ.100ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ಮೊತ್ತವನ್ನು ಪಡೆಯುವಲ್ಲಿ ಸಫಲರಾಗಿದ್ದರು.

1858ರಲ್ಲಿ ಬ್ರಿಟಿಷ್ ಸರಕಾರವು ಭಾರತದ ಆಡಳಿತದ ಚುಕ್ಕಾಣಿಯನ್ನು ತನ್ಮ ಕೈಗೆತ್ತಿಕೊಂಡ ಬಳಿಕ ಸಾಮ್ರಾಜ್ಯಶಾಹಿಗಳು ತೆರಿಗೆ ಹಾಗೂ ಖರೀದಿ ವ್ಯವಸ್ಥೆಗೆ ವಿಶೇಷವಾದ ನೂತನ ತಿರುವನ್ನು ನೀಡಿದರು. ಈಸ್ಟ್ ಇಂಡಿಯಾ ಕಂಪೆನಿಯ ಏಕಸ್ವಾಮ್ಯವು ಮುರಿದುಬಿದ್ದ ಬಳಿಕ, ಭಾರತೀಯ ಉತ್ಪಾದಕರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಇತರ ದೇಶಗಳಿಗೆ ರಫ್ತು ಮಾಡಲು ಅವಕಾಶ ದೊರೆಯಿತು. ಆದರೆ ಈ ಸಾಮಗ್ರಿಗಳಿಗೆ ಮಾಡಲಾದ ಪಾವತಿಯು ಅಂತಿಮವಾಗಿ ಲಂಡನ್‌ಗೆ ಹೋಗುತ್ತಿತ್ತು.

ಇದೆಲ್ಲಾ ಹೇಗೆ ಸಾಧ್ಯವಾಯಿತು?. ಮೂಲಭೂತವಾಗಿ, ಭಾರತದಿಂದ ಉತ್ಪನ್ನಗಳನ್ನು ಖರೀದಿಸಲು ಬಯಸುವ ಯಾರು ಬೇಕಾದರೂ, ಬ್ರಿಟಿಷ್ ಚಕ್ರಾಧಿಪತ್ಯವು ಬಿಡುಗಡೆಗೊಳಿಸಿರುವ ವಿಶಿಷ್ಟವಾದ ಕಾಗದ ಕರೆನ್ಸಿ, ‘ಸ್ಪೆಶಲ್ ಕೌನ್ಸಿಲ್ ಬಿಲ್’ ಅನ್ನು ಬಳಸಿಕೊಳ್ಳಬಹುದಾಗಿತ್ತು. ಲಂಡನ್‌ಗೆ ಚಿನ್ನ ಅಥವಾ ಬೆಳ್ಳಿಯನ್ನು ನೀಡಿ, ಈ ಸ್ಪೆಶಲ್‌ಕೌನ್ಸಿಲ್ ಬಿಲ್ ಅನ್ನು ಅತ್ಯಂತ ಸುಲಭವಾಗಿ ಪಡೆದುಕೊಳ್ಳಬಹುದಾಗಿತ್ತು. ಹೀಗಾಗಿ ವರ್ತಕರು ಈ ಬಿಲ್‌ಗಳನ್ನು ಪಡೆಯಲು ಲಂಡನ್‌ಗೆ ಚಿನ್ನವನ್ನು ಪಾವತಿಸುತ್ತಿದ್ದರು ಹಾಗೂ ಆನಂತರ ಭಾರತೀಯರ ಉತ್ಪಾದಕರಿಗೆ ಪಾವತಿಸಲು ಈ ಬಿಲ್ ಅನ್ನು ಬಳಸಿಕೊಳ್ಳುತ್ತಿದ್ದರು. ಸ್ಥಳೀಯ ವಸಾಹತುಶಾಹಿ ಕಚೇರಿಯಲ್ಲಿ ಭಾರತೀಯರು ಈ ಬಿಲ್‌ಗಳನ್ನು ನಗದುರೂಪದಲ್ಲಿ ಪರಿವರ್ತಿಸಿಕೊಳ್ಳುವಾಗ ಅವರಿಂದಲೇ ಆಗತಾನೆ ಸಂಗ್ರಹಿಸಲಾದ ಕಂದಾಯ ತೆರಿಗೆಯಿಂದಲೇ ಆ ಉತ್ಪನ್ನಗಳಿಗೆ ದರವನ್ನು ಪಾವತಿಸಲಾಗುತ್ತಿತ್ತು. ಇಲ್ಲಿ ಕೂಡಾ ಅವರಿಗೆ ವಾಸ್ತವವಾಗಿ ಹಣವನ್ನೇ ಪಾವತಿಸಲಾಗುತ್ತಿರಲಿಲ್ಲ. ಅವರನ್ನು ವಂಚಿಸಲಾಗುತ್ತಿತ್ತು.

ಈ ಮಧ್ಯೆ ತಮ್ಮ ರಫ್ತಿಗೆ ವಿನಿಮಯವಾಗಿ ಎಲ್ಲಾ ಚಿನ್ನ ಅಥವಾ ಬೆಳ್ಳಿಯು ಭಾರತೀಯರಿಗೆ ನೇರವಾಗಿ ಹೋಗುತ್ತಿತ್ತು.
ಈ ಭ್ರಷ್ಟ ವ್ಯವಸ್ಥೆಯ ನಡುವೆಯೂ, ಭಾರತವು ಜಗತ್ತಿನ ಉಳಿದ ಭಾಗದೊಂದಿಗೆ ಉತ್ತೇಜನಕಾರಿಯಾದ ಮಿಗತೆ ವಾಣಿಜ್ಯ ವ್ಯಾಪಾರವನ್ನು ನಡೆಸುತ್ತಿತ್ತು. 20ನೇ ಶತಮಾನದ ಆರಂಭದವರೆಗೂ ಈ ಮಿಗತೆ ವ್ಯಾಪಾರವು ನಡೆಯುತ್ತಾ ಬಂದಿತ್ತು. ಆದಾಗ್ಯೂ, ರಾಷ್ಟ್ರೀಯ ಖಾತೆಗಳಲ್ಲಿಅದನ್ನು ಕೊರತೆ ವ್ಯಾಪಾರ ಎಂದು ತೋರಿಸಲಾಗುತ್ತಿತ್ತು. ಯಾಕೆಂದರೆ ಭಾರತದ ರಫ್ತಿನಿಂದ ದೊರೆಯುವ ನೈಜ ಆದಾಯವನ್ನು ಸಮಗ್ರವಾಗಿ ಬ್ರಿಟನ್ ತನ್ನದಾಗಿಸಿಕೊಳ್ಳುತ್ತಿತ್ತು.

ಬ್ರಿಟನ್‌ಗೆ ಭಾರತವು ಒಂದು ಹೊರೆಯಾಗಿತ್ತೆಂಬುದಕ್ಕೆ ಪುರಾವೆಯೆಂಬಂತೆ ಕೆಲವರು ಈ ಕಾಲ್ಪನಿಕ ‘ವ್ಯಾಪಾರದ ಕೊರತೆ’ಯನ್ನು ಎತ್ತಿತೋರಿಸುತ್ತಿದ್ದರು. ಭಾರತೀಯ ಉತ್ಪಾದಕರಿಗೆ ನಿಜಕ್ಕೂ ಸೇರಬೇಕಾಗಿದ್ದ ಅಪಾರ ಪ್ರಮಾಣದ ಆದಾಯವನ್ನು ಬ್ರಿಟನ್ ತಡೆಹಿಡಿದಿತ್ತು. ಬ್ರಿಟನ್‌ನ ಪಾಲಿಗೆ ಭಾರತವು ಚಿನ್ನದ ಮೊಟ್ಟೆಯಿಡುವ ಕೋಳಿಯಾಗಿತ್ತು. ಈ ಮಧ್ಯೆ ವ್ಯಾಪಾರದ ಕೊರತೆಯಿಂದಾಗಿ, ತನ್ನ ಆಮದಿಗೆ ಹಣಕಾಸು ನೆರವು ಬ್ರಿಟನ್‌ನಿಂದ ಸಾಲ ಪಡೆಯದೇ ಬೆೇರೆ ದಾರಿಯೇ ಇದ್ದಿರಲಿಲ್ಲ. ಹೀಗಾಗಿ ಇಡೀ ಭಾರತೀಯ ಜನಸಂಖ್ಯೆಯು ಬಲವಂತವಾಗಿ ತಮ್ಮ ವಸಾಹತುಶಾಹಿ ಧಣಿಗಳ ಸಾಲದ ಸುಳಿಗೆ ಸಿಲುಕಬೇಕಾಗುತ್ತಿತ್ತು. ಆ ಮೂಲಕ ಭಾರತದ ಮೇಲಿನ ಬ್ರಿಟಿಷರ ಹಿಡಿತ ಇನ್ನಷ್ಟು ಬಲಗೊಂಡಿತ್ತು.

 ಸಾಮ್ರಾಜ್ಯಶಾಹಿಯ ಹಿಂಸಾಚಾರದ ಯಂತ್ರಗಳಿಗೆ ಇಂಧನವಾಗಿ, ಈ ವಂಚನಾತ್ಮಕ ವ್ಯವಸ್ಥೆಯನ್ನು ಬ್ರಿಟನ್ ಧಾರಾಳವಾಗಿ ಬಳಸಿಕೊಂಡಿತ್ತು. 1840ರ ದಶಕದಲ್ಲಿ ಚೀನಾದ ಮೇಲೆ ಆಕ್ರಮಣಕ್ಕೆ ಧನಸಹಾಯ ನೀಡಲು ಹಾಗೂ 1857ರಲ್ಲಿ ನಡೆದ ಸಿಪಾಯಿ ದಂಗೆಯನ್ನು ಹತ್ತಿಕ್ಕಲು ಬ್ರಿಟನ್ ಇದೇ ಹಣವನ್ನು ಬಳಸಿಕೊಂಡಿತ್ತು. ಬ್ರಿಟನ್ ಚಕ್ರಾಧಿಪತ್ಯವು ತಾನು ನಡೆಸುವ ಯುದ್ಧಗಳಿಗೆ ನೇರವಾಗಿ ಭಾರತದ ತೆರಿಗೆದಾರರೇ ಹಣಪಾವತಿಸುವಂತೆ ಮಾಡುತ್ತಿತ್ತು. ಭಾರತದ ಗಡಿಯ ಹೊರಗೆ ಬ್ರಿಟನ್ ನಡೆಸುತ್ತಿದ್ದ ಆಕ್ರಮಣಕಾರಿ ಯುದ್ಧಗಳ ವೆಚ್ಚವನ್ನು ಸಮಗ್ರವಾಗಿ ಅಥವಾ ಪ್ರಮುಖವಾಗಿ ಭಾರತೀಯ ಕಂದಾಯಗಳಿಂದಲೇ ಪಾವತಿಸಲಾಗುತ್ತಿತ್ತು.

 ಇದು ಇಲ್ಲಿಗೆ ಮುಗಿಯಲಿಲ್ಲ. ಬ್ರಿಟನ್ ಭಾರತದಿಂದ ಹರಿದುಬರುತ್ತಿದ್ದ ಹಣವನ್ನು ಯುರೋಪ್‌ನಲ್ಲಿ ಬಂಡವಾಳಶಾಹಿವಾದ ಹಾಗೂ ಕೆನಡ ಮತ್ತು ಆಸ್ಟ್ರೇಲಿಯದಂತಹ ದೇಶಗಳಲ್ಲಿನ ಯುರೋಪಿಯನ್ ವಸಾಹತು ಪ್ರಾಂತಗಳ ವಿಸ್ತರಣೆಗೆ ಬಳಸಿಕೊಂಡಿತು. ಬ್ರಿಟನ್‌ನ ಕೈಗಾರೀಕರಣ ಮಾತ್ರವಲ್ಲ, ಪಾಶ್ಚಾತ್ಯ ಜಗತ್ತಿನ ದೇಶಗಳ ಕೈಗಾರೀಕರಣಗಳಿಗೂ ವಸಾಹತುದೇಶಗಳ ಹಣವನ್ನು ಬಳಸಿಕೊಳ್ಳಲಾಗಿತ್ತು.
 1765ರಿಂದ 1938ರವರೆಗೆ ವಸಾಹತುಶಾಹಿ ಭಾರತದ ಒಟ್ಟು 44.6 ಟ್ರಿಲಿಯನ್ ಡಾಲರ್ ಹಣವು ಹರಿದುಹೋಗಿದೆ. ಇದು ಕೇವಲ ಅಂದಾಜು ಸಂಖ್ಯೆಯಾಗಿದ್ದು, ಬ್ರಿಟಿಷ್ ಆಡಳಿತದ ಕಾಲದಲ್ಲಿ ಬ್ರಿಟನ್ ಭಾರತದ ಮೇಲೆ ಹೇರಿದ್ದ ಸಾಲದ ಮೊತ್ತವನ್ನು ಇದು ಒಳಗೊಂಡಿಲ್ಲ.
ಒಂದು ವೇಳೆ ಬ್ರಿಟಿಷ್ ಆಡಳಿತದ ಕಾಲದಲ್ಲಿ ಭಾರತವು ತನ್ನದೇ ಆದ ತೆರಿಗೆ ಆದಾಯಗಳನ್ನು ತನ್ನದೇ ನೆಲದಲ್ಲಿ ಹೂಡಿಕೆ ಮಾಡಲು ಶಕ್ತವಾಗಿದ್ದಲ್ಲಿ ಹಾಗೂ ಜಪಾನ್ ಮಾಡಿದ್ದಂತೆ ವಿದೇಶಿ ವಿನಿಮಯದಿಂದ ದೊರೆತ ಸಂಪತ್ತನ್ನು ತನ್ನದೇ ನೆಲದಲ್ಲಿ ಹೂಡಿಕೆ ಮಾಡಲು ಸಾಧ್ಯವಾಗಿರುತ್ತಿದ್ದಲ್ಲಿ, ಇಡೀ ಭಾರತದ ಇತಿಹಾಸದ ಚಿತ್ರಣವೇ ಬದಲಾಗುತ್ತಿತ್ತು. ಭಾರತವು ಆರ್ಥಿಕತೆಯ ಶಕ್ತಿಕೇಂದ್ರವಾಗಬಹುದಿತ್ತು. ಅಲ್ಲದೆ ಶತಮಾನಗಳಷ್ಟು ಹಳೆಯದಾದ ಬಡತನ ಹಾಗೂ ಯಾತನೆ ಕೊನೆಗೊಳ್ಳಬಹುದಾಗಿತ್ತು.
ಆದರೆ ಬ್ರಿಟನ್‌ನಲ್ಲಿನ ಕೆಲವು ನಿರ್ದಿಷ್ಟ ಪ್ರಭಾವಶಾಲಿ ಧ್ವನಿಗಳು ತಪ್ಪು ಚಿತ್ರಣವನ್ನು ನೀಡಿದ್ದರು. ಬ್ರಿಟನ್‌ನ ಇತಿಹಾಸತಜ್ಞ ನೀಲ್ ಫರ್ಗ್ಯುಸನ್ ಅವರು ಭಾರತದ ಅಭಿವೃದ್ಧಿಗೆ ಬ್ರಿಟಿಷ್ ಆಡಳಿತ ನೆರವಾಗಿತ್ತು ಎಂದು ಹೇಳಿದ್ದರು. ಡೇವಿಡ್ ಕ್ಯಾಮರೂನ್ ಪ್ರಧಾನಿಯಾಗಿದ್ದಾಗ ನೀಡಿದ ಹೇಳಿಕೆಯೊಂದರಲ್ಲಿ, ಬ್ರಿಟಿಷ್ ಆಳ್ವಿಕೆಯಿಂದ ಭಾರತಕ್ಕೆ ತುಂಬಾ ಪ್ರಯೋಜನವಾಗಿತ್ತು ಎಂದಿದ್ದರು.

ಇಂತಹ ಗ್ರಹಿಕೆಯನ್ನು ಬ್ರಿಟನ್‌ನ ಜನಸಾಮಾನ್ಯರೂ ಒಪ್ಪಿಕೊಂಡಿದ್ದರು.2014ರ ‘ಯುಗೌ’ ಜನಮತ ಸಮೀಕ್ಷೆಯ ಪ್ರಕಾರ, ಬ್ರಿಟನ್‌ನ ಶೇಕಡ 50ರಷ್ಟು ಜನರು ವಸಾಹತುಶಾಹಿವಾದವು ವಿವಿಧ ವಸಾಹತುಗಳಿಗೆ ಪ್ರಯೋಜನಕಾರಿಯಾಗಿತ್ತೆಂದು ನಂಬಿದ್ದರು. ಭಾರತದಲ್ಲಿನ 200 ವರ್ಷಗಳ ಬ್ರಿಟಿಷ್ ಆಳ್ವಿಕೆಯಲ್ಲಿ, ತಲಾ ಆದಾಯದಲ್ಲಿ ಯಾವುದೇ ಹೆಚ್ಚಳ ಕಂಡುಬಂದಿರಲಿಲ್ಲ. ವಾಸ್ತವವಾಗಿ, ಬ್ರಿಟಿಷ್ ಆಡಳಿತದ ಉಚ್ಛ್ರಾಯಯುಗವೆನಿಸಿರುವ 19ನೇ ಶತಮಾನದ ಕೊನೆಯಾರ್ಧದಲ್ಲಿ ಭಾರತದ ಆರ್ಥಿಕತೆ ಸಂಪೂರ್ಣವಾಗಿ ಕುಸಿದುಹೋಗಿತ್ತು. 1870ರಿಂದ 1920ರ ಮಧ್ಯೆ ಭಾರತೀಯರ ಸರಾಸರಿ ಜೀವಿತಾವಧಿಯು ಐದನೇ ಒಂದರಷ್ಟು ಇಳಿಕೆಯಾಗಿತ್ತು. ಬ್ರಿಟನ್‌ನ ಕೆಟ್ಟ ನೀತಿಗಳಿಂದಾಗಿ ಬರಗಾಲವನ್ನು ಸರಿಯಾಗಿ ನಿರ್ವಹಿಸಲಾಗದೆ ಇದ್ದುದರಿಂದ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದರು. ವಾಸ್ತವಿಕವಾಗಿ ಬ್ರಿಟನ್ ಭಾರತವನ್ನು ಅಭಿವೃದ್ಧಿಪಡಿಸಿರಲಿಲ್ಲ. ಬದಲಾಗಿ ಭಾರತವೇ ಬ್ರಿಟನ್‌ನ್ನು ಅಭಿವೃದ್ಧಿಪಡಿಸಿತೆಂದು ಪಟ್ನಾಯಕ್ ಸ್ಪಷ್ಟಪಡಿಸುತ್ತಾರೆ.

ತನ್ನಿಂದಾದ ತಪ್ಪಿಗಾಗಿ ಇಂದು ಬ್ರಿಟನ್ ಮಾಡಬೇಕಾಗಿರುವುದೇನು?. ಭಾರತದಿಂದ ತಾನು ಒಯ್ದಿರುವ ಹಣದ ಮೊತ್ತವನ್ನು ಲೆಕ್ಕಹಾಕಿದರೆ, ಖಂಡಿತವಾಗಿಯೂ ಬ್ರಿಟನ್‌ಗೆ ಅದನ್ನು ತೀರಿಸಲು ಬೇಕಾದಷ್ಟು ಹಣವಿಲ್ಲವೆಂಬುದು ವಾಸ್ತವ. ಆದರೆ ಬ್ರಿಟಿಷರು ಭಾರತದ ಮೇಲೆ ತಮ್ಮ ನಿಯಂತ್ರಣವನ್ನು ಉಳಿಸಿಕೊಂಡಿದ್ದುದು ಔದಾರ್ಯಪೂರ್ವಕವಾಗಿ ಅಲ್ಲ. ಬದಲಿಗೆ ಲೂಟಿ ಮಾಡುವುದಕ್ಕಾಗಿಯೇ ಭಾರತವನ್ನು ಅವರು ತಮ್ಮ ಅಧೀನದಲ್ಲಿರಿಸಿಕೊಂಡಿದ್ದರೆಂಬ ವಿಷಯವನ್ನು ನೆನಪಿಟ್ಟುಕೊಳ್ಳಬೇಕಾಗಿದೆ.
ನಮ್ಮ ಶಾಲಾಪಠ್ಯ ಪುಸ್ತಕಗಳು ವಿದ್ಯಾರ್ಥಿಗಳಿಗೆ ಉರುಹೊಡೆಸುವಂತೆ, ಬ್ರಿಟನ್‌ನ ಕೈಗಾರಿಕಾ ಬೆಳವಣಿಗೆಯು ಉಗಿಬಂಡಿ ಎಂಜಿನ್ ಹಾಗೂ ಬಲಿಷ್ಠವಾದ ಸಂಸ್ಥೆಗಳಿಂದ ಅವಿರ್ಭವಿಸಿದ್ದಲ್ಲ. ಬದಲಿಗೆ ಇತರ ನೆಲಗಳು ಹಾಗೂ ಇತರ ಜನರಿಂದ ಹಿಂಸಾತ್ಮಕವಾಗಿ ನಡೆಸಿದ ಕಳವನ್ನು ಅವಲಂಬಿಸಿತ್ತು ಎಂಬುದಂತೂ ಅಪ್ಪಟವಾದ ಸತ್ಯ.


ಕೃಪೆ: www.aljazeera.com 

Writer - ಜೇಸನ್ ಹಿಕೆಲ್

contributor

Editor - ಜೇಸನ್ ಹಿಕೆಲ್

contributor

Similar News