ಪೋಲಾಗುವ ಆಹಾರಗಳು ಹಸಿದವರ ಹೊಟ್ಟೆ ಸೇರಲಿ

Update: 2019-01-06 18:39 GMT

ಮನುಷ್ಯನ ಮೂಲಭೂತವಾದ ಅಗತ್ಯವಾಗಿರುವ ಪ್ರಕೃತಿ ದತ್ತ ಹಸಿವನ್ನು ಮನುಷ್ಯ ರೋಗವಾಗಿ ಪರಿವರ್ತಿಸಿಕೊಂಡಿದ್ದಾನೆ. ಪರಿಣಾಮವಾಗಿ ಹಸಿವಿನಿಂದಲೇ ವಿಶ್ವದಾದ್ಯಂತ ಲಕ್ಷಾಂತರ ಜನರು ಸಾಯುತ್ತಿದ್ದಾರೆ. ಉಳಿದವರು ಅಪೌಷ್ಟಿಕತೆಯ ಕಾರಣದಿಂದ ಇನ್ನಿತರ ರೋಗಗಳೊಂದಿಗೆ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದಾರೆ. ದೇವರು ಸೃಷ್ಟಿಸಿದ ಜಗತ್ತಿನಲ್ಲಿ ಇಷ್ಟೊಂದು ದಾರಿದ್ರ ತುಂಬಿದೆಯೇ ಎಂಬ ಪ್ರಶ್ನೆ ಈಗ ಎದುರಾಗುತ್ತದೆ. ಈ ಭೂಮಿ ಅತ್ಯಂತ ಶ್ರೀಮಂತವಾಗಿ ಸೃಷ್ಟಿಯಾಗಿದೆ. ಇಲ್ಲಿರುವ ಮನುಷ್ಯರ ಸಂಖ್ಯೆಗೆ ಹೋಲಿಸಿದರೆ ಸಂಪನ್ಮೂಲದ ಕೈ ಮೇಲಾಗುತ್ತದೆ. ಈ ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಬಡತನ, ದಾರಿದ್ರ, ಹಸಿವು ದೇವರು ಸೃಷ್ಟಿಸಿದ್ದಲ್ಲ. ಸ್ವತಃ ಮನುಷ್ಯ ಸೃಷ್ಟಿಸಿಕೊಂಡದ್ದು. ಅದರ ಪರಿಹಾರವೂ ಮನುಷ್ಯನಿಗೆ ಸೇರಿದೆ. ಹಸಿವಿನ ಕೃತಕ ಸೃಷ್ಟಿಯಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಮೂಲಗಳ ಪ್ರಕಾರ, ಭಾರತದ ಜನಸಂಖ್ಯೆಯಲ್ಲಿ ಶೇ.14.9 ಪೋಷಣೆಯ ಕೊರತೆಯನ್ನು ಎದುರಿಸುತ್ತಿದೆ. ಜಗತ್ತಿನಲ್ಲಿ ಹಸಿವೆಯಿಂದ ಬಳಲುತ್ತಿರುವ ಅರ್ಧದಷ್ಟು ಜನರು ಭಾರತದಲ್ಲಿದ್ದಾರೆ. ಅದರಲ್ಲಿ ಲಕ್ಷಾಂತರ ಜನರಿಗೆ ತಮಗೆ ಮುಂದಿನ ಹೊತ್ತಿನ ಊಟ ಸಿಗುವುದೋ ಇಲ್ಲವೋ ಎನ್ನುವುದೇ ಗೊತ್ತಿಲ್ಲ. ವರದಿಗಳ ಪ್ರಕಾರ, 20 ಕೋಟಿಗೂ ಹೆಚ್ಚು ಜನರು ಖಾಲಿ ಹೊಟ್ಟೆಯಲ್ಲೇ ರಾತ್ರಿ ಕಳೆಯುತ್ತಾರೆ. 2018ರಲ್ಲಿ ಭಾರತದಲ್ಲಿ ಹಸಿವಿನಿಂದ ಸಾವನ್ನಪ್ಪಿದ ಸಾವಿರಾರು ಪ್ರಕರಣಗಳು ದಾಖಲಾಗಿವೆ. ಈ ಕಹಿ ಸತ್ಯವನ್ನು ಪೊಳ್ಳು ಹೇಳಿಕೆಗಳ ಮೂಲಕ ಮುಚ್ಚಲಾಗುತ್ತದೆ. ಜಾಗತಿಕ ಹಸಿವು ಸೂಚಿ 2018ರಲ್ಲಿ ಅರ್ಹತೆ ಪಡೆದ 119 ದೇಶಗಳ ಪೈಕಿ ಭಾರತ 103ನೇ ಸ್ಥಾನವನ್ನು ಪಡೆದುಕೊಂಡಿರುವುದು ಭಾರತವು ಮಾಧ್ಯಮಗಳು ತೋರಿಸುವಷ್ಟು ಸುಂದರವಾಗಿಲ್ಲ ಎಂಬ ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ.

ಸಾಮಾನ್ಯ ಜನರ ವಿಷಯಕ್ಕೆ ಬಂದರೆ ದೇಶದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದಕ್ಕೆ ಇದು ಪ್ರಮಾಣವಾಗಿದೆ. ಪ್ರಾಕೃತಿಕವಾಗಿ ಅಪಾರ ನೈಸರ್ಗಿಕ ಸಂಪತ್ತನ್ನು ಹೊಂದಿಯೂ ಭಾರತ ಯಾಕೆ ಈ ಪರಿಯ ಹಸಿವನ್ನು ಎದುರಿಸುತ್ತಿದೆ? ಸಂಪತ್ತಿನ ಅಸಮತೋಲ ಹಂಚಿಕೆಯೇ ಭಾರತದ ಹಸಿವಿಗೆ ಮುಖ್ಯ ಕಾರಣ ಹೊರತು, ಜನಸಂಖ್ಯಾ ಸ್ಫೋಟ ಅಲ್ಲ ಎನ್ನುವುದನ್ನು ಈಗಾಗಲೇ ತಜ್ಞರು ಸ್ಪಷ್ಟಪಡಿಸಿದ್ದಾರೆ. ಜನಸಂಖ್ಯೆಯನ್ನು ಇಳಿಸುವುದರಿಂದ ಬಡತನವನ್ನು ತಪ್ಪಿಸಬಹುದು ಎಂಬ ನೀತಿಯನ್ನು ತಳೆದ ಚೀನಾದಲ್ಲಿ ಇಂದು ವೃದ್ಧರ ಸಂಖ್ಯೆ ಹೆಚ್ಚುತ್ತಿದೆ. ಕುಟುಂಬ ಯೋಜನೆಯಿಂದ ಅದು ಸಂಪೂರ್ಣ ಹಿಂದೆ ಸರಿದಿದೆ. ಜನಸಂಖ್ಯೆಯೂ ಒಂದು ದೇಶದ ಸಂಪನ್ಮೂಲ ಎನ್ನುವುದನ್ನು ಒಪ್ಪಿಕೊಂಡು ಅದನ್ನು ಹೇಗೆ ಸದುಪಯೋಗಪಡಿಸಬಹುದು ಮತ್ತು ಸಂಪನ್ಮೂಲವನ್ನು ಗರಿಷ್ಠ ಮಟ್ಟದಲ್ಲಿ ಹೇಗೆ ಹಸಿದವರಿಗೆ ತಲುಪಿಸಬಹುದು ಎನ್ನುವುದನ್ನು ನಾವು ಪ್ರಾಮಾಣಿಕವಾಗಿ ಯೋಚಿಸಬೇಕಾಗಿದೆ. ನಾವು ಬಡತನವನ್ನು ಸೋಲಿಸುವಲ್ಲಿ ವಿಫಲವಾಗಿದ್ದೇವೆ ಎಂಬುದನ್ನು ಒಪ್ಪಲೇಬೇಕು. ನಮ್ಮ ಅಲ್ಪ ಯಶಸ್ಸನ್ನು ಸಂಭ್ರಮಿಸುವ ಭರದಲ್ಲಿ ಬಡತನದಿಂದ ಜರ್ಜರಿತರಾದವರನ್ನು ಸಾಯಲು ಬಿಡಲು ಸಾಧ್ಯವಿಲ್ಲ. ನಮ್ಮಿಂದ ಬಡತನದ ಬೃಹತ್ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದಿದ್ದರೂ ಬಡವರನ್ನು ರಕ್ಷಿಸುವ ಅಗಾಧ ಸಾಮರ್ಥ್ಯ ನಮ್ಮಲ್ಲಿದೆ. ನಿರ್ಗತಿಕರಿಗೆ ಅರಮನೆಯನ್ನು ನಿರ್ಮಿಸಲು ಸಾಧ್ಯವಾಗದಿದ್ದರೂ ಕನಿಷ್ಠ ತಲೆಮರೆಸಲು ಆಶ್ರಯತಾಣಗಳನ್ನು ನಿರ್ಮಿಸಲು ನಮ್ಮಿಂದ ಸಾಧ್ಯವಿದೆ.

ನಮೆ ಅವರ ಜೀವನ ಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗದಿರಬಹುದು ಆದರೆ ಅವರ ಸಮಸ್ಯೆಗಳನ್ನು ಪರಿಹರಿಸಬಹುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದೇ ರೀತಿ ಅವರಿಗೆ ನಮ್ಮಿಂದ ಭೂರಿ ಭೋಜನವನ್ನು ನೀಡಲು ಸಾಧ್ಯವಾಗಿದ್ದರೂ ಕನಿಷ್ಠ ಅವರು ಹಸಿದ ಹೊಟ್ಟೆಯಲ್ಲಿ ಮಲಗಲಿಲ್ಲ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳುವಷ್ಟು, ಅವರು ಹಸಿವಿನಿಂದ ಸಾಯದಿರುವಷ್ಟು ಆಹಾರ ಒದಗಿಸಲು ನಮ್ಮಿಂದ ಸಾಧ್ಯವಿದೆ. ಇಲ್ಲಿ ಆಹಾರಕ್ಕೇನೂ ಕೊರತೆಯಿಲ್ಲ. ವಿಶ್ವಾಸಾರ್ಹ ವರದಿಗಳ ಪ್ರಕಾರ, ಭಾರತವು ತನ್ನ ಜನಸಂಖ್ಯೆಗೆ ಸಾಕಾಗುವಷ್ಟು ಆಹಾರವನ್ನು ಉತ್ಪಾದಿಸುತ್ತದೆ. ಆದರೆ ಆಹಾರ ಹಂಚಿಕೆಯಲ್ಲಿ ನಮ್ಮ ವೈಫಲ್ಯವಿದೆ. ಇಲ್ಲಿ ಒಂದೆಡೆ ಕೆಲವೇ ಕೆಲವು ಜನರ ಬಳಿ ಸಂಪನ್ಮೂಲ ಶೇಖರಣೆಯಾಗುತ್ತಿರುವುದಷ್ಟೇ ಅಲ್ಲ, ಆಹಾರವನ್ನು ನಾವು ಅನಗತ್ಯವಾಗಿ ಪೋಲು ಮಾಡುತ್ತಿದ್ದೇವೆ. ಒಂದೆಡೆ ಹಸಿವಿನಿಂದ ಜನರು ಸಾಯುತ್ತಿದ್ದರೆ ಮತ್ತೊಂದೆಡೆ ಆಹಾರ ಬಳಕೆಯಾಗದೆ ಕಸದ ತೊಟ್ಟಿ ಸೇರುತ್ತಿದೆ.

ಒಂದು ಅಂದಾಜಿನಂತೆ ಪ್ರತಿವರ್ಷ ಜಗತ್ತಿನಲ್ಲಿ ಮಾನವನ ಸೇವನೆಗೆ ಉತ್ಪಾದಿಸಲಾಗುವ ಆಹಾರದಲ್ಲಿ ಮೂರನೇ ಒಂದರಷ್ಟನ್ನು ಪೋಲು ಮಾಡಲಾಗುತ್ತದೆ. ಅಂದಾಜಿನಂತೆ, ಅಸಮರ್ಥ ಪ್ಯಾಕಿಂಗ್ ಮತ್ತು ಪೂರೈಕೆ ವಿಧಾನಗಳಿಂದಾಗಿ ಶೇ. 40ರಷ್ಟು ಹಣ್ಣುಹಂಪಲುಗಳು ಮತ್ತು ತರಕಾರಿಗಳು ಹಾಗೂ ಶೇ.30ರಷ್ಟು ದ್ವಿದಳ ಧಾನ್ಯಗಳು ಗ್ರಾಹಕರನ್ನು ತಲುಪದೆ ಪೋಲಾಗುತ್ತವೆ. ಸಂಸ್ಕರಣೆಯ ಪ್ರಚಲಿತ ವಿಧಾನಗಳು ಮತ್ತು ನಂತರದ ಪೂರೈಕೆ ವ್ಯವಸ್ಥೆಯಿಂದಾಗಿ ಭತ್ತ ಹಾಗೂ ಇತರ ಧಾನ್ಯಗಳು ಭಾಗಶಃ ಪೋಲಾಗುತ್ತವೆ. ಸಾಗಾಟದಲ್ಲಿ ಸಮಸ್ಯೆಯಾಗುತ್ತದೆ ಎಂಬ ಕಾರಣದಿಂದ ಸಂಪೂರ್ಣವಾಗಿ ಹಣ್ಣಾದ ಫಲಗಳನ್ನು ಹಾಳಾದವುಗಳು ಎಂದು ಎಸೆಯಲಾಗುತ್ತದೆ.

ತರಕಾರಿಗಳು ಮತ್ತು ಆಹಾರ ವಸ್ತುಗಳ ವಿಷಯದಲ್ಲೂ ಹೀಗೇ ಆಗುತ್ತದೆ. ಹೀಗೆ ಪೋಲಾದ ಧಾನ್ಯಗಳು, ಎಸೆಯಲ್ಪಟ್ಟ ಹಣ್ಣು ಮತ್ತು ತರಕಾರಿಗಳು ತ್ಯಾಜ್ಯ ಎಂದು ಪರಿಗಣಿಸಲ್ಪಡುವ ಆಹಾರದ ದೊಡ್ಡ ಭಾಗವಾಗಿರುತ್ತವೆ. ಈ ಹಣ್ಣಾದ ಫಲಗಳು ಮತ್ತು ತರಕಾರಿಗಳು ಮತ್ತು ಪೋಲಾದ ಧಾನ್ಯಗಳು ಬಡವರಿಗೆ ದೊರೆಯುವಂತಾಗಬೇಕಾಗಿದೆ. ನಮ್ಮ ವಿವಾಹಗಳು, ಕಾರ್ಯಕ್ರಮಗಳು, ರೆಸ್ಟೊರೆಂಟ್‌ಗಳು, ವಸತಿ ನಿಲಯಗಳು ಮತ್ತು ಮನೆಗಳು ಆಹಾರ ತ್ಯಾಜ್ಯದ ಪ್ರಮುಖ ಮೂಲಗಳಾಗಿವೆ. ವಿವಾಹ ಸಮಾರಂಭಗಳಲ್ಲಿ ಅಗಾಧ ಪ್ರಮಾಣದಲ್ಲಿ ಆಹಾರವನ್ನು ಪೋಲು ಮಾಡಲಾಗುತ್ತದೆ. ಇಂಥ ಸಮಾರಂಭಗಳಲ್ಲಿ ಅನೇಕ ಬಗೆಯ ಆಹಾರಗಳನ್ನು ಬಡಿಸಲಾಗುತ್ತವೆ ಆ ಸಮಾರಂಭದಲ್ಲಿ ಭಾಗವಹಿಸಿದವರಾರೂ ಹಸಿದವರಲ್ಲ. ಅವರು ತಿನ್ನುವವರಂತೆ ನಟಿಸುವವರು. ಪರಿಣಾಮವಾಗಿ ಉಳಿದ ಆಹಾರಗಳು ಕಸದ ತೊಟ್ಟಿಯನ್ನು ಸೇರುತ್ತವೆ.

ಜಗತ್ತಿನ ಅತ್ಯುತ್ತಮ ಬಾಣಸಿಗ ಇಟಲಿ ಮೂಲದ ಮಸ್ಸಿಮೊ ಬೊಟ್ಟುರ ಒಂದು ವಿನೂತನ ಪರಿಕಲ್ಪನೆಯನ್ನು ಮಾಡಿದ್ದಾರೆ. ಆಹಾರ ತ್ಯಾಜ್ಯದ ವಿರುದ್ಧ ಹೋರಾಡುವ ಉದ್ದೇಶದಿಂದ ಅವರು ಫುಡ್ ಫೋರ್ ಸೋಲ್ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದಾರೆ. ಅತಿಯಾದ/ತಿಂದು ಉಳಿಸಿರುವ ಆಹಾರವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಅವರು ಆಹಾರ ಪೋಲಾಗುವಿಕೆಯನ್ನು ತಡೆಯುತ್ತಿದ್ದಾರೆ ಮತ್ತು ನಗರದ ಅತ್ಯಂತ ಬಡಜನರನ್ನು ಪೋಷಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪೋಲಾಗುವ ಆಹಾರವನ್ನು ಉಳಿಸುವ ಕಡೆಗೆ ಭಾರತ ಗಂಭೀರವಾಗಿ ಗಮನ ಹರಿಸಬೇಕಾಗಿದೆ. ಇದಕ್ಕಾಗಿ ವ್ಯವಸ್ಥಿತವಾದ ‘ಆಹಾರ ಬ್ಯಾಂಕ್’ ಒಂದು ಸ್ಥಾಪಿಸಿದರೆ ಈ ದೇಶದ ಅರ್ಧಕ್ಕರ್ಧ ಜನರ ಹಸಿವು ಇಂಗಿ ಹೋಗುತ್ತದೆ. ಆಹಾರದ ಕೊರತೆಯಿಂದ ಸಂಭವಿಸುವ ಸಾವಿನ ಅವಮಾನದಿಂದ ಭಾರತ ಪಾರಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News