ಮಧ್ಯಪ್ರದೇಶದಲ್ಲಿ ಬಿರುಗಾಳಿ ಎಬ್ಬಿಸಿದ "ಕುದುರೆ ವ್ಯಾಪಾರ"

Update: 2019-01-07 04:42 GMT
ಕಮಲ್‌ನಾಥ್

ಭೋಪಾಲ್, ಜ. 7: ಮಧ್ಯಪ್ರದೇಶ ವಿಧಾನಸಭಾ ಅಧಿವೇಶನ ಸೋಮವಾರ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.

ಆಡಳಿತಾರೂಢ ಮೈತ್ರಿಕೂಟದ ಶಾಸಕರನ್ನು ಖರೀದಿಸಲು ಬಿಜೆಪಿ ತಂತ್ರ ಹೂಡುತ್ತಿದೆ ಎಂದು ಕಾಂಗ್ರೆಸ್ ಆಪಾದಿಸಿದೆ. ಬಿಜೆಪಿ ಮುಖಂಡರು ತಮ್ಮ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಬಿಎಸ್ಪಿ ಶಾಸಕರು ಹೇಳಿಕೆ ನೀಡಿರುವುದು ಈ ವದಂತಿಗೆ ಪುಷ್ಟಿ ನೀಡಿದೆ. ಆದರೆ ಪಕ್ಷದ ನಾಯಕಿ ಮಾಯಾವತಿ ನಿರ್ಧರಿಸಿದಂತೆ ತಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಮುಂದುವರಿಸಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರವಿವಾರ ಸಂಜೆ ಮುಖ್ಯಮಂತ್ರಿ ಕಮಲ್‌ನಾಥ್ ಅವರು ತಮ್ಮ ನಿವಾಸದಲ್ಲಿ ಕರೆದಿದ್ದ ಆಡಳಿತಾರೂಢ ಮೈತ್ರಿಕೂಟದ ಶಾಸಕರ ಸಭೆಯಲ್ಲಿ ಬಿಎಸ್ಪಿ ಶಾಸಕರಾದ ಸಂಜೀವ್ ಕುಶ್ವಾಹ ಹಾಗೂ ರಾಮ್‌ಭಾಯಿ ಗೈರು ಹಾಜರಾಗಿದ್ದುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ ಕಾಂಗ್ರೆಸ್ ಮಾಧ್ಯಮ ಸಮಿತಿ ಅಧ್ಯಕ್ಷೆ ಶೋಭಾ ಓಝಾ ಹೇಳಿಕೆ ನೀಡಿ, "ಕೆಲವರು ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ ಸಮಾಜವಾದಿ ಪಕ್ಷ, ಬಿಎಸ್ಪಿ ಹಾಗೂ ಪಕ್ಷೇತರ ಶಾಸಕರು ಸೇರಿದಂತೆ ಆಡಳಿತಾರೂಢ ಮೈತ್ರಿಕೂಟದ ಎಲ್ಲ 121 ಮಂದಿ ಶಾಸಕರು ಔತಣ ಕೂಟದಲ್ಲಿ ಪಾಲ್ಗೊಂಡಿದ್ದರು" ಎಂದು ಸ್ಪಷ್ಟಪಡಿಸಿದ್ದಾರೆ.

ಬಿಎಸ್ಪಿ ಶಾಸಕಿ ರಾಮ್‌ಭಾಯಿ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರ ಸಹೋದರ ಕರೆ ಸ್ವೀಕರಿಸಿ, "ರಾಮ್‌ಭಾಯಿ ಸಭೆಯಲ್ಲಿ ಭಾಗವಹಿಸಿಲ್ಲ. ಸ್ವಲ್ಪ ಹೊತ್ತಿನಲ್ಲಿ ಇದಕ್ಕೆ ಏನು ಕಾರಣ ಎನ್ನುವುದು ನಿಮಗೆ ಗೊತ್ತಾಗಲಿದೆ" ಎಂದು ಹೇಳಿದರು.

ಆಡಳಿತ ಪಕ್ಷಕ್ಕೆ ಸದನದಲ್ಲಿ ಮೊದಲ ಅಗ್ನಿಪರೀಕ್ಷೆ ಸ್ಪೀಕರ್ ಚುನಾವಣೆ ಮೂಲಕ ಎದುರಾಗಿದೆ. ಪಕ್ಷದ ಅಭ್ಯರ್ಥಿ ನರ್ಮದಾ ಪ್ರಸಾದ್ ಪ್ರಜಾಪತಿ ಆಯ್ಕೆಯಾಗುವಂತೆ ನೋಡಿಕೊಳ್ಳುವುದು ಮೈತ್ರಿಕೂಟಕ್ಕೆ ಮೊದಲ ಸವಾಲಾಗಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಗಳಿಸಲು ಎರಡು ಸ್ಥಾನಗಳ ಕೊರತೆ ಉಂಟಾಗಿತ್ತು. ಬಿಎಸ್ಪಿಯ ಇಬ್ಬರು, ಸಮಾಜವಾದಿ ಪಕ್ಷದ ಓರ್ವ ಹಾಗೂ ನಾಲ್ವರು ಪಕ್ಷೇತರರ ಬೆಂಬಲದೊಂದಿಗೆ ಕಮಲ್‌ನಾಥ್ ಅಧಿಕಾರ ಸೂತ್ರ ಹಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News