ನಮ್ಮೊಡನೆ ಮೈತ್ರಿ ಸಾಧಿಸಿದರೆ ಗೆಲ್ಲಿಸುತ್ತೇವೆ, ಇಲ್ಲದಿದ್ದರೆ ಸೋಲಿಸುತ್ತೇವೆ: ಶಿವಸೇನೆಗೆ ಅಮಿತ್ ಶಾ ಎಚ್ಚರಿಕೆ

Update: 2019-01-07 08:38 GMT

ಮುಂಬೈ, ಜ. 7: ''ಮೈತ್ರಿ ಸಾಧಿಸಿದರೆ ಬಿಜೆಪಿ ತನ್ನ ಮಿತ್ರ ಪಕ್ಷಗಳಿಗೆ ವಿಜಯ ಖಾತ್ರಿಗೊಳಿಸುವುದು, ಇಲ್ಲದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ ತನ್ನ ಮಾಜಿ ಮಿತ್ರಪಕ್ಷಗಳನ್ನು ಸೋಲಿಸಲಿದೆ'' ಎಂದು ಹೇಳುವ ಮೂಲಕ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶಿವಸೇನೆಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿರುವ 48 ಲೋಕಸಭಾ ಕ್ಷೇತ್ರಗಳ ಪೈಕಿ 40 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿಯನ್ನು ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನಿಗದಿಪಡಿಸಿ ಹೇಳಿಕೆ ನೀಡಿದ ಬೆನ್ನಲ್ಲೇ ಶಾ ಅವರ ಮೇಲಿನ ಮಾತುಗಳು ಕೇಳಿ ಬಂದಿದೆ.

ಲಾಟೂರ್, ಉಸ್ಮಾನಾಬಾದ್, ಹಿಂಗೊಳಿ ಮತ್ತು ನಂದೇಡ್ ಜಿಲ್ಲೆಗಳ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದಾರೆ. ''ಪಕ್ಷ ಕಾರ್ಯಕರ್ತರು ಶಿವಸೇನೆ ಜತೆಗಿನ ಮೈತ್ರಿಯ ಬಗ್ಗೆ ಇರುವ ಗೊಂದಲವನ್ನು ದೂರಗೊಳಿಸಬೇಕಿದೆ.  ಅವರು ನಮ್ಮ ಜತೆ ಸೇರಿದರೆ ಅವರಿಗೆ ಜಯ ದೊರಕಿಸುತ್ತೇವೆ, ಇಲ್ಲದೇ ಇದ್ದರೆ ಸೋಲಿಸುತ್ತೇವೆ (ಪಟಕ್ ದೇಂಗೆ)'' ಎಂದರು. ಪ್ರತಿ ಬೂತ್ ನಲ್ಲಿ  ಚುನಾವಣೆಗೆ ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ಶಾ ಹೇಳಿದರು.

''ದೇಶ 200 ವರ್ಷಗಳ ಕಾಲ ಗುಲಾಮಗಿರಿಯಲ್ಲಿತ್ತು. ಈ ಚುನಾವಣೆಯಲ್ಲಿ ನಾವು ಗೆದ್ದರೆ ನಮ್ಮ ಸಿದ್ಧಾಂತ ಮುಂದಿನ 50 ವರ್ಷಗಳ ತನಕ ಮುಂದುವರಿಯುವುದು. 2014ರಲ್ಲಿ ಬಿಜೆಪಿ ಉತ್ತರ ಪ್ರದೇಶದಲ್ಲಿ 73 ಸ್ಥಾನಗಳನ್ನು ಗಳಿಸಿತ್ತು. ಈ ಬಾರಿ ಎಸ್‍ಪಿ ಮತ್ತು ಬಿಎಸ್‍ಪಿ ಜತೆಗೂಡಿದರೂ ನಾವು 74 ಸ್ಥಾನಗಳನ್ನು ಗಳಿಸುತ್ತೇವೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News