ಕ್ಷಯ ಅಥವಾ ಟಿಬಿ ರೋಗದ ಕಾರಣಗಳು ಮತ್ತು ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ

Update: 2019-01-07 11:04 GMT

ಕ್ಷಯ ಅಥವಾ ಟಿಬಿ ಸಾಂಕ್ರಾಮಿಕ ರೋಗವಾಗಿದ್ದು, ಪ್ರಾಥಮಿಕವಾಗಿ ಶ್ವಾಸಕೋಶಗಳನ್ನು ಬಾಧಿಸುತ್ತದೆ ಮತ್ತು ನಂತರ ಮಿದುಳು ಹಾಗೂ ಕಶೇರು ಸೇರಿದಂತೆ ಶರೀರದ ಇತರ ಅಂಗಗಳಿಗೂ ಹರಡಬಲ್ಲುದು.

ಕ್ಷಯರೋಗವನ್ನು ಮೂರು ವಿಧಗಳಲ್ಲಿ ವರ್ಗೀಕರಿಸಲಾಗಿದೆ.

ಆ್ಯಕ್ಟಿವ್: ಈ ವಿಧದಲ್ಲಿ ಟಿಬಿ ಬ್ಯಾಕ್ಟೀರಿಯಾಗಳ ಸಂಖ್ಯೆಯು ತೀವ್ರವಾಗಿ ಹೆಚ್ಚುತ್ತದೆ ಮತ್ತು ಶರೀರದ ಇತರ ಅಂಗಗಳನ್ನು ಆಕ್ರಮಿಸುತ್ತವೆ.

ಮಿಲಿಯರಿ: ಇದು ಅಪರೂಪದ ವಿಧವಾಗಿದ್ದು, ಟಿಬಿ ಬ್ಯಾಕ್ಟೀರಿಯಾಗಳು ವ್ಯಕ್ತಿಯ ರಕ್ತದಲ್ಲಿ ಸೇರಿಕೊಂಡಾಗ ಉಂಟಾಗುತ್ತದೆ.

ಲೇಟೆಂಟ್: ಲೇಟೆಂಟ್ ಅಥವಾ ಸುಪ್ತ ಕ್ಷಯರೋಗವಿದ್ದಾಗ ಸೋಂಕಿಗೊಳಗಾದ ವ್ಯಕ್ತಿಯಲ್ಲಿ ರೋಗವು ಪ್ರಕಟಗೊಳ್ಳುವುದಿಲ್ಲ ಮತ್ತು ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಅಲ್ಲದೆ ಎದೆಯ ಎಕ್ಸ್‌ರೇ ಕೂಡ ಸಹಜವಾಗಿರುತ್ತದೆ.

ಕ್ಷಯರೋಗವು ಮೈಕೊಬ್ಯಾಕ್ಟೀರಿಯಂ ಟುಬರ್‌ ಕುಲೊಸಿಸ್ ಎಂಬ ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತದೆ ಮತ್ತು ಈ ಬ್ಯಾಕ್ಟೀರಿಯಾಗಳು ಸೋಂಕುಪೀಡಿತ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ, ಮಾತನಾಡಿದಾಗ ಅಥವಾ ಉಗುಳಿದಾಗ ಅವು ಟಿಬಿ ಬ್ಯಾಸಿಲ್ಲಿ ಎಂಬ ಕ್ಷಯ ರೋಗಾಣುಗಳನ್ನು ಗಾಳಿಯಲ್ಲಿ ಹರಡುತ್ತವೆ. ಆರೋಗ್ಯವಂತ ವ್ಯಕ್ತಿ ಈ ಬ್ಯಾಸಿಲ್ಲಿಯನ್ನು ಉಸಿರಾಡಿಸಿದಾಗ ಆತ ಸೋಂಕಿಗೊಳಗಾಗುತ್ತಾನೆ. ಈ ಬ್ಯಾಸಿಲ್ಲಿ ಸಣ್ಣ ಸಂಖ್ಯೆಯಲ್ಲಿದ್ದರೂ ಸೋಂಕನ್ನುಂಟು ಮಾಡುತ್ತವೆ. ಕೆಲವರಲ್ಲಿ ಈ ಬ್ಯಾಸಿಲ್ಲಿಗಳಿಗೆ ಯಾವುದೇ ಪ್ರತಿರೋಧ ಎದುರಾಗುವುದಿಲ್ಲ. ಇನ್ನು ಕೆಲವರಲ್ಲಿ ಈ ರೋಗಾಣುಗಳು ಶರೀರವನ್ನು ಪ್ರವೇಶಿಸಿದ ತಕ್ಷಣ ನಾಶಗೊಳಿಸಲ್ಪಡುತ್ತವೆ. ಸೋಂಕು ತಗುಲುವುದು ವ್ಯಕ್ತಿಯ ಶರೀರದ ರೋಗ ನಿರೋಧಕ ವ್ಯವಸ್ಥೆಯನ್ನು ಅವಲಂಬಿಸಿರುತ್ತದೆ.

ಕ್ಷಯರೋಗದ ಅಪಾಯವನ್ನು ಹೆಚ್ಚಿಸುವ ಕೆಲವು ಅಂಶಗಳು ಇಲ್ಲಿವೆ....

ದುರ್ಬಲ ರೋಗ ನಿರೋಧಕ ಶಕ್ತಿ: ಮದ್ಯಪಾನ, ಮಾದಕ ದ್ರವ್ಯ ಸೇವನೆ, ಅನಾರೋಗ್ಯಕರ ಜೀವನ ಶೈಲಿ, ಅನೈರ್ಮಲ್ಯದ ನಡುವೆಯೇ ವಾಸ, ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವ ಕೆಲವು ಔಷಧಿಗಳು ಅಥವಾ ಮಧುಮೇಹ ಮತ್ತು ಎಚ್‌ಐವಿಯಂತಹ ದೀರ್ಘಕಾಲಿಕ ಕಾಯಿಲೆಗಳು ಕ್ಷಯದ ಸೋಂಕಿಗೊಳಗಾಗುವ ಅಪಾಯವನ್ನು ಹೆಚ್ಚಿಸುತ್ತವೆ.

ವಯಸ್ಸಾಗುವಿಕೆ: ವಯಸ್ಸಾದ ವ್ಯಕ್ತಿಗಳು ತಮ್ಮ ಶರೀರದ ರೋಗನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಅನಾರೋಗ್ಯಗಳಿಂದ ಪೀಡಿತರಾಗಿರುವ ಸಾಧ್ಯತೆ ಹೆಚ್ಚಿರುವುದರಿಂದ ಇಂತಹವರು ಕ್ಷಯರೋಗದ ಸೋಂಕಿಗೊಳಗಾಗುವ ಅಪಾಯ ಹೆಚ್ಚಾಗಿರುತ್ತದೆ.

ಸೋಂಕುಪೀಡಿತ ವ್ಯಕ್ತಿಗಳೊಂದಿಗೆ ಸಂಪರ್ಕ: ಕ್ಷಯರೋಗಿಯ ನಿರಂತರ ಸಂಪರ್ಕದಿಂದ ಆರೋಗ್ಯವಂತ ವ್ಯಕ್ತಿಯೂ ಸೋಂಕಿಗೊಳಗಾಗುವ ಸಾಧ್ಯತೆಯು ಹೆಚ್ಚಾಗಿರುತ್ತದೆ. ಇದು ಪ್ರಮುಖ ಅಪಾಯದ ಅಂಶವಾಗಿದೆ.

ವೈದ್ಯಕೀಯ ಸೌಲಭ್ಯಗಳ ಕೊರತೆ: ಉತ್ತಮ ಆರೋಗ್ಯ ರಕ್ಷಣೆ ಸೇವೆಗಳು ಸಿಗದಿದ್ದಾಗ ಸಹಜವಾಗಿಯೇ ಕ್ಷಯರೋಗಕ್ಕೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಬಡವರ ಬಳಿ ರೋಗನಿರ್ಧಾರ ಮತ್ತು ಕಾಯಿಲೆಗೆ ಚಿಕಿತ್ಸೆ ಪಡೆಯಲೂ ಅಗತ್ಯ ಹಣವಿರುವುದಿಲ್ಲ.

ಪ್ರವಾಸ: ವಿಶ್ವದ ಮೂರನೇ ಒಂದು ಭಾಗದ ಜನಸಂಖ್ಯೆಯಲ್ಲಿ ಮಾತ್ರ ಟುಬರ್‌ ಕುಲೋಸಿಸ್ ಬ್ಯಾಕ್ಟೀರಿಯಾಗಳು ಇದ್ದು, ಹೆಚ್ಚಿನವರಲ್ಲಿ ಉತ್ತಮ ರೋಗ ನಿರೋಧಕ ವ್ಯವಸ್ಥೆಯಿಂದಾಗಿ ಈ ರೋಗಾಣುಗಳು ಬಂಧಿಸಲ್ಪಡುತ್ತವೆ. ಕ್ಷಯರೋಗವು ಕಡಿಮೆಯಿರುವ ಪ್ರದೇಶದ ನಿವಾಸಿ ಈ ರೋಗವು ಉಲ್ಬಣ ಸ್ಥಿತಿಯಲ್ಲಿರುವ ಪ್ರದೇಶಕ್ಕೆ ಪ್ರವಾಸಕ್ಕೆ ತೆರಳಿದ್ದರೆ ಸೋಂಕಿಗೊಳಗಾಗುವ ಅಪಾಯವು ಸಹಜವಾಗಿಯೇ ಹೆಚ್ಚುತ್ತದೆ.

ಮಧುಮೇಹ, ತಲೆ ಅಥವಾ ಕುತ್ತಿಗೆ ಕ್ಯಾನ್ಸರ್, ಎಚ್‌ಐವಿ ಅಥವಾ ಏಡ್ಸ್ ಮತ್ತು ಮೂತ್ರಪಿಂಡ ರೋಗಗಳಂತಹ ಕೆಲವು ದೀರ್ಘಕಾಲಿಕ ರೋಗಗಳೂ ಕ್ಷಯರೋಗವುಂಟಾಗುವ ಅಪಾಯವನ್ನು ಹೆಚ್ಚಿಸುತ್ತವೆ.

ಕ್ಷಯರೋಗದ ಲಕ್ಷಣಗಳು

ಕ್ಷಯರೋಗಕ್ಕೆ ಯಾವುದೇ ಆರಂಭಿಕ ಲಕ್ಷಣಗಳಿರುವುದಿಲ್ಲ. ಆದರೆ ಕೆಲವು ಸಾಮಾನ್ಯ ಸಂಕೇತಗಳು ಈ ರೋಗವನ್ನು ಸೂಚಿಸುತ್ತವೆ.

ಮೂರು ವಾರಗಳಾದರೂ ಗುಣವಾಗದ ಕೆಮ್ಮು, ಎದೆನೋವು, ಕೆಮ್ಮಿದಾಗ ರಕ್ತ ಬರುವುದು, ಚಳಿ, ಜ್ವರ, ರಾತ್ರಿಗಳಲ್ಲಿ ಬೆವರುವಿಕೆ, ದೇಹದ ತೂಕ ಕಡಿಮೆಯಾಗುವಿಕೆ ಇವು ಇಂತಹ ಲಕ್ಷಣಗಳಲ್ಲಿ ಸೇರಿವೆ. ಸಕಾಲದಲ್ಲಿ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯದಿದ್ದರೆ ಅದು ಶ್ವಾಸಕೋಶಗಳಿಂದ ಮೂಳೆ, ಮಿದುಳು, ಯಕೃತ್ತು ಮತ್ತು ಮೂತ್ರಪಿಂಡಗಳು ಹಾಗೂ ಹೃದಯದಂತಹ ಶರೀರದ ಇತರ ಅಂಗಗಳಿಗೆ ಹರಡುತ್ತದೆ ಮತ್ತು ರೋಗಾಣುಗಳು ರಕ್ತದಲ್ಲಿ ಪಸರಿಸುತ್ತವೆ.

ಚಿಕಿತ್ಸೆ

ಸಂಯೋಜಿತ ಔಷಧಿಗಳ ಮೂಲಕ ಕ್ಷಯರೋಗವನ್ನು ಗುಣಪಡಿಸಬಹುದು. ಸಾಮಾನ್ಯವಾಗಿ ಚಿಕಿತ್ಸೆಯು 6ರಿಂದ 10 ತಿಂಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ. ಐಸೊನಿಯಾಝಿಡ್, ರಿಫಾಂಪಿನ್, ಎಥಮ್‌ ಬುಟೊಲ್ ಮತ್ತು ಪೈರಾಝೈನಾಮೈಡ್ ಇವು ಕ್ಷಯರೋಗದ ಚಿಕಿತ್ಸೆಗಾಗಿ ಸಾಮಾನ್ಯವಾಗಿ ಬಳಕೆಯಾಗುವ ಔಷಧಿಗಳಲ್ಲಿ ಸೇರಿವೆ. ಇತರ ಬ್ಯಾಕ್ಟೀರಿಯಾಗಳಿಂದ ಉಂಟಾದ ಸೋಂಕುಗಳಿಗೆ ವೈದ್ಯರು 5ರಿಂದ 7 ದಿನಗಳ ಅವಧಿಗೆ ಒಂದೆರಡು ಔಷಧಿಗಳ ಸೇವನೆಯನ್ನು ಶಿಫಾರಸು ಮಾಡುತ್ತಾರೆ. ಆದರೆ ಕ್ಷಯರೋಗ ಗುಣವಾಗಲು ತಿಂಗಳುಗಟ್ಟಲೆ ಹಲವಾರು ಔಷಧಿಗಳನ್ನು ಸೇವಿಸಬೇಕಾಗುತ್ತದೆ. ಔಷಧಿಗೆ ಪ್ರತಿರೋಧ ಮತ್ತು ಚಿಕಿತ್ಸಾ ವೈಫಲ್ಯವನ್ನು ತಡೆಯಲು ರೋಗಿಗೆ ಹಲವರು ಔಷಧಿಗಳನ್ನು ಸೂಚಿಸಲಾಗುತ್ತದೆ. ಹೆಚ್ಚಿನ ಟಿಬಿ ಪ್ರಕರಣಗಳಲ್ಲಿ ಮೊದಲ 2-3 ತಿಂಗಳುಗಳ ಕಾಲ 3 ಅಥವಾ 4 ಔಷಧಿಗಳ ಸಂಯೋಜನೆ ಅಗತ್ಯವಾಗುತ್ತದೆ. ನಂತರ ಇವುಗಳ ಪ್ರಮಾಣವನ್ನು 2-3ಕ್ಕೆ ಕಡಿಮೆ ಮಾಡಲಾಗುತ್ತದೆ. ಟಿಬಿ ಬ್ಯಾಸಿಲ್ಲಿಗಳು ತ್ವರಿತವಾಗಿ ಔಷಧಿಗಳಿಗೆ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವುದರಿಂದ ಕ್ಷಯರೋಗ ಚಿಕಿತ್ಸೆಗೆ ಒಂದೇ ಔಷಧಿಯನ್ನೆಂದೂ ನೀಡುವುದಿಲ್ಲ.

ಕೆಲವರಲ್ಲಿ ಚಿಕಿತ್ಸೆ ಪ್ರಾರಂಭವಾದ ಕೆಲವೇ ವಾರಗಳಲ್ಲಿ ಸುಧಾರಣೆ ಕಂಡುಬರುತ್ತದೆ. ಆದರೆ ಟಿಬಿ ಬ್ಯಾಕ್ಟೀರಿಯಾಗಳು ಆಗಲೂ ಅವರ ಶರೀರದಲ್ಲಿ ಕ್ರಿಯಾಶೀಲವಾಗಿರುತ್ತವೆ. ಹೆಚ್ಚಿನ ಪ್ರಕರಣಗಳಲ್ಲಿ ಈ ರೋಗವು 6ರಿಂದ 9 ತಿಂಗಳುಗಳವರೆಗೆ ಔಷಧಿ ಸೇವನೆಯಿಂದ ಸಂಪೂರ್ಣವಾಗಿ ಗುಣವಾಗುತ್ತದೆ.

ಔಷಧಿ ಪ್ರತಿರೋಧಕ ಟಿಬಿ

ಇತ್ತೀಚಿನ ಕೆಲವು ವರ್ಷಗಳಿಂದ ಔಷಧಿ ಪ್ರತಿರೋಧಕ ಕ್ಷಯರೋಗ ಪ್ರಕರಣಗಳು ಹೆಚ್ಚುತ್ತಿವೆ. ವೈದ್ಯರು ಸೂಚಿಸಿದ ಔಷಧಿಗಳನ್ನು ಸೇವಿಸದಿರುವುದು, ಚಿಕಿತ್ಸೆಯನ್ನು ಪೂರ್ಣಗೊಳಿಸದಿರುವುದು, ಎಚ್‌ಐವಿ/ಏಡ್ಸ್ ರೋಗವಿರುವುದು ಇವು ಔಷಧಿಗಳಿಗೆ ಪ್ರತಿರೋಧಕ್ಕೆ ಕಾರಣವಾಗುವ ಕೆಲವು ಅಂಶಗಳಾಗಿವೆ. ಈ ವಿಧದ ಕ್ಷಯರೋಗ ಸಾಮಾನ್ಯ ಔಷಧಿಗಳಿಗೆ ಬಗ್ಗುವುದಿಲ್ಲ, ಹಲವಾರು ಬಗೆಯ ಔಷಧಿಗಳನ್ನು ನೀಡಬೇಕಾಗುತ್ತದೆ. ಇದಕ್ಕೆ ಚಿಕಿತ್ಸೆ ನೀಡುವುದೂ ಕಷ್ಟ ಮತ್ತು ಸಾಮಾನ್ಯ ಕ್ಷಯಕ್ಕೆ ಹೋಲಿಸಿದರೆ ಸಾವುಗಳ ಸಂಖ್ಯೆಯೂ ಹೆಚ್ಚು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News