​ಮೇಲ್ಜಾತಿ ಮೀಸಲಾತಿಗೆ ವ್ಯಾಪಕ ವಿರೋಧ

Update: 2019-01-08 03:48 GMT

ಹೊಸದಿಲ್ಲಿ, ಜ. 8: ಚುನಾವಣೆಗೆ ಮುನ್ನ ಮೇಲ್ವರ್ಗವನ್ನು ಓಲೈಸುವ ಪ್ರಯತ್ನವಾಗಿ ಮೇಲ್ಜಾತಿಯ ಆರ್ಥಿಕ ಹಿಂದುಳಿದವರಿಗೆ ಶೇಕಡ 10ರಷ್ಟು ಮೀಸಲಾತಿ ಕಲ್ಪಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಮೇಲ್ಜಾತಿಯ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವ ನಿರ್ಧಾರಕ್ಕೆ ಕಾಂಗ್ರೆಸ್ ಪಕ್ಷ ಬದ್ಧ. ಆದರೆ ತನ್ನ ಅಧಿಕಾರಾವಧಿಯ ಕೊನೆಯಲ್ಲಿ ಈ ನಿರ್ಧಾರ ಕೈಗೊಳ್ಳುವ ಅಗತ್ಯವೇನಿತ್ತು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಮಂಡಲ್ ವರದಿ ಪ್ರತಿಪಾದಕರು ಬಿಜೆಪಿಯ ನಿರ್ಧಾರವನ್ನು ಹಿಂದುಳಿದ ವರ್ಗದ ವಿರೋಧಿ ಕ್ರಮ ಎಂದು ಬಣ್ಣಿಸಿದ್ದು, ಜಾತಿ ಗಣತಿಯ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿ ಎಂದು ಸವಾಲು ಹಾಕಿವೆ.

ಕಾಂಗ್ರೆಸ್ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ ಎಐಸಿಸಿ ವಕ್ತಾರ ರಣದೀಪ್ ಸುರ್ಜೇವಾಲಾ, "ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳಲ್ಲಿ ಸೇರದ ಬಡವರ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ನ್ಯಾಯಬದ್ಧ ಪಾಲು ಸಿಗಬೇಕು" ಎಂದು ಹೇಳಿದರು.

ಆದರೆ ಆರ್‌ಜೆಡಿ ಹಾಗೂ ಸಮಾಜವಾದಿ ಪಕ್ಷಗಳು ಕೇಂದ್ರದ ನಿರ್ಧಾರವನ್ನು ಕಟುವಾಗಿ ಟೀಕಿಸಿವೆ. ಆರ್‌ಜೆಡಿ ವಕ್ತಾರ ಮನೋಜ್ ಝಾ ಮಾತನಾಡಿ, "ಸಂವಿಧಾನ ರಚನಾ ಸಮಿತಿಯ ಚರ್ಚೆಯ ಮಾದರಿಯ ಚರ್ಚೆ ನಡೆಸಿದ ಬಳಿಕ ಕೇಂದ್ರ ಈ ನಿರ್ಧಾರ ಕೈಗೊಳ್ಳಬೇಕಿತ್ತು. ಇದಕ್ಕೂ ಮುನ್ನ ಜಾತಿ ಗಣತಿ ಅಂಕಿ ಅಂಶಗಳನ್ನು ಪ್ರಕಟಿಸಬೇಕಿತ್ತು. ಆದರೆ ದಿಢೀರನೇ ಈ ಅವಸರದ ನಿರ್ಧಾರ ಕೈಗೊಂಡಿದೆ" ಎಂದು ಟೀಕಿಸಿದ್ದಾರೆ. ಕೇಂದ್ರದ ಈ ಕ್ರಮ ಬಿಹಾರದಲ್ಲಿ ಲಾಲೂ ಪರ ಹಿಂದುಳಿ ವರ್ಗದವರು ಒಗ್ಗೂಡಲು ಪೂರಕವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಮಾಜವಾದಿ ಪಕ್ಷದ ವಕ್ತಾರ ಉದಯವೀರ್ ಸಿಂಗ್, "ಮೊದಲು ಅವರು ಅತಿ ಹಿಂದುಳಿದವರಿಗೆ ಮೀಸಲಾತಿ ನೀಡುವ ಬಗ್ಗೆ ಮಾತನಾಡಿದರು. ಬಳಿಕ ಮಂದಿರ ಬಂತು. ಇದೀಗ ಮೇಲ್ವರ್ಗದವರ ಮೀಸಲಾತಿ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಇದಕ್ಕೆ ವಿರೋಧವಲ್ಲ. ಆದರೆ ಮೊದಲು ಜಾತಿಗಣತಿಯ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿ, ಆಯಾ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿಗದಿಪಡಿಸಲಿ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News