ಚೀನಾದಿಂದ ಭಾರತಾದ್ಯಂತ ನಿಗಾವಿಡುವ ಸಾಮರ್ಥ್ಯದ ರಾಡಾರ್ ನಿರ್ಮಾಣ

Update: 2019-01-09 17:59 GMT

ಬೀಜಿಂಗ್, ಜ.9: ಸುಧಾರಿತ ಚಿಕ್ಕ ಗಾತ್ರದ ಕಡಲ ರಾಡಾರ್ ಅನ್ನು ಚೀನಾ ಅಭಿವೃದ್ಧಿಗೊಳಿಸಿದ್ದು ಇದರಿಂದ ‘ಭಾರತದಷ್ಟು ಗಾತ್ರದ’ ಪ್ರದೇಶದ ಮೇಲೆ ನಿಗಾ ಇರಿಸಲು ಸಾಧ್ಯವಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಓವರ್ ದಿ ಹರೈಝಾನ್’(ದಿಗಂತದಿಂದ ಆಚೆಗೆ) ಎಂಬ ಹೆಸರಿನ, ದೇಶೀಯವಾಗಿ ಅಭಿವೃದ್ಧಿಗೊಳಿಸಿರುವ ರೇಡಾರ್ ವ್ಯವಸ್ಥೆಯಿಂದ ಚೀನಾದ ಕಡಲು ಪ್ರದೇಶದ ಮೇಲೆ ಪೂರ್ಣವಾಗಿ ನಿಗಾ ವಹಿಸಲು ಚೀನಾದ ನೌಕಾಪಡೆಗೆ ಸಾಧ್ಯವಾಗುತ್ತದೆ. ಅಲ್ಲದೆ ವೈರಿ ನೌಕೆಗಳಿಂದ, ಯುದ್ಧ ವಿಮಾನಗಳಿಂದ ಹಾಗೂ ಕ್ಷಿಪಣಿಗಳಿಂದ ಎದುರಾಗುವ ಬೆದರಿಕೆಗಳನ್ನು ಈಗಿರುವ ತಂತ್ರಜ್ಞಾನಗಳಿಗಿಂತಲೂ ಶೀಘ್ರವಾಗಿ ಗುರುತಿಸಬಹುದಾಗಿದೆ ಎಂದು ರಾಡಾರ್ ನಿರ್ಮಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಜ್ಞಾನಿಗಳು ಹೇಳಿರುವುದಾಗಿ ಹಾಂಗ್‌ಕಾಂಗ್ ಮೂಲದ ‘ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್’ ಪತ್ರಿಕೆ ವರದಿ ಮಾಡಿದೆ.

ಚೀನಾದ ರಾಡಾರ್ ತಂತ್ರಜ್ಞಾನವನ್ನು ಉನ್ನತೀಕರಿಸಿದ ಮತ್ತು ಚೀನಾದ ನೌಕಾಪಡೆಗೆ ‘ಭಾರತದಷ್ಟು ಗಾತ್ರದ ’ ಭೂಪ್ರದೇಶದ ಮೇಲೆ ನಿರಂತರ ನಿಗಾ ಇರಿಸಲು ಸಾಧ್ಯವಾಗುವ ರಾಡಾರ್ ವ್ಯವಸ್ಥೆಯನ್ನು ರೂಪಿಸಿದ ಶ್ರೇಯ ಚೈನೀಸ್ ಅಕಾಡೆಮಿ ಆಫ್ ಸೈಯನ್ಸಸ್(ಸಿಎಎಸ್‌ಓ)ನ ಲಿಯು ಯೋಂಗ್ಟನ್‌ಗೆ ಸಲ್ಲುತ್ತದೆ. ಈ ಹಿನ್ನೆಲೆಯಲ್ಲಿ ದೇಶದ ಅಗ್ರ ವಿಜ್ಞಾನಿಗಳಿಗೆ ಸಲ್ಲುವ, 1.116 ಮಿಲಿಯನ್ ಡಾಲರ್ ಮೊತ್ತದ ಪುರಸ್ಕಾರವನ್ನು ಯೋಂಗ್ಟನ್ ಹಾಗೂ ಮತ್ತೊಬ್ಬ ರಕ್ಷಣಾ ವಿಜ್ಞಾನಿಗೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಂಗಳವಾರ ಪ್ರದಾನ ಮಾಡಿದ್ದಾರೆ. ನೌಕೆಯಲ್ಲಿ ಸ್ಥಾಪಿಸಲಾಗಿರುವ ಈ ರಾಡಾರ್‌ನಿಂದಾಗಿ ಚೀನಾ ಸೇನಾ ಪಡೆ ನಿಗಾ ವಹಿಸುವ ವ್ಯಾಪ್ತಿ ಪ್ರದೇಶ ವಿಸ್ತಾರಗೊಂಡಿದೆ.

ಇದುವರೆಗಿನ ರಾಡಾರ್ ವ್ಯವಸ್ಥೆಯಿಂದ ಕೇವಲ ಶೇ.20ರಷ್ಟು ಪ್ರದೇಶದ ಮೇಲೆ ನಿಗಾ ವಹಿಸಲು ಸಾಧ್ಯವಾಗುತ್ತಿತ್ತು. ಆದರೆ ಈಗ ಸಂಪೂರ್ಣ ಪ್ರದೇಶದ ಮೇಲೆ ನಿಗಾ ಇರಿಸಬಹುದಾಗಿದೆ. ಜೊತೆಗೆ ದಕ್ಷಿಣ ಚೀನಾ ಸಮುದ್ರ, ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರ ಸೇರಿದಂತೆ ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ಇರಿಸಲು ಸಾಧ್ಯವಾಗುತ್ತದೆ ಎಂದು ಲಿಯು ಯೋಂಗ್ಟನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News