ಸ್ತ್ರೀ ದ್ವೇಷಿ ಹೇಳಿಕೆ ಆರೋಪ : ಮೋದಿ - ರಾಹುಲ್ ಜಗಳಬಂದಿ

Update: 2019-01-10 05:20 GMT

ಜೈಪುರ, ಜ. 10: ರಫೇಲ್ ಒಪ್ಪಂದದ ಬಗೆಗಿನ ಚರ್ಚೆ ವೇಳೆ ಪ್ರಧಾನಿ ನರೇಂದ್ರ ಮೋದಿ, ತನ್ನನ್ನು ಸಮರ್ಥಿಸಿಕೊಳ್ಳುವಂತೆ ಮಹಿಳೆಯ (ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್) ಮೊರೆ ಹೋಗಿ ತಾವು ಪಲಾಯನಗೈದರು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ವ್ಯಂಗ್ಯವಾಡಿದ್ದಾರೆ. ಈ ಹೇಳಿಕೆ ದೊಡ್ಡ ರಾಜಕೀಯ ವಿವಾದ ಎಬ್ಬಿಸಿದೆ.

"ನನ್ನನ್ನು ಸಮರ್ಥಿಸಿ. ನನ್ನನ್ನು ನಾನು ಸಮರ್ಥಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ನನ್ನನ್ನು ರಕ್ಷಿಸಿ" ಎಂದು ಹೇಳುತ್ತಾ 56 ಇಂಚು ಎದೆಯ ಕಾವಲುಗಾರ ಓಡಿಹೋದರು ಎಂದು ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡುತ್ತಾ ಟೀಕಿಸಿದರು.

ರಾಹುಲ್‌ಗಾಂಧಿಯವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಹೇಳಿಕೆ ರಾಜಕೀಯವಾಗಿ ಸರಿಯಲ್ಲ ಮತ್ತು ಸ್ತ್ರೀದ್ವೇಷಿ ಹೇಳಿಕೆ ಎಂದು ಟೀಕಿಸಲಾಗಿದೆ. ಹೀಗೆ ಹೇಳಿರುವುದು ದೇಶದ ಎಲ್ಲ ಮಹಿಳೆಯರಿಗೆ ಮಾಡಿದ ಅವಮಾನ ಹಾಗೂ ವಿರೋಧ ಪಕ್ಷದ ನಾಯಕನ ಬೌದ್ಧಿಕ ಬಡತನವನ್ನು ಪ್ರತಿಬಿಂಬಿಸುತ್ತದೆ ಎಂದು ಮೋದಿ ಪ್ರತಿದಾಳಿ ನಡೆಸಿದ್ದಾರೆ.

ಆದರೆ ರಾಹುಲ್‌ಗಾಂಧಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, "ಮೋದಿಯವರಿಗೆ ಎಲ್ಲ ಗೌರವ ಸಲ್ಲಿಸುತ್ತೇನೆ, ಮಹಿಳೆಯರಿಗೆ ಗೌರವ ನೀಡುವುದು ನಮ್ಮ ಸಂಸ್ಕೃತಿಯಲ್ಲಿ ಮನೆಯಿಂದಲೇ ಆರಂಭವಾಗುತ್ತದೆ. ಕಂಪನ ನಿಲ್ಲಿಸಿ. ಒಬ್ಬ ಪುರುಷರಾಗಿ ನನ್ನ ಪ್ರಶ್ನೆಗಳಿಗೆ ಉತ್ತರಿಸಿ: ಮೂಲ ರಫೇಲ್ ಒಪ್ಪಂದವನ್ನು ನೀವು ಬೈಪಾಸ್ ಮಾಡಿದಾಗ ವಾಯುಪಡೆ ಹಾಗೂ ರಕ್ಷಣಾ ಸಚಿವಾಲಯ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತೇ ? ಹೌದು ? ಅಥವಾ ಇಲ್ಲ" ಎಂದು ಸವಾಲು ಹಾಕಿದ್ದಾರೆ.

ಮೋದಿ ಮೇಲೆ ಪ್ರತಿದಾಳಿ ನಡೆಸುವ ವೇಳೆ ರಾಹುಲ್ ಬಳಸಿದ "ಪುರುಷರಾಗಿ ಮತ್ತು ನನ್ನ ಪ್ರಶ್ನೆಗೆ ಉತ್ತರಿಸಿ" ಎಂಬ ಪದಗಳು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವಿವಾದಕ್ಕೆ ಕಾರಣವಾಗಿವೆ. ಅಗಸ್ತಾ ವೆಸ್ಟ್‌ಲ್ಯಾಂಡ್ ಹಾಗೂ ನ್ಯಾಷನಲ್ ಹೆರಾಲ್ಡ್ ಪ್ರಕರಣಗಳ ಆರೋಪದ ಬಗೆಗಿನ ಪ್ರಶ್ನೆಗಳಿಗೆ ನೀವು ಉತ್ತರಿಸಿ ಎಂಬ ಸವಾಲುಗಳನ್ನು ಜಾಲತಾಣಿಗರು ಹಾಕಿದ್ದಾರೆ.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡಾ ರಾಹುಲ್ ಹೇಳಿಕೆಯನ್ನು ಟೀಕಿಸಿದ್ದು, "ಅಂಕಿ ಅಂಶಗಳ ಮೂಲಕ ಮಹಿಳೆಯರನ್ನು ಎದುರಿಸಲಾಗದ ಕಾಂಗ್ರೆಸ್ ಸ್ತ್ರೀ ದ್ವೇಷದ ಹೇಳಿಕೆ ನೀಡಿದೆ. ಭಾರತದ ನಾರಿಶಕ್ತಿ ಬಳಿ ಅವರು ಕ್ಷಮೆ ಯಾಚಿಸಬೇಕು" ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News