ಭ್ರಷ್ಟಾಚಾರ ಆರೋಪ ಹೊತ್ತಿರುವ ರಾಕೇಶ್ ಅಸ್ತಾನ ತನಿಖೆ ಎದುರಿಸಬೇಕು: ದಿಲ್ಲಿ ಹೈಕೋರ್ಟ್

Update: 2019-01-11 15:38 GMT

ಹೊಸದಿಲ್ಲಿ,ಜ.11: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಅವರ ವಿರುದ್ಧ ದಾಖಲಾಗಿರುವ ಭ್ರಷ್ಟಾಚಾರ ಪ್ರಕರಣವನ್ನು ರದ್ದುಗೊಳಿಸಲು ಶುಕ್ರವಾರ ನಿರಾಕರಿಸಿರುವ ದಿಲ್ಲಿ ಉಚ್ಚ ನ್ಯಾಯಾಲಯವು, ಅಸ್ತಾನಾ, ಸಿಬಿಐ ಡಿಎಸ್‌ಪಿ ದೇವೇಂದ್ರಕುಮಾರ್ ಮತ್ತು ಮಧ್ಯವರ್ತಿ ಮನೋಜ್ ಪ್ರಸಾದ್ ಅವರ ವಿರುದ್ಧ ತನಿಖೆಯನ್ನು 10 ದಿನಗಳಲ್ಲಿ ಪೂರ್ಣಗೊಳಿಸುವಂತೆ ಸಿಬಿಐಗೆ ಸೂಚಿಸಿದೆ. ಕ್ರಿಮಿನಲ್ ಕಾನೂನು ಕ್ರಮಗಳ ವಿರುದ್ಧ ಅಸ್ತಾನಾಗೆ ನೀಡಿದ್ದ ಮಧ್ಯಂತರ ರಕ್ಷಣೆಯನ್ನೂ ಅದು ರದ್ದುಗೊಳಿಸಿದೆ.

ತಮ್ಮ ವಿರುದ್ಧ ದಾಖಲಾಗಿರುವ ಎಫ್ ‌ಐಆರ್ ಅನ್ನು ಪ್ರಶ್ನಿಸಿ ಈ ಮೂವರೂ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸುತ್ತಿತ್ತು. ಎಫ್‌ ಐಆರ್ ‌ನಲ್ಲಿ ಅಸ್ತಾನಾರ ವಿರುದ್ಧ ಕ್ರಿಮಿನಲ್ ಒಳಸಂಚು,ಭ್ರಷ್ಟಾಚಾರ ಮತ್ತು ಕ್ರಿಮಿನಲ್ ದುರ್ವರ್ತನೆಯ ಆರೋಪಗಳನ್ನು ಹೊರಿಸಲಾಗಿದೆ.

ಪ್ರಕರಣದಲ್ಲಿಯ ವಾಸ್ತವಾಂಶಗಳನ್ನು ಪರಿಗಣಿಸಿ ಅಸ್ತಾನಾ ಮತ್ತು ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಪೂರ್ವಾನುಮತಿಯ ಅಗತ್ಯವಿಲ್ಲ ಎಂದು ನ್ಯಾ.ನಜ್ಮಿ ವಝೀರಿ ಅವರು ಸ್ಪಷ್ಟಪಡಿಸಿದರು.

ಹೈದರಾಬಾದ್‌ನ ಉದ್ಯಮಿ ಸತೀಶ ಬಾಬು ಸನಾ ದೂರಿನ ಮೇರೆಗೆ ಈ ಎಫ್‌ಐಆರ್‌ನ್ನು ದಾಖಲಿಸಲಾಗಿದೆ. ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ಮಾಂಸ ರಫ್ತು ಉದ್ಯಮಿ ಮೊಯಿನ್ ಕುರೇಷಿಗೆ ಅನುಕೂಲ ಕಲ್ಪಿಸಲು ತಾನು ಅಸ್ತಾನಾಗೆ ಎರಡು ಕೋ.ರೂ.ಲಂಚ ನೀಡಿದ್ದಾಗಿ ಸನಾ ಆರೋಪಿಸಿದ್ದರು.

ದುರುದ್ದೇಶಪೂರ್ವಕವಾಗಿ ತನಗೆ ಕಿರುಕುಳ ನೀಡಲಾಗಿತ್ತು ಮತ್ತು ತನ್ನ ವಿರುದ್ಧ ಸಾಕ್ಷ್ಯಾಧಾರಗಳಿಲ್ಲ. ಆಗಿನ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾರ ವಿರುದ್ಧ ಕ್ರಿಮಿನಲ್ ದುರ್ವರ್ತನೆಯ ಆರೋಪಗಳಿಗೆ ಪ್ರತೀಕಾರವಾಗಿ ತನ್ನ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಅಸ್ತಾನಾ ನ್ಯಾಯಾಲಯದಲ್ಲಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News