ಮೂವರು ಸಿಬಿಐ ಮುಖ್ಯಸ್ಥರ ತಲೆದಂಡಕ್ಕೆ ಕಾರಣವಾದ ವ್ಯಕ್ತಿಯ ಬಗ್ಗೆ ನಿಮಗೆಷ್ಟು ಗೊತ್ತು?

Update: 2019-01-11 15:33 GMT

ಸರ್ವೋಚ್ಚ ನ್ಯಾಯಾಲಯದಿಂದ ಹುದ್ದೆಯಲ್ಲಿ ಮರುಸ್ಥಾಪಿಲ್ಪಟ್ಟಿದ್ದ ಅಲೋಕ್ ವರ್ಮಾರ ಖುಷಿ ಬಂದಷ್ಟೇ ವೇಗದಲ್ಲಿ ಮಾಯವಾಗಿದೆ. ನ್ಯಾಯಾಲಯದ ತೀರ್ಪು ಹೊರಬಿದ್ದು 48 ಗಂಟೆಗಳು ಕಳೆಯುವ ಮೊದಲೇ ಪ್ರಧಾನಿ ನರೇಂದ್ರಮೋದಿಯವರ ನೇತೃತ್ವದ ಉನ್ನತಾಧಿಕಾರ ಸಮಿತಿಯು ಗುರುವಾರ ಅವರನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಿದೆ. ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಸಮಿತಿಯು ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಮೂಲಗಳು ಹೇಳಿವೆ.

ಇಡೀ ಸಿಬಿಐ ವರ್ಸಸ್ ಸರಕಾರ ಪ್ರಹಸನದ ಕೇಂದ್ರಬಿಂದುವಾಗಿ ಮತ್ತೊಮ್ಮೆ ಮೊಯಿನ್ ಅಖ್ತರ್ ಕುರೇಷಿಯ ಹೆಸರು ಹೊರಹೊಮ್ಮಿದೆ. ಹಿಂದಿನ ಸಿಬಿಐ ಮುಖ್ಯಸ್ಥರಾಗಿದ್ದ ಎ.ಪಿ.ಸಿಂಗ್ ಮತ್ತು ರಂಜಿತ್ ಸಿನ್ಹಾ ಅವರ ಪತನದ ಹಿಂದೆಯೂ ಇದೇ ಕುರೇಷಿ ಇದ್ದ!

ಅಂದ ಹಾಗೆ ಈ ಕುರೇಷಿ ಯಾರು ಮತ್ತು ಆತನಿಗೂ ವರ್ಮಾ ಹಾಗೂ ಸಿಬಿಐ ವಿಶೇಷ ನಿರ್ದೇಶಕ ರಾಕೇಶ ಅಸ್ತಾನಾರ ನಡುವಿನ ಕಚ್ಚಾಟಕ್ಕೂ ಏನು ಸಂಬಂಧ?

ದಿಲ್ಲಿಯ ಸಂತ ಸ್ಟೆಫನ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾದ ಕುರೇಷಿ ಕಾನ್ಪುರದ ಬಿಲಿಯಾಧೀಶ ಮಾಂಸ ರಫ್ತು ವ್ಯಾಪಾರಿಯಾಗಿದ್ದು,ತೆರಿಗೆ ವಂಚನೆಯಿಂದ ಹಿಡಿದು ಅಕ್ರಮ ಹಣ ವಹಿವಾಟು ಮತ್ತು ಭ್ರಷ್ಟಾಚಾರದವರೆಗೂ ಹಲವಾರು ಪ್ರಕರಣಗಳಲ್ಲಿ ತನಿಖೆಗಳನ್ನು ಎದುರಿಸುತ್ತಿದ್ದಾನೆ. ಕುರೇಷಿ 1993ರಲ್ಲಿ ಉತ್ತರ ಪ್ರದೇಶದ ರಾಮಪುರದಲ್ಲಿ ತನ್ನ ಮಾಂಸ ಉದ್ಯಮವನ್ನಾರಂಭಿಸಿದ್ದ. ಅಧಿಕಾರದ ಮೊಗಸಾಲೆಯಲ್ಲಿನ ತನ್ನ ಪ್ರಭಾವಿ ಸ್ನೇಹಿತರ ವಿಶಾಲ ಜಾಲದಿಂದಾಗಿ ಕೆಲವೇ ವರ್ಷಗಳಲ್ಲಿ ಆತನ ಉದ್ಯಮ ಉಚ್ಛ್ರಾಯಕ್ಕೇರಿತ್ತು. ಮಾಂಸ ಉದ್ಯಮದ ಜೊತೆಗೆ ಕುರೇಷಿ ದುಬೈ,ಲಂಡನ್ ಮತ್ತು ಯುರೋಪ್‌ನಲ್ಲಿ ವ್ಯಾಪಕ ಹವಾಲಾ ಜಾಲವನ್ನೂ ರೂಪಿಸಿಕೊಂಡಿದ್ದ. ಸಿಬಿಐ ಅಧಿಕಾರಿಗಳು ಮತ್ತು ರಾಜಕಾರಣಿಗಳು ಸೇರಿದಂತೆ ಅಧಿಕಾರಸ್ಥರನ್ನು ತನ್ನ ಋಣದಲ್ಲಿ ಬೀಳಿಸಲು ಹವಾಲಾ ವಹಿವಾಟುಗಳು ಮತ್ತು ಇತರ ವಿಧಾನಗಳ ಮೂಲಕ ಆತ ಭಾರೀ ಹಣವನ್ನು ವ್ಯಯಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಕುರೇಷಿ ಪ್ರಕರಣದಲ್ಲಿ ಅನುಕೂಲ ಕಲ್ಪಿಸಲು ಅಲೋಕ್ ವರ್ಮಾ ಅವರು ಸತೀಶ ಬಾಬು ಸನಾ ಎಂಬಾತನಿಂದ ಎರಡು ಕೋಟಿ ರೂ. ಲಂಚವನ್ನು ಪಡೆದಿದ್ದರು ಎಂದು ಅಸ್ತಾನಾ ಮಾಡಿದ್ದ ಅರೋಪ ಹಾಲಿ ಪ್ರಕರಣಕ್ಕೆ ಮೂಲವಾಗಿತ್ತು. ಹೈದರಾಬಾದ್ ನಿವಾಸಿಯಾಗಿರುವ ಉದ್ಯಮಿ ಸನಾ ಕುರೇಷಿಯ ಬಂಟ ಎನ್ನಲಾಗಿದೆ. ವರ್ಮಾ ಮತ್ತು ಅಸ್ತಾನಾ ನಡುವಿನ ಕಚ್ಚಾಟದ ಹಿಂದಿನ ಸಂಪರ್ಕ ಕೊಂಡಿ ಈತನೇ ಆಗಿದ್ದ. ವರ್ಮಾ ಕೂಡ ಸನಾನಿಂದ ಮೂರು ಕೋಟಿ ರೂ.ಲಂಚ ಪಡೆದ ಆರೋಪದಲ್ಲಿ ಅಸ್ತಾನಾ ವಿರುದ್ಧ ಎಫ್‌ಐಆರ್ ಸಲ್ಲಿಸಿದ್ದರು.

ಕುರೇಷಿ ಆಗಿನ ಸಿಬಿಐ ಮುಖ್ಯಸ್ಥ ರಂಜಿತ್ ಸಿನ್ಹಾರ ನಿವಾಸಕ್ಕೆ 15 ತಿಂಗಳಲ್ಲಿ ಕನಿಷ್ಠ 70 ಬಾರಿ ಭೇಟಿ ನೀಡಿದ್ದು 2014ರಲ್ಲಿ ಬೆಳಕಿಗೆ ಬಂದಾಗ ಆತನ ಹೆಸರು ಮೊದಲ ಬಾರಿ ಮಾಧ್ಯಮಗಳ ಶೀರ್ಷಿಕೆಗಳಲ್ಲಿ ಕಾಣಿಸಿಕೊಂಡಿತ್ತು. ಸಿಬಿಐ ಪ್ರಕರಣವೊಂದರಲ್ಲಿ ತನ್ನ ಸ್ನೇಹಿತನೋರ್ವನಿಗೆ ಸಿನ್ಹಾರ ಮೂಲಕ ಜಾಮೀನು ಕೊಡಿಸಲು ತಾನು ಕುರೇಷಿಗೆ ಒಂದು ಕೋ.ರೂ.ನೀಡಿದ್ದೆ ಎಂದು ಸನಾ ಕಳೆದ ವರ್ಷ ಜಾರಿ ನಿರ್ದೇಶನಾಲಯಕ್ಕೆ ಹೇಳಿಕೆ ನೀಡಿದ್ದ. ಆದರೆ ಸಿನ್ಹಾ ತನ್ನ ವಿರುದ್ಧದ ಆರೋಪಗಳನ್ನು ಪದೇ ಪದೇ ನಿರಾಕರಿಸಿದ್ದಾರೆ.

2014ರಲ್ಲಿ ನಂತರದಲ್ಲಿ ಕುರೇಷಿ 2010-2012ರ ಅವಧಿಯಲ್ಲಿ ಸಿಬಿಐ ಮುಖ್ಯಸ್ಥರಾಗಿದ್ದ ಎ.ಪಿ.ಸಿಂಗ್ ಅವರೊಂದಿಗೆ ಹಲವಾರು ಸಂದೇಶಗಳನ್ನು ವಿನಿಮಯಿಸಿಕೊಂಡಿದ್ದ. ಆರಂಭದಲ್ಲಿ ಆದಾಯ ತೆರಿಗೆ ಇಲಾಖೆಯು ಪ್ರಕರಣವನ್ನು ದಾಖಲಿಸಿಕೊಂಡಿತ್ತು ಮತ್ತು ಕಳೆದ ವರ್ಷದ ಫೆಬ್ರವರಿಯಲ್ಲಿ ಸಿಬಿಐ ಕೂಡ ಕುರೇಷಿ ಜೊತೆಗಿನ ನಂಟಿನ ತನಿಖೆಗಾಗಿ ಸಿಂಗ್ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿತ್ತು. ಈ ಆರೋಪದಿಂದಾಗಿ ಸಿಂಗ್ ಅವರು ಕೇಂದ್ರ ಲೋಕಸೇವಾ ಆಯೋಗದ ಸದಸ್ಯತ್ವವನ್ನು ಕಳೆದುಕೊಳ್ಳಬೇಕಾಯಿತು. ಸಿಂಗ್ ಕೂಡ ತನ್ನ ವಿರುದ್ಧದ ಎಲ್ಲ ಆರೋಪಗಳನ್ನ್ನು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News