ಪೌರತ್ವ ಮಸೂದೆಗೆ ವಿರೋಧ: ಬಟ್ಟೆ ಬಿಚ್ಚಿ ಪ್ರತಿಭಟನೆ

Update: 2019-01-11 18:20 GMT

ಗುವಾಹಟಿ, ಜ.11: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ಬಟ್ಟೆ ಬಿಚ್ಚುವ ಪ್ರತಿಭಟನೆ ಮುಂದುವರಿದಿದ್ದು ಶುಕ್ರವಾರ ಜೊಹ್ರಾಟ್‌ನ ಜಿಲ್ಲಾಧಿಕಾರಿ ಕಚೇರಿಯೆದುರು ವ್ಯಕ್ತಿಯೊಬ್ಬ ತನ್ನ ಬಟ್ಟೆ ಬಿಚ್ಚಿ ಪ್ರತಿಭಟಿಸಿದ್ದಾನೆ.

ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಪಘಾನಿಸ್ತಾನದಿಂದ ಪಲಾಯನ ಮಾಡಿ , 2014ರ ಡಿಸೆಂಬರ್ 31ರ ಮೊದಲು ಭಾರತ ಪ್ರವೇಶಿಸಿರುವ ಮುಸ್ಲಿಮೇತರ ವ್ಯಕ್ತಿಗಳಿಗೆ ಭಾರತದ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆಗೆ ಲೋಕಸಭೆ ಜನವರಿ 8ರಂದು ಅನುಮೋದನೆ ನೀಡಿದೆ. ಈ ಮಸೂದೆಯನ್ನು ವಿರೋಧಿಸಿ ಹೇಳಿಕೆ ನೀಡಿರುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಗುವಾಹಟಿ ವಿವಿಯ ಪ್ರೊಫೆಸರ್ ಹಿರೇನ್ ಗೊಹೈನ್ ವಿರುದ್ಧ ಗುರುವಾರ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಹಿರೇನ್‌ಗೆ ಶುಕ್ರವಾರ ಗುವಾಹಟಿ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರುಗೊಳಿಸಿದೆ.

ಹಿರೇನ್ ಬಂಧನವನ್ನು ಖಂಡಿಸಿ ಮತ್ತು ಪೌರತ್ವ ಮಸೂದೆಯನ್ನು ವಿರೋಧಿಸಿ ಮಾಂತು ದತ್ತ ಎಂಬ ವ್ಯಕ್ತಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಎದುರು ತನ್ನ ಬಟ್ಟೆ ಬಿಚ್ಚಿ, ಅಸ್ಸಾಂ ಮಾತೆಗೆ ಜಯವಾಗಲಿ ಎಂಬ ಘೋಷಣೆ ಕೂಗಿದ್ದಾನೆ. ಹಿರೇನ್ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಕೇಂದ್ರ ಸರಕಾರ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ. ಅವರನ್ನು ಬಂಧಿಸಬಾರದು ಎಂದು ಘೋಷಣೆ ಕೂಗಿದ್ದಾನೆ ಮತ್ತು ಪೌರತ್ವ ಮಸೂದೆ ಕಾಯ್ದೆ ಜಾರಿಗೊಳಿಸದಂತೆ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾನೆ.

ಬಿಜೆಪಿ ಮುಖಂಡರು ಬ್ರೋಕರ್‌ ಗಳಂತೆ ಕೆಲಸ ಮಾಡುವುದನ್ನು ನಿಲ್ಲಿಸಬೇಕು ಮತ್ತು ಮಸೂದೆಯನ್ನು ಹಿಂಪಡೆಯಲು ಕ್ರಮ ಕೈಗೊಳ್ಳಬೇಕು ಎಂದಾತ ಆಗ್ರಹಿಸಿದ್ದಾನೆ. ಬಳಿಕ ಆತನನ್ನು ಪೊಲೀಸರು ಅಲ್ಲಿಂದ ತೆರವುಗೊಳಿಸಿದರು. ಇದಕ್ಕೂ ಮುನ್ನ ಸಂಸತ್ ಭವನದೆದುರು ಅಸ್ಸಾಂ ನಿವಾಸಿಗಳ ತಂಡವೊಂದು ಮಸೂದೆಯನ್ನು ವಿರೋಧಿಸಿ ಬಟ್ಟೆ ಬಿಚ್ಚಿ ಪ್ರತಿಭಟನೆ ನಡೆಸಿತ್ತು. ದಿಲ್ಲಿಯಲ್ಲಿರುವ ಅಸ್ಸಾಂ ವಿದ್ಯಾರ್ಥಿಗಳೂ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಗುರುವಾರ ಮುಂಬೈಯ ಶಿವಾಜಿ ಪಾರ್ಕ್‌ನಲ್ಲಿ ಮಸೂದೆಯನ್ನು ವಿರೋಧಿಸಿ ಮೋಂಬತ್ತಿ ಮೆರವಣಿಗೆ ನಡೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News