ಶೇ.10 ಮೀಸಲಾತಿ ನ್ಯಾಯಾಂಗದ ನಿರ್ಧಾರಕ್ಕೆ ಅನುಗುಣವಾಗಿದೆ: ಪಾಸ್ವಾನ್

Update: 2019-01-11 18:21 GMT

ಪಾಟ್ನ, ಜ.11: ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಮೇಲ್ಜಾತಿಯ ಬಡವರಿಗೆ ಶೇ.10ರಷ್ಟು ಮೀಸಲಾತಿ ನೀಡುವ ನಿರ್ಧಾರಕ್ಕೆ ನ್ಯಾಯಾಂಗದ ಸಮರ್ಥನೆ ದೊರಕಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದಾರೆ ಎಂದು ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಇಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಪಿ ಸಿಂಗ್ ಸರಕಾರ ಒಬಿಸಿ ವರ್ಗದವರಿಗೆ ಮೀಸಲಾತಿ ಒದಗಿಸಿದಾಗ, ಮೇಲ್ಜಾತಿಯ ಬಡವರಿಗೂ ಮೀಸಲಾತಿ ನೀಡುವ ಬಗ್ಗೆ ಯೋಚಿಸಿದ್ದರು. ಆದರೆ, ಆರ್ಥಿಕ ಆಧಾರದಲ್ಲಿ ಮೀಸಲಾತಿ ಒದಗಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಆಗಿನ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಹೇಳಿದ್ದರು. ಆದ್ದರಿಂದ ಈ ನಿರ್ಧಾರವನ್ನು ಕೈಬಿಡಲಾಯಿತು.

 ಬಳಿಕ, ಪಿ.ವಿ.ನರಸಿಂಹ ರಾವ್ ಸರಕಾರ ಅಧಿಸೂಚನೆಯ ಮೂಲಕ ಮೀಸಲಾತಿ ಒದಗಿಸುವ ಹೇಳಿಕೆ ನೀಡಿ ಬಡಜನರಿಗೆ ‘ಲಾಲಿಪಾಪ್’ನ ಆಸೆ ಹುಟ್ಟಿಸಿದರು. ಆದರೆ ಇದೂ ಸಾಧ್ಯವಾಗಲಿಲ್ಲ. ಆದರೆ ಮೋದಿ ಸರಕಾರ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ನಿರ್ಧಾರ ಪ್ರಕಟಿಸಿದೆ. ಇದರಿಂದ ಕಾಂಗ್ರೆಸ್, ಆರ್‌ಜೆಡಿ ಮುಂತಾದ ವಿರೋಧ ಪಕ್ಷಗಳು ನಿದ್ದೆಯಿಂದ ಎಚ್ಚೆತ್ತುಕೊಳ್ಳುವಂತಾಗಿದೆ. ಮುಂಬರುವ ಲೋಕಸಭಾ ಚುನಾವಣೆಗೆ ಮತ ಕೇಳಲು ಜನತೆಯ ಬಳಿ ಹೋದಾಗ ವಿಪಕ್ಷಗಳಿಗೆ ವಾಸ್ತವತೆಯ ಅರಿವು ಆಗಲಿದೆ . ಮೇಲ್ಜಾತಿಯ ಮುಖಂಡ ವಿಪಿ ಸಿಂಗ್ ಒಬಿಸಿಗಳಿಗೆ ಮೀಸಲಾತಿ ನೀಡಿದರು. ಆದರೆ ಹಿಂದುಳಿದ ಜಾತಿಯವರಾದ ಮೋದಿ ಮೇಲ್ಜಾತಿಯ ಬಡವರಿಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಇದು ದೇಶದಲ್ಲಿರುವ ಸಾಮಾಜಿಕ ಸಾಮರಸ್ಯದ ಸೂಚನೆಯಾಗಿದೆ ಎಂದು ಪಾಸ್ವಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News