2019ರ ಚುನಾವಣೆಯನ್ನು ಪಾಣಿಪತ್ ಕದನಕ್ಕೆ ಹೋಲಿಸಿದ ಅಮಿತ್ ಶಾ

Update: 2019-01-12 06:22 GMT

ಹೊಸದಿಲ್ಲಿ, ಜ.12: 2019ರ ಚುನಾವಣೆಯನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪಾಣಿಪತ್ ಕದನಕ್ಕೆ ಹೋಲಿಸಿದ್ದಾರೆ. 1761ರ ಪಾಣಿಪತ್ ಕದನ ಭಾರತದಲ್ಲಿ ಸಾಮ್ರಾಜ್ಯಶಾಹಿ ಆಡಳಿತಕ್ಕೆ ಕಾರಣವಾದಂತೆ 2019ರ ಚುನಾವಣೆಯನ್ನು 3ನೇ ಪಾಣಿಪತ್ ಕದನವನ್ನಾಗಿ ಮಾಡಬೇಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಅವರು ಕರೆ ನೀಡಿದ್ದಾರೆ.

"2019ರ ಚುನಾವಣೆ ಮೂರನೇ ಪಾಣಿಪತ್ ಕದನದಂತೆ ನಿರ್ಧಾರಕ ಹೋರಾಟ. ಮರಾಠರು 131 ಯುದ್ಧಗಳನ್ನು ಗೆದ್ದಿದ್ದರು; ಆದರೆ ಅಹ್ಮದ್ ಶಾ ಅಬ್ದಾಲಿ ಪಡೆ ವಿರುದ್ಧ ಪಾಣಿಪತ್ ಕದನ ಸೋತರು. ಮರಾಠರ ಸೋಲು 200 ವರ್ಷಗಳ ಸಾಮ್ರಾಜ್ಯಶಾಹಿ ದಾಸ್ಯಕ್ಕೆ ಕಾರಣವಾಯಿತು. ಈ ಪ್ರಮಾದವನ್ನು ಮತ್ತೆ ಮಾಡಬೇಡಿ" ಎಂದು ಶಾ ಮನವಿ ಮಾಡಿದರು.

ಪಾಣಿಪತ್ ಕದನ ಹಿಂದೂ ಪೇಶ್ವೆಗಳು ಅಬ್ದಾಲಿ ವಿರುದ್ಧ ಅನುಭವಿಸಿದ ಸೋಲು ಎಂಬ ಅಭಿಪ್ರಾಯ ಜನಸಾಮಾನ್ಯರಲ್ಲಿದ್ದು, ಇದನ್ನು ಕೆದಕುವ ಮೂಲಕ ಪಾಣಿಪತ್ ಕದನ ಹಿಂದೂಗಳ ಪತನ ಹಾಗೂ ಅವಮಾನದ ಸಂಕೇತ ಎಂದು ಬಿಂಬಿಸಿ ಮತಬುಟ್ಟಿ ಭದ್ರಪಡಿಸಿಕೊಳ್ಳುವ ಹುನ್ನಾರಕ್ಕೆ ಬಿಜೆಪಿ ಕೈಹಾಕಿದೆ.

ಹಿಂದುತ್ವಕ್ಕೆ ಮತ್ತೆ ಮಣೆ ಹಾಕಿರುವ ಬಿಜೆಪಿಯ ರಾಷ್ಟ್ರೀಯ ಸಮಾವೇಶದಲ್ಲಿ ಶಾ, ರಾಮಮಂದಿರ ವಿಚಾರ ಉಲ್ಲೇಖಿಸಿದಾಗ ಜೈ ಶ್ರೀರಾಮ್ ಘೋಷಣೆಗಳು ಮೊಳಗಿದವು. ಈ ಹಿನ್ನೆಲೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪಕ್ಷ ಬದ್ಧವಾಗಿದ್ದು, ಸಂವಿಧಾನಾತ್ಮಕ ವಿಧಿವಿಧಾನಗಳನ್ನು ಅನುಸರಿಸುತ್ತದೆ ಎಂದು ಉಚ್ಚರಿಸಿದರು. ಹಿಂದುತ್ವ, ಕೇಂದ್ರದ ಕಲ್ಯಾಣ ಕಾರ್ಯಕ್ರಮಗಳು ಮತ್ತು ಮೋದಿಯವರ ಕ್ಲೀನ್ ಇಮೇಜ್ ವಿಷಯಗಳು ಈ ಬಾರಿಯ ಬಿಜೆಪಿ ಪ್ರಚಾರ ತಂತ್ರದ ಪ್ರಮುಖ ಅಂಶಗಳಾಗಿರುತ್ತವೆ ಎಂದು ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News