ರಾಕೇಶ್ ಅಸ್ತಾನ ಪರವಾಗಿ ವಕಾಲತ್ತು ವಹಿಸಿ ಅಲೋಕ್ ವರ್ಮಾ ನಿವಾಸಕ್ಕೆ ಭೇಟಿ ನೀಡಿದ್ದರೆ ಸಿವಿಸಿ ಚೌಧರಿ ?

Update: 2019-01-12 16:13 GMT
ರಾಕೇಶ್ ಅಸ್ತಾನ 

ಹೊಸದಿಲ್ಲಿ, ಜ.12:  ಕೇಂದ್ರ ಜಾಗೃತ ಆಯೋಗ ( ಸಿವಿಸಿ) ದ ಮುಖ್ಯಸ್ಥ ಕೆ.ವಿ. ಚೌಧರಿ ಅವರು ಭ್ರ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸಿಬಿಐ ನ ನಂ. 2 ಅಧಿಕಾರಿ ರಾಕೇಶ್ ಅಸ್ತಾನ ಅವರ ಪರವಾಗಿ ವಕಾಲತ್ತು ವಹಿಸಿ ಸಿಬಿಐ ಮುಖ್ಯಸ್ಥ ಅಲೋಕ್ ಕುಮಾರ್ ವರ್ಮಾ ಅವರ ನಿವಾಸಕ್ಕೆ ಭೇಟಿ ನೀಡಿದ್ದರೆ? 

newslaundry.com ಪ್ರಕಟಿಸಿರುವ ಸುಪ್ರೀಂ ಕೋರ್ಟ್ ನ್ಯಾಯವಾದಿ ಹಾಗು ರಫೇಲ್ ಖರೀದಿ ಯಲ್ಲಿ ನಡೆದಿದೆ ಎನ್ನಲಾದ ಹಗರಣವನ್ನು ತನಿಖೆ ಮಾಡಬೇಕು ಎಂದು ಸಿಬಿಐ ಗೆ ದೂರು ಸಲ್ಲಿಸಿರುವ ದೂರುದಾರರ ಪೈಕಿ ಓರ್ವರಾದ ಪ್ರಶಾಂತ್ ಭೂಷಣ್ ಅವರ ಸಂದರ್ಶನದಲ್ಲಿ ಈ ಕುರಿತು ಸ್ಪೋಟಕ ಮಾಹಿತಿ ಹೊರಬಿದ್ದಿದೆ. 

ತನ್ನ ವಿರುದ್ಧದ ಸಿವಿಸಿ ವರದಿಯ ಬಗ್ಗೆ ಸುಪ್ರೀಂ ಕೋರ್ಟ್ ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ಪ್ರತಿಕ್ರಿಯೆಯಲ್ಲಿ ಅಲೋಕ್ ವರ್ಮಾ ಇದನ್ನು ಬಹಿರಂಗಪಡಿಸಿದ್ದಾರೆ. ರಾಕೇಶ್ ಅಸ್ತಾನಾ ಪರವಾಗಿ ಮಾತನಾಡಲು ಮುಖ್ಯ ಜಾಗೃತ ಆಯುಕ್ತ ಕೆ ವಿ ಚೌಧರಿ ಅವರು ತನ್ನ ಮನೆಗೆ ಬಂದಿದ್ದರು ಎಂದು ಇದರಲ್ಲಿ ಅಲೋಕ್ ವರ್ಮಾ ಖಚಿತಪಡಿಸಿದ್ದಾರೆ. ಇದು ಹೌದು ಎಂದಾದರೆ ಅಲೋಕ್ ವರ್ಮಾ ವಜಾ ಪ್ರಕರಣದಲ್ಲಿ ಸಿವಿಸಿ ಪಾತ್ರದ ಬಗ್ಗೆ ಈಗಾಗಲೇ ಹರಡಿರುವ ಸಂಶಯಗಳಿಗೆ ಇನ್ನಷ್ಟು ಪುಷ್ಟಿ ಸಿಗುತ್ತದೆ. 

ಅಲೋಕ್ ವರ್ಮಾ ಅವರನ್ನು ಭ್ರಷ್ಟಾಚಾರದ ಆರೋಪ ಇದೆ ಎಂದು ವಜಾ ಮಾಡಲು ಕೇಂದ್ರ ಸರಕಾರ ತೋರಿಸಿದ್ದು ಸಿವಿಸಿ ವರದಿಯನ್ನು. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕವೂ ಪ್ರಧಾನಿ ಮೋದಿ ನೇತೃತ್ವದ ಸಮಿತಿ ಸಿವಿಸಿ ವರದಿಯ ಆಧಾರದ ಮೇಲೆಯೇ ವರ್ಮರನ್ನು ಮತ್ತೆ ವಜಾ ಮಾಡಿತು. ಸುಪ್ರೀಂ ತೀರ್ಪು ಬಂದ ಬೆನ್ನಿಗೇ ಸ್ವಲ್ಪವೂ ತಡಮಾಡದೆ ಪ್ರಧಾನಿ ಮೋದಿ ಎರಡು ದಿನ ಸತತ ಸಭೆ ನಡೆಸಿ ವರ್ಮರನ್ನು ವಜಾ ಮಾಡಿದರು. ಈ ಆರೋಪಗಳ ಬಗ್ಗೆ ವರ್ಮಾ ಗೆ ವಿವರಣೆ ನೀಡುವ ಅವಕಾಶವನ್ನೂ ನೀಡಲಾಗಿಲ್ಲ. ಆದರೆ ವರ್ಮಾ ವಿರುದ್ಧ ವರದಿ ನೀಡಿದ ಸಿವಿಸಿ ಅವರ ಮನೆಗೆ ಇನ್ನೋರ್ವ ಸಿಬಿಐ ಅಧಿಕಾರಿ, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಹಾಗು ಬಿಜೆಪಿಗೆ ಆಪ್ತರೆಂದು ಹೇಳಲಾಗುತ್ತಿರುವ ರಾಕೇಶ್ ಆಸ್ತಾನಾ ಅವರ ಪರವಾಗಿ ಮಾತನಾಡಲು ಹೋಗಿದ್ದರು ಎಂದರೆ ಏನರ್ಥ ? 

ಅಸ್ತಾನಾ ವಿರುದ್ಧ ಕ್ರಮಕ್ಕೆ ವರ್ಮಾ ಮುಂದಾಗಿದ್ದರು. ಇದಕ್ಕೆ ತಿರುಗೇಟು ನೀಡಿದ ಅಸ್ತಾನಾ ಅವರು ವರ್ಮಾ ವಿರುದ್ಧವೇ ಭ್ರಷ್ಟಾಚಾರದ ಆರೋಪ ಮಾಡಿದರು. ಆ ಬಗ್ಗೆ ಸಿವಿಸಿ ಕೇಂದ್ರಕ್ಕೆ ವರದಿ ನೀಡಿತು. ಅದರ ಆಧಾರದಲ್ಲೇ ವರ್ಮಾ ಅವರು ಸಿಬಿಐ ಮುಖ್ಯಸ್ಥನ ಸ್ಥಾನ ಕಳಕೊಂಡರು. ಸುಪ್ರೀಂ ಮೆಟ್ಟಲು ಹತ್ತಿದರೂ ಅವರಿಗೆ ತಮ್ಮ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 

ಈಗ ವರ್ಮಾ ಮನೆಗೆ ಸಿವಿಸಿ ಹೋಗಿ ಅಸ್ತಾನಾ ಪರ ವಕಾಲತ್ತು ವಹಿಸಿದ್ದರು ಎಂದು ವರ್ಮಾ ಅವರ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ ಪ್ರಶಾಂತ್ ಭೂಷಣ್ ಹೇಳುತ್ತಿದ್ದಾರೆ. ಹಾಗಿದ್ದರೆ ವರ್ಮಾ ವಿರುದ್ಧದ ಸಿವಿಸಿ ವರದಿ ಎಷ್ಟು ವಿಶ್ವಾಸಾರ್ಹ ಎಂಬ ಪ್ರಶ್ನೆ ಯಾರಿಗಾದರೂ ಏಳುತ್ತದೆ. 

ಕೃಪೆ: newslaundry.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News