ಪದೇ ಪದೇ ಬಾಯಾರಿಕೆಯಾಗುತ್ತಿದೆಯೇ ?: ಹಾಗಿದ್ದರೆ ಈ ಅಪಾಯದ ಬಗ್ಗೆ ಅರಿತುಕೊಳ್ಳಿ

Update: 2019-01-13 11:19 GMT

ಡಿಹೈಡ್ರೇಷನ್ ಅಥವಾ ನಿರ್ಜಲೀಕರಣ ಸರಳವಾಗಿ ಹೇಳುವುದಾದರೆ ಶರೀರದಲ್ಲಿ ನೀರಿನ ಕೊರತೆಯಾಗಿದೆ. ನಮ್ಮ ಶರೀರವು ಸುಮಾರು ಶೇ.60ರಷ್ಟು ನೀರಿನಿಂದ ಮಾಡಲ್ಪಟ್ಟಿದ್ದು,ಉಸಿರಾಟದಿಂದ ಹಿಡಿದು ಪಚನದವರೆಗೆ ಶರೀರದ ಪ್ರತಿಯೊಂದು ಕಾರ್ಯಕ್ಕೂ ನೀರು ಅಗತ್ಯವಾಗಿದೆ. ಬಿರುಬೇಸಿಗೆಯ ದಿನಗಳಲ್ಲಿ ಅಥವಾ ಕಠಿಣ ಪರಿಶ್ರಮ ಅಥವಾ ವ್ಯಾಯಾಮದ ಬಳಿಕ ಬೆವರಿನ ರೂಪದಲ್ಲಿ ನೀರು ನಷ್ಟವಾಗುತ್ತದೆ. ಜ್ವರ ಅಥವಾ ಅತಿಯಾದ ಮೂತ್ರ ವಿಸರ್ಜನೆ ಕೂಡ ಶರೀರದಲ್ಲಿಯ ನೀರಿನ ಮಟ್ಟ ಕುಸಿಯುವಂತೆ ಮಾಡುತ್ತದೆ. ಶರೀರದಲ್ಲಿ ದ್ರವದ ಸಮತೋಲನದಲ್ಲಿ ಸ್ವಲ್ಪ ಕೊರತೆಯಾದರೂ ನಿರ್ಜಲೀಕರಣದ ಲಕ್ಷಣಗಳು ಕಂಡು ಬರಬಹುದು.

ನಿರ್ಜಲೀಕರಣವು ಅಪಾಯಕಾರಿಯಾಗಬಲ್ಲದು. ನಿಮ್ಮ ಶರೀರವು ನಿರ್ಜಲೀಕರಣಗೊಂಡಿದ್ದರೆ ನೀವು ಯಥೇಚ್ಛ ನೀರನ್ನು ಸೇವಿಸಬೇಕಾಗುತ್ತದೆ ಮತ್ತು ಶರೀರದಲ್ಲಿ ದ್ರವದ ಸಮತೋಲನವನ್ನು ಕಾಯ್ದುಕೊಳ್ಳಲು ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ. ವಯಸ್ಕರಲ್ಲಿ ನಿರ್ಜಲೀಕರಣದ ಕೆಲವು ಸಾಮಾನ್ಯ ಲಕ್ಷಣಗಳ ಕುರಿತು ಮಾಹಿತಿಯಿಲ್ಲಿದೆ.

ಶುಷ್ಕ ಮತ್ತು ಒರಟು ಚರ್ಮ

ನಮ್ಮ ಶರೀರದಲ್ಲಿ ನೀರಿನ ಕೊರತೆಯಿದೆ ಎಂದು ಸೂಚಿಸುವ ಅತ್ಯಂತ ಸಾಮಾನ್ಯ ಮತ್ತು ಸ್ಪಷ್ಟವಾಗಿ ಎದ್ದು ಕಾಣುವ ಲಕ್ಷಣವೆಂದರೆ ಚರ್ಮದಲ್ಲಿನ ಬದಲಾವಣೆಗಳು. ಬೆವರಿನಿಂದಾಗಿ ಚರ್ಮದ ಮೂಲಕ ನೀರಿನ ನಷ್ಟದಿಂದ ಅಥವಾ ಶೀತ ಗಾಳಿಗೆ ತೆರೆದುಕೊಳ್ಳುವುದರಿಂದ ಚರ್ಮವು ಒಣಗುತ್ತದೆ. ಒರಟಾದ ಮತ್ತು ಪದರಗಳಿಂದ ಕೂಡಿದ ಚರ್ಮ,ಒಡೆದ ಚರ್ಮ ಅಥವಾ ತುಟಿ,ಚರ್ಮ ಕೆಂಪು ಬಣ್ಣಕ್ಕೆ ತಿರುಗುವುದು ಇವೂ ನಿರ್ಜಲೀಕರಣವನ್ನು ಸೂಚಿಸುತ್ತವೆ.

ಗಾಢವರ್ಣದ ಮೂತ್ರ

ಶರೀರವು ನಿರ್ಜಲೀಕರಣಗೊಂಡಿದೆಯೇ ಎನ್ನುವುದನ್ನು ಮೂತ್ರದ ಬಣ್ಣವು ಸುಲಭವಾಗಿ ಸೂಚಿಸುತ್ತದೆ. ಮಧ್ಯಮದಿಂದ ತೀವ್ರ ಪ್ರಮಾಣದ ನಿರ್ಜಲೀಕರಣವಿದ್ದರೆ ಮೂತ್ರವು ಗಾಢ ಹಳದಿ ಬಣ್ಣದಿಂದ ಕೂಡಿರುತ್ತದೆ ಮತ್ತು ಸಾಮಾನ್ಯ ಮಟ್ಟದ ನಿರ್ಜಲೀಕರಣವಾಗಿದ್ದರೆ ಮೂತ್ರವು ನಸುಹಳದಿ ಬಣ್ಣದಿಂದ ಕೂಡಿರುತ್ತದೆ. ಶರೀರವು ನಿರ್ಜಲೀಕರಣಗೊಂಡಾಗ ಮೂತ್ರ ವಿಸರ್ಜನೆಯ ಪ್ರಮಾಣ ಎಂದಿಗಿಂತ ಕಡಿಮೆಯಾಗಬಹುದು. ನಿರ್ಜಲೀಕರಣವು ತೀವ್ರವಾಗಿದ್ದರೆ ಮೂತ್ರ ವಿಸರ್ಜನೆ ಆಗದಿರಲೂಬಹುದು. ಇದು ಕಳವಳದ ವಿಷಯವಾಗಿರುವುದರಿಂದ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

ಒಣಗಿದ ಬಾಯಿ ಮತ್ತು ಕೆಟ್ಟ ಉಸಿರು

 ಶರೀರದಲ್ಲಿ ಸಾಕಷ್ಟು ನೀರಿನ ಕೊರತೆಯಾದಾಗ ಬಾಯಿ ಒಣಗಬಹುದು ಮತ್ತು ಇದು ನಿರ್ಜಲೀಕರಣದ ಸಂಕೇತವಾಗುತ್ತದೆ. ಅಲ್ಲದೆ ನಿರ್ಜಲೀಕರಣವು ಕೆಟ್ಟ ಉಸಿರಿಗೂ ಕಾರಣವಾಗುತ್ತದೆ. ಶರೀರವು ಜೊಲ್ಲನ್ನು ತಯಾರಿಸಲು ನೀರು ಅಗತ್ಯವಾಗಿದೆ ಮತ್ತು ನೀರಿನ ಕೊರತೆಯಾದರೆ ಬಾಯಿಯಲ್ಲಿ ಜೊಲ್ಲಿನ ಪ್ರಮಾಣ ಕಡಿಮೆಯಾಗುತ್ತದೆ. ಇದು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕಾರಣವಾಗುತ್ತದೆ ಮತ್ತು ಉಸಿರು ವಾಸನೆಯಿಂದ ಕೂಡಿರುತ್ತದೆ. ಬಾಯಿಯ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಮತ್ತು ವಿಫುಲ ನೀರನ್ನು ಸೇವಿಸುವ ಮೂಲ ಕೆಟ್ಟ ಉಸಿರಿನಿಂದ ಮತ್ತು ನಿರ್ಜಲೀಕರಣದಿಂದ ಪಾರಾಗಬಹುದು.

ಅತಿಯಾದ ಬಾಯಾರಿಕೆ

ಅತಿಯಾದ ಬಾಯಾರಿಕೆಯು ಹಲವಾರು ಆರೋಗ್ಯ ಸಮಸ್ಯೆಗಳ ಲಕ್ಷಣವಾಗಿದ್ದು,ಇವುಗಳಲ್ಲಿ ನಿರ್ಜಲೀಕರಣವೂ ಒಂದಾಗಿದೆ. ನಮಗೆ ಬಾಯಾರಿಕೆಯಾದಾಗ ಶರೀರಕ್ಕೆ ಹೆಚ್ಚು ನೀರು ಬೇಕು ಎನ್ನುವುದನ್ನು ಅದು ಸೂಚಿಸುತ್ತದೆ. ಬಿಸಿಲಿನಲ್ಲಿ ತಿರುಗಾಡುವಾಗ ಇದು ಸಾಮಾನ್ಯವಾಗಿದೆ. ಮನೆಯನ್ನು ತಲುಪಿದ ತಕ್ಷಣ ನಾವು ಶರೀರದಲ್ಲಿ ದ್ರವ ಸಮತೋಲನವನ್ನು ಕಾಯ್ದುಕೊಳ್ಳಲು ನೀರು ಅಥವಾ ಜ್ಯೂಸ್‌ನ್ನೋ ಕುಡಿಯುತ್ತೇವೆ. ಪದೇ ಪದೇ ಬಾಯಾರಿಕೆ ಕಾಡುತ್ತಿದ್ದರೆ ಅದು ಮಧುಮೇಹದ ಲಕ್ಷಣವೂ ಆಗಿರುವುದರಿಂದ ನಿಖರ ಕಾರಣವನ್ನು ತಿಳಿದುಕೊಳ್ಳಲು ವೈದ್ಯರ ಭೇಟಿ ಅಗತ್ಯವಾಗುತ್ತದೆ.

ತಲೆನೋವು

ಹೆಚ್ಚಿನ ಜನರು ತಲೆನೋವನ್ನು ಹಸಿವೆ ಅಥವಾ ಒತ್ತಡದೊಂದಿಗೆ ತಳುಕು ಹಾಕುತ್ತಾರೆ. ಆದರೆ ಸೌಮ್ಯ ಪ್ರಕರಣಗಳಲ್ಲಿ ಕೂಡ ನಿರ್ಜಲೀಕರಣವು ತಲೆನೋವಿಗೆ ಕಾರಣವಾಗಬಲ್ಲದು. ಮಹಿಳೆಯರಲ್ಲಿ ಕೇವಲ ಶೇ.1.36ರಷ್ಟು ನಿರ್ಜಲೀಕರಣವಾಗಿದ್ದರೂ ಅದು ತಲೆನೋವನ್ನುಂಟು ಮಾಡುತ್ತದೆ ಎನ್ನುವುದನ್ನು ಅಧ್ಯಯನಗಳು ಬೆಟ್ಟುಮಾಡಿವೆ. ಶರೀರದಲ್ಲಿ ನೀರಿನ ಕೊರತೆಯು ದ್ರವ-ವಿದ್ಯುದ್ವಿಚ್ಛೇದ ಸಮತೋಲನವನ್ನು ವ್ಯತ್ಯಯಗೊಳಿಸಿ ರಕ್ತದೊತ್ತಡವನ್ನು ತಗ್ಗಿಸುವುದು ಇದಕ್ಕೆ ಕಾರಣವಾಗಿದೆ.

ಬಳಲಿಕೆ

ಸಾಕಷ್ಟು ವಿಶ್ರಾಂತಿ ಪಡೆದಿದ್ದರೂ ಬಳಲಿಕೆಯಿದ್ದರೆ ಅಥವಾ ಬೆಳಿಗ್ಗೆ ನಿದ್ರೆಯಿಂದ ಎದ್ದಾಗ ದಣಿವಾಗುತ್ತಿದ್ದರೆ ಅದು ನಿರ್ಜಲೀಕರಣದ ಸೂಚನೆಯಾಗಿರಬಹುದು. ಪುರುಷರಲ್ಲಿ ನಡೆಸಲಾದ ಅಧ್ಯಯನವೊಂದು ನಿರ್ಜಲೀಕರಣವು ಬಳಲಿಕೆ,ದಣಿವುಗಳನ್ನು ಉಂಟು ಮಾಡುತ್ತದೆ ಮತ್ತು ಇವು ಕಡಿಮೆ ರಕ್ತದೊತ್ತಡಕ್ಕೆ ಕಾರಣವಾಗುತ್ತವೆ ಎನ್ನುವುದನ್ನು ಬೆಟ್ಟು ಮಾಡಿದೆ.

ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯ ಕೊರತೆ

ಶರೀರದಲ್ಲಿ ನೀರಿನ ಕೊರತೆಯು ಮಿದುಳಿನ ಮೇಲೂ ಪರಿಣಾಮವನ್ನುಂಟು ಮಾಡುತ್ತದೆ. ಸೌಮ್ಯ ಸ್ವರೂಪದ ನಿರ್ಜಲೀಕರಣಕ್ಕೂ ಗ್ರಹಣ ಶಕ್ತಿಯ ವ್ಯತ್ಯಯಕ್ಕೂ ಸಂಬಂಧವಿದೆ ಎನ್ನುವುದನ್ನು ಅಧ್ಯಯನಗಳು ಸಾಬೀತು ಮಾಡಿವೆ. ಪುರುಷರಲ್ಲಿ ನಡೆಸಲಾದ ಅಧ್ಯಯನವೊಂದು ಸಮೀಕ್ಷೆಯಲ್ಲಿ ಪಾಲ್ಗೊಂಡವರು ನಿರ್ಜಲೀಕರಣ ಸ್ಥಿತಿಯಲ್ಲಿದ್ದಾಗ ದೃಷ್ಟಿ ಮತ್ತು ಜ್ಞಾಪಕ ಶಕ್ತಿ ಪರೀಕ್ಷೆಗಳಲ್ಲಿ ಹೆಚ್ಚಿನ ತಪ್ಪುಗಳನ್ನು ಮಾಡಿರುವುದನ್ನು ತೋರಿಸಿದೆ. ನಿರ್ಜಲೀಕರಣವು ನಮ್ಮ ಮನಃಸ್ಥಿತಿಯ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲ,ಏಕಾಗ್ರತೆ,ಎಚ್ಚರ ಮತ್ತು ಜ್ಞಾಪಕ ಶಕ್ತಿಯನ್ನೂ ಕುಂದಿಸುತ್ತದೆ.

ಮಲಬದ್ಧತೆ

ಶರೀರದಲ್ಲಿ ನೀರಿನ ಕೊರತೆಯಾದರೆ ಮಲ ವಿಸರ್ಜನೆಯು ಕಷ್ಟವಾಗುತ್ತದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ವ್ಯಕ್ತಿಯು ಈಗಾಗಲೇ ಮಲಬದ್ಧತೆಯಿಂದ ಬಳಲುತ್ತಿದ್ದರೆ ನಿರ್ಜಲೀಕರಣವು ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಹೀಗಾಗಿ ಮಲಬದ್ಧತೆಯನ್ನು ಕಡೆಗಣಿಸಕೂಡದು, ಏಕೆಂದರೆ ನಿರ್ಜಲೀಕರಣದ ಈ ಲಕ್ಷಣವು ಕರುಳಿನ ಚಲನವಲಗಳಲ್ಲಿ ಇನ್ನಷ್ಟು ವ್ಯತ್ಯಯನ್ನುಂಟು ಮಾಡಬಹುದು ಮತ್ತು ತೀವ್ರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಶಿಶುಗಳಲ್ಲಿ ಮತ್ತು ಎಳೆಯ ಮಕ್ಕಳಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಡೈಪರ್ ಒಣಗಿಯೇ ಇರುವುದು,ಅತ್ತಾಗ ಕಣ್ಣುಗಳಲ್ಲಿ ನೀರು ಬರದಿರುವುದು,ಒಣಗಿದ ಬಾಯಿ,ತೀವ್ರ ಜ್ವರ,ಗುಳಿಬಿದ್ದ ಕಣ್ಣುಗಳು,ಚರ್ಮದ ಬಣ್ಣ ಬೂದಿ ಛಾಯೆಗೆ ತಿರುಗುವುದು ಇತ್ಯಾದಿಗಳು ನಿರ್ಜಲೀಕರಣದ ಲಕ್ಷಣಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News