ಎಚ್ಚರ… ಗ್ಯಾಸ್ ಗೀಸರ್ ಗಳು ನಿಮ್ಮನ್ನು ಕೋಮಾಕ್ಕೆ ಒಯ್ಯಬಹುದು!

Update: 2019-01-13 11:25 GMT

ಬಿಸಿನೀರಿಗಾಗಿ ಗ್ಯಾಸ್ ಗೀಸರ್ ಅಳವಡಿಸಿರುವ ಬಾತ್ ರೂಮ್‌ಗಳಲ್ಲಿ ಹೆಚ್ಚು ಹೊತ್ತು ಕಳೆಯುವ ವ್ಯಕ್ತಿಗಳಲ್ಲಿ ‘ಗ್ಯಾಸ್ ಗೀಸರ್ ಸಿಂಡ್ರೋಮ್(ಜಿಜಿಎಸ್)’ ಕಂಡುಬರುತ್ತದೆ. ಗ್ಯಾಸ್ ಗೀಸರ್‌ನಿಂದ ಹೊರಸೂಸುವ ಕಾರ್ಬನ್ ಮೊನೊಕ್ಸೈಡ್ ವಿಷಪ್ರಾಶನ ಇದಕ್ಕೆ ಕಾರಣವಾಗಿದೆ.

ಹೆಚ್ಚಿನ ಜಿಜಿಎಸ್ ಪ್ರಕರಣಗಳು 20ರಿಂದ 40 ವರ್ಷ ವಯೋಗುಂಪಿನಲ್ಲಿ ಕಂಡುಬಂದಿದ್ದು, ಇವರೆಲ್ಲ ಆಸ್ಪತ್ರೆಗೆ ಸಾಗಿಸಲ್ಪಡುವ ಮುನ್ನ ಅರ್ಧ,ಮುಕ್ಕಾಲು ಗಂಟೆಗಿಂತಲೂ ಹೆಚ್ಚು ಸಮಯವನ್ನು ಬಾತ್‌ ರೂಮ್ ‌ನಲ್ಲಿ ಕಳೆದಿದ್ದರು. ಈ ರೋಗಿಗಳು ಸೂಕ್ತ ವೆಂಟಿಲೇಷನ್ ಇಲ್ಲದಿದ್ದ ಬಾತರೂಮ್‌ಗಳಲ್ಲಿ ತುಂಬ ಸಮಯ ಸ್ನಾನದ ಸುಖವನ್ನು ಅನುಭವಿಸುತ್ತ ಕಾರ್ಬನ್ ಮೊನೊಕ್ಸೈಡ್ ಮತ್ತು ನೈಟ್ರೋಜನ್ ಡೈಯಾಕ್ಸೈಡ್‌ಗೆ ಒಡ್ಡಿಕೊಂಡಿದ್ದರಿಂದ ಜಿಜಿಎಸ್‌ಗೊಳಗಾಗಿದ್ದರು.

ತೀರ ಇತ್ತೀಚಿಗೆ ಮುಂಬೈನ ಮುಳುಂಡ್‌ನಲ್ಲಿ 21ರ ಹರೆಯದ ಯುವತಿಯೋರ್ವಳು ಗ್ಯಾಸ್ ಗೀಸರ್ ಅಳವಡಿಸಿದ್ದ ಬಾತ್ರೂಮ್‌ನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಕಳೆದಿದ್ದಕ್ಕೆ ದುಬಾರಿ ಬೆಲೆಯನ್ನು ತೆತ್ತಿದ್ದಾಳೆ. ಹೌದು,ಅವಳು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ.

ಗ್ಯಾಸ್ ಗೀಸರ್ ಅಪಾಯಕಾರಿಯೇ?

ಮನೆಗಳಲ್ಲಿ ಸ್ನಾನಕ್ಕೆ ಬಿಸಿನೀರಿನ ಪೂರೈಕೆಗಾಗಿ ಗ್ಯಾಸ್ ಗೀಸರ್‌ಗಳನ್ನು ಬಳಸಲಾಗುತ್ತದೆ. ಮಿತವ್ಯಯ,ಅಳವಡಿಕೆಗೆ ಕಡಿಮೆ ಖರ್ಚು ಮತ್ತು ವಿದ್ಯುತ್ತನ್ನು ಬಳಸುವುದಿಲ್ಲ ಎಂಬ ಕಾರಣದಿಂದಾಗಿ ಗ್ಯಾಸ್ ಗೀಸರ್‌ನ ಬಳಕೆ ಹೆಚ್ಚಾಗಿದೆ. ಈ ಎಲ್‌ಪಿಜಿ ಗೀಸರ್‌ಗಳನ್ನು ಗಾಳಿಯಾಡಲು ಸಾಕಷ್ಟು ಅವಕಾಶಗಳಿಲ್ಲದ ಸ್ಥಳಗಳಲ್ಲಿ ಅಳವಡಿಸಿದಾಗ ದಹನದ ವೇಳೆ ಬಿಡುಗಡೆಗೊಳ್ಳುವ ಕಾರ್ಬನ್ ಮೊನೊಕ್ಸೈಡ್ ಮತ್ತು ನೈಟ್ರೋಜನ್ ಡೈಯಾಕ್ಸೈಡ್ ಹೊರಗೆ ಹೋಗಲು ಸಾಧ್ಯವಾಗದೇ ಅಲ್ಲಿಯೇ ಶೇಖರಗೊಳ್ಳುತ್ತವೆ. ವ್ಯಕ್ತಿಯು,ವಿಶೇಷವಾಗಿ ಸೂಕ್ತ ವೆಂಟಿಲೇಷನ್ ಇಲ್ಲದ ಬಾತ್‌ರೂಮ್‌ಗಳಲ್ಲಿ ಈ ಅನಿಲಗಳ ಸಂಪರ್ಕಕ್ಕೆ ಬಂದಾಗ ಅದು ಮಾರಣಾಂತಿಕವಾಗಬಹುದು.

ಜಿಜಿಎಸ್ ಲಕ್ಷಣಗಳು ಮತ್ತು ಚಿಕಿತ್ಸೆ

ತಲೆ ಸುತ್ತುವಿಕೆ,ಸೆಳವುಗಳು,ಪ್ರಜ್ಞೆ ತಪ್ಪುವುದು ಮತ್ತು ಕಣ್ಣು ಕತ್ತಲಿಡುವುದು ಇವು ಜಿಜಿಎಸ್ ಲಕ್ಷಣಗಳಲ್ಲಿ ಸೇರಿವೆ. ಸುದೀರ್ಘ ಕಾಲ ಈ ಅಪಾಯಕಾರಿ ಅನಿಲಗಳಿಗೆ ಒಡ್ಡಿಕೊಳ್ಳುವುದರಿಂದ ವ್ಯಕ್ತಿಯು ಕೋಮಾಕ್ಕೆ ಜಾರಬಹುದು ಮತ್ತು ಹೃದಯ ಸ್ತಂಭನ ಸಂಭವಿಸಬಹುದು. ಇಂತಹ ಸ್ಥಿತಿಯಲ್ಲಿ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ಒಯ್ಯಬೇಕಾಗುತ್ತದೆ. ಜಿಜಿಎಸ್ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ‘ಬ್ಲಡ್-ಗ್ಯಾಸ್ ಅನಾಲಿಸಸ್’ ಮತ್ತು ಇತರ ಸಾಮಾನ್ಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಆಕ್ಸಿಜನ್ ಥೆರಪಿಯ ಮೂಲಕ ರೋಗಿಯನ್ನು ಉಪಚರಿಸಲಾಗುತ್ತದೆ. ಆದರೆ ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಜಿಜಿಎಸ್ ಮಾರಣಾಂತಿಕವಾಗಬಹುದು ಅಥವಾ ದೀರ್ಘಕಾಲಿಕ ಅಡ್ಡಪರಿಣಾಮಗಳನ್ನುಂಟು ಮಾಡಬಹದು.

ಮುನ್ನೆಚ್ಚರಿಕೆ ಕ್ರಮಗಳು

ಗ್ಯಾಸ್ ಗೀಸರ್ ಎಂಬ ಈ ಸರಳ ಗೃಹೋಪಯೋಗಿ ಸಾಧನವನ್ನು ಅಗತ್ಯ ಮುಂಜಾಗ್ರತೆಗಳನ್ನು ವಹಿಸದೆ ತಪ್ಪಾಗಿ ಬಳಸಿದರೆ ಅದು ಮಾರಣಾಂತಿಕವಾಗುತ್ತದೆ ಮತ್ತು ಶರೀರದ ಕೇಂದ್ರ ನರಮಂಡಲ ವ್ಯವಸ್ಥೆಗೆ ಹಾನಿಯನ್ನುಂಟು ಮಾಡುತ್ತದೆ. ಹೆಚ್ಚಿನ ಜನರಿಗೆ ಈ ಬಗ್ಗೆ ಅರಿವಿಲ್ಲ. ಬಾತ್‌ರೂಮ್‌ನಲ್ಲಿ ಸಾಕಷ್ಟು ವೆಂಟಿಲೇಷನ್ ಇರುವಂತೆ ನೋಡಿಕೊಳ್ಳುವುದು ಅಪಾಯಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮೊದಲ ಕ್ರಮವಾಗಿದೆ. ತಲೆನೋವು, ಭ್ರಾಂತಿ, ನಿಶ್ಶಕ್ತಿ, ವಾಕರಿಕೆ ಮತ್ತು ಎದೆನೋವಿನಂತಹ ಕಾರ್ಬನ್ ಮೊನೊಕ್ಸೈಡ್ ವಿಷಪ್ರಾಶನದ ಲಕ್ಷಣಗಳ ಮೇಲೆ ಗಮನವಿರಿಸುವುದು ಅಗತ್ಯವಾಗಿದೆ.

ಗ್ಯಾಸ್ ಗೀಸರ್‌ನ ಬಳಕೆಯನ್ನು ನಿಯಂತ್ರಿಸುವುದು ಪ್ರಮುಖವಾಗಿದೆ. ಇದನ್ನು ಬಾತ್‌ರೂಮ್‌ನ ಹೊರಗೆ ಸಾಕಷ್ಟು ವೆಂಟಿಲೇಷನ್‌ನೊಂದಿಗೆ ಅಳವಡಿಸಬೇಕು ಮತ್ತು ಬಾತ್‌ರೂಮ್‌ಗಳು ಎಕ್ಸಾಸ್ಟ್ ಫ್ಯಾನ್‌ಗಳನ್ನು ಹೊಂದಿರಬೇಕು. ಪ್ರತಿ ಬಾರಿ ಬಾತ್ರೂಮ್ ಬಳಸುವಾಗಲೂ ಈ ಫ್ಯಾನ್‌ಗಳನ್ನು ಚಾಲೂ ಮಾಡುವುದನ್ನು ಮರೆಯಬಾರದು.

ಗೀಸರ್‌ನ ಕ್ಷಮತೆಯನ್ನು ಆಗಾಗ್ಗೆ ಪರಿಶೀಲಿಸುತ್ತಿರಬೇಕು. ನಿರಂತರವಾಗಿ ಗೀಸರ್‌ನ್ನು ಚಾಲನೆಯಲ್ಲಿಡಬಾರದು. ಪ್ರತಿ ಬಳಕೆಗಳ ನಡುವೆ ಹೆಚ್ಚಿನ ಸಮಯದ ಅಂತರವಿರುವಂತೆ ನೋಡಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News