ಯಾರು ಆಕಸ್ಮಿಕ ಪ್ರಧಾನಿ?

Update: 2019-01-14 18:30 GMT

ಜನತೆ, ಸುಳ್ಳುಭರವಸೆಗಳನ್ನು ನೀಡಿದ್ದಕ್ಕಾಗಿ ನರೇಂದ್ರ ಮೋದಿಯವರಿಗೆ ಬಳಸುತ್ತಿರುವ ವಿಶೇಷಣಗಳಿಂದ ಹಿಂದೆಂದೂ ಯಾವುದೇ ಪ್ರಧಾನಿಯನ್ನು ವ್ಯಂಗ್ಯವಾಡಿರಲಿಲ್ಲ. ಅಷ್ಟೇ ಅಲ್ಲ, ಹಿಂದೆಂದೂ ಯಾವುದೇ ಪ್ರಧಾನಿ ಕೂಡಾ, ನರೇಂದ್ರ ಮೋದಿಯವರ ಹಾಗೆ ತಾನು ಧರಿಸಿದ್ದ ದುಬಾರಿ ವೆಚ್ಚದ ಕೋಟಿನಲ್ಲಿ ಪಟ್ಟಿಗಳ ಮಾದರಿಯಲ್ಲಿ ತನ್ನ ಹೆಸರನ್ನು ಛಾಪಿಸುವ ಮೂಲಕ ತನ್ನ ಹುದ್ದೆಯ ಘನತೆಯನ್ನು ಕೆಳಮಟ್ಟಕ್ಕಿಳಿಸಿರಲಿಲ್ಲ.

ಅನುಪಮ್ ಖೇರ್ ಅಭಿನಯದ ‘ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’, ಚಿತ್ರವು ಯುಪಿಎ ಆಡಳಿತದಲ್ಲಿ ಎರಡು ಅವಧಿಗೆ ಪ್ರಧಾನಿಯಾಗಿದ್ದ ಹಾಗೂ ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೇರಿದಲ್ಲಿ ಆ ಹುದ್ದೆಗೆ ಮತ್ತೊಮ್ಮೆ ಸ್ವೀಕಾರಾರ್ಹ ರಾಗಿರಬಹುದಾದ ಡಾ.ಮನಮೋಹನ್‌ಸಿಂಗ್ ಅವರನ್ನು ಗುರಿಯಾಗಿರಿಸಿಕೊಂಡಿದೆ. ಆದರೆ ಅವರ ‘ನಿಂದಕ’ರೆನಿಸಿಕೊಂಡಿರುವ ನರೇಂದ್ರ ಮೋದಿಯವರು, ತನ್ನ ಮೊದಲ ಅವಧಿ ಮುಗಿಯುವ ಮೊದಲೇ ಏದುಸಿರು ಬಿಡುತ್ತಿರುವ ಹಾಗೆ ಕಾಣಿಸುತ್ತಿದೆ. ಮೋದಿ ಬಗ್ಗೆ ಭಾರತೀಯರಿಗೆ ಭ್ರಮನಿರಸನ ಎಷ್ಟು ವ್ಯಾಪಕ ಹಾಗೂ ದಟ್ಟವಾಗಿದೆಯೆಂದರೆ, ಇನ್ನೊಂದು ಅವಧಿಗೆ ಅವರು ಪ್ರಧಾನಿಯಾಗುವುದನ್ನು ತಾಳಿಕೊಳ್ಳಲು ಜನತೆಗೆ ಸಾಧ್ಯವಾಗದು.
  ಮನಮೋಹನ್‌ಸಿಂಗ್ ಸರಕಾರವು ಈ ದೇಶಕ್ಕೆ ಮಾಹಿತಿ ಹಕ್ಕು, ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ರಾಷ್ಟ್ರೀಯ ಆಹಾರ ಭದ್ರತೆ, ಪರಿಶಿಷ್ಟ ಪಂಗಡಗಳು ಹಾಗೂ ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ (ಕಾಡಿನ ಹಕ್ಕುಗಳಿಗೆ ಮಾನ್ಯತೆ) ಹಕ್ಕು, ನ್ಯಾಯಯುತವಾದ ಪರಿಹಾರ ಹಾಗೂ ಭೂ ಸ್ವಾಧೀನದಲ್ಲಿ ಪಾರದರ್ಶಕತೆ, ಪುನರ್ವಸತಿ, ನಿರ್ಭಯಾ ಕಾಯ್ದೆ ಎಂದೇ ಹೆಸರಾದ ಕ್ರಿಮಿನಲ್ ಕಾನೂನು(ತಿದ್ದುಪಡಿ), ಮಕ್ಕಳಿಗೆ ಮುಕ್ತ ಹಾಗೂ ಕಡ್ಡಾಯ ಶಿಕ್ಷಣದ ಹಕ್ಕು, ಬೀದಿ ವ್ಯಾಪಾರಿಗಳ ಹಕ್ಕು(ಜೀವನೋಪಾಯಕ್ಕೆ ರಕ್ಷಣೆ ಹಾಗೂ ಬೀದಿ ವ್ಯಾಪಾರಕ್ಕೆ ನಿಯಮಾವಳಿ), ಮಾನವಮಲಹೊರುವಿಕೆಗೆ ನಿಷೇಧ ಹಾಗೂ ಅಂತಹ ಚಟುವಟಿಕೆಯಲ್ಲ್ಲಿ ನಿರತರಾಗಿದ್ದವರ ಪುನರ್ವಸತಿ ಕಾಯ್ದೆಗಳನ್ನು ನೀಡಿದೆ. ಮೇಲೆ ಉಲ್ಲೇಖಿಸಿದವುಗಳ ಪೈಕಿ ಕೆಲವದರ ಪ್ರಯೋಜನಗಳು ಜನತೆಗೆ ತಲುಪಿವೆಯಾದರೆ, ಉಳಿದ ಕೆಲವು ಇನ್ನಷ್ಟೇ ಫಲನೀಡಬೇಕಾಗಿದೆ. ಆದಾಗ್ಯೂ, ನರೇಂದ್ರ ಮೋದಿ ಸರಕಾರವು ಜನಸಾಮಾನ್ಯರ ಬದುಕಿಗೆ ಸ್ಪಂದಿಸುವಂತಹ ಪ್ರಯೋಜನಕಾರಿಯಾದ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳನ್ನು ಮಾಡಿಲ್ಲ. ಅವರ ಜನಧನ್ ಹಾಗೂ ಉಜ್ವಲಾ ಯೋಜನೆಗಳು ಸಂಪೂರ್ಣ ವಿಫಲವಾಗಿವೆ. ಮನಮೋಹನ್‌ಸಿಂಗ್ ಸರಕಾರದ ಕಾಲದಲ್ಲಿ ಜನರು, ಮಾಹಿತಿಹಕ್ಕು ಕಾಯ್ದೆ (ಆರ್‌ಟಿಐ), ನರೇಗಾ, ಅರಣ್ಯ ಹಕ್ಕುಗಳ ಕಾಯ್ದೆ ಇತ್ಯಾದಿಗಳ ಬಗ್ಗೆ ಜನರು ಉತ್ಸಾಹದಿಂದ ಮಾತನಾಡುತ್ತಿದ್ದುದನ್ನು ನೀವು ಕೇಳಿರಬಹುದು. ಆದರೆ ನರೇಂದ್ರ ಮೋದಿ ಸರಕಾರದಲ್ಲಿ ಜನಧನ್ ಅಥವಾ ಉಜ್ವಲಾ ಯೋಜನೆಗಳ ಬಗ್ಗೆ ಸರಕಾರಿ ಪ್ರಾಯೋಜಿತ ಜಾಹೀರಾತುಗಳನ್ನು ಹೊರತುಪಡಿಸಿದರೆ, ಉಳಿದವರು ಯಾರು ಕೂಡಾ ಹುರುಪಿನಿಂದ ಮಾತನಾಡುವುದನ್ನು ಕೇಳಿರಲಾರರು. ನಗದು ಅಮಾನ್ಯತೆಯು, ವಾಸ್ತವಿಕವಾಗಿ ಒಂದು ‘ಮರುನಗದೀಕರಣ’ವಾಗಿತ್ತು. ಯಾಕೆಂದರೆ ಸರಕಾರವು ಮತ್ತೆ ದೊಡ್ಡ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿದೆ. ಆ ಮೂಲಕ ಕಪ್ಪುಹಣದ ಪಿಡುಗನ್ನು ಕೊನೆಗೊಳಿಸಲು ನಡೆಸಿದ ಕ್ರಮ ಇದಾಗಿತ್ತೆಂಬ ತನ್ನ ಮಾತಿಗೇ ಅದು ದ್ರೋಹವೆಸಗಿದೆ. ಸರಕು ಹಾಗೂಸೇವೆ ತೆರಿಗೆ(ಜಿಎಸ್‌ಟಿ) ಜಾರಿಯಿಂದಾಗಿ ಗರಬಡಿದಂತಾಗಿರುವ ದೇಶದ ಆರ್ಥಿಕತೆಯು, ಇನ್ನೂ ಕೂಡಾ ಚೇತರಿಸಿಕೊಂಡಿಲ್ಲ. ನರೇಂದ್ರ ಮೋದಿ ಹಾಗೂ ಅರುಣ್ ಜೇಟ್ಲಿ ಅವರಿಗೆ ಭಾರತದ ಆರ್ಥಿಕತೆ ಬಗ್ಗೆ ಅತ್ಯಂತ ಕಡಿಮೆ ಮಟ್ಟದ ತಿಳುವಳಿಕೆಯಿದೆ ಎಂಬ ಭಾವನೆ ಈಗ ಜನಸಾಮಾನ್ಯ ರಲ್ಲುಂಟಾಗಿದೆ. ಈ ಜೋಡಿಯು, ರಘುರಾಮ್ ರಾಜನ್ ಹಾಗೂ ಊರ್ಜಿತ್ ಪಟೇಲ್‌ರಂತಹ ಸಮರ್ಥ ತಜ್ಞರನ್ನು ಸರಕಾರದಲ್ಲಿ ಉಳಿಸಿಕೊಳ್ಳುವುದರಲ್ಲಿ ವಿಫಲವಾಗಿದೆ.
    ಕಾನೂನು ಮತ್ತು ಸುವ್ಯವಸ್ಥೆ ಕ್ಷೇತ್ರದಲ್ಲಿ ನರೇಂದ್ರ ಮೋದಿ ಸರಕಾರವು ಅತಿ ದೊಡ್ಡ ವೈಫಲ್ಯವನ್ನು ಕಂಡಿದೆ. ಹಿಂದುತ್ವ ಬ್ರಿಗೇಡ್‌ನ ತೀವ್ರವಾದಿ ಶಕ್ತಿಗಳಿಗೆ ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಲು ಮುಕ್ತಹಸ್ತ ದೊರೆತಂತಾಗಿದ್ದು, ಅವು ಸಮಾಜದಲ್ಲಿ ಭೀತಿಯನ್ನು ಸೃಷ್ಟಿಸಿವೆ. 2017ರ ಎಪ್ರಿಲ್‌ನಲ್ಲಿ ಉತ್ತರಪ್ರದೇಶದ ಸಹಾರಣ್‌ಪುರದಲ್ಲಿ ಬಿಜೆಪಿಯ ಲೋಕಸಭಾ ಸದಸ್ಯ ರಾಘವ್ ಲಖನ್‌ಪಾಲ್ ಶರ್ಮಾ ಅವರು ಸಹಾರಣ್‌ಪುರದಲ್ಲಿ ಹಿರಿಯ ಪೊಲೀಸ್ ಅಧೀಕ್ಷಕನ ನಿವಾಸದ ಮೇಲೆ ದಾಳಿ ನಡೆಸಿದ್ದರೆ, ವಿವಿಧ ಕೇಸರಿ ಸಂಘಟನೆಗಳ ಬೆಂಬಲಿಗರು, ಗೋಮಾಂಸವನ್ನು ಒಯ್ಯುತ್ತಿದ್ದರು ಅಥವಾ ಬೀಫ್ ಸೇವಿಸಿ ದ್ದರೆಂಬ ಶಂಕೆಯಲ್ಲಿ ಮುಸ್ಲಿಂ ನಾಗರಿಕರ ಮೇಲೆ ದಾಳಿ ನಡೆಸಿದ್ದರು.ಇಂತಹ ದುಷ್ಕೃತ್ಯವೆಸಗಿದವರಲ್ಲಿ ಕೆಲವರನ್ನು ಜಾರ್ಖಂಡ್‌ನಲ್ಲಿ ಕೇಂದ್ರ ಸಚಿವ ಜಯಂತ್ ಸಿನ್ಹಾ ಅವರು ಹಾರ ಹಾಕಿ ಸನ್ಮಾನಿಸಿದ್ದರು. ಯೋಗಿ ಆದಿತ್ಯನಾಥ್ ಸರಕಾರವು ಎನ್‌ಕೌಂಟರ್‌ಗಳನ್ನು ನಡೆಸಿ 50ಕ್ಕೂ ಅಧಿಕ ಮಂದಿಯನ್ನು ಹತ್ಯೆಗೈದಿದೆ ಹಾಗೂ ಒಂದು ವೇಳೆ ಪೊಲೀಸರಿಗೆ ನಾಗರಿಕರನ್ನು ಕೊಲ್ಲದಿದ್ದರೆ, ಜನರ ಗುಂಪೇ ಪೊಲೀಸರನ್ನು ಕೊಲ್ಲುವಂತಹ ಪರಿಸ್ಥಿತಿ ಉತ್ತರಪ್ರದೇಶದಲ್ಲಿ ಈಗ ನೆಲೆಸಿದೆ. ಹಾಲಿ ಆಡಳಿತದಲ್ಲಿ ಅಭದ್ರತೆಯ ಭಾವನೆಯನ್ನು ಎದುರಿಸುತ್ತಿರುವ ಜನರಿಗೆ ಶಾಸಕರು ಬಾಂಬ್ ಎಸೆಯುವ ಬೆದರಿಕೆ ಯೊಡ್ಡುತ್ತಿದ್ದಾರೆ. ಎಡಪಂಥೀಯ ಚಿಂತನೆಯ ಸಂಘಟನೆಗಳ ಜೊತೆ ನಂಟನ್ನು ಹೊಂದಿರುವವರಿಗೆ ನಗರ-ನಕ್ಸಲ್ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ ಹಾಗೂ ಅವರನ್ನು ಜೈಲಿಗೆ ತಳ್ಳಲಾಗುತ್ತಿದೆ.
  ಬಹುಶಃ ನರೇಂದ್ರ ಮೋದಿಯವರು, ಇತರ ಯಾವುದೇ ಪ್ರಧಾನಿಗಿಂತ ಅಧಿಕ ಸಂಖ್ಯೆಯಲ್ಲಿ ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದಾರೆ. ಆದಾಗ್ಯೂ, ಅವರ ವಿದೇಶ ಪ್ರವಾಸಗಳಿಂದಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳ ಜೊತೆ ಭಾರತದ ಬಾಂಧವ್ಯ ವೃದ್ಧಿಗೆ ಯಾವುದೇ ಪ್ರಯೋಜನವಾಗಿಲ್ಲ. ಪಾಸ್‌ಪೋರ್ಟ್-ವೀಸಾದ ಅಗತ್ಯವಿಲ್ಲದೆ ಪಾಕಿಸ್ತಾನದಲ್ಲಿರುವ ದರ್ಬಾರ್ ಸಾಹಿಬ್ ಗುರುದ್ವಾರವನ್ನು ಸಿಖ್ ಯಾತ್ರಿಕರು ಸಂದರ್ಶಿಸುವಂತೆ ಮಾಡಲು ಕರ್ತಾರ್‌ಪುರ ಕಾರಿಡಾರ್ ಯೋಜನೆಗೆ ಚಾಲನೆ ನೀಡುವ ಮೂಲಕ ಪಾಕ್ ಪ್ರಧಾನಿ ಇಮ್ರಾನ್‌ಖಾನ್ ಅವರು ಅಪೂರ್ವವಾದ ಸದ್ಭಾವನೆಯ ಸಂಕೇತವನ್ನು ಪ್ರದರ್ಶಿಸಿದ್ದಾರೆ. ಆದರೆ ನರೇಂದ್ರ ಮೋದಿಯವರು ತನ್ನ ಪಕ್ಷವು ಪರಂಪರಾಗತವಾಗಿ ಬಳಸಿಕೊಳ್ಳುತ್ತಿರುವ ಮುಸ್ಲಿಂ ವಿರೋಧಿ ಹಾಗೂ ಪಾಕಿಸ್ತಾನಿ ವಿರೋಧಿ ರಾಜಕೀಯದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ನೆರೆಯ ರಾಷ್ಟ್ರದ ಸ್ನೇಹಪೂರ್ಣವಾದ ನಡವಳಿಕೆಗೆ ಪ್ರತಿಕ್ರಿಯಿಸಲು ಅವರಿಗೆ ಸಾಧ್ಯವಾಗಿಲ್ಲ. ಸರ್ಜಿಕಲ್ ದಾಳಿಯಂತಹ ಧೀರೋದಾತ್ತ ಕಾರ್ಯಾಚರಣೆಯಿಂದಾಗಿ ಭಾರತವು ಏನನ್ನು ಸಾಧಿಸಿತೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಗಡಿಯಾಚೆಗಿನ ಭಯೋತ್ಪಾದಕ ಚಟುವಟಿಕೆಗಳು ಈಗಲೂ ಅವ್ಯಾಹತವಾಗಿ ಮುಂದುವರಿದಿವೆ. ಮನಮೋಹನ್ ಸಿಂಗ್ ಆಡಳಿತದ ಅವಧಿಯಲ್ಲಿ ಪಾಕಿಸ್ತಾನದ ಜೊತೆಗಿನ ಬಾಂಧವ್ಯವು ಗಣನೀಯವಾಗಿ ಸುಧಾರಿಸಿತ್ತು. ಮುಂಬೈಯಲ್ಲಿ ಭಯೋತ್ಪಾದಕ ದಾಳಿ ನಡೆದ ಹೊರತಾಗಿಯೂ, ಪಾಕಿಸ್ತಾನದ ಜೊತೆ ನಂಟನ್ನು ಇರಿಸಿಕೊಳ್ಳಕೂಡದೆಂಬ ಹಠಮಾರಿತನದ ನಿಲುವನ್ನು ಮನಮೋಹನ್‌ಸಿಂಗ್ ಸರಕಾರವು ಕೈಗೊಂಡಿರಲಿಲ್ಲ.
 ತನ್ನ ಪೋಷಕಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರಾದ ಹೆಡಗೆವಾರ್ ಹಾಗೂ ಗೋಳ್ವಾಲ್ಕರ್ ಮತ್ತು ಹಿಂದೂ ಮಹಾಸಭಾ ನಾಯಕ ಸಾವರ್ಕರ್ ಅವರು ಈ ದೇಶದ ಸ್ವಾತಂತ್ರ ಚಳವಳಿಯಲ್ಲಿ ವಿಶ್ವಾಸಾರ್ಹವಾಗಿ ನಡೆದು ಕೊಂಡಿಲ್ಲವಾದುದರಿಂದ ಜನಸಾಮಾನ್ಯರಿಗೆ ಅವರು ಇಷ್ಟವಾಗುವು ದಿಲ್ಲವೆಂಬುದನ್ನು ಅರಿತಿದ್ದ ನರೇಂದ್ರ ಮೋದಿಯವರು ಭಾರತದ ಸ್ವಾತಂತ್ರ ಹೋರಾಟವನ್ನು ಮುನ್ನಡೆಸಿದ್ದ ಮಹಾತ್ಮ್ಮಾಗಾಂಧಿ, ಸರ್ದಾರ್ ಪಟೇಲ್ ಹಾಗೂ ಸುಭಾಷ್ ಚಂದ್ರ ಭೋಸ್‌ರಂತಹ ರಾಷ್ಟ್ರನಾಯಕರ ಹೆಸರನ್ನು ಬಳಸಿಕೊಳ್ಳುತ್ತಲೇ ಬಂದಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಕೇವಲ 31 ಶೇ. ಮತಗಳನ್ನು ಪಡೆದು ಸರಕಾರ ರಚಿಸಿದ್ದು, ಇದು ಲೋಕಸಭಾ ಸ್ಥಾನಗಳಲ್ಲಿ ಬಹುಮತವನ್ನು ಪಡೆದ ಯಾವುದೇ ಪಕ್ಷ ಗಳಿಸಿದ ಅತ್ಯಂತ ಕಡಿಮೆ ಪ್ರಮಾಣದ ಮತಗಳಿಕೆಯಾಗಿದೆ. ಜನಸಾಮಾನ್ಯರ ನಡುವೆ ತನಗೆ ವ್ಯಾಪಕವಾದ ಸ್ವೀಕಾರಾರ್ಹತೆ ದೊರೆಯಬೇಕೆಂಬ ಉದ್ದೇಶದಿಂದ ಮೀಸಲಾತಿ ವಿರೋಧಿ ನೀತಿಯಂತಹ ಆರೆಸ್ಸೆಸ್‌ನ ಕಾರ್ಯಸೂಚಿಯನ್ನು ಮೋದಿ ಕೈಬಿಟ್ಟಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಮಮಂದಿರ ವಿವಾದ ಮುನ್ನೆಲೆಗೆ ಬಂದಿದೆ. ರೈತರ ಆತ್ಮಹತ್ಯೆಗಳು ಅಥವಾ ಮಕ್ಕಳ ಅಪೌಷ್ಟಿಕತೆ, ನಿರುದ್ಯೋಗ ಹಾಗೂ ಕಳಪೆಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯಪಾಲನೆ ವ್ಯವಸ್ಥೆಯಂತಹ ದೇಶವು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವ ಬದಲಿಗೆ, ರಾಮಮಂದಿರ ನಿರ್ಮಾಣವು ಹಿಂದೂಗಳ ಅತ್ಯಂತ ಮಹತ್ವದ ಬೇಡಿಕೆಯೆಂಬಂತೆ ಬಿಂಬಿಸಲಾಗುತ್ತಿದೆ. ರಾಮಮಂದಿರ ವಿವಾದದ ಬೆಂಕಿಗೆ ನರೇಂದ್ರ ಮೋದಿ ಸರಕಾರವು ತುಪ್ಪ ಸುರಿಯುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.
ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ, ಕಾಶ್ಮೀರ ಹಾಗೂ ಅಸ್ಸಾಂನ ಜನತೆ ಬಗ್ಗೆ ತೀವ್ರ ಅಸಂತುಷ್ಟಗೊಂಡಿದ್ದಾರೆ. ಮುಸ್ಲಿಮರಲ್ಲಿ ಪ್ರಚಲಿತದಲ್ಲಿರುವ ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸುವ ಮೂಲಕ ತಾನೋರ್ವ ಮಹಿಳೆಯರ ಹಕ್ಕುಗಳ ಪ್ರತಿಪಾದಕ ನೆಂಬಂತೆ ತನ್ನನ್ನು ಬಿಂಬಿಸಿಕೊಳ್ಳುತ್ತಿದೆ. ಆದರೆ ಕೇರಳದ ಶಬರಿ ಮಲೆ ದೇಗುಲವನ್ನು ಋತುಸ್ರಾವ ವಯಸ್ಸಿನ ಮಹಿಳೆಯರು ಪ್ರವೇಶಿಸುವುದಕ್ಕೆ ಪ್ರಬಲ ವಿರೋಧವನ್ನು ವ್ಯಕ್ತಪಡಿಸುತ್ತಿದೆ. ವಿದೇಶ ದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಜುಗರ ವುಂಟು ಮಾಡುವ ಸಾಧ್ಯತೆಯಿದೆಯೆಂಬ ಭೀತಿಯಿಂದ ಅವರ ಪರಿತ್ಯಕ್ತ ಪತ್ನಿ ಜಶೋದಾ ಬೆನ್‌ಗೆ ಪಾಸ್‌ಪೋರ್ಟ್ ನಿರಾಕರಿಸಲಾಗಿದೆ.
ಭಾರತದ ಬಳಿ ಸಮಸ್ಯೆಗಳ ಸರಮಾಲೆಯೇ ಇರುವಾಗ, ಬಿಜೆಪಿ ಸರಕಾರವು ಗೋವಿನ ಮೇಲಿನ ತನ್ನ ಪ್ರೀತಿಯಿಂದಾಗಿ ಸಂಪೂರ್ಣವಾಗಿ ಅನಿರೀಕ್ಷಿತವಾದ ಇನ್ನೊಂದು ಸಮಸ್ಯೆಯನ್ನು ಹುಟ್ಟುಹಾಕಿದೆ. ದನಗಳನ್ನು ಖರೀದಿಸುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಹೀಗಾಗಿ ಜನರು ತಮಗೆ ಬೇಡವಾದ ದನಗಳನ್ನು ತ್ಯಜಿಸುತ್ತಿದ್ದಾರೆ. ಸಾಕಣೆಯಿಲ್ಲದ ಈ ಬಿಡಾಡಿ ದನಗಳು ಅಲೆದಾಡುತ್ತಾ, ಗದ್ದೆಯಲ್ಲಿ ಬೆಳೆಗಳನ್ನು ನಾಶಪಡಿಸುತ್ತಿವೆ. ಈ ಒಂದು ವಿಷಯವೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಜನರು ತಿರುಗಿ ಬೀಳಲು ನಿರ್ಣಾಯಕವಾದ ಪಾತ್ರವನ್ನು ವಹಿಸಲಿದೆ.
 ಮನಮೋಹನ್‌ಸಿಂಗ್ ಸರಕಾರಕ್ಕೆ ಹೋಲಿಸಿದರೆ, ನರೇಂದ್ರ ಮೋದಿಯವರು ಆಡಳಿತವನ್ನು ಕೆಟ್ಟದಾಗಿ ನಿರ್ವಹಿಸಿದ್ದಾರೆಂಬುದನ್ನು ಮೇಲೆ ವಿವರಿಸಿದ ಅಂಶಗಳು ಬೆಟ್ಟು ಮಾಡಿ ತೋರಿಸುತ್ತವೆ. 2002ರ ಗುಜರಾತ್ ಕೋಮು ಹಿಂಸಾಚಾರದ ಬಳಿಕ ಹಿಂದೂ ಮತಗಳನ್ನು ಧ್ರುವೀಕರಿಸಿ, ನರೇಂದ್ರ ಮೋದಿಯವರು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು. ಸಮಾಜದ ಇತರ ವರ್ಗಗಳನ್ನು ಸೆಳೆಯಲು ಅವರು ಹುಸಿಭರವಸೆಗಳನ್ನು ಬಳಸಿಕೊಂಡಿದ್ದರು.
ಅಂಬಾನಿ ಹಾಗೂ ಅದಾನಿಯವರು, ಮೋದಿಗೆ ಇತರ ಪಕ್ಷಗಳು ಹಾಗೂ ಬಿಜೆಪಿಯೊಳಗಿನ ನಾಯಕರಿಗಿಂತ ಖಚಿತವಾದ ಅರ್ಥಿಕ ಅನುಕೂಲತೆಯನ್ನು ಒದಗಿಸಿಕೊಟ್ಟಿದ್ದಾರೆ. ಈ ಎಲ್ಲಾ ಅಂಶಗಳಿಂದಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲುವಿನ ದಡ ತಲುಪಿದ್ದರು. ಆದರೆ ಈಗ ಅದು ದೇಶದ ಜನತೆಗಾದ ಅಪಘಾತದಂತೆ ಭಾಸವಾಗುತ್ತದೆ. ಜನತೆ, ಸುಳ್ಳುಭರವಸೆಗಳನ್ನು ನೀಡಿದ್ದಕ್ಕಾಗಿ ನರೇಂದ್ರ ಮೋದಿಯವರಿಗೆ ಬಳಸುತ್ತಿರುವ ವಿಶೇಷಣಗಳಿಂದ ಹಿಂದೆಂದೂ ಯಾವುದೇ ಪ್ರಧಾನಿಯನ್ನು ವ್ಯಂಗ್ಯವಾಡಿರಲಿಲ್ಲ. ಅಷ್ಟೇ ಅಲ್ಲ, ಹಿಂದೆಂದೂ ಯಾವುದೇ ಪ್ರಧಾನಿ ಕೂಡಾ, ನರೇಂದ್ರ ಮೋದಿಯವರ ಹಾಗೆ ತಾನು ಧರಿಸಿದ್ದ ದುಬಾರಿ ವೆಚ್ಚದ ಕೋಟಿನಲ್ಲಿ ಪಟ್ಟಿಗಳ ಮಾದರಿಯಲ್ಲಿ ತನ್ನ ಹೆಸರನ್ನು ಛಾಪಿಸುವ ಮೂಲಕ ತನ್ನ ಹುದ್ದೆಯ ಘನತೆಯನ್ನು ಕೆಳಮಟ್ಟಕ್ಕಿಳಿಸಿರಲಿಲ್ಲ.
ಕೃಪೆ: ಕೌಂಟರ್ ಕರೆಂಟ್ಸ್

Writer - ಸಂದೀಪ್ ಪಾಂಡೆ

contributor

Editor - ಸಂದೀಪ್ ಪಾಂಡೆ

contributor

Similar News

ಜಗದಗಲ
ಜಗ ದಗಲ