ಬಹುಕೋಟಿ ರೂ. ಒಪ್ಪಂದಕ್ಕೆ ಕಿಡಂಬಿ ಶ್ರೀಕಾಂತ್ ಸಹಿ

Update: 2019-01-14 18:33 GMT

ಹೊಸದಿಲ್ಲಿ, ಜ.14: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಕೆ.ಶ್ರೀಕಾಂತ್ ಅವರು ಚೀನಾದ ಸ್ಪೋರ್ಟ್ಸ್ ಬ್ರಾಂಡ್‌ವೊಂದರ ಜತೆ 35 ಕೋ.ರೂ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಲಿ-ನಿಂಗ್ ಎಂಬ ಹೆಸರಿನ ಬ್ರಾಂಡ್ ಇದಾಗಿದ್ದು, ನಾಲ್ಕು ವರ್ಷಗಳ, 35 ಕೋ.ರೂ.ನ ಒಪ್ಪಂದದಲ್ಲಿ ಶ್ರೀಕಾಂತ್ ಅವರ ಕ್ರೀಡಾ ಪ್ರಾಯೋಜಕತ್ವ ಹಾಗೂ ಕ್ರೀಡಾ ಸಲಕರಣೆಗಳನ್ನು ಒದಗಿಸುವ ಹೊಣೆ ಹೊರಲಿದೆ.

ಈ ಕುರಿತು ಹೇಳಿಕೆಯೊಂದರಲ್ಲಿ ತಿಳಿಸಿರುವ ಶ್ರೀಕಾಂತ್, ‘‘ಭಾರತ ಮತ್ತು ವಿಶ್ವದಾದ್ಯಂತ ಲಿ-ನಿಂಗ್ ಕಂಪೆನಿಯ ಪ್ರಚಾರ ರಾಯಭಾರಿಯಾಗುವ ಗೌರವಕ್ಕೆ ಪಾತ್ರವಾಗುತ್ತಿದ್ದೇನೆ. ನಾನು ಅವರ ಉತ್ಪನ್ನಗಳನ್ನು ಇಷ್ಟಪಡುತ್ತೇನೆ. ನಾನು ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಹೊಸ ಉತ್ಸಾಹ ಮತ್ತು ಗುರಿಗಳೊಂದಿಗೆ ಅಂಗಣಕ್ಕೆ ಇಳಿಯಲಿದ್ದೇನೆ. ದೇಶಕ್ಕೆ ಹೆಮ್ಮೆ ತರುವ ಕೆಲಸ ಮಾಡುತ್ತೇನೆ’’ ಎಂದರು.

ಶ್ರೀಕಾಂತ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 6 ಬ್ಯಾಡ್ಮಿಂಟನ್ ಸೂಪರ್ ಸರಣಿಗಳನ್ನು ಗೆದ್ದಿದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯರೆನಿಸಿದ್ದಾರೆ. ಈ ಬಾರಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನಲ್ಲಿ ಬೆಂಗಳೂರು ರ್ಯಾಫ್ಟರ್ಸ್ ತಂಡವನ್ನು ಚೊಚ್ಚಲ ಚಾಂಪಿಯನ್ ಆಗಿಸುವಲ್ಲಿ ಅವರ ಪಾತ್ರ ಹಿರಿದಾಗಿದೆ. ಬೆಂಗಳೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ರಾಕೆಟ್ಸ್‌ನ್ನು 4-3 ಅಂತರದಿಂದ ಮಣಿಸಿ ಬೆಂಗಳೂರು ಪ್ರಶಸ್ತಿ ಗೆದ್ದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News