ಲೋಕಸಭಾ ಚುನಾವಣೆ: ಎಐಎಡಿಎಂಕೆ ಏಕಾಂಗಿ ಹೋರಾಟ?

Update: 2019-01-15 05:27 GMT

 ಚೆನ್ನೈ, ಜ.15: ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರಾ ಕಳಗಂ(ಎಐಎಡಿಎಂಕೆ)ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ಎಲ್ಲ 39 ಕ್ಷೇತ್ರ ಹಾಗೂ ನೆರೆಯ ಪಾಂಡಿಚೇರಿಯ ಏಕೈಕ ಕ್ಷೇತ್ರದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ತಯಾರಿ ನಡೆಸಿದೆ ಎಂದು ಪಕ್ಷದ ಹಿರಿಯ ನಾಯಕ ಹಾಗೂ ಸಹಕಾರ ಸಚಿವ ಎಸ್.ಕೆ. ರಾಜು ಸೋಮವಾರ ತಿಳಿಸಿದ್ದಾರೆ.

ರಾಜ್ಯದ ಹಿತಾಸಕ್ತಿಯ ವಿಶ್ವಾಸಘಾತ ಮಾಡುವ ಪಕ್ಷಗಳೊಂದಿಗೆ ಕೈಜೋಡಿಸುವುದಿಲ್ಲ ಎಂದು ಮುಖ್ಯಮಂತ್ರಿ ಎಕೆ ಪಳನಿಸ್ವಾಮಿ ಹೇಳಿಕೆ ನೀಡಿದ ಎರಡು ದಿನಗಳ ಬಳಿಕ ರಾಜು ಈ ಮಾತು ಹೇಳಿದ್ದಾರೆ. ಜ.10 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ತಮಿಳುನಾಡಿನ ಬಿಜೆಪಿ ಕಾರ್ಯಕರ್ತರೊಂದಿಗೆ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮೈತ್ರಿಗೆ ಬಾಗಿಲು ಸದಾ ತೆರೆದಿದೆ ಎಂದು ಹೇಳಿದ್ದರು.

ಲೋಕಸಭೆಯಲ್ಲಿ ದೀರ್ಘ ಸಮಯದಿಂದ ಬೆಂಬಲಿಸುತ್ತಿರುವ ಎಐಎಡಿಎಂಕೆಯನ್ನು ಉದ್ದೇಶಿಸಿ ಮೋದಿ ಈ ಕರೆ ನೀಡಿದ್ದರು ಎಂದು ನಂಬಲಾಗಿದೆ.
ತನ್ನ ಪಕ್ಷ ಬಿಜೆಪಿಯೊಂದಿಗೆ ಯಾವುದೇ ಕಾರಣಕ್ಕೂ ಕೈಜೋಡಿಸುವುದಿಲ್ಲ ಎಂದು ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ)ಅಧ್ಯಕ್ಷ ಎಂಕೆ ಸ್ಟಾಲಿನ್ ಜ.11ರಂದು ಪ್ರಧಾನಿಗೆ ಖಡಕ್ ತಿರುಗೇಟು ನೀಡಿದ್ದರು.

ಲೋಕಸಭಾ ಉಪ ಸ್ಪೀಕರ್ ತಂಬಿದೊರೈ ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ಕೈಜೋಡಿಸಬಾರದು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News