ಹೆಪಟೈಟಿಸ್ ಬಿ ರೋಗದ ಕಾರಣಗಳು, ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ

Update: 2019-01-15 11:12 GMT

ಹೆಪಟೈಟಿಸ್ ಬಿ ಭಾರತದಲ್ಲಿ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಆದರೆ ಸಾಮಾನ್ಯ ಜನರಲ್ಲಿ ಈ ಕಾಯಿಲೆಯ ಕುರಿತು ತಿಳುವಳಿಕೆ ತುಂಬ ಕಡಿಮೆ ಎಂದೇ ಹೇಳಬಹುದು. ಈ ಕಾಯಿಲೆಯ ಸಾಮಾನ್ಯ ಕಾರಣಗಳು, ಲಕ್ಷಣಗಳು ಮತ್ತು ಅದನ್ನು ತಡೆಯಲು ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿದುಕೊಳ್ಳೋಣ.

► ಕಾರಣಗಳು

ಹೆಪಟೈಟಿಸ್ ಬಿ ವೈರಸ್(ಎಚ್‌ಬಿವಿ) ಹೆಪಟೈಟಿಸ್ ಬಿ ಸೋಂಕನ್ನುಂಟು ಮಾಡುತ್ತದೆ ಮತ್ತು ಈ ಸೋಂಕು ಈಗಾಗಲೇ ಸೋಂಕು ಹೊಂದಿರುವ ವ್ಯಕ್ತಿಯ ಸಾಂಗತ್ಯ ಅಥವಾ ರಕ್ತದ ಮೂಲಕ ಹರಡುತ್ತದೆ. ಗರ್ಭಿಣಿಯರು ಈ ಸೋಂಕಿಗೊಳಗಾದರೆ ಅದು ಗರ್ಭದಲ್ಲಿರುವ ಶಿಶುವಿಗೂ ಹರಡುತ್ತದೆ.

ನಮ್ಮ ಚರ್ಮ ಒಡೆದಿದ್ದರೆ ಮತ್ತು ಸೋಂಕುಪೀಡಿತ ವ್ಯಕ್ತಿಯ ಕಣ್ಣೀರು,ಜೊಲ್ಲು ಅಥವಾ ರಕ್ತದ ಸಂಪರ್ಕವುಂಟಾದರೆ,ಸೋಂಕುಪೀಡಿತ ವ್ಯಕ್ತಿಯ ಟೂಥ್‌ಬ್ರಷ್ ಬಳಕೆ,ಅಂತಹ ವ್ಯಕ್ತಿಯೊಂದಿಗೆ ಆಹಾರವನ್ನು ಹಂಚಿಕೊಳ್ಳುವಿಕೆ,ಮಲಿನ ನೀರಿನ ಸೇವನೆ, ಎಚ್‌ಬಿವಿ ಸೋಂಕು ಇರುವ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕ, ಸರಿಯಾಗಿ ಬೇಯಿಸಿರದ ಅಥವಾ ರೋಗಾಣುಗಳಿಂದ ಕೂಡಿದ ಮಾಂಸ ಅಥವಾ ಮಾಂಸ ಉತ್ಪನ್ನಗಳಂತಹ ಆಹಾರಗಳ ಸೇವನೆ, ಸೋಂಕುಪೀಡಿತ ವ್ಯಕ್ತಿಯಿಂದ ರಕ್ತದಾನ,ಡ್ರಗ್ಸ್ ಸೇವನೆ ಮತ್ತು ಹಚ್ಚೆ ಹಾಕುವಾಗ ಸೋಂಕಿನಿಂದ ಕೂಡಿದ ಸೂಜಿಗಳ ಬಳಕೆ ಇವು ಹೆಪಟೈಟಿಸ್ ಬಿ ಸೋಂಕು ಹರಡುವ ವಿಧಾನಗಳಲ್ಲಿ ಸೇರಿವೆ.

ದೀರ್ಘಕಾಲಿಕ ಮಧುಮೇಹ,ಥಲಸೇಮಿಯಾ,ಹಿಮೊಫಿಲಿಯಾ ಅಥವಾ ಲ್ಯುಕೆಮಿಯಾದಂತಹ ರೋಗಗಳಿಂದ ಬಳುತ್ತಿರುವವರಲ್ಲಿ,ಡಯಾಲಿಸಿಸ್ ಮಾಡಿಸಿಕೊಳ್ಳುವವರಲ್ಲಿ,ರೋಗ ನಿರೋಧಕ ಪ್ರತಿಕ್ರಿಯೆಯ ಕೊರತೆಯಿರುವವರಲ್ಲಿ ಮತ್ತು ಕ್ಯಾನ್ಸರ್‌ಗಾಗಿ ಕೆಮೊಥೆರಪಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಈ ಸೋಂಕು ತಗಲುವ ಅಪಾಯದ ಹೆಚ್ಚಿನ ಸಾಧ್ಯತೆಯಿರುತ್ತದೆ.

► ಲಕ್ಷಣಗಳು

ಹೆಪಟೈಟಿಸ್ ಬಿ ಕಾಯಿಲೆಯು ಆರಂಭದಲ್ಲಿ ಯಾವುದೇ ಸುಳಿವುಗಳನ್ನು ತೋರಿಸದಿರಬಹುದು. ಇದೇ ಕಾರಣದಿಂದ ಸೋಂಕಿಗೊಳಗಾದವರು ವೈದ್ಯರನ್ನು ಸಂಪರ್ಕಿಸುವಲ್ಲಿ ವಿಫಲರಾಗುತ್ತಾರೆ. ಆದರೂ ಬಳಲಿಕೆ,ಸ್ನಾಯುಗಳು ಮತ್ತು ಸಂದುಗಳಲ್ಲಿ ನೋವು,ಗಾಢಬಣ್ಣದ ಮೂತ್ರ,ಹಸಿವು ಕ್ಷೀಣಗೊಳ್ಳುವುದು,ವಾಕರಿಕೆ,ಅತಿಸಾರ,ಜ್ವರ,ಹೊಟ್ಟೆಯ ತೊಂದರೆ,ನಿಶ್ಶಕ್ತಿ ಮತ್ತು ಚರ್ಮ ಹಾಗೂ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು(ಕಾಮಾಲೆ) ಇವು ಹೆಪಟೈಟಿಸ್‌ಬಿ ಲಕ್ಷಣಗಳನ್ನು ಸೂಚಿಸುತ್ತವೆ. ಇಂತಹ ಯಾವುದೇ ಲಕ್ಷಣ ಕಂಡುಬಂದರೆ ಹೆಪಟೈಟಿಸ್ ಬಿ ಸೋಂಕು ಯಾವುದೇ ಗಂಭೀರ ಅನಾರೋಗ್ಯಕ್ಕ ಕಾರಣವಾಗುವುದನ್ನು ತಪ್ಪಿಸಲು ತಕ್ಷಣ ವೈದ್ಯರನ್ನು ಭೇಟಿಯಾಗುವುದು ಮುಖ್ಯವಾಗುತ್ತದೆ.

► ದೀರ್ಘಕಾಲಿಕ ಹೆಪಟೈಟಿಸ್‌ನ ಅಪಾಯ ಯಾರಲ್ಲಿ ಹೆಚ್ಚು?

ವ್ಯಕ್ತಿ ಯಾವ ವಯಸ್ಸಿನಲ್ಲಿ ಹೆಪಟೈಟಿಸ್ ಬಿ ಸೋಂಕಿಗೆ ತುತ್ತಾಗಿದ್ದಾನೆ ಎನ್ನುವುದು ಅದರ ತೀವ್ರತೆ ಮತ್ತು ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ರೋಗಿಗಳ ವಯಸ್ಸು ಕಡಿಮೆಯಿದ್ದಷ್ಟು ಸೋಂಕಿನ ತೀವ್ರತೆಯು ಹೆಚ್ಚುತ್ತದೆ. ನವಜಾತ ಶಿಶುಗಳಲ್ಲಿ ಈ ಅಪಾಯ ಶೇ.90ರಷ್ಟಿದ್ದರೆ 2ರಿಂದ 5 ವರ್ಷ ಪ್ರಾಯದ ಮಕ್ಕಳಲ್ಲಿ ಶೇ.30ರಷ್ಟಿರುತ್ತದೆ. ಆರೋಗ್ಯವಂತ ವಯಸ್ಕರಲ್ಲಿ ಈ ಅಪಾಯ ಶೇ.5ಕ್ಕೂ ಕಡಿಮೆಯಿರುತ್ತದೆ ಮತ್ತು ಶೇ.20ರಿಂದ 30ರಷ್ಟು ಸೋಂಕುಪೀಡಿತರಲ್ಲಿ ಲಿವರ್ ಸಿರೊಸಿಸ್ ಅಥವಾ ಕ್ಯಾನ್ಸರ್ ಉಂಟಾಗಬಹುದು.

► ಹೆಪಟೈಟಿಸ್ ಬಿ ಅನ್ನು ತಡೆಯುವುದು ಹೇಗೆ?

ಸದಾ ಕುದಿಸಿದ ನೀರನ್ನು ಸೇವಿಸಿ,ಸಾರ್ವಜನಿಕ ಮತ್ತು ಅಪರಿಚಿತ ಮೂಲಗಳಿಂದ ಸಂಗ್ರಹಿಸಿದ ನೀರನ್ನು ಸೇವಿಸಬೇಡಿ. ನಿಮ್ಮ ಟಾಯ್ಲೆಟ್‌ನ್ನು ಸ್ವಚ್ಛವಾಗಿಡಿ ಮತ್ತು ಮಲವು ಸೂಕ್ತವಾಗಿ ವಿಲೇವಾರಿಯಾಗುವಂತೆ ನೋಡಿಕೊಳ್ಳಿ.

ಬಾತ್‌ರೂಮ್‌ನಿಂದ ಹೊರಬರುವಾಗ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಆಹಾರ ಸೇವನೆಗೆ ಮುನ್ನ ಮತ್ತು ನಂತರ ಸಾಬೂನಿನಿಂದ ಸ್ವಚ್ಛವಾಗಿ ಕೈಗಳನ್ನು ತೊಳೆದುಕೊಳ್ಳಿ. ಮಲಿನ ನೀರಿನಿಂದ ದೂರವಿರಿ. ವೈದ್ಯರ ಸಲಹೆಯ ಮೇರೆಗೆ ಹೆಪಟೈಟಿಸ್ ಬಿ ವೈರಸ್‌ನ ವಿರುದ್ಧ ಲಸಿಕೆ ಹಾಕಿಸಿಕೊಳ್ಳಿ.

► ಯಾರಿಗೆ ಹೆಪಟೈಟಿಸ್ ಬಿ ಲಸಿಕೆ ಅಗತ್ಯ?

18ವರ್ಷಕ್ಕಿಂತ ಕೆಳಗಿನ ಹದಿಹರೆಯದವರು ಮತ್ತು ಮಕ್ಕಳು ಮತ್ತು ಹಿಂದೆಂದೂ ಹೆಪಟೈಟಿಸ್ ಬಿ ಲಸಿಕೆಯನ್ನು ಹಾಕಿಸಿಕೊಳ್ಳದಿದ್ದವರು ಈ ಲಸಿಕೆಯನ್ನು ಅತ್ಯಗತ್ಯವಾಗಿ ಪಡೆದುಕೊಳ್ಳಬೇಕು. ಅಲ್ಲದೆ ಹೆಚ್ಚು ಅಪಾಯದ ಗುಂಪಿನಲ್ಲಿರುವವರೂ ಹೆಪಟೈಟಿಸ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಆಗಾಗ್ಗೆ ರಕ್ತಪೂರಣಕ್ಕೊಳಗಾಗುವ ಥಲಸೇಮಿಯಾದಂತಹ ರೋಗಿಗಳು,ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವವರು ಅಥವಾ ಅಂಗಾಂಗ ಕಸಿಗೊಳಗಾದವರು,ಸೂಜಿಗಳು ಅಥವಾ ಸಿರಿಂಜ್‌ಗಳನ್ನು ಹಂಚಿಕೊಂಡು ಡ್ರಗ್ಸ್ ಸೇವಿಸುವವರು,ಹಲವಾರು ಜನರೊಂದಿಗೆ ಲೈಂಗಿಕ ಸಂಪರ್ಕ ಹೊಂದಿರುವವರು,ಹೆಪಟೈಟಿಸ್ ಸೋಂಕು ಹರಡಿರುವ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುವವರು ಈ ಗುಂಪಿನಲ್ಲಿ ಸೇರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News