ದಿಲ್ಲಿ ವಾಯುಮಾಲಿನ್ಯ: ವೋಕ್ಸ್‌ ವಾಗನ್‌ ಗೆ 171 ಕೋಟಿ ರೂ. ದಂಡ

Update: 2019-01-15 18:11 GMT

ಹೊಸದಿಲ್ಲಿ,ಜ.15: ಹೆಚ್ಚು ಸಾರಜನಕ ಆಕ್ಸೈಡ್ ಹೊಸೂಸುವ ಮೂಲಕ ದಿಲ್ಲಿಯಲ್ಲಿ ವಾಯು ಮಾಲಿನ್ಯ ಉಂಟು ಮಾಡಿದ ಕಾರಣ ಆರೋಗ್ಯಹಾನಿ ಪರಿಹಾರವಾಗಿ ಜರ್ಮನಿ ಮೂಲದ ವಾಹನ ತಯಾರಿಕಾ ಕಂಪೆನಿ ವೋಕ್ಸ್‌ವಾಗನ್ 171.34 ಕೋಟಿ ರೂ. ದಂಡ ಪಾವತಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ರಚಿಸಿರುವ ನಾಲ್ಕು ಸದಸ್ಯರ ಸಮಿತಿ ಸೂಚಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ 2016ರಲ್ಲಿ ವೋಕ್ಸ್‌ವಾಗನ್ ಕಂಪೆನಿಯ ಕಾರುಗಳು ಅಂದಾಜು 48.678 ಟನ್‌ಗಳಷ್ಟು ನೈಟ್ರೋಜನ್ ಆಕ್ಸೈಡನ್ನು ಬಿಡುಗಡೆ ಮಾಡಿದ್ದವು ಎಂದು ತಜ್ಞರ ಸಮಿತಿಯ ವರದಿ ಅಂದಾಜಿಸಿದೆ. ದಿಲ್ಲಿಯಂಥ ಮೆಟ್ರೊ ನಗರವನ್ನು ಆಧಾರವಾಗಿಟ್ಟು ಮಾಡಲಾದ ಅಂದಾಜು ಲೆಕ್ಕದಲ್ಲಿ ವೋಕ್ಸ್‌ ವಾಗನ್ ಕಾರುಗಳು ಹೊರಸೂಸಿರುವ ಸಾರಜಕನ ಆಕ್ಸೈಡ್‌ನಿಂದ ಉಂಟಾಗಿರುವ ಆರೋಗ್ಯಹಾನಿಯ ವೆಚ್ಚ ಸುಮಾರು 171.34 ಕೋಟಿ ರೂ. ಆಗಿದೆ. ಸಾರಜನಕ ಆಕ್ಸಟೈಡ್ ಪರಿಸರದ ಮೇಲೆ ಬೀರುವ ಪರಿಣಾಮವನ್ನು ಅಳೆಯಲು ಯಾವುದೇ ವಿಧಾನಗಳು ಭಾರತದಲ್ಲಿ ಲಭ್ಯವಿಲ್ಲದ ಕಾರಣ ಕೇವಲ ಆರೋಗ್ಯಹಾನಿಯನ್ನು ಮಾತ್ರ ಲೆಕ್ಕಹಾಕಲಾಗಿರುವುದರಿಂದ ದಂಡದ ಮೊತ್ತ ಕಡಿಮೆಯಾಗಿರಬಹುದು ಎಂದು ಸಮಿತಿ ತಿಳಿಸಿದೆ.

ಸಾರಜನಕದ ಬಿಡುಗಡೆಯಿಂದ ಹೊಗೆಮಂಜು ಸೃಷ್ಟಿಯಾಗುವ ಮೂಲಕ ಹೃದಯ ಮತ್ತು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಿಸಿದ್ದಾರೆ. ಎಆರ್‌ಎಐ ನಿರ್ದೇಶಕಿ ರಶ್ಮಿ ಉದ್ವರಿಶಿ, ಸಿಎಸ್‌ಐಆರ್-ನೀರಿಯ ಮುಖ್ಯ ವಿಜ್ಞಾನಿ ಡಾ. ನಿತಿನ್ ಲಬ್ಸೆತ್ವರ್, ಬೃಹತ್ ಕೈಗಾರಿಕೆಗಳ ಸಚಿವಾಲಯದ ನಿರ್ದೇಶಕ ರಮಾಕಾಂತ್ ಸಿಂಗ್ ಮತ್ತು ಸಿಪಿಸಿಬಿ ಕಾರ್ಯದರ್ಶಿ ಸದಸ್ಯ ಪ್ರಶಾಂತ್ ಗರ್ಗವ ಅವರು ಈ ನ್ಯಾಯಮಂಡಳಿಯ ಸದಸ್ಯರಾಗಿದ್ದಾರೆ. ತಯಾರಕರು ಸೂಚಿತ ಪರಿಸರ ನಿಯಮಗಳನ್ನು ಮೀರಿದ್ದಾರೆಯೇ ಎಂಬುದನ್ನು ತಿಳಿಸಲು ಮತ್ತು ಪರಿಸರಕ್ಕೆ ಉಂಟಾಗಿರುವ ಹಾನಿಯ ಬಗ್ಗೆ ನ್ಯಾಯಯುತ ಅಂದಾಜು ಲೆಕ್ಕಹಾಕಲು ಕಳೆದ ವರ್ಷ ನವೆಂಬರ್ 16ರಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು ಈ ನಾಲ್ಕು ಸದಸ್ಯ ಸಮಿತಿಯ ರಚನೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News