ಶಾಸಕರನ್ನು ಸೆಳೆಯುವ ಭಯ: ಹರ್ಯಾಣ ರೆಸಾರ್ಟ್‌ನಲ್ಲಿ ಬೀಡುಬಿಟ್ಟ ಬಿಜೆಪಿ ನಾಯಕರು

Update: 2019-01-15 18:16 GMT

ಹೊಸದಿಲ್ಲಿ,ಜ.15: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ತನ್ನ ಶಾಸಕರನ್ನು ಸೆಳೆಯಬಹುದು ಎಂಬ ಆತಂಕಕ್ಕೆ ಒಳಗಾಗಿರುವ ಬಿಜೆಪಿ ಕರ್ನಾಟಕದ ತನ್ನ ಶಾಸಕರನ್ನು ಹರ್ಯಾಣದ ನುಹ್ ಜಿಲ್ಲೆಯಲ್ಲಿರುವ ರೆಸಾರ್ಟ್‌ನಲ್ಲಿ ಕೂಡಿಟ್ಟಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿಯ 104 ಶಾಸಕರು ಹರ್ಯಾಣದ ನುಹ್ ಜಿಲ್ಲೆಯ ಹಸನ್ಪುರ ತೌರ್‌ನ ಐಟಿಸಿ ಗ್ರಾಂಡ್ ಭಾರತ್ ರೆಸಾರ್ಟ್‌ನಲ್ಲಿ ಸೋಮವಾರದಿಂದ ಬೀಡುಬಿಟ್ಟಿದ್ದಾರೆ ಎಂದು ವರದಿ ತಿಳಿಸಿದೆ. “ನಾವು ಸದ್ಯ ರೆಸಾರ್ಟ್‌ನಲ್ಲಿ ತಂಗಿದ್ದೇವೆ. ಇನ್ನೆಷ್ಟು ದಿನ ಇಲ್ಲಿರಬೇಕು ಎಂದು ತಿಳಿದಿಲ್ಲ. ಮೂರು ನಾಲ್ಕು ಶಾಸಕರು ತಮ್ಮ ವೈಯಕ್ತಿಕ ಕೆಲಸಗಳಿಗಾಗಿ ರಾಜ್ಯಕ್ಕೆ ತೆರಳಿದ್ದಾರೆ. ಶೀಘ್ರದಲ್ಲಿ ಅವರು ವಾಪಸ್ ಬರಲಿದ್ದಾರೆ” ಎಂದು ಶೆಟ್ಟರ್ ತಿಳಿಸಿದ್ದಾರೆ. ಶಾಸಕರ ಬೇಟೆಯ ಬಗ್ಗೆ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಮತ್ತು ವಿಪಕ್ಷ ಬಿಜೆಪಿ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದು ಎರಡೂ ಕಡೆಯ ನಾಯಕರೂ ತಾವು ವಿರೋಧಿ ಬಳಗದ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಬಿಜೆಪಿ ಅಪರೇಶನ್ ಕಮಲ ನಡೆಸುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಈ ಆರೋಪ ಸತ್ಯಕ್ಕೆ ದೂರವಾಗಿದೆ ಬದಲಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ನಮ್ಮ ಶಾಸಕರನ್ನು ಓಲೈಸಲು ಯತ್ನಿಸುತ್ತಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ 104 ಸದಸ್ಯರನ್ನು ಹೊಂದಿದ್ದರೆ ಕಾಂಗ್ರೆಸ್ 79, ಜೆಡಿಎಸ್ 37, ತಲಾ ಒಂದು ಬಿಎಸ್‌ಪಿ, ಕೆಪಿಜೆಪಿ ಮತ್ತು ಸ್ವತಂತ್ರ ಸದಸ್ಯರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News