ಜೆಎನ್‌ಯು ಪ್ರಕರಣ: ಚಾರ್ಜ್‌ಶೀಟ್‌ನಲ್ಲಿ ಉತ್ತರಿಸಲಾಗದ ಪ್ರಶ್ನೆಗಳೇ ಅಧಿಕ

Update: 2019-01-16 04:49 GMT

2016ರಲ್ಲಿ ದಿಲ್ಲಿಯ ಜವಾಹರಲಾಲ್ ನೆಹರೂ ವಿವಿ ಆವರಣದಲ್ಲಿ ನಡೆದ ಸಭೆಯಲ್ಲಿ ದೇಶವಿರೋಧಿ ಘೋಷಣೆಗಳನ್ನು ಮೊಳಗಿಸಿದ್ದ ಆರೋಪಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಸೋಮವಾರ ವಿದ್ಯಾರ್ಥಿ ನಾಯಕರಾದ ಕನ್ಹಯ್ಯಾ ಕುಮಾರ್, ಉಮರ್ ಖಾಲಿದ್ ಹಾಗೂ ಅನಿರ್ಬನ್ ಭಟ್ಟಾಚಾರ್ಯ ಸೇರಿದಂತೆ 10 ಮಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವುದರೊಂದಿಗೆ ಪ್ರಕರಣ ಮತ್ತೊಮ್ಮೆ ದೇಶದ ಗಮನಸೆಳೆದಿದೆ. ಘಟನೆ ನಡೆದ ಸಮಯದಲ್ಲಿ ಕನ್ಹಯಾ ಕುಮಾರ್ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. ಕುಮಾರ್ ವಿರುದ್ಧ ದೇಶದ್ರೋಹ ಮತ್ತಿತರ ಆರೋಪಗಳನ್ನು ಹೊರಿಸಲು ತಮ್ಮ ಬಳಿ ಮೌಖಿಕ ಹಾಗೂ ದೃಶ್ಯ ಮಾಧ್ಯಮಗಳ ಪುರಾವೆಗಳಿರುವುದಾಗಿ ದಿಲ್ಲಿ ಪೊಲೀಸರು ಹೇಳಿಕೊಂಡಿದ್ದಾರೆ. ದೇಶವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದ ವಿದ್ಯಾರ್ಥಿಗಳ ನೇತೃತ್ವವನ್ನು ಕನ್ಹಯ್ಯಾ ಕುಮಾರ್ ವಹಿಸಿರುವುದನ್ನು ತೋರಿಸುವ ವೀಡಿಯೊ ಪೊಲೀಸರ ಬಳಿಯಿದೆಯೆಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.

ಸಂಸತ್‌ ಭವನ ದಾಳಿ ಪ್ರಕರಣದ ದೋಷಿ ಅಫ್ಝಲ್‌ಗುರುವನ್ನು ಗಲ್ಲಿಗೇರಿಸಿದ ವರ್ಷಾಚರಣೆಯ ಕಾರ್ಯಕ್ರಮವನ್ನು ನಡೆಸಲು ವಿವಿಯ ಆಡಳಿತವು ಅನುಮತಿ ನಿರಾಕರಿಸಿದ ಬಳಿಕ, ವಿವಿಯ ಕ್ಯಾಂಪಸ್‌ನಲ್ಲಿರುವ ಸಬರ್‌ಮತಿ ಡಾಬಾಗೆ ಆಗಮಿಸುವಂತೆ ಸಹ ಆರೋಪಿ ಉಮರ್‌ ಖಾಲಿದ್, ಕನ್ಹಯ್ಯಾ ಕುಮಾರ್‌ಗೆ ಟೆಕ್ಸ್ಟ್‌ಸಂದೇಶ ಬಂದಿತ್ತೆಂದು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಿದೆ.

ಘಟನೆ ನಡೆದು ಹೆಚ್ಚುಕಮ್ಮಿ ಮೂರು ವರ್ಷಗಳಾದ ಬಳಿಕ ದಿಲ್ಲಿ ಪೊಲೀಸರ ಭಯೋತ್ಪಾದನಾ ನಿಗ್ರಹದಳವು ಪಾಟಿಯಾಲ ಹೌಸ್ ಕೋರ್ಟ್‌ನಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ. ಆದರೆ ಕನ್ಹಯ್ಯಾ ಕುಮಾರ್, ನೇರವಾಗಿ ಯಾವುದೇ ದೇಶವಿರೋಧಿ ಘೋಷಣೆಗಳ್ನು ಕೂಗಿದ ವೀಡಿಯೊ ಲಭ್ಯವಿಲ್ಲವೆಂದು ಹಿರಿಯ ಪೊಲೀಸ್ ಅಧಿಕಾರಿಗಳು ಈಗಾಗಲೇ ಹೇಳಿರುವುದು ಗಮನಾರ್ಹವಾಗಿದೆ. ಕನಿಷ್ಠ ಈ ವೀಡಿಯೊಗಳ ಫೂಟೇಜ್ ಒಂದನ್ನು ಝಿನ್ಯೂಸ್ ಸುದ್ದಿವಾಹಿನಿ ಪ್ರಸಾರ ಮಾಡಿತ್ತು. ವಿದ್ಯಾರ್ಥಿಗಳು ದೇಶದ್ರೋಹಿ ಘೋಷಣೆಗಳನ್ನು ಕೂಗುತ್ತಿದ್ದರೆಂಬುದಾಗಿ ತೋರಿಸಲು ಕಾರ್ಯಕ್ರಮದ ವೀಡಿಯೊಗಳನ್ನು ತಿರುಚಿದೆಯೆಂಬ ಕಳಂಕವನ್ನು ಈ ಸುದ್ದಿವಾಹಿನಿ ಎದುರಿಸುತ್ತಿದೆ.

ಕಾರ್ಯಕ್ರಮದ ಇತರ ವೀಡಿಯೊಗಳನ್ನು ಪ್ರತ್ಯಕ್ಷದರ್ಶಿಗಳಿಂದ ಪಡೆದುಕೊಳ್ಳಲಾಗಿತ್ತು. ಈ ಪೈಕಿ ಕೆಲವು ಸಾಕ್ಷಿಗಳು ವೀಡಿಯೊದಲ್ಲಿಯೂ ಕಾಣಿಸಿದ್ದು, ಅವರು ಕುಮಾರ್ ವಿರುದ್ಧ ಸಾಕ್ಷ ನುಡಿದಿದ್ದಾರೆಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಸಾಕ್ಷಿಗಳ ಹೇಳಿಕೆಗಳನ್ನು ಪೊಲೀಸರು ಹಾಗೂ ನ್ಯಾಯಾಲಯವು ಕ್ರಿಮಿನಲ್ ದಂಡಸಂಹಿತೆಗೆ ಸಂಬಂಧಿಸಿದ ಪ್ರಸಕ್ತ ಸೆಕ್ಷನ್‌ಗಳಡಿಯಲ್ಲಿ ದಾಖಲಿಸಿಕೊಂಡಿದೆ.

ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿರುವಂತೆಯೇ, ಕನ್ಹಯ್ಯಾ ಕುಮಾರ್ ಮತ್ತಿತರರ ವಿರುದ್ಧ ದೋಷಾರೋಪಪಟ್ಟಿಯನ್ನು ಸಲ್ಲಿಸಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಖಾಲಿದ್‌ರಿಂದ ಕುಮಾರ್‌ಗೆ ಮೊಬೈಲ್ ಸಂದೇಶವು ಬಂದ ಮಾತ್ರಕ್ಕೆ ಅದು ದೇಶದ್ರೋಹದ ಆರೋಪವೆನಿಸಿಕೊಳ್ಳುವುದೇ?. ಪೊಲೀಸರ ವಶದಲ್ಲಿರುವ ವೀಡಿಯೊ ಫೂಟೇಜ್‌ನಲ್ಲಿ ಕನ್ಹಯ್ಯಾ ಕುಮಾರ್ ದೇಶ ವಿರೋಧಿ ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿದೆಯೇ?. ದೇಶದ್ರೋಹಿ ಘೋಷಣೆಗಳನ್ನು ಕೂಗಿದ್ದರೆನ್ನಲಾದ ವಿದ್ಯಾರ್ಥಿಗಳನ್ನು ಅವರು ಯಾವ ರೀತಿಯಾಗಿ ಮುನ್ನಡೆಸುತ್ತಿದ್ದರು?. ಈ ಎಲ್ಲ ಪ್ರಶ್ನೆಗಳಿಗೂ ಪೊಲೀಸರಲ್ಲಿ ಸ್ಪಷ್ಟ ಉತ್ತರ ಲಭ್ಯವಿಲ್ಲ.

ಅಷ್ಟೇ ಅಲ್ಲದೆ ಕನ್ಹಯ್ಯಾ ಕುಮಾರ್ ಅವರ ದೂರವಾಣಿ ಕರೆಯ ದಾಖಲೆಗಳ ಬಗ್ಗೆಯೂ ದೋಷಾರೋಪ ಪಟ್ಟಿಯು ವಿವರವಾದ ದಾಖಲೆಗಳನ್ನು ನೀಡಿಲ್ಲ. ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದರೆನ್ನಲಾದ ಸಂದರ್ಭದಲ್ಲಿ ಅಥವಾ ಅದಕ್ಕಿಂತ ಮೊದಲು ಮತ್ತು ಘೋಷಣೆಯ ಆನಂತರ ವಿದ್ಯಾರ್ಥಿಗಳ ನಡುವೆ ಭುಗಿಲೆದ್ದ ಘರ್ಷಣೆಯ ಸಂದರ್ಭದಲ್ಲಿ ಕನ್ಹಯ್ಯಾ ಕುಮಾರ್ ಫೋನ್ ಎಲ್ಲಿತ್ತು ಎಂಬ ಬಗ್ಗೆಯೂ ದೋಷಾರೋಪಪಟ್ಟಿ ಸ್ಪಷ್ಟವಾಗಿ ತಿಳಿಸಿಲ್ಲ.

ಇನ್ನೊಂದೆಡೆ ಪೊಲೀಸರು ಕೂಡಾ ಘಟನೆಯಲ್ಲಿ ಕನ್ಹಯ್ಯಾ ಕುಮಾರ್ ಅವರ ಪಾತ್ರವಿರುವುದನ್ನು ಸಮರ್ಥಿಸುವ ಪುರಾವೆಗಳನ್ನು ಎಲ್ಲಿಯೂ ಈ ತನಕ ಬಹಿರಂಗಪಡಿಸಿಲ್ಲ. ಜೆಎನ್‌ಯು ಆಡಳಿತದಿಂದ ಅನುಮತಿ ನಿರಾಕರಿಸಲ್ಪಟ್ಟ ಈ ಕಾರ್ಯಕ್ರಮದ ಸಂಘಟಕನೆಂದು ಕುಮಾರ್ ಅವರ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸಲಾಗಿಲ್ಲ.

ಕನ್ಹಯ್ಯಾ ಕುಮಾರ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ದೇಶದ್ರೋಹಿ ಘೋಷಣೆಗಳನ್ನು ಕೂಗುತ್ತಿರುವಂತೆ ತೋರಿಸುವ ‘ತಿರುಚಿದ ವೀಡಿಯೊ’ಗಳನ್ನು ಸುದ್ದಿವಾಹಿನಿಗಳು ಪ್ರಸಾರ ಮಾಡಿದ ಬಳಿಕ ಪೊಲೀಸರು ಜೆಎನ್‌ಯು ವಿದ್ಯಾರ್ಥಿ ನಾಯಕರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರು. ಆದರೆ ಪೊಲೀಸರು ಈ ತಿರುಚಿದ ವೀಡಿಯೊಗಳ ಬಗ್ಗೆ ಎಲ್ಲಿಯೂ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿಲ್ಲವೆನ್ನಲಾಗಿದೆ. ಹೀಗೆ ಇಲ್ಲಗಳ ಸರಮಾಲೆಗಳನ್ನು ಮುಂದಿಟ್ಟುಕೊಂಡು ಇದೆ ಎಂದು ಸಾಧಿಸುವುದಕ್ಕೆ ಪೊಲೀಸರು ಹೊರಟಿದ್ದಾರೆ. ಅಂದರೆ ನ್ಯಾಯಾಲಯದಲ್ಲಿ ಈ ಪ್ರಕರಣ ಸಾಬೀತಾಗುವುದಿಲ್ಲ ಎನ್ನುವುದು ಪೊಲೀಸರಿಗೆ ಗೊತ್ತಿದ್ದೂ ಕನ್ಹಯ್ಯಾ ತಂಡದ ಮೇಲೆ ಕೇಸು ದಾಖಲಿಸಲಾಗಿದೆಯೆಂದರೆ, ಅವರ ಉದ್ದೇಶ, ಮುಂದಿನ ಚುನಾವಣೆಯಲ್ಲಿ ಕನ್ಹಯ್ಯಾ ಬಳಗ ಸಕ್ರಿಯವಾಗಿ ಭಾಗವಹಿಸದಂತೆ ತಡೆಯುವುದು. ಇದು ಯಾರ ಅಗತ್ಯ ಎನ್ನುವುದನ್ನು ನಾವು ಊಹಿಸಬಹುದಾಗಿದೆ. ನರೇಂದ್ರ ಮೋದಿಯವರು ಈಗಾಗಲೇ ಸಿಬಿಐ ಸೇರಿದಂತೆ ತನಿಖಾ ಸಂಸ್ಥೆಗಳಿಗೆಲ್ಲ ಹೆದರಿ ಬದುಕುತ್ತಿದ್ದಾರೆ. ಇದೀಗ ಈ ಎಳೆ ವಿದ್ಯಾರ್ಥಿಗಳನ್ನು ಎದುರಿಸುವ ಶಕ್ತಿಯೂ ಅವರಲ್ಲಿಲ್ಲ ಎನ್ನುವುದು ಸಾಬೀತಾಗಿದೆ. ಏನೇ ಇರಲಿ, ಸರಕಾರದ ಈ ನಿರ್ಧಾರ, ಕನ್ಹಯ್ಯಾ ತಂಡದ ಹೋರಾಟಕ್ಕೆ ಪೂರಕವಾಗಲಿದೆ. ಮೋದಿ ಈ ಮೂಲಕ ತನ್ನೊಳಗಿನ ಭಯ, ಆತಂಕಗಳನ್ನು ದೇಶಕ್ಕೆ ಪ್ರಕಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News