ರೋಹಿತ್ ವೇಮುಲಾ ಬದುಕಿದ್ದಾನೆ

Update: 2019-01-18 05:23 GMT

 ಹೈದರಾಬಾದ್ ವಿವಿಯಲ್ಲಿ ಜಾತೀಯತೆಯ ವಿರುದ್ಧ ಪ್ರತಿಭಟನೆ ನಡೆಸಿ ಹತಾಶನಾಗಿ, ರಾಜಕೀಯ ಶಕ್ತಿಗಳ ಒತ್ತಡಕ್ಕೆ ಸಿಲುಕಿ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ಮೂರು ವರ್ಷ ಸಂದು ಹೋಯಿತು. ರೋಹಿತ್ ವೇಮುಲಾ ಆತ್ಮಹತ್ಯೆಯನ್ನು ಮುಂದಿಟ್ಟುಕೊಂಡು ವ್ಯಾಪಕ ಹೋರಾಟಗಳು, ಆಂದೋಲನಗಳು ನಡೆದವಾದರೂ ದೇಶದ ಪರಿಸ್ಥಿತಿ ಮಾತ್ರ ಬದಲಾವಣೆಯಾಗಿಲ್ಲ. ಒಂದು ಅರ್ಥದಲ್ಲಿ ನೋಡಿದರೆ ಕೆಳಜಾತಿಯ ಸಮುದಾಯ ಇನ್ನಷ್ಟು ಇಕ್ಕಟ್ಟಿನಲ್ಲಿದೆ. ರೋಹಿತ್ ವೇಮುಲಾ ಆತ್ಮಹತ್ಯೆಗೆ ಕಾರಣರಾದ ಶಕ್ತಿಗಳೆಂದು ಯಾರನ್ನು ಆರೋಪಿಸಲಾಗಿದೆಯೋ ಅವರಿನ್ನೂ ಆ ವಿಶ್ವವಿದ್ಯಾನಿಲಯದೊಳಗೇ ಇದ್ದಾರೆ. ರೋಹಿತ್ ವೇಮುಲಾನ ಬದುಕನ್ನು ಬೀದಿಗೆ ತಳ್ಳಲು ಕಾರಣವಾದ ರಾಜಕಾರಣಿಗಳು, ವಿವಿ ಮುಖ್ಯಸ್ಥ ಸೇರಿದಂತೆ ಒಬ್ಬನೇ ಒಬ್ಬನಿಗೆ ಶಿಕ್ಷೆಯಾಗಿಲ್ಲ. ಇದೇ ಸಂದರ್ಭದಲ್ಲಿ ರೋಹಿತ್ ಪರವಾಗಿ ಧ್ವನಿಯೆತ್ತಿದ್ದ ಪ್ರಗತಿ ಪರ ಶಕ್ತಿಗಳ ಮೇಲೆಯೇ ಕೇಸು ದಾಖಲಿಸಲಾಗಿದೆ. ರೋಹಿತ್ ವೇಮುಲಾ ಪರವಾಗಿ ಧ್ವನಿಯೆತ್ತಿ ದೇಶಾದ್ಯಂತ ಬೃಹತ್ ಆಂದೋಲನವನ್ನೇ ರೂಪಿಸಿದ ಕನ್ಹಯ್ಯಿ ಮತ್ತು ಆತನ ಗೆಳೆಯರ ಮೇಲೆ ದೇಶದ್ರೋಹದ ಮೊಕದ್ದಮೆಯನ್ನು ಹೂಡಲಾಗಿದೆ. ದೇಶಾದ್ಯಂತ ವೇಮುಲಾನ ಧ್ವನಿಯನ್ನು ವಿಸ್ತರಿಸಿದ ಸಾಮಾಜಿಕ ಹೋರಾಟಗಾರರನ್ನು ‘ಅರ್ಬನ್ ನಕ್ಸಲ್’ ಎಂದು ಕರೆದು ಜೈಲಿಗೆ ತಳ್ಳುವ ಹುನ್ನಾರ ನಡೆಯುತ್ತಿದೆ. ವ್ಯವಸ್ಥೆ ಎಷ್ಟು ಕ್ರೂರವಾಗಿ ಬಿಟ್ಟಿದೆಯೆಂದರೆ, ಆನಂದ್ ತೇಲ್ತುಂಬ್ಡೆಯಂತಹ ಖ್ಯಾತ ಚಿಂತಕರೇ ಇಂದು ಭಯ ಪಡುವ ಸನ್ನಿವೇಶ ನಿರ್ಮಾಣವಾಗಿದೆ. ಪೊಲೀಸರು ತನ್ನನ್ನು ಸರ್ವನಾಶ ಮಾಡುತ್ತಾರೆ ಎಂದು ಅವರು ಭಯ ತೋಡಿಕೊಂಡಿದ್ದಾರೆ. ಮಗದೊಂದೆಡೆ ಸಂವಿಧಾನವನ್ನು ದುರ್ಬಲಗೊಳಿಸುವ ಕೆಲಸ ಆರಂಭವಾಗಿದೆ. ದಲಿತನಾಗಿರುವ ರೋಹಿತ್ ವೇಮುಲಾ ತನ್ನ ಹಕ್ಕುಗಳಿಗಾಗಿ ಹೋರಾಡಿ ಸೋತು ಆತ್ಮಹತ್ಯೆ ಮಾಡಿಕೊಂಡರೆ, ಸರಕಾರ ಮೇಲ್ಜಾತಿಯ ಬಡವರನ್ನು ಗುರುತಿಸಿ ಅವರಿಗೆಮೀಸಲಾತಿಯನ್ನು ನೀಡುವ ಸಿದ್ಧತೆಯಲ್ಲಿದೆ ಮತ್ತು ದಲಿತ ರಾಜಕಾರಣಿಗಳು ಇದರ ವಿರುದ್ಧ ಧ್ವನಿಯೆತ್ತಲಾರದಂತಹ ಸ್ಥಿತಿ ನಿರ್ಮಾಣವಾಗಿದೆ. ವಿಪರ್ಯಾಸವೆಂದರೆ, ರಾಮ್‌ವಿಲಾಸ್ ಪಾಸ್ವಾನ್‌ರಂತಹ ನಾಯಕರೇ ಈ ಮೀಸಲಾತಿಯನ್ನು ಬಹಿರಂಗವಾಗಿ ಬೆಂಬಲಿಸುತ್ತಿದ್ದಾರೆ.
ರೋಹಿತ್ ವೇಮುಲಾ ಆತ್ಮಹತ್ಯೆ ಮಾಡುವಂತಹ ಸನ್ನಿವೇಶ ಯಾಕೆ ನಿರ್ಮಾಣವಾಯಿತು? ಎನ್ನುವುದನ್ನು ನಾವು ಮತ್ತೊಮ್ಮೆ ಅವಲೋಕಿಸಬೇಕಾಗಿದೆ. ಎಬಿವಿಪಿ ಮುಖಂಡನ ಜೊತೆಗೆ ನಡೆದ ಸಂಘರ್ಷ ಬಳಿಕ ಆತನ ಶಿಕ್ಷಣವನ್ನೇ ಬಲಿ ತೆಗೆದುಕೊಂಡಿತು. ಆತನ ಮೇಲೆ ಇಲ್ಲಸಲ್ಲದ ಮೊಕದ್ದಮೆಗಳನ್ನು ದಾಖಲಿಸಲಾಯಿತು. ವಿಶ್ವವಿದ್ಯಾನಿಲಯದ ಮುಖ್ಯಸ್ಥರು ಆತನಿಗೆ ಕಿರುಕುಳವನ್ನು ನೀಡಿದರು. ಆತನಿಗೆ ಸಿಗಬೇಕಾದ ಫೆಲೋಶಿಪ್‌ನ್ನು ತಡೆಹಿಡಿಯಲಾಯಿತು. ಆತ ರಾತ್ರಿ ಹಗಲು ಅಂಬೇಡ್ಕರ್ ಭಾವಚಿತ್ರದ ಜೊತೆಗೆ ವಿಶ್ವವಿದ್ಯಾನಿಲಯದ ಅಂಗಳದಲ್ಲಿ ಏಕಾಂಗಿಯಾಗಿ ವಾರಗಳ ಕಾಲ ಪ್ರತಿಭಟನೆ ನಡೆಸಿದರೂ ವಿಶ್ವವಿದ್ಯಾನಿಲಯ ಅದಕ್ಕೆ ಸ್ಪಂದಿಸಲಿಲ್ಲ. ಅಂತಿಮವಾಗಿ ಆತ ವಿಶ್ವವಿದ್ಯಾನಿಲಯದ ಕುಲಪತಿಗೆ ಪತ್ರ ಬರೆದು ‘‘ಈ ವಿಶ್ವವಿದ್ಯಾನಿಲಯಕ್ಕೆ ಸೇರುವ ದಲಿತ ವಿದ್ಯಾರ್ಥಿಗಳಿಗೆ ಪ್ರವೇಶದ ಜೊತೆಗೇ ಆತ್ಮಹತ್ಯೆ ಮಾಡಲು ಹಗ್ಗವನ್ನೂ ಕೊಟ್ಟು ಬಿಡಿ’’ ಎಂದು ತಿಳಿಸಿದ. ಸಂಸದನ ಒತ್ತಡಕ್ಕೆ ಮಣಿದು ವಿವಿ ಕುಲಪತಿ ವೇಮುಲಾನನ್ನು ಹಾಸ್ಟೆಲ್‌ನಿಂದ ಹೊರ ಹಾಕಿದರು. ಇದಕ್ಕೆ ಕೇಂದ್ರ ಸಚಿವರ ಕುಮ್ಮಕ್ಕು ಇತ್ತು ಎನ್ನುವುದೂ ಮಾಧ್ಯಮಗಳ ಮೂಲಕ ಬಹಿರಂಗವಾಗಿದೆ.

  ಆದರೆ ವೇಮುಲಾನನ್ನು ಹತಾಶೆಗೊಳಿಸಿದ್ದು ವ್ಯವಸ್ಥೆ ಮಾತ್ರ ಅಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಅತ್ಯಂತ ಪ್ರತಿಭಾವಂತನಾಗಿದ್ದ, ಮೀಸಲಾತಿಯ ಸಹಾಯವಿಲ್ಲದೆ ಸಾಮಾನ್ಯ ವರ್ಗದಿಂದಲೇ ಆಯ್ಕೆಯಾಗಿದ್ದ ದಲಿತ ವಿದ್ಯಾರ್ಥಿಯ ವಿರುದ್ಧ ಸಂಘಪರಿವಾರ ಮತ್ತು ಸರಕಾರ ಒಂದಾಗಿ ಮುಗಿ ಬಿದ್ದಾಗ ಆತನ ಜೊತೆಗೆ ಯಾವ ಸಂಘಟನೆಗಳೂ ಬಲವಾಗಿ ನಿಲ್ಲಲಿಲ್ಲ. ರಾತ್ರಿ ಹಗಲು ಹಾಸ್ಟೆಲ್ ಮುಂಭಾಗದಲ್ಲಿ ಆತ ಪ್ರತಿಭಟನೆ ನಡೆಸುತ್ತಾ ಇದ್ದಾಗ ಆತನ ಜೊತೆಗೆ ಇದ್ದುದು ಅಂಬೇಡ್ಕರ್ ಮತ್ತು ಸಾವಿತ್ರಿ ಭಾಯಿ ಫುಲೆ ಅವರ ಬೃಹತ್ ಭಾವಚಿತ್ರ ಮಾತ್ರ. ದಲಿತ ಸಂಘಟನೆಗಳಿಗೆ ಆತ ಕಾಮ್ರೇಡ್ ಆಗಿದ್ದ. ಅತ್ತ ಕಾಮ್ರೇಡ್‌ಗಳೂ ಆತನ ಜೊತೆಗೆ ಬಹಿರಂಗವಾಗಿ ಗುರುತಿಸಿಕೊಳ್ಳಲು ಸಿದ್ಧವಿರಲಿಲ್ಲ. ಯಾಕೆಂದರೆ ಯಾಕೂಬ್‌ಮೆಮನ್‌ಗೆ ಗಲ್ಲು ಶಿಕ್ಷೆಯಾದಾಗ ಅದರ ವಿರುದ್ಧ ಬಹಿರಂಗವಾಗಿ ಧ್ವನಿಯೆತ್ತಿದ ಆರೋಪ ರೋಹಿತ್ ಮೇಲಿತ್ತು. ಯಾವುದೇ ಸಿಂಹ ಅಥವಾ ಹುಲಿಗಳು ಕಾಡೆಮ್ಮೆಗಳು ಗುಂಪಾಗಿದ್ದಾಗ ಅದರ ಮೇಲೆ ದಾಳಿ ಮಾಡುವುದಿಲ್ಲ. ಅಷ್ಟೇ ಅಲ್ಲ, ಕಾಡೆಮ್ಮೆಗಳು ಗುಂಪಾಗಿ ದಾಳಿ ಮಾಡಿದರೆ ಹುಲಿಗಳು ಹೆದರಿ ಓಡಿ ಹೋಗುತ್ತವೆ. ಒಬ್ಬಂಟಿಯಾಗಿರುವ ಕಾಡೆಮ್ಮೆಯ ಮೇಲಷ್ಟೇ ಅವು ಎರಗುತ್ತವೆ. ರೋಹಿತ್ ವೇಮುಲಾನ ವಿಷಯದಲ್ಲೂ ಇದೇ ಆಯಿತು. ದಲಿತ ಸಂಘಟನೆಗಳು ಒಂದಾಗಿ ವಿಶ್ವವಿದ್ಯಾನಿಲಯದ ವಿರುದ್ಧ ನಿಂತಿದ್ದರೆ, ಎಡಪಂಥೀಯ ನಾಯಕರು ಹೈದರಾಬಾದ್ ಚಲೋ ಮಾಡಿದ್ದರೆ ರೋಹಿತ್‌ಗಾದ ಅನ್ಯಾಯ ದೇಶಾದ್ಯಂತ ಚರ್ಚೆಗೊಳಗಾಗುತ್ತಿತ್ತು. ರೋಹಿತ್‌ಗೆ ಆತ್ಮವಿಶ್ವಾಸ ಬರುತ್ತಿತ್ತು. ಸಂಬಂಧಪಟ್ಟವರು ಹೆದರಿಯಾದರೂ ಆತನಿಗಾದ ಅನ್ಯಾಯವನ್ನು ಸರಿಪಡಿಸುತ್ತಿದ್ದರು. ತನ್ನ ಪ್ರತಿಭಟನೆ ಅರಣ್ಯ ರೋದನವಾಗುತ್ತಿರುವುದು ರೋಹಿತ್ ಗಮನಕ್ಕೆ ಬಂದಿತ್ತು. ಆತ ಹೇಗೆ ವ್ಯವಸ್ಥೆಯಿಂದ ಹತಾಶೆಗೊಂಡಿದ್ದನೋ, ಅದಕ್ಕಿಂತ ಹೆಚ್ಚು ತನ್ನವರಿಂದಲೇ ಹತಾಶೆಗೊಂಡಿದ್ದ. ಆತ ಆತ್ಮಹತ್ಯೆಗೆ ಮುನ್ನ ಬರೆದ ಪತ್ರದಲ್ಲಿ ಆ ಖಿನ್ನತೆಯ ಲಕ್ಷಣವಿತ್ತು. ಆತನ ಆತ್ಮಹತ್ಯೆ ಪತ್ರ ಯಾರ ಮೇಲೂ ಆರೋಪ ಹೊರಿಸುವುದಿಲ್ಲ. ಒಂದು ರೀತಿಯಲ್ಲಿ ವೈರಾಗ್ಯದ, ಫಿಲಾಸಫಿಯ ಮಾತುಗಳನ್ನಾಡುತ್ತದೆ. ಸಂಘಪರಿವಾರ, ದಲಿತ ಸಂಘಟನೆಗಳು ಜೊತೆಗೂಡಿ ರೋಹಿತ್ ವೇಮುಲಾನನ್ನು ಕೊಂದು ಹಾಕಿದವು.
 
 ವೇಮುಲಾ ಪರವಾದ ಹೋರಾಟದಲ್ಲಿ ಮಾಯಾವತಿ ನೇತೃತ್ವದ ಬಿಎಸ್ಪಿ ದೂರ ಉಳಿಯಿತು ಎನ್ನುವುದನ್ನು ನಾವು ಗುರುತಿಸಬೇಕು. ಅಷ್ಟೇ ಏಕೆ, ಕನ್ಹಯ್ಯಿ ತಂಡ ರೋಹಿತ್‌ನಿಗಾದ ಅನ್ಯಾಯದ ವಿರುದ್ಧ ಚಳವಳಿ ರೂಪಿಸುತ್ತಿದ್ದಾಗ ಮಾಯಾವತಿ ಅವರು, ಕನ್ಹಯ್ಯಾನ ವಿರುದ್ಧವೇ ಹೇಳಿಕೆ ನೀಡಿದರು. ಸಂಸತ್ತಿನಲ್ಲಿ ಮಾಯಾವತಿ ರೋಹಿತ್ ವೇಮುಲಾ ಪರವಾಗಿ ಮಾತನಾಡಿರಬಹುದು, ಆದರೆ ದಲಿತ ಸಂಘಟನೆಗಳನ್ನು ಒಗ್ಗೂಡಿಸಿ ರೋಹಿತ್‌ಗೆನ್ಯಾಯ ಕೊಡಿಸಲು ಅವರು ವಿಫಲರಾದರು. ಆದರೆ ಒಂದೇ ಒಂದು ಆಶಾವಾದ, ರೋಹಿತ್ ವೇಮುಲಾ ಸಾವಿನನಂತರ ದಲಿತ ಅಸ್ಮಿತೆ ಮತ್ತೆ ಯುವಜನರಲ್ಲಿ ಜಾಗೃತವಾಗಿದೆ. ಜಾತೀಯತೆಯನ್ನು ತನ್ನ ಅಜೆಂಡಾದಿಂದ ದೂರ ಇಟ್ಟಿದ್ದ ಎಡಪಂಥೀಯರು ದಲಿತರ ಪರವಾಗಿ ಮಾತನಾಡತೊಡಗಿದರು. ನೀಲಿ ಮತ್ತು ಕೆಂಪು ಒಂದಾಗಬೇಕು ಎಂಬ ಮಾತು ಬಲಪಡೆದದ್ದು ರೋಹಿತ್ ವೇಮುಲಾ ಆತ್ಮಹತ್ಯೆಯನಂತರ. ಕನ್ಹಯ್ಯೆ, ಜಿಗ್ನೇಶ್‌ನಂತಹ ಹೊಸ ಯುವಕರು ರಾಜಕೀಯದಲ್ಲಿ ತಲೆಯಿತ್ತಿದರು. ವಿರೋಧ ಪಕ್ಷವೇ ಇಲ್ಲ ಎಂದು ಬೀಗುತ್ತಿದ್ದ ನರೇಂದ್ರ ಮೋದಿಯಂತಹ ಬಿಜೆಪಿ ನಾಯಕರು, ಜಿಗ್ನೇಶ್, ಶೆಹ್ಲಾರಶೀದ್, ಕನ್ಹಯ್ಯಾರಂತಹ ಯುವಕರಿಗೆ ಅಂಜಿ ಅವರ ವಿರುದ್ಧ ಬಗೆ ಬಗೆಯ ಪ್ರಕರಣಗಳನ್ನು ದಾಖಲಿಸಿ ಬಾಯಿ ಮುಚ್ಚಿಸುವ ಮಟ್ಟಕ್ಕೆ ಇಳಿದರು. ರೋಹಿತ್ ವೇಮುಲಾಗೆ ಅನ್ಯಾಯ ಎಸಗಿದವರಿಗೆ ಶಿಕ್ಷೆಯಾಗದೇ ಇರಬಹುದು, ಆದರೆ ಆತ ದೇಶಾದ್ಯಂತ ಇನ್ನೂ ಬದುಕಿದ್ದಾನೆ ಮತ್ತು ಯುವಕರನ್ನು ಸಂಘಟಿಸುತ್ತಿದ್ದಾನೆ. ಹೀಗೆ ಸಂಘಟಿತರಾಗುತ್ತಿರುವ ಯುವಕರಿಗೆ ಯಾವತ್ತೂ ವೇಮುಲಾನ ಸ್ಥಿತಿ ಬರಬಾರದು. ಒಬ್ಬ ದಲಿತ ಅಥವಾ ಶೋಷಿತ ಯುವಕನಿಗೆ ಅನ್ಯಾಯವಾದಾಗ ಆತ ಯಾವ ಪಕ್ಷಕ್ಕೇ ಸೇರಿರಲಿ ಎಲ್ಲರೂ ಒಂದಾಗಿ ಬೀದಿಗಿಳಿಯಬೇಕು. ಆಗ ಮಾತ್ರ ವ್ಯವಸ್ಥೆ ಹೋರಾಟಗಳಿಗೆ ಸ್ಪಂದಿಸೀತು. ಈ ನಿಟ್ಟಿನಲ್ಲೇ, ಬಂಧನದ ಭೀತಿಯನ್ನು ಎದುರಿಸುತ್ತಿರುವ ಆನಂದ್ ತೇಲ್ತುತುಂಬ್ಡೆಯಂತಹ ಚಿಂತಕರ ಪರವಾಗಿ ಎಲ್ಲ ಜಾತ್ಯತೀತ ಪಕ್ಷಗಳು, ಸಂಘಟನೆಗಳು ಭೇದ ಮರೆತು ಧ್ವನಿಯೆತ್ತಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News