ಜಾತ್ಯತೀತ ಪಕ್ಷಗಳ ಜವಾಬ್ದಾರಿಯೇನು?

Update: 2019-01-18 17:59 GMT

ಭಾಜಪದಲ್ಲಿ ಗೊಂದಲ, ಗುದ್ದಾಟ, ತಿಕ್ಕಾಟ ಮತ್ತು ಘರ್ಷಣೆಗಳು ಕಾಣಿಸಿಕೊಳ್ಳುತ್ತಿವೆ. ನರೇಂದ್ರ ಮೋದಿಯವರೇನು ಅಜೇಯರಲ್ಲ, ಸೋಲನ್ನು ಅನುಭವಿಸುವ ಸಮಯ ದೂರವಿಲ್ಲ ಎಂಬುದು ಐದು ರಾಜ್ಯಗಳ ಚುನಾವಣಾ ಫಲಿತಾಂಶಗಳಿಂದ ತಿಳಿಯಬಹುದು. ಆದರೆ ಎಡ, ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ರಾಜಕೀಯ ಪಕ್ಷಗಳು ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬುದು ಇಂದಿನ ಅಗತ್ಯ.

ನರೇಂದ್ರ ಮೋದಿಯವರ ಜನ್ಮ ಕುಂಡಲಿಯನ್ನು ಪರೀಕ್ಷಿಸಿದ ನಂತರ, ‘‘ನರೇಂದ್ರ ಮೋದಿಯವರೇ 2019ರ ಚುನಾವಣೆಯಲ್ಲಿ ಗೆದ್ದು ಬಂದು ಭಾರತದ ಪ್ರಧಾನ ಮಂತ್ರಿಯಾಗಿ ಮುಂದುವರಿಯುತ್ತಾರೆ’’ ಎಂದು ನೀತಿಶ್ ಕುಮಾರ್ ಅವರು ಭವಿಷ್ಯ ನುಡಿದಿದ್ದಾರೆ! ಗೋರಖ್‌ಪುರದ ಯೋಗಿ ಆದಿತ್ಯನಾಥ್ ಪ್ರಧಾನಿಯಾಗಬೇಕೆಂದು ಬಿತ್ತಿ ಪತ್ರಗಳು ಉತ್ತರ ಪ್ರದೇಶದಲ್ಲಿ ಕಾಣಿಸಿಕೊಂಡಿವೆ. ನಿತಿನ್ ಗಡ್ಕರಿ ಕಣಕ್ಕೆ ಸಿದ್ಧರಾಗುತ್ತಿದ್ದಾರೆ. ದೇವೇಂದ್ರ ಫಡ್ನವೀಸ್, ‘‘ಯಾಕೆ ಮರಾಠಿ ಮಾನುಸ್ (ಮಹಾರಾಷ್ಟ್ರದವರು) ಪ್ರಧಾನಿಯಾಗಬಾರದು’’ ಎಂಬ ಪ್ರಶ್ನೆ ಎತ್ತಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯ ಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರು ಭಾಜಪದ ರಾಷ್ಟ್ರೀಯ ಅಧ್ಯಕ್ಷರಾಗಬೇಕೆಂಬ ಮಾತುಗಳೂ ಭಾಜಪದಲ್ಲಿ ಕೇಳಬರುತ್ತಿವೆ. ನಾಗಪುರದಲ್ಲಿ ಚಳಿಗಾಲದಲ್ಲೂ ಮೋಹನ್ ಭಾಗವತ್‌ರಿಗೆ ಮೈ ಬೆವರುವಂತಾಗಿದೆ. ಚುನಾವಣಾ ರೇಸ್ ಕುರಿತು ದೀರ್ಘಾಲೋಚನೆಯಲ್ಲಿ ಅವರು ಮಗ್ನರಾಗಿದ್ದಾರೆ.!

ತೆಲುಗು ಬಿಡ್ಡ ಕೆಸಿಆರ್ ಅವರಿಗೂ ದೇಶದ ಪ್ರಧಾನಿ ಯಾಗಬೇಕೆಂಬ ಮಹತ್ವಾಕಾಂಕ್ಷೆ ಕಾಣಿಸಿಕೊಂಡಿದೆ. ಮಾಯಾವತಿ ಮತ್ತು ಮಮತಾ ಬ್ಯಾನರ್ಜಿ ಅವರು ಸೀನಿಯಾರಿಟಿ ಲಿಸ್ಟ್‌ನಲ್ಲಿ ಮೊದಲಿಗರಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ಪಟ್ಟಾಭಿಷೇಕ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಯಾರಿಗೆ ಅದೃಷ್ಟ ಖುಲಾಯಿಸುತ್ತದೆ ಎಂದು ಕಾದು ನೋಡಬೇಕು. ದೇಶ 2019ರ ಚುನಾವಣೆಗೆ ಅಣಿಯಾಗುತ್ತಿದೆ.

ಭಾರತ ಚುನಾವಣಾ ಆಯೋಗ ಲೋಕಸಭಾ ಚುನಾವಣೆಯ ಕುರಿತು ವಿವರಗಳನ್ನು ಮಾರ್ಚ್ ತಿಂಗಳಲ್ಲಿ ಪ್ರಕಟಿಸಲಿದೆ. ಅರುಣಾಚಲ ಪ್ರದೇಶ, ಆಂಧ್ರ ಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಜಮ್ಮು ಕಾಶ್ಮೀರದಲ್ಲೂ ಚುನಾವಣೆಗಳು ನಡೆಯಬೇಕಾಗಿದೆ. ವರ್ಷದ ಅಂತ್ಯದಲ್ಲಿ ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲೂ ಚುನಾವಣೆಗಳು ನಡೆಯಬೇಕಾಗುತ್ತದೆ. 2019 ಇಸವಿ ಅತ್ಯಂತ ಮಹತ್ವಪೂರ್ಣವಾದದ್ದು ಎಂಬುದರ ಬಗ್ಗೆ ಯಾವ ಸಂಶಯವೇ ಇಲ್ಲ.

ಭಾಜಪದಲ್ಲಿ ಗೊಂದಲ, ಗುದ್ದಾಟ, ತಿಕ್ಕಾಟ ಮತ್ತು ಘರ್ಷಣೆಗಳು ಕಾಣಿಸಿಕೊಳ್ಳುತ್ತಿವೆ. ನರೇಂದ್ರ ಮೋದಿಯವರೇನು ಅಜೇಯರಲ್ಲ, ಸೋಲನ್ನು ಅನುಭವಿಸುವ ಸಮಯ ದೂರವಿಲ್ಲ ಎಂಬುದು ಐದು ರಾಜ್ಯಗಳ ಚುನಾವಣಾ ಫಲಿತಾಂಶಗಳಿಂದ ತಿಳಿಯಬಹುದು. ಆದರೆ ಎಡ, ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ರಾಜಕೀಯ ಪಕ್ಷಗಳು ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬುದು ಇಂದಿನ ಅಗತ್ಯ. ಜಾತ್ಯತೀತತೆ ಅಥವಾ ಧರ್ಮ ನಿರಪೇಕ್ಷತೆ ಅಥವಾ ಸೆಕ್ಯುಲರಿಸಂ ಎಂಬ ಪರೀಕ್ಷೆಗೆ ಒಳಪಡಿಸಿದರೆ ದೇಶದಲ್ಲಿ ಸದ್ಯಕ್ಕೆ ಎಡ ಪಕ್ಷಗಳು ಮಾತ್ರವೇ ಪಾಸ್ ಮಾಡಬಲ್ಲವು. ಕಾಂಗ್ರೆಸ್ ಮತ್ತು ಇನ್ನಿತರ ರಾಜಕೀಯ ಪ್ರತಿಪಕ್ಷಗಳ ಸ್ಥಾನವೇನು? ಅಥವಾ ಸೆಕ್ಯುಲರಿಸಂ ವಿಚಾರದಲ್ಲಿ ಅವುಗಳ ನಿಲುವೇನು? ಕಷ್ಟವಾದ ಪ್ರಶ್ನೆಯೇ. ಹಿಂದುತ್ವ, ಕೋಮು, ಜಾತಿ ಇಂದು ವೋಟ್ ಬ್ಯಾಂಕ್ ಆಗಿ ಪರಿಣಮಿಸುತ್ತಿವೆ. ಈ ವಿಚಾರಗಳನ್ನು ಚುನಾವಣೆಗಾಗಿ ಭಾಜಪದ ರೀತಿಯೇ ಕಾಂಗ್ರೆಸ್ ಪಕ್ಷವೂ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದು ನಿಸ್ಸಂದೇಹ. ಕಾಂಗ್ರೆಸ್ ಪಕ್ಷದ ಇತ್ತೀಚಿನ ನಡವಳಿಕೆಗಳನ್ನು ಗಮನಿಸಿದಾಗ ಇದು ತಿಳಿಯ ಬರುತ್ತದೆ. ರಾಜಾಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲಿ ಗೆಲುವು ಸಾಧಿಸಲು ಪಕ್ಷ ಅನುಸರಿಸಿದ ಸಾಫ್ಟ್ ಹಿಂದುತ್ವವೇ ಕಾರಣವೆಂದು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ. ಮಾನಸ ಸರೋವರಕ್ಕೆ ತೀರ್ಥಯಾತ್ರೆ ಮಾಡಿದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ತಾನೊಬ್ಬ ಶಿವಭಕ್ತ ಎಂದು ತೋರಿಸಿಕೊಂಡಿದ್ದಾರೆ. ಪುಷ್ಕರದ ಬ್ರಹ್ಮನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವಾಗ ರಾಹುಲ್ ಗಾಂಧಿಯವರು ತನ್ನನ್ನು ಕೌಲ್ ಬ್ರಾಹ್ಮಣ (ಕಾಶ್ಮೀರಿ ಬ್ರಾಹ್ಮಣ) ಮತ್ತು ತಾನು ದತ್ತಾತ್ರೇಯ ಗೋತ್ರಕ್ಕೆ ಸೇರಿದವನು ಎಂದು ಪ್ರಕಟಿಸಿಕೊಂಡರು. ಇವುಗಳನ್ನು ಹೇಳಿಕೊಳ್ಳುವಂತಹ ಆವಶ್ಯಕತೆ ಏನಿತ್ತು? ಇನ್ನು ಶಬರಿಮಲೆ ವಿವಾದದಲ್ಲಿ ಸುಪ್ರೀಂ ಕೋರ್ಟಿನ ತೀರ್ಪನ್ನು ಕಡೆಗಣಿಸಿ ಭಾಜಪದೊಂದಿಗೆ ಕೈ ಜೋಡಿಸಿದೆ ಕಾಂಗ್ರೆಸ್ ಪಕ್ಷ. ಮಿಥ್ಯೆ, ಮೂಢನಂಬಿಕೆ, ಆಚರಣೆಗಳ ಹೆಸರಿನಲ್ಲಿ ಭಾಜಪ ಕೇರಳದಲ್ಲಿ ಜನಗಳನ್ನು ವಿಭಜಿಸಿ, ಗಲಭೆ, ಹಿಂಸಾಚಾರ, ಅಶಾಂತಿಗಳನ್ನು ಉಂಟು ಮಾಡಿ ರಾಜ್ಯದಲ್ಲಿ ರಾಜಕೀಯ ಪ್ರವೇಶ ಮಾಡಲು ಪಿತೂರಿ ಮಾಡುತ್ತಿದೆ. ಇದಕ್ಕೆ ಕಾಂಗ್ರೆಸ್ ಪಕ್ಷದ ಬೆಂಬಲ ಮತ್ತು ನೆರವು ಇದೆ. ಆದ್ದರಿಂದ ಕಾಂಗ್ರೆಸ್ ಹಾಗೂ ಭಾಜಪಗಳ ಮಧ್ಯೆ ಜಾತ್ಯತೀತತೆ ವಿಚಾರದಲ್ಲಿ ಏನು ವ್ಯತ್ಯಾಸವಿದೆ?! ಹಿಂದುತ್ವದಿಂದ ಹಿಂದುತ್ವವನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ. ಸಂಘ ಪರಿವಾರಕ್ಕೆ ನಮ್ಮ ದೇಶದ ಸಂವಿಧಾನದ ಬಗ್ಗೆ ಒಂದಿಷ್ಟೂ ಗೌರವವಿಲ್ಲ. ಆವಶ್ಯಕವಾದರೆ ಹೊಸ ಸಂವಿಧಾನವನ್ನು ರಚಿಸುವ ಬಗ್ಗೆ ಹಲವಾರು ಬಾರಿ ಸಂಘ ಪರಿವಾರ ಉಲ್ಲೇಖಿಸಿದೆ. ಶಬರಿಮಲೆ ವಿಚಾರದಲ್ಲಿ ಭಾಜಪ, ಕಾಂಗ್ರೆಸ್ ಪಕ್ಷಗಳು ಸಮವಾಗಿ ವರ್ತಿಸಿರುತ್ತಿರುವುದು ಅಪಾಯದ ಸಂಕೇತ. ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್‌ಗೆ ತನ್ನದೇ ಆದ ಕೆಲವು ಗುಣಲಕ್ಷಣಗಳು ಇದ್ದವು. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಎದುರಿಸಿದ ಪಕ್ಷ ಕಾಂಗ್ರೆಸ್. ಮೊದಲ ಪ್ರಧಾನಿ ಪಂಡಿತ ನೆಹರೂ ಅವರಿಗೆ ರಶ್ಯಾ ಕ್ರಾಂತ್ರಿಯ ಬಗ್ಗೆ ಅಪಾರ ಗೌರವವಿತ್ತು. ಸಮತಾವಾದದ ಬಗ್ಗೆ ದೇಶದ ಸಂವಿಧಾನದಲ್ಲಿ ಉಲ್ಲೇಖವಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಬೃಹತ್ ಕೈಗಾರಿಕೆಗಳ ಮೂಲಕ ದೇಶವನ್ನು ಕಟ್ಟುವ ಯೋಜನೆ ನೆಹರೂ ಅವರದು. 1950ರಲ್ಲಿ ಕೇಂದ್ರ ಸರಕಾರ ಅಲಿಪ್ತ ನೀತಿ (Non-Alignment) ಪಾಲಿಸಿತು. ಇವುಗಳನ್ನು ನೆಹರೂರವರ ನೀತಿಗಳೆಂದು ಪರಿಗಣಿಸಬಹುದು. ಇವೆಲ್ಲವನ್ನೂ ಇಂದಿನ ಕಾಂಗ್ರೆಸ್ ಪಕ್ಷ ಕೈ ಬಿಟ್ಟಿದೆ. ಅಧಿಕಾರದ ಲಾಲಸೆಯಿಂದ ಕಾಂಗ್ರೆಸ್ ಪಕ್ಷ ಭಾಜಪದ ಮಾದರಿಯಲ್ಲೇ ಮುನ್ನಡೆಯಲು ದಾಪುಗಾಲಿಡುತ್ತಿದೆ. ದೇಶಕ್ಕೆ ರಾಜಕೀಯ ಪರ್ಯಾಯ ಬೇಕು, ಎಡ, ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಪ್ರತಿಪಕ್ಷಗಳ ಹಾಗೂ ಶಕ್ತಿಗಳ ಐಕ್ಯರಂಗದ ಅಗತ್ಯದ ಬಗ್ಗೆ ಚಿಂತನೆ ಮಾಡುವಾಗ ಕಾಂಗ್ರೆಸ್ ಪಕ್ಷದ ಇಂದಿನ ರಾಜಕೀಯವನ್ನು ಮರೆಯಬಾರದು. ಎಡ ಪಕ್ಷಗಳು ಪವರ್ ಬ್ರೋಕರ್‌ಗಳಲ್ಲ!

ಆರ್ಥಿಕ ನೀತಿಗಳ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಭಾಜಪದ ಮಧ್ಯೆ ಯಾವ ವ್ಯತ್ಯಾಸವೂ ಇಲ್ಲ. ಮಾರುಕಟ್ಟೆ ಸುಧಾರಣೆಗಳನ್ನು ಜಾರಿಗೆ ತಂದವರೇ ಕಾಂಗ್ರೆಸ್ ಪಕ್ಷದವರು. ಆರ್ಥಿಕ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ವಿಚಾರದಲ್ಲಿ ಎರಡೂ ಪಕ್ಷಗಳು ಸರಿಸಾಟಿಯಾಗಿವೆ. ಎರಡೂ ಪಕ್ಷಗಳು ಆರ್ಥಿಕ ಸುಧಾರಣೆಗಳಿಗೆ ಸಂಪೂರ್ಣ ಬದ್ಧವಾಗಿವೆ. ದೇಶವನ್ನೇ ಉದ್ದೇಶಿ ಬಂಡವಾಳಿಗರಿಗೆ ಮಾರಲು ಹವಣಿಸುತ್ತಿವೆ. ಇವುಗಳನ್ನೂ ಮರೆಯುವಂತಿಲ್ಲ.

ಐದು ರಾಜ್ಯಗಳ ಚುನಾವಣೆಗಳಲ್ಲಿ ಭಾಜಪದ ಪರಾಭವ - 10 ಮುಖ್ಯ ಕಾರಣಗಳು

1.ರೈತರ ಆಕ್ರೋಶ ರೈತರು ಇಂದು ತೀವ್ರ ಬಿಕ್ಕಟ್ಟಿನಲ್ಲಿದ್ದಾರೆ. 

ಬೆಳೆಗೆ ನ್ಯಾಯ ಬೆಲೆ ಸಿಗುತ್ತಿಲ್ಲ. ಬದುಕು ದುರ್ಬರವಾಗಿದೆ, ಸಾಲದ ಹೊರೆಯಿಂದ ಕಂಗಾಲಾಗಿದ್ದಾರೆ. ಬೇರೆ ದಾರಿ ಕಾಣಿಸದೆ ಸಾವಿರಾರು ಜನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕೇಂದ್ರ ಸರಕಾರ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ.

2.ಅಮಾನ್ಯೀಕರಣ, ಜಿಎಸ್‌ಟಿ

ಸುಮಾರು ನೂರು ಮಂದಿ ಅಮಾಯಕರು ಪ್ರಾಣ ಕಳೆದುಕೊಂಡರು. ಕಪ್ಪುಹಣ ಹೊರ ಬರಲಿಲ್ಲ. ಬದಲಾಗಿ ಕಪ್ಪುಹಣ ಎಲ್ಲವೂ ಬಿಳಿಯಾದವು. ನರೇಂದ್ರ ಮೋದಿ ಹೇಳಿದ ಎಲ್ಲ ಕಾರಣಗಳೂ ಹುಸಿಯಾದವು. ದೇಶದ ಹಣಕಾಸಿನ ಪರಿಸ್ಥಿತಿ ಅಲ್ಲೋಲಕಲ್ಲೋಲವಾಯಿತು. ದೇಶದ ಒಟ್ಟು ಆಂತರಿಕ ಉತ್ಪನ್ನ ಶೇಖಡ 2ರಷ್ಟು ಕೆಳಮುಖವಾಯಿತು. ಅಮಾನ್ಯೀಕರಣ, ಜಿಎಸ್‌ಟಿ ಎರಡೂ ಮೆಗಾ ಪ್ಲಾಪ್ ಶೋ ಆಯಿತು.

3.ಸಣ್ಣ ಮತ್ತು ಮಧ್ಯಮ ಶ್ರೇಣಿಯ ವರ್ತಕರು ಭಾರೀ ನಷ್ಟಕ್ಕೆ ಒಳಗಾದರು.

ಲಕ್ಷಾಂತರ ಮಂದಿ ವ್ಯಾಪಾರಿಗಳು ತಮ್ಮ ಜೀವನೋಪಾಯಗಳನ್ನು ಕಳೆದುಕೊಂಡರು. ಅಂಗಡಿ ಮುಂಗಟ್ಟುಗಳು ಮುಚ್ಚಿಹೋದವು.

4.ನಿರುದ್ಯೋಗ

ಅಮಾನ್ಯೀಕರಣ ಮತ್ತು ಜಿಎಸ್‌ಟಿಯಿಂದ ದೇಶದಲ್ಲಿ ಸುಮಾರು 90 ಲಕ್ಷ ಉದ್ಯೋಗಗಳು ನಾಶವಾದವು. ಅಧಿಕಾರಕ್ಕೆ ಬಂದಾಗ ಮೋದಿಯವರು ವಾರ್ಷಿಕ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಹೊಸ ಉದ್ಯೋಗಗಳ ಬದಲು, ಇದ್ದ ಉದ್ಯೋಗಗಳೂ ಕಳೆದು ಹೋದವು. ನಿರುದ್ಯೋಗ ತಾಂಡವವಾಡುತ್ತಿದ್ದು ಯುವ ಜನರು ನಿರಾಶೆಯ ಅಂಚಿಗೆ ದೂಡಲ್ಪಟ್ಟಿದ್ದಾರೆ. ದೇಶ ಅಗ್ನಿ ಪರ್ವತದ ಮೇಲೆ ಕುಳಿತಿದೆ.

5.ಪ್ರೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನ ಮುಟ್ಟಿದವು.

ಇದರಿಂದಾಗಿ ಎಲ್ಲ ಅಗತ್ಯ ವಸ್ತುಗಳ, ದಿನಸಿ ಪದಾರ್ಥಗಳ ಆಹಾರ ಧಾನ್ಯಗಳ ಬೆಲೆ ಹೆಚ್ಚಿದವು.

6.ಈಡೇರದ ಭರವಸೆಗಳು

ಅಧಿಕಾರಕ್ಕೆ ಬಂದಾಗ ನರೇಂದ್ರ ಮೋದಿಯವರು ಸುಮಾರು 500 ಭರವಸೆಗಳನ್ನು ನೀಡಿದ್ದರು. ದೇಶದಲ್ಲಿ ಹಾಲು ಜೇನು ಹರಿಸುವುದಾಗಿ ವಾಗ್ದಾನ ಮಾಡಿದ್ದರು. ಆದರೆ ನಾಲ್ಕೂವರೆ ವರ್ಷದ ಆಳ್ವಿಕೆಯಲ್ಲಿ ಒಂದೇ ಒಂದು ಭರವಸೆಯನ್ನೂ ಕಾರ್ಯರೂಪಕ್ಕೆ ತರಲಿಲ್ಲ.

7. ಕಾರ್ಮಿಕ ವಿರೋಧಿ ನೀತಿಗಳು

ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ಮತ್ತು ಕಾರ್ಮಿಕರ ಸೇವಾ ಸೌಲಭ್ಯದ ಮೇಲೆ ದಾಳಿ. ತಮ್ಮ ಟ್ರೇಡ್ ಯೂನಿಯನ್ ಹಕ್ಕುಗಳನ್ನು ಕಳೆದುಕೊಂಡ ಕಾರ್ಮಿಕರು ನಿರಂತರ ಹೋರಾಟಕ್ಕೆ ಇಳಿಯಬೇಕಾಯಿತು.

8. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ

ಸಾಮಾಜಿಕ ಕಾರ್ಯಕರ್ತರ ಮೇಲೆ ಹಲ್ಲೆ. ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಗೌರಿ ಲಂಕೇಶ್, ಕಲಬುರ್ಗಿ ಮುಂತಾದವರ ಹತ್ಯೆ. ವಾಕ್ ಸ್ವಾತಂತ್ರ್ಯ ಮತ್ತು ವಿಮರ್ಶೆ ಮಾಡುವ ಹಕ್ಕಿಗೆ ಕಡಿವಾಣ.

9. ಬ್ಯಾಂಕ್ ಮತ್ತು ಹಣಕಾಸಿನ ಸಂಸ್ಥೆಗಳಲ್ಲಿ ಮೋಸ ವಂಚನೆಗಳ ಪ್ರಕರಣಗಳು ವಿಪರೀತವಾಗಿ ಹೆಚ್ಚಿದವು.

ದೇಶಕ್ಕೆ ಸಾವಿರಾರು ಕೋಟಿ ರೂಪಾಯಿಗಳ ನಷ್ಟ. ಕಳೆದ ಐದು ವರ್ಷಗಳಲ್ಲಿ 27 ಜನ ವಂಚಕರು ವಿದೇಶಕ್ಕೆ ಪಲಾಯನ ಮಾಡಿ ಅಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಮೋದಿ ಸರಕಾರ ಅವರ ಮೇಲೆ ಯಾವುದೇ ಕಾನೂನಿನ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸಾಮಾನ್ಯ ಜನರ ಉಳಿತಾಯದ ಹಣಕ್ಕೆ ಯಾವ ಗ್ಯಾರಂಟಿಯೂ ಇಲ್ಲದಂತಾಯಿತು. ಜನರ ಹಣ ಜನರ ಕಲ್ಯಾಣಕ್ಕೆ ಅನ್ನುವುದು ತಿರುಚಿ ಜನರ ಹಣ ಕಾರ್ಪೊರೇ್ ಲೂಟಿಗಾಗಿ ಎಂದಾಯಿತು.

Writer - ನ. ಸುಂದರಮೂರ್ತಿ

contributor

Editor - ನ. ಸುಂದರಮೂರ್ತಿ

contributor

Similar News

ಜಗದಗಲ
ಜಗ ದಗಲ