ದಕ್ಷಿಣ ಧ್ರುವ ತಲುಪಿದ ಮೊಟ್ಟಮೊದಲ ಐಪಿಎಸ್ ಅಧಿಕಾರಿಣಿ ಬಗ್ಗೆ ಗೊತ್ತೇ ?

Update: 2019-01-20 08:00 GMT

ಹೊಸದಿಲ್ಲಿ, ಜ. 20: ಅಪರ್ಣಾ ಕುಮಾರ್ ಅವರು ದಕ್ಷಿಣ ಧ್ರುವ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ ಮೊಟ್ಟಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿದ ಮೊಟ್ಟಮೊದಲ ಇಂಡೋ- ಟಿಬೇಟಿಯನ್ ಗಡಿ ಪೊಲೀಸ್ ಪಡೆ (ಐಟಿಬಿಪಿ) ಅಧಿಕಾರಿ ಎಂಬ ಖ್ಯಾತಿಗೂ ಅವರು ಪಾತ್ರರಾಗಿದ್ದಾರೆ.

ಹಿಮದಲ್ಲಿ 111 ಕಿಲೋಮೀಟರ್ ನಡಿಗೆ ಕೈಗೊಂಡು ಯಶಸ್ವಿಯಾಗಿ ದಕ್ಷಿಣ ಧ್ರುವವನ್ನು ಕುಮಾರ್ ತಲುಪಿದರು. ತಮ್ಮ ಜತೆಗೆ 35 ಕಿಲೋ ತೂಕದ ಸಾಧನವನ್ನು ಕೂಡಾ ಅಪರ್ಣಾ ಒಯ್ದಿದ್ದರು. ಈಗಾಗಲೇ ಇವರು ವಿಶ್ವದ ಆರು ಖಂಡಗಳ ಆರು ಅತ್ಯಂತ ಎತ್ತರದ ಶಿಖರಗಳನ್ನು ಏರಿದ ಸಾಧನೆ ಮಾಡಿದ್ದಾರೆ.

ಜನವರಿ 13ರಂದು ದಕ್ಷಿಣ ಧ್ರುವ ತಲುಪಿದ ಈ ಮಹಿಳೆ ಭಾರತದ ರಾಷ್ಟ್ರಧ್ವಜ ಹಾಗೂ ಐಟಿಬಿಪಿ ಧ್ವಜವನ್ನು ಅಲ್ಲಿ ಹಾರಿಸಿದರು. ಯಶಸ್ವಿ ಯಾತ್ರೆ ಪೂರೈಸಿ ಬಂದ ಅಪರ್ಣಾ ಅವರನ್ನು ಐಟಿಬಿಪಿ ಅಧಿಕಾರಿಗಳು ಶನಿವಾರ ಹೊಸದಿಲ್ಲಿಯ ಇಂದಿರಾಗಾಂಧಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಕೂಡಾ ಇವರ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

2002ನೇ ಬ್ಯಾಚ್ ಉತ್ತರ ಪ್ರದೇಶ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ಅಪರ್ಣಾ, ಡೆಹ್ರಾಡೂನ್‌ನಲ್ಲಿರುವ ಐಟಿಬಿಪಿ ಉತ್ತರ ಗಡಿ ಕೇಂದ್ರ ಕಚೇರಿಯ ಡಿಐಜಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News