ಹಿಮಾಚಲ ಪ್ರದೇಶ: ಸರಕಾರಿ ಉದ್ಯೋಗದಲ್ಲಿ ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿಗೆ ನಿರ್ಧಾರ

Update: 2019-01-20 12:44 GMT

ಶಿಮ್ಲ, ಜ.20: ಸಾಮಾನ್ಯ ವರ್ಗದ (ಮೇಲ್ಜಾತಿಯ) ಬಡವರಿಗೆ ಸರಕಾರಿ ಉದ್ಯೋಗದಲ್ಲಿ ಶೇ.10 ಮೀಸಲಾತಿ ಒದಗಿಸಲು ಹಿಮಾಚಲ ಪ್ರದೇಶದ ಸಚಿವ ಸಂಪುಟ ಶನಿವಾರ ನಿರ್ಧರಿಸಿದೆ.

ಪ್ರಥಮ, ದ್ವಿತೀಯ, ತೃತೀಯ ಮತ್ತು ನಾಲ್ಕನೇ ದರ್ಜೆಯ ಉದ್ಯೋಗಗಳಿಗೆ ನೇಮಕಾತಿ ನಡೆಸುವಾಗ ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ಒದಗಿಸಲು ನಿರ್ಧರಿಸಲಾಗಿದೆ. ಅಲ್ಲದೆ ಲೈಂಗಿಕ ದೌರ್ಜನ್ಯ ಮತ್ತಿತರ ದುಷ್ಕೃತ್ಯದ ಸಂತ್ರಸ್ತ ಮಹಿಳೆಯರಿಗೆ , ಅಪರಾಧದ ಗಂಭೀರತೆಯನ್ನು ಆಧರಿಸಿ 2 ಲಕ್ಷ ರೂ.ಯಿಂದ 10 ಲಕ್ಷ ರೂ.ವರೆಗಿನ ಆರ್ಥಿಕ ನೆರವು ಒದಗಿಸುವ ಯೋಜನೆಯನ್ನು ಜಾರಿಗೆ ತರಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳಾ ಸಂತ್ರಸ್ತರ ಪರಿಹಾರ ನಿಧಿಯಡಿ ನೀಡಲಾಗುವ ಪರಿಹಾರ ಮೊತ್ತವನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಜಿಲ್ಲಾ ಕಾನೂನು ಪ್ರಾಧಿಕಾರ ನಿರ್ಧರಿಸಲಿದೆ. ಅಲ್ಲದೆ ಶಿಮ್ಲ ಜಿಲ್ಲೆಯ ಕೊಟ್‌ಖಾಯ್ ಉತ್ಸವ, ಸೋಲನ್ ಜಿಲ್ಲೆಯ ಮಾತಾ ಮಾನಸದೇವಿ ಮೇಳ ಹಾಗೂ ಮಂಡಿ ಜಿಲ್ಲೆಯ ಲೋಹ್ರಿ ಮೇಳವನ್ನು ಜಿಲ್ಲಾ ಮಟ್ಟದ ಉತ್ಸವಗಳೆಂದು ಘೋಷಿಸಲೂ ಸಭೆಯಲ್ಲಿ ನಿರ್ಧರಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News