ವ್ಯಾಪಂ ಹಗರಣ: 26 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

Update: 2019-01-20 15:48 GMT

ಭೋಪಾಲ,ಜ.20: ಮಧ್ಯಪ್ರದೇಶದಲ್ಲಿಯ ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶನಿವಾರ 26 ಜನರ ವಿರುದ್ಧ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಿದೆ.

ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ(ವ್ಯಾಪಂ)ಯು ನಡೆಸಿದ್ದ ವಿವಿಧ ಪ್ರವೇಶ ಮತ್ತು ನೇಮಕಾತಿ ಪರೀಕ್ಷೇಗಳಲ್ಲಿ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

ಮಧ್ಯಪ್ರದೇಶದ ಮಾಜಿ ಸಚಿವ ಲಕ್ಷ್ಮೀಕಾಂತ ಶರ್ಮಾ ಅವರು ಪ್ರಕರಣದಲ್ಲಿ ಭಾಗಿಯಾಗಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರ ಲಭಿಸಿಲ್ಲ ಎಂದು ಸಿಬಿಐ ತಿಳಿಸಿದೆ. ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಅಭ್ಯರ್ಥಿಗಳ ಅಕ್ರಮ ಆಯ್ಕೆಗೆ ಸಂಬಂಧಿಸಿದ ಆರೋಪಗಳಲ್ಲಿ ಯಾವುದೇ ಮಹತ್ವ ತನಗೆ ಕಂಡುಬಂದಿಲ್ಲ ಎಂದೂ ಅದು ಹೇಳಿದೆ.

ಆಯ್ಕೆಪಟ್ಟಿಯಲ್ಲಿನ ಹಲವಾರು ಅಭ್ಯರ್ಥಿಗಳು ಮಾಜಿ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರ ಪತ್ನಿಯ ತವರು ಜಿಲ್ಲೆಯಾದ ಗೊಂಡಿಯಾಕ್ಕೆ ಸೇರಿದವರಾಗಿದ್ದಾರೆ ಎಂದು ಕಾಂಗ್ರೆಸ್ 2014ರಲ್ಲಿ ಆರೋಪಿಸಿತ್ತು. ಮುಖ್ಯಮಂತ್ರಿಗಳ ಆದೇಶದಂತೆ ಈ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅದು ಹೇಳಿತ್ತು.

ಆರೋಪಿಗಳ ವಿರುದ್ಧ ಫೋರ್ಜರಿ,ಕ್ರಿಮಿನಲ್ ಒಳಸಂಚು ಮತ್ತು ಭ್ರಷಾಚಾರ ತಡೆ ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಆರೋಪಗಳನ್ನು ಹೊರಿಸಲಾಗಿದೆ ಎಂದು ಸಿಬಿನ ವಿಶೇಷ ಅಭಿಯೋಜಕ ಸತೀಶ ದಿನಕರ ತಿಳಿಸಿದರು.

ಹಗರಣದಲ್ಲಿ 1995ರಿಂದ ಎಫ್‌ಐಆರ್‌ಗಳು ದಾಖಲಾಗಿದ್ದವಾದರೂ,ಅಕ್ರಮ ಜಾಲವು ಅಂತಿಮವಾಗಿ 2012ರಲ್ಲಿ ಬೆಳಕಿಗೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News