ಸಿರಿಯ: ಅಮೆರಿಕ ವಾಯುದಾಳಿಗೆ ಮಕ್ಕಳು ಸಹಿತ 6 ನಾಗರಿಕರ ಬಲಿ

Update: 2019-01-20 17:24 GMT

ಬೈರೂತ್,ಜ.19: ಯುದ್ಧಗ್ರಸ್ತ ಪೂರ್ವ ಸಿರಿಯದಲ್ಲಿ ಶಂಕಿತ ಐಸಿಸ್ ಉಗ್ರರ ನೆಲೆಯೊಂದರ ಮೇಲೆ ಅಮೆರಿಕ ನೇತೃತ್ವದಲ್ಲಿ ನಡೆದ ವಾಯುದಾಳಿಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಆರು ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಯುಫ್ರೆಟಿಸ್ ಕಣಿವೆಯ ಗ್ರಾಮವಾದ ಭಾಗೌಝ್‌ನಲ್ಲಿ ಶುಕ್ರವಾರ ವಾಯು ದಾಳಿ ನಡೆದಿದ್ದು, 10 ಮಂದಿ ಐಸಿಸ್ ಉಗ್ರರು ಕೂಡಾ ಸಾವನ್ನಪ್ಪಿದ್ದಾರೆಂದು ‘ಸಿರಿಯನ್ ಆಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್’ ಸಂಸ್ಥೆ ತಿಳಿಸಿದೆ.

ಕಳೆದ ಮೇನಲ್ಲಿ ಮೈತ್ರಿಪಡೆಗಳ ಬೆಂಬಲದೊಂದಿಗೆ ಕುರ್ದಿಶ್ ಬಂಡುಕೋರರ ನೇತೃತ್ವದಲ್ಲಿ ಐಸಿಸ್ ಉಗ್ರರ ವಿರುದ್ಧ ದಾಳಿ ಕಾರ್ಯಾಚರಣೆ ನಡೆಸಿ, ಬಾಗೌಢ್ ಸೇರಿದಂತೆ 15 ಚದರ ಕಿ.ಮೀ. ಪ್ರದೇಶವನ್ನು ವಶಕ್ಕೆ ತೆಗೆದುಕೊಂಡಿತ್ತು.

ಐಸಿಸ್ ಬಂಡುಕೋರರು ಬುಧವಾರ ಉತ್ತರ ಸಿರಿಯದ ನಗರವಾದ ಮನ್‌ ಬಿಜ್ ‌ನಲ್ಲಿ ರೆಸ್ಟಾರೆಂಟೊಂದರಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ ಅಮೆರಿಕನ್ನರು ಸೇರಿದಂತೆ 19 ಮಂದಿಯನ್ನು ಸಾವನ್ನಪ್ಪಿದ ಘಟನೆಯ ಬಳಿಕ, ಅದರ ವಿರುದ್ಧ ಮೈತ್ರಿಪಡೆಗಳು ತಮ್ಮ ದಾಳಿಯನ್ನು ತೀವ್ರಗೊಳಿಸಿವೆಯೆಂದು ಬ್ರಿಟನ್ ಮೂಲದ ‘ಸಿರಿಯನ್ ಆಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್’ ಸಂಘಟನೆ ತಿಳಿಸಿದೆ.

‘‘ಬಂಡುಕೋರರ ವಿರುದ್ಧ ಆಕ್ರಮಣಗಳು ಮುಂದುವರಿದಿವೆ ಹಾಗೂ ಮನ್‌ಬಿಜ್ ಹತ್ಯಾಕಾಂಡ ನಡೆದಾನಂತರ ದಾಳಿ ತೀವ್ರಗೊಂಡಿವೆ’’ ಎಂದು ಸಿರಿಯನ್ ಮಾನವಹಕ್ಕುಗಳ ಆಬ್ಸರ್ವೇಟರಿಯ ವರಿಷ್ಠ ರಾಮಿ ಅಬ್ದುರ್ರಹ್ಮಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News