ವೈಕಂ ಎಂಬ ಮಹಾ ಮಾನವೀಯತೆಯ ನದಿ

Update: 2019-01-21 09:23 GMT

ಲೇಖಕ ಅನಿಸಿಕೊಂಡವರು, ಅದರಲ್ಲೂ ದೊಡ್ಡ ಲೇಖಕ ಅನಿಸಿಕೊಂಡವರು ಸಭೆ, ಸಮಾರಂಭಗಳಲ್ಲಿ, ಸಾಹಿತ್ಯಿಕ ಚರ್ಚೆಗಳಲ್ಲಿ ಭಾಗವಹಿಸುವುದು ಸಾಮಾನ್ಯ ಸಂಗತಿ. ಆದರೆ ಬಶೀರ್ ಅಷ್ಟು ದೊಡ್ಡ ಲೇಖಕರಾಗಿದ್ದರೂ ಯಾವತ್ತೂ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳಲಿಲ್ಲ.

ವೈಕಂ ಮುಹಮ್ಮದ್ ಬಶೀರ್ ಮಲೆಯಾಳಂನ ಮೋಹಕ ಲೇಖಕ. ಮಲೆಯಾಳಂ ಕಥಾಲೋಕಕ್ಕೆ ಬರೆಯುವ ಧಾಟಿ, ವಸ್ತುವೈವಿಧ್ಯ, ಪಾತ್ರಗಳ ನೈಜತೆಯಲ್ಲಿ ಹೊಸತನವನ್ನು ತುಂಬಿದ ಹಾಗೂ ಆ ಮೂಲಕ ಜನರ ಎದೆಗೆ ಹತ್ತಿರವಾದ ವಿಸ್ಮಯ ಸೃಷ್ಟಿಕರ್ತ. ಹಾಗಾಗಿ ವೈಕಂ ಕೇವಲ ಕೇರಳದ ಅವರ ಸಮಕಾಲೀನ ಲೇಖಕರಲ್ಲಿ ಅಥವಾ ಮಲೆಯಾಳಂ ಸಾಹಿತ್ಯದಲ್ಲಷ್ಟೇ ಮುಖ್ಯರಾಗುವುದಿಲ್ಲ. ಯಾವುದೇ ಭಾಷೆಯ ಶ್ರೇಷ್ಠ ಲೇಖಕನ ಸಾಲಿನಲ್ಲಿ ನಿಲ್ಲುವಂಥವರು. ಬದುಕಿದ್ದಾಗಲೇ ದಂತಕತೆಯಾಗಿದ್ದವರು. ಲೇಖಕರಾಗಿ ಸಂತನಂತೆಯೂ, ಅಪಾರ ಜೀವಂತಿಕೆಯಿಂದಲೂ ಬದುಕಿದವರು. ಬಹುಪಾಲು ಬದುಕನ್ನು ಬಡತನದಲ್ಲೇ ಕಳೆದರೂ ಮಹಾನ್ ಆಶಾವಾದಿಯಾಗಿದ್ದವರು. ಅವರ ಲೇಖನಿ ಯಾವತ್ತೂ ಕ್ರೋಧವನ್ನು ಕಕ್ಕಲಿಲ್ಲ. ವೈಭವೀಕರಣದಿಂದ ಸೊರಗಲಿಲ್ಲ. ಅವರೊಬ್ಬ ಅಸಾಧಾರಣ ಮಾನವತಾವಾದಿಯಾಗಿದ್ದುದರಿಂದ ಪ್ರತಿಯೊಬ್ಬರಲ್ಲೂ ಇರಬಹುದಾದ, ಮನುಷ್ಯರಿಗೆ ಬದುಕಲು ಬೇಕಾದ ಗುಣಗಳನ್ನು ಕುರಿತು ಬರೆದರು. ತಮ್ಮ ಪ್ರತಿದಿನದ ಬದುಕಿನ ಅನುಭವ ಮತ್ತು ಸಂದರ್ಭಗಳನ್ನು ಕಥೆಗಳಾಗಿಸುವಷ್ಟು ಕಲಾತ್ಮಕ ಗುಣವನ್ನು ದಕ್ಕಿಸಿಕೊಂಡಿದ್ದ ವೈಕಂ ತಮ್ಮ ಮಾಂತ್ರಿಕ ಸರಳತೆಯಿಂದ ಓದುಗನನ್ನು ಆವರಿಸಿಕೊಳ್ಳುವ ಗುಣವುಳ್ಳವರಾಗಿದ್ದರು.
ಬಶೀರ್ ತಾವು ಹುಟ್ಟಿದ ಮುಸ್ಲಿಂ ಜನಾಂಗದ ಬದುಕನ್ನು, ಅದರೊಳಗಿನ ತಳಮಳಗಳನ್ನು, ನೋವು ನಲಿವುಗಳನ್ನು, ರೂಢಿ ಸಂಪ್ರದಾಯಗಳನ್ನು ನಿಷ್ಪಕ್ಷಪಾತವಾಗಿ, ಅಷ್ಟೇ ತಮಾಷೆಯಾಗಿ, ಆದರೆ ಗಂಭೀರ ಆಲೋಚನೆಗೆ ಹಚ್ಚುವಂತೆ ಚಿತ್ರಿಸಿರುವುದು ಅವರ ಬರವಣಿಗೆಗಳ ವಿಶೇಷ. ‘ಬಾಲ್ಯಕಾಲ ಸಖಿ’, ‘ಪಾತುಮ್ಮನ ಆಡು’, ‘ನನ್ನಜ್ಜನಿಗೊಂದು ಆನೆಯಿತ್ತು’ ಎಂಬ ಪುಟ್ಟ ಕಾದಂಬರಿಗಳು ಇಂದಿಗೂ ಉಳಿಸಿಕೊಂಡಿರುವ ಜನಪ್ರಿಯತೆ ಇದಕ್ಕೆ ಸಾಕ್ಷಿಯಾಗಿದೆ.
ಲೇಖಕ ಅನಿಸಿಕೊಂಡವರು, ಅದರಲ್ಲೂ ದೊಡ್ಡ ಲೇಖಕ ಅನಿಸಿಕೊಂಡವರು ಸಭೆ, ಸಮಾರಂಭಗಳಲ್ಲಿ, ಸಾಹಿತ್ಯಿಕ ಚರ್ಚೆಗಳಲ್ಲಿ ಭಾಗವಹಿಸುವುದು ಸಾಮಾನ್ಯ ಸಂಗತಿ. ಆದರೆ ಬಶೀರ್ ಅಷ್ಟು ದೊಡ್ಡ ಲೇಖಕರಾಗಿದ್ದರೂ ಯಾವತ್ತೂ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳಲಿಲ್ಲ.. ಅಸಾಮಾನ್ಯ ಮಾತುಗಾರರಾಗಿದ್ದ ಅವರು ಸಾರ್ವಜನಿಕವಾಗಿ ಮಾತನಾಡಲು ನಾಚಿಕೊಂಡುಬಿಡುತ್ತಿದ್ದರು. ಕೇರಳದ ವೈಕಂ ಬಳಿಯ ‘ತಲೆಯೋಲ ಪರಂಬ್’ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಬಶೀರ್ ಆರು ಜನ ಮಕ್ಕಳಲ್ಲಿ ಮೊದಲನೆಯವರು. ಅಪ್ಪ ಮರದ ವ್ಯಾಪಾರಿ. ಹುಟ್ಟಿದೂರಿನಲ್ಲೇ ಪ್ರಾಥಮಿಕ ಶಾಲೆಯನ್ನು ಕಲಿತು ನಂತರ ವೈಕಂನಲ್ಲಿದ್ದ ಇಂಗ್ಲಿಷ್ ಶಾಲೆಯನ್ನು ಸೇರುತ್ತಾರೆ. ಮುಸ್ಲಿಂ ಹುಡುಗನೊಬ್ಬ ಇಂಗ್ಲಿಷ್ ಕಲಿಯುವುದು ಅಂದು ಕಟ್ಟಾ ಮುಸ್ಲಿಂ ಸಂಪ್ರದಾಯದ ವಿರುದ್ಧವಾಗಿತ್ತು. ಇಂಗ್ಲಿಷ್ ಏನಿದ್ದರೂ ‘ಕಾಫಿರರ ಭಾಷೆ’ಯೆಂದು ತಿಳಿದಿದ್ದ ಕಾಲವದು. ಮುಸ್ಲಿಯಾರರೊಬ್ಬರು ಬಶೀರರಿಗೆ ಮನೆಯಲ್ಲಿಯೇ ಅರೆಬಿಕ್ ಕಲಿಸುತ್ತಾರೆ.
ಅವು ಸ್ವಾತಂತ್ರ ಹೋರಾಟದ ದಿನಗಳಾಗಿದ್ದವು. ಹುಡುಗ ಬಶೀರನಿಗೆ ಮಹಾತ್ಮಾಗಾಂಧಿ, ನೆಹರೂ, ಮೌಲಾನಾ ಅಬುಲ್ ಕಲಾಂ ಆಝಾದ್ ಮುಂತಾದವರ ಹೆಸರು ಕೇಳಿದರೆ ರೋಮಾಂಚನವಾಗುತ್ತಿತ್ತು. 1924ರ ಮಾರ್ಚ್‌ನಲ್ಲಿ ಗಾಂಧಿ ವೈಕಂಗೆ ಭೇಟಿ ನೀಡಿ, ಅಲ್ಲಿನ ದಲಿತರಿಗೆ, ಹಿಂದುಳಿದವರಿಗೆ ದೇವಸ್ಥಾನಗಳಿಗೆ ಪ್ರವೇಶ ನೀಡಬೇಕೆಂದು ಒತ್ತಾಯಿಸುತ್ತಾರೆ. ಇದರಿಂದ ಪ್ರಭಾವಿತರಾದ ಹುಡುಗ ಬಶೀರ್ ಐದನೆಯ ಕ್ಲಾಸಿಗೇ ಓದಿಗೆ ತಿಲಾಂಜಲಿಯಿಟ್ಟು, ಒಂದು ರಾತ್ರಿ ಮನೆಬಿಟ್ಟು ಹೋಗುವುದರ ಮೂಲಕ ರಾಷ್ಟ್ರವ್ಯಾಪಿ ಹತ್ತಿ ಉರಿಯುತ್ತಿದ್ದ ಸ್ವಾತಂತ್ರ ಚಳವಳಿಗೆ ಧುಮುಕುತ್ತಾರೆ.
ಉಪ್ಪಿನ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಬಶೀರ್ ಜೈಲಿಗೆ ಹೋಗಬೇಕಾಗುತ್ತದೆ. ಕಣ್ಣಾನೂರಿನ ಸೆಂಟ್ರಲ್ ಜೈಲಿನಲ್ಲಿ ಒದೆತ ತಿಂದು ಹೊರಬಂದಾಗ ಅವರಿಗೆ ಕೆಲಕಾಲ ಗಾಂಧಿಯ ಅಹಿಂಸೆಯಲ್ಲಿ ನಂಬಿಕೆ ಹೊರಟುಹೋಗಿ ಕೆಂಪು ಅಕ್ಷರದ ಭೂಗತ ಪತ್ರಿಕೆಯೊಂದಕ್ಕೆ ಬರೆಯತೊಡಗುತ್ತಾರೆ. ಮತ್ತೆ ಪೊಲೀಸರು ಹುಡುಕಾಡತೊಡಗಿದಾಗ ರೈಲು ಹತ್ತಿ ಉತ್ತರ ಭಾರತಕ್ಕೆ ಹೊರಟುಹೋಗುತ್ತಾರೆ. ಅಲ್ಲಿ ಹಿಮಾಲಯದಲ್ಲಿ ಸಂತರ ಜೊತೆಯಲ್ಲಿ, ನಗ್ನ ಸನ್ಯಾಸಿಗಳ ಜೊತೆಯಲ್ಲಿ, ಹುಚ್ಚರ ಜೊತೆಯಲ್ಲಿ, ಭಂಗಿ ಬಾಬಾರ ಸನ್ನಿಧಿಯಲ್ಲಿ, ಸೂಫಿ ಸಂತರ ದರ್ಗಾಗಳಲ್ಲಿ ದೇವರನ್ನು ಧ್ಯಾನಿಸುತ್ತಾರೆ.
ಬಶೀರ್ ಬದುಕಲ್ಲಿ ತುಂಬಾ ಸುತ್ತಿದರು. ಸುಮಾರು ಏಳು ವರ್ಷಗಳ ಕಾಲ ದೇಶದಗಲಕ್ಕೂ ಅಲೆದರು. ಒಮ್ಮೆ ಕರ್ನಾಟಕದ ತುಮಕೂರಿಗೂ ಬಂದಿದ್ದರು ಎಂಬುದು ಅವರ ‘ದೆವ್ವ’ಎಂಬ ಕಥೆಯಿಂದ ತಿಳಿಯುತ್ತದೆ. ಪೊಲೀಸರ ಕಾಟದಿಂದ ತಪ್ಪಿಸಿಕೊಳ್ಳಲು ಅವರು ಊರಿಂದ ಊರಿಗೆ ಹೋಗುತ್ತಿದ್ದರು. ಆಗ ಅವರು ಹಾಕದ ವೇಷಗಳಿಲ್ಲ, ಮಾಡದ ಕೆಲಸಗಳಿಲ್ಲ. ಹೊಟೇಲ್ ಸಪ್ಲೈಯರ್, ಚಹಾ ಅಂಗಡಿಯ ಯಜಮಾನ, ಹಿಂದೂ ಭಿಕ್ಷುಕ, ಮಂತ್ರಗಾರನ ಸಹಾಯಕ, ಮನೆಪಾಠದ ಮೇಷ್ಟ್ರು, ಆಯುರ್ವೇದಿಕ್ ಅಂಗಡಿಯಲ್ಲಿ ಔಷಧಿಗಳ ಬೇರುಗಳನ್ನು ಅರೆಯುವವನು, ಪ್ರೂಫ್ ರೀಡರ್...


ಬಶೀರ್‌ಗೆ ಒಮ್ಮೆ ಪ್ರವಾದಿಯ ನಾಡಾದ ಅರೇಬಿಯಾವನ್ನು ನೋಡುವ ಮನಸಾಗಿ ಬಾಂಬೆಯಿಂದ ಹಡಗು ಹತ್ತಿ ಜೆದ್ದಾ ಎಂಬ ಮರಳುಗಾಡಿನ ಪಟ್ಟಣವನ್ನು ತಲುಪಿದರು. ಅಲ್ಲಿ ಸುಡುಬಿಸಿಲಿನಲ್ಲಿ, ಮರಳಿನಲ್ಲಿ ನಡೆಯುತ್ತಿರುವಾಗ ಅವರಿಗೆ ಹಿಂದೂ ನಗ್ನ ಸನ್ಯಾಸಿಗಳ ಜೊತೆಯಲ್ಲಿ ನಗ್ನನಾಗಿ ‘ಅಹಂ ಬ್ರಹ್ಮಾಸ್ಮಿ’ ಅಂತ ಜಪಿಸಿಕೊಂಡು, ಸೂಫಿಸಂತರ ಜೊತೆ ‘ಅನಲ್‌ಹಕ್’ ಎಂದು ನರ್ತಿಸುತ್ತಾ ನಡೆಯುತ್ತಿರುವಂತೆ ಅನಿಸುತ್ತಿತ್ತಂತೆ.
 ಆ ದಿನಗಳಲ್ಲಿ ಅವರು ಒಂದು ಹೊತ್ತಿನ ಊಟಕ್ಕೂ ಪಟ್ಟ ಪಡಿಪಾಟಲುಗಳು, ಅನುಭವಿಸಿದ ನೋವು, ಅವಮಾನಗಳು, ಸಂಜೆಯಾಗುತ್ತಿದ್ದಂತೆ ಒಂದು ಸೂರಿಗಾಗಿ ಪರಿತಪಿಸುತ್ತಿದ್ದ ಆತಂಕದ ಕ್ಷಣಗಳು, ಕಂಡ ಲೆಕ್ಕವಿರದಷ್ಟು ಮಂದಿ, ವಿಚಿತ್ರ ಘಟನೆಗಳು ಅವರ ಬರವಣಿಗೆಯ ಮೇಲೆ ಅಪಾರ ಪ್ರಭಾವ ಬೀರಿದವು.
ಹೀಗೆ ಎಲ್ಲೆಲ್ಲೋ ಸುತ್ತಿ ಕೊನೆಗೆ ಮನೆಗೆ ಹಿಂದಿರುಗಿದಾಗ, ಅವರ ಅಪ್ಪ ಮರದ ವ್ಯಾಪಾರದಲ್ಲಿ ಪೂರಾ ದಿವಾಳಿಯೆದ್ದು ಹೋಗಿ, ಇಡೀ ಸಂಸಾರ ಬಡತನದ ಬಿಸಿಯಲ್ಲಿ ಬೇಯುತ್ತಿತ್ತು. ಮನೆಯ ಹಿರಿಯ ಮಗನಾಗಿ ಸಂಸಾರ ನಿಭಾಯಿಸಲು ಬಶೀರ್ ಎರ್ನಾಕುಲಂ, ವೈಕಂ ಮುಂತಾದಲ್ಲಿ ಕೈಗೆ ಸಿಕ್ಕ ಕೆಲಸಗಳನ್ನು ಮಾಡಿ, ಅವಾವುವೂ ಸರಿಕಾಣದೆ ‘ಜಯಕೇಸರಿ’ ಎಂಬ ಪತ್ರಿಕೆಗೆ ಕಥೆಗಳನ್ನು ಬರೆಯಲು ಪಾರಂಭಿಸುತ್ತಾರೆ. ಕಥೆಗಳ ಜೊತೆಗೆ ಅನೇಕ ಲೇಖನಗಳನ್ನೂ ಬರೆಯುತ್ತಾರೆ. ಅವುಗಳಲ್ಲಿನ ಟ್ರ್ಯಾವಂಕೋರ್ ದಿವಾನನ ಪ್ರಜಾಪ್ರಭುತ್ವ ವಿರೋಧಿ ಧೋರಣೆಗಳನ್ನು ಟೀಕಿಸಿದ್ದರ ಪರಿಣಾಮವಾಗಿ ಮತ್ತೆ ಪೊಲೀಸರ ಕಾಟ ಶುರುವಾಗುತ್ತದೆ.
ಬಡತನ ಬಶೀರರ ಬರೆಯುವ ತುಡಿತವನ್ನು ಕಡಿಮೆ ಮಾಡಲಿಲ್ಲ. ಬರೆಯಲು ಪೆನ್ನು, ಪೇಪರುಗಳಿಲ್ಲದೆ ಅವುಗಳಿಗಾಗಿ ಅಂಗಾಲಚುತ್ತಿದ್ದುದೂ ಇದೆ. ಅವರು ಈ ಬಗ್ಗೆ ಹೇಳಿಕೊಳ್ಳುತ್ತಾರೆ :
‘ನಾನು ಬರೆಯುತ್ತಿರುವ ಈ ಇಂಕು ಬೇರೊಬ್ಬರಿಂದ ಕೇಳಿ ಪಡೆದದ್ದು. ಅದೇರೀತಿ ಕಾಗದ ಮತ್ತು ಕವರ್ ಕೂಡಾ. ನನಗೆ ಹಣದ ಅಗತ್ಯವಿದೆ. ಆದ್ದರಿಂದ ನೀವು ಏನಾದರೂ ಸಹಾಯ ಮಾಡಿ, ಅಂತ ಸುಮಾರು ಸಂಪಾದಕರುಗಳಿಗೆ ಬರೆದೆ. ಆದರೆ ಅವರಿಂದ ಯಾವ ಸಹಾಯವೂ ಸಿಗಲಿಲ್ಲ. ನನ್ನ ಕಷ್ಟ ಇದ್ದದ್ದು ಕಥೆಗಳನ್ನು ಬರೆಯುವುದರಲ್ಲಿ ಅಲ್ಲ, ಅವುಗಳನ್ನು ಸಂಪಾದಕರುಗಳಿಗೆ ಕಳಿಸಲು ಬೇಕಾಗಿದ್ದ ನಾಲ್ಕು ಪೈಸೆ ಕಾಸಿಗಾಗಿ...’
 ಆ ನಂತರ ಅವರೇ ‘ಪೌರನಾದಂ’ ಎಂಬ ಪತ್ರಿಕೆಯೊಂದನ್ನು ಪ್ರಾರಂಭಿಸುತ್ತಾರೆ. ಅದರಲ್ಲಿ ಬರವಣಿಗೆಗಳು ಮತ್ತೆ ಪ್ರಭುತ್ವನ್ನು ಕೆಣಕುತ್ತವೆ. ಪತ್ರಿಕೆಯನ್ನು ಮುಚ್ಚುವಂತೆ ಹಾಗೂ ಬಶೀರರಿಗಾಗಿ ವಾರಂಟ್ ಹೊರಡಿಸಲಾಗುತ್ತದೆ. ಆಗ ಕಮ್ಯುನಿಸ್ಟ್ ಪಾರ್ಟಿಯ ಮುಖಂಡನ ಮನೆಯೊಂದರಲ್ಲಿ ತಲೆಮರೆಸಿಕೊಳ್ಳುತ್ತಾರೆ. ಅದಾದ ಸ್ವಲ್ಪ ದಿನಕ್ಕೆ ಮತ್ತೆ ಬಂಧಿಸಲ್ಪಡುತ್ತಾರೆ. ಜೈಲಿನಿಂದ ಹೊರಬಂದ ಮೇಲೆ ಬಶೀರ್ ಮದ್ರಾಸಿನಲ್ಲಿದ್ದುಕೊಂಡು ‘ಜಯಕೇರಳಂ’ ಪತ್ರಿಕೆಗೆ ಬರೆಯುತ್ತಾರೆ. ನಂತರ ಎರ್ನಾಕುಲಂಗೆ ವಾಪಸ್ಸಾಗುತ್ತಾರೆ.. ಅಲ್ಲಿ ‘ಸರ್ಕಲ್ ಬುಕ್‌ಹೌಸ್’ ಎಂಬ ಹೆಸರಿನ ಪುಸ್ತಕದ ಅಂಗಡಿಯೊಂದನ್ನು ತೆರೆಯುತ್ತಾರೆ. ನಂತರ ಅದರ ಹೆಸರನ್ನು ‘ಬಶೀರ್ ಬುಕ್ ಸ್ಟಾಲ್’ ಎಂಬುದಾಗಿ ಬದಲಾಯಿಸುತ್ತಾರೆ.

 1958ರಲ್ಲಿ ಬಶೀರ್ ತಮ್ಮ ಐವತ್ತನೆಯ ವಯಸ್ಸಿನಲ್ಲಿ ಗೆಳೆಯರ ಒತ್ತಾಯಕ್ಕೆ ಮಣಿದು ಫಾತಿಮಾಬೀಬಿಯನ್ನು ಮದುವೆಯಾದರು. 1962ರಲ್ಲಿ ತಮ್ಮ ವಾಸವನ್ನು ಬೇಪೂರ್‌ಗೆ ಬದಲಾಯಿಸುತ್ತಾರೆ. ಹೆಂಡತಿಗೆ ಜವಾಬ್ದಾರಿಯುತ ಗಂಡನಾಗಿ, ಮಕ್ಕಳಿಗೆ ಅಕ್ಕರೆಯ ಅಪ್ಪನಾಗಿ, ‘ಬೇಪುರದ ಸುಲ್ತಾನ’ನೆಂದು ಅಲ್ಲಿನ ಜನರ ಪ್ರೀತಿಗೆ ಪಾತ್ರರಾಗಿದ್ದ ಬಶೀರ್ ಜುಲೈ 5, 1994ರಲ್ಲಿ ತೀರಿಕೊಳ್ಳುತ್ತಾರೆ.
ಕಥೆಗಳನ್ನು ಬರೆದು ತಾವೂ ಕಥೆಯಾಗಿ ಹೋದ ಬಶೀರರ ಸಾವು ಒಂದು ಮಹಾಕಥೆಯ ಕೊನೆ ಕೂಡಾ ಆಗಿತ್ತು.
ಬಶೀರ್ ಸುಮಾರು ಮೂವ್ವತ್ತು ವರ್ಷಗಳ ಕಾಲ ಬರೆದರೂ ತುಂಬಾ ಬರೆಯಲಿಲ್ಲ. ಬಶೀರರ ಬದುಕಿನ ನೋಟ ಬಲುಗ್ರಾಹಿಯಾಗಿತ್ತು. ಅಂತೆಯೇ ದಣಿವರಿಯದ ಹುಡುಕಾಟವಾಗಿತ್ತು. ಯಾವುದೇ ರೀತಿಯ ದಬ್ಬಾಳಿಕೆ, ಬೂಟಾಟಿಕೆಗಳೊಂದಿಗೆ ರಾಜಿ ಮಾಡಿಕೊಳ್ಳದ ಅವರ ಮನೋಸ್ಥಿತಿ ಹಾಗೂ ಮೂಢನಂಬಿಕೆಗಳ ವಿರುದ್ಧ ಅವರಿಗಿದ್ದ ನಿಲುವು ಅವರನ್ನು ಬಲುದೊಡ್ಡ ಮಾನವತಾವಾದಿ ಲೇಖಕನನ್ನಾಗಿಸಿತ್ತು.

ಮನುಷ್ಯರ ಬದುಕನ್ನು ನೋಡುವ ನೋಟಕ್ಕೊಂದು ಹೊಸತನವನ್ನು ತಂದು, ಸಾಮಾಜಿಕ ಸ್ಥಿಗತಿಗಳನ್ನೂ, ರೂಢಿ ಸಂಪ್ರದಾಯಗಳನ್ನೂ, ಸಂಸ್ಕೃತಮಯ ಮೂಲಭೂತವಾದಿಗಳ ಹಿಡಿತದಿಂದ ಸಾಮಾನ್ಯ ಬದುಕಿನತ್ತ ಎಳೆದು ತಂದ ಬಶೀರರ ಬರಹಗಳು ನಮ್ಮ ಸಮಕಾಲೀನ ಭಾರತದ ಬದುಕಿಗೊಂದು ಕನ್ನಡಿಯಿದ್ದಂತೆ.

Writer - ಎಸ್. ಗಂಗಾಧರಯ್ಯ

contributor

Editor - ಎಸ್. ಗಂಗಾಧರಯ್ಯ

contributor

Similar News

ಜಗದಗಲ
ಜಗ ದಗಲ