ಮೊಟ್ಟಮೊದಲ ಬಾರಿಗೆ ಮೋದಿ ಜತೆ ರಾಜಕೀಯ ವೇದಿಕೆ ಹಂಚಿಕೊಳ್ಳಲಿದ್ದಾರೆ ಈ ಸಿಎಂ!

Update: 2019-01-21 03:27 GMT

ಪಾಟ್ನಾ, ಜ.21: ಬಿಹಾರ ರಾಜಕೀಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಪ್ರಚಾರಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆ ವೇದಿಕೆ ಹಂಚಿಕೊಳ್ಳಲಿದ್ದಾರೆ.

ರವಿವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸ್ವತಃ ಸಿಎಂ ಈ ಘೋಷಣೆ ಮಾಡಿದರು. ರಾಜ್ಯದ 40 ಲೋಕಸಭಾ ಕ್ಷೇತ್ರಗಳಲ್ಲಿ ತೇಜಸ್ವಿ ಯಾದವ್ ನೇತೃತ್ವದ ವಿರೋಧ ಪಕ್ಷಗಳಿಂದ ಸವಾಲು ಎದುರಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈಗಾಗಲೇ 20ಕ್ಕೂ ಹೆಚ್ಚು ದೊಡ್ಡ ಹಾಗೂ ಸಣ್ಣ ಪಕ್ಷಗಳು ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿವೆ.

ಉಭಯ ಮುಖಂಡರು ಪಾಟ್ನಾದಲ್ಲಿ ನಡೆಯುವ ಮೆಗಾ ರ್ಯಾಲಿಯಲ್ಲಿ ವೇದಿಕೆ ಹಂಚಿಕೊಳ್ಳಲಿದ್ದು, ಬಿಜೆಪಿ, ಸಂಯುಕ್ತ ಜನತಾದಳ ಮತ್ತು ರಾಮ್‌ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ ಇದರಲ್ಲಿ ಪಾಲ್ಗೊಳ್ಳಲಿವೆ. ಆದರೆ ಈ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಫೆಬ್ರವರಿ 24 ಅಥವಾ ಮಾರ್ಚ್ 3ರಂದು ಈ ರ್ಯಾಲಿ ನಡೆಯಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಸಿಎಂ ಅವರ ಈ ಘೋಷಣೆ ಹಲವರ ಹುಬ್ಬೇರಿಸಿದೆ. ಮೋದಿ ಹಾಗೂ ನಿತೀಶ್ ಹಲವು ಸರ್ಕಾರಿ ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿದ್ದರೂ, ರಾಜಕೀಯ ವೇದಿಕೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲು. ಏಕೆಂದರೆ ಇಬ್ಬರ ನಡುವೆ ರಾಜಕೀಯವಾಗಿ ಸ್ನೇಹಸಂಬಂಧ ಇಲ್ಲ. 2013ರಲ್ಲಿ ಎನ್‌ಡಿಎ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದಾಗ, ನಿತೀಶ್ ಎನ್‌ಡಿಎ ತೆಕ್ಕೆಯಿಂದ ಹೊರಹೋಗಿದ್ದರು.

ಇದಕ್ಕೂ ಮುನ್ನ 2002ರ ಗುಜರಾತ್ ಗಲಭೆ ಬಳಿಕ, ಬಿಹಾರದಲ್ಲಿ ಮೋದಿ ಜತೆ ಪ್ರಚಾರಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬಿಜೆಪಿಯ ಕೇಂದ್ರೀಯ ನಾಯಕತ್ವಕ್ಕೆ ನಿತೀಶ್ ಸ್ಪಷ್ಟಪಡಿಸಿದ್ದರು. ಇದಕ್ಕೆ ಅನುಗುಣವಾಗಿ 2005 ಮತ್ತು 2010ರ ವಿಧಾನಸಭಾ ಚುನಾವಣೆ ಹಾಗೂ 2009ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಸಭೆಯಲ್ಲಿ ನಿತೀಶ್ ಕಾಣಿಸಿಕೊಂಡಿರಲಿಲ್ಲ.

ನಿತೀಶ್ ಅವರು ಲಾಲೂ ನೇತೃತ್ವದ ಮಹಾಮೈತ್ರಿಗೆ ಸೇರಿದ ಬಳಿಕ ಮೋದಿ ಹಾಗೂ ಕುಮಾರ್ ನಡುವೆ ಪ್ರಚಾರದ ವೇಳೆ ವಾಕ್ಸಮರವೇ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News