ಶೀಘ್ರದಲ್ಲಿ ಕಾವೇರಿ-ಗೋದಾವರಿ ನದಿ ಜೋಡಣೆ: ನಿತಿನ್ ಗಡ್ಕರಿ

Update: 2019-01-21 16:24 GMT

ಅಮರಾವತಿ,ಜ.21: ದಕ್ಷಿಣದ ನಾಲ್ಕು ರಾಜ್ಯಗಳ ಜಲಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅತಿಶೀಘ್ರದಲ್ಲಿ ಕಾವೇರಿ ಮತ್ತು ಗೋದಾವರಿ ನದಿಗಳ ಜೋಡಣೆ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಸೋಮವಾರ ತಿಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, 60,000 ಕೋಟಿ ರೂ. ವೆಚ್ಚದಲ್ಲಿ ನಡೆಸಲಾಗುವ ಈ ನದಿ ಜೋಡಣೆ ಯೋಜನೆಯು ಗೋದಾವರಿ ನದಿಯಿಂದ ಸಮುದ್ರಕ್ಕೆ ಹರಿಯುವ 1100ಟಿಎಂಸಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶ ಹೊಂದಿದೆ ಎಂದು ತಿಳಿಸಿದ್ದಾರೆ. ಗೋದಾವರಿ-ಕೃಷ್ಣ-ಪೆನ್ನಾರ್-ಕಾವೇರಿ ನದಿ ಜೋಡಣೆಯ ಸಂಪೂರ್ಣ ಯೋಜನೆ ಸಿದ್ಧವಾಗಿದ್ದು, ಶೀಘ್ರದಲ್ಲಿ ಸಂಪುಟದ ಅನುಮತಿಯನ್ನು ಪಡೆಯಲಾಗುವುದು. ನಂತರ ವಿಶ್ವ ಬ್ಯಾಂಕ್ ಅಥವಾ ಏಶ್ಯನ್ ಡೆವಲಪ್ಮೆಂಟ್ ಬ್ಯಾಂಕ್‌ನಿಂದ ಸಾಲವನ್ನು ಪಡೆಯಲಾಗುವುದು ಎಂದು ಗಡ್ಕರಿ ತಿಳಿಸಿದ್ದಾರೆ.

ಪ್ರತಿ ವರ್ಷ ಗೋದಾವರಿ ನದಿಯ 1,100 ಟಿಎಂಸಿಯಷ್ಟು ನೀರು ಬಂಗಾಳ ಕೊಲ್ಲಿಗೆ ಹರಿದು ಪೋಲಾಗುತ್ತಿದೆ. ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ನೀರಿನ ವಿವಾದವಿದೆ. ಹಾಗಾಗಿ ಗೋದಾವರಿಯ ನೀರನ್ನು ತಮಿಳುನಾಡಿಗೆ ಹರಿಸುವುದರಿಂದ ನಾಲ್ಕು ರಾಜ್ಯಗಳ ನಡುವಿನ ಜಲಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಆಂಧ್ರ ಪ್ರದೇಶ ಮೂಲದ ಇಂಜಿನಿಯರ್ ನೀಡಿರುವ ಸಲಹೆಯಂತೆ ಸ್ಟೀಲ್ ಪೈಪ್‌ಗಳನ್ನು ಅಳವಡಿಸುವ ವಿಶೇಷ ತಂತ್ರಜ್ಞಾನವನ್ನು ಬಳಸಿ ನದಿಗಳ ಜೋಡಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News