ಅಸ್ಸಾಂನಲ್ಲಿ ಮುಂದುವರಿದ ಪ್ರತಿಭಟನೆ: ಸಿಎಂಗೆ ಕಪ್ಪು ಪತಾಕೆ ಪ್ರದರ್ಶನ

Update: 2019-01-21 16:29 GMT

ಗುವಾಹತಿ, ಜ. 21: ಅಸ್ಸಾಂನಲ್ಲಿ ನಾಗರಿಕತ್ವ (ತಿದ್ದುಪಡಿ) ವಿರೋಧಿ ಮಸೂದೆ ವಿರುದ್ಧದ ಪ್ರತಿಭಟನೆ ಮುಂದುವರಿದಿದೆ ಹಾಗೂ ಚಿರಾಗ್ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರ ವಿರುದ್ಧ ಸೋಮವಾರ ಕಪ್ಪು ಪತಾಕೆ ಪ್ರದರ್ಶಿಸಲಾಗಿದೆ.

ಬಿಜಿನಿ ಪಟ್ಟಣದಲ್ಲಿ ಉದ್ಘಾಟಿಸಲಿರುವ ಶಾಲೆಗೆ ಹೆಲಿಪ್ಯಾಡ್‌ನಿಂದ ರಸ್ತೆ ಮೂಲಕ ತೆರಳುವಾಗ ಸೋನೊವಾಲ್ ಅವರ ಬೆಂಗಾವಲು ವಾಹನಕ್ಕೆ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ ಕಾರ್ಯಕರ್ತರು ಕಪ್ಪು ಪತಾಕೆ ಪ್ರದರ್ಶಿಸಿದ್ದಾರೆ. ಅನಂತರ ಪ್ರತಿಭಟನಕಾರರನ್ನು ಬಲವಂತವಾಗಿ ತೆರವುಗೊಳಿಸಲಾಯಿತು. ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮಸೂದೆ ವಿರೋಧಿಸಿ ಹಾಗೂ ಅದನ್ನು ಹಿಂದೆ ತೆಗೆಯುವಂತೆ ಆಗ್ರಹಿಸಿ ಬ್ರಹ್ಮಪುತ್ರಾ ನದಿ ದಂಡೆಯಲ್ಲಿರುವ ಧುಬ್ರಿ ಜಿಲ್ಲೆಯಲ್ಲಿ ವಿವಿಧ ರಾಜಕೀಯ ಹಾಗೂ ಸಾಮಾಜಿಕ ಹಾಗೂ ವಿದ್ಯಾರ್ಥಿ ಸಂಘಟನೆಗಳು ಸಾಮೂಹಿಕ ಪ್ರತಿಭಟನೆ ನಡೆಸಿದವು. ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫಘಾನಿಸ್ತಾನದ ಮುಸ್ಲಿಮೇತರರಿಗೆ ಭಾರತೀಯ ನಾಗರಿಕತ್ವ ನೀಡುವ ಮಸೂದೆಯನ್ನು ಲೋಕಸಭೆಯಲ್ಲಿ ಜನವರಿ 8ರಂದು ಅಂಗೀಕರಿಸಲಾಗಿತ್ತು.

ಈಶಾನ್ಯದ ದೊಡ್ಡ ಸಂಖ್ಯೆಯ ಜನರು ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈಶಾನ್ಯದಲ್ಲಿ ಕಳೆದ ಸುಮಾರು ನಾಲ್ಕು ವಾರಗಳಿಂದ ಪ್ರತಿಭಟನೆ ಮುಂದುವರಿದಿದೆ. ಮಸೂದೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಡಳಿತಾರೂಡ ಬಿಜೆಪಿಗೆ ನೀಡಿದ್ದ ಬೆಂಬಲವನ್ನು ಹಿಂದೆಗೆದ ಅಸ್ಸಾಂ ಗಣ ಪರಿಷದ್ ಮಸೂದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕೃಷಿಕ ಮುಕ್ತಿ ಸಂಗ್ರಾಮ ಸಮಿತಿ ನೇತೃತ್ವದ 70 ಸಂಘಟನೆಗಳಿಗೆ ಬೆಂಬಲ ನೀಡಿದೆ. ಅಸ್ಸಾಂ ಗಣ ಪರಿಷತ್‌ನ ವರಿಷ್ಠ ಅತುಲ್ ಬೋರಾ, ರಾಜ್ಯ ಸರಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಅವರ ಪಕ್ಷದ ಸಹೋದ್ಯೋಗಿ ಕೇಶಬ್ ಮಹಾಂತ ಹಾಗೂ ಶಾಸಕ ರಾಮೇಂದ್ರ ನಾರಾಯಣ ಕಲಿಟಾ ಕೃಷಿಕ ಮುಕ್ತಿ ಸಂಗ್ರಾಮ ಸಮಿತಿ ವರಿಷ್ಠ ಅಖಿಲ್ ಗೊಗೊಯಿ ಹಾಗೂ 70 ಸಂಘಟನೆಗಳ ವರಿಷ್ಠರನ್ನು ರವಿವಾರ ರಾತ್ರಿ ಭೇಟಿಯಾಗಿದ್ದಾರೆ ಹಾಗೂ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News