ಪೋರ್ಟ್ ಬ್ಲೇರ್‌ಗೆ ವರ್ಗಾವಣೆ: ಸುಪ್ರೀಂ ಮೆಟ್ಟಿಲೇರಿದ ಸಿಬಿಐ ಅಧಿಕಾರಿ ಎ.ಕೆ ಬಸ್ಸಿ

Update: 2019-01-21 16:30 GMT

ಹೊಸದಿಲ್ಲಿ,ಜ.21: ತನ್ನನ್ನು ಪೋರ್ಟ್ ಬ್ಲೇರ್‌ಗೆ ವರ್ಗಾವಣೆ ಮಾಡಿರುವುದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿರುವ ಸಿಬಿಐ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಎ.ಕೆ ಬಸ್ಸಿ, ಈ ನಿರ್ಧಾರ ದುರುದ್ದೇಶದಿಂದ ಕೂಡಿದೆ ಮತ್ತು ಸಿಬಿಐ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ವಿರುದ್ಧದ ತನಿಖೆಯಲ್ಲಿ ಪಕ್ಷಪಾತಕ್ಕೆ ಕಾರಣವಾಗಲಿದೆ ಎಂದು ತಿಳಿಸಿದ್ದಾರೆ.

ಅಸ್ತಾನ ವಿರುದ್ಧದ ಪ್ರಕರಣದ ಮುಕ್ತ ಮತ್ತು ನ್ಯಾಯಯುತ ತನಿಖೆ ನಡೆಯಲು ಬಯಸದ ಸಿಬಿಐ ಒಳಗಿನ ಕೆಲವರನ್ನು ಪ್ರತಿನಿಧಿಸುವ ಪ್ರಭಾರ ಸಿಬಿಐ ನಿರ್ದೇಶಕ ಎಂ.ನಾಗೇಶ್ವರ ರಾವ್ “ನನ್ನನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡುತ್ತಿದ್ದಾರೆ” ಎಂದು ರಾಕೇಶ್ ಅಸ್ತಾನಾ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಬಸ್ಸಿ ಆರೋಪಿಸಿದ್ದಾರೆ.

2018ರ ಅಕ್ಟೋಬರ್ 24ರಂದು ರಾವ್, ನನ್ನನ್ನು ಪೋರ್ಟ್ ಬ್ಲೇರ್‌ಗೆ ವರ್ಗಾವಣೆ ಮಾಡಿ ಆದೇಶ ನೀಡಿದ್ದರು. ಮತ್ತೆ ಪುನಃ ಸಿಬಿಐ ನಿದೇರ್ಶಕ ಅಲೋಕ್ ವರ್ಮಾ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ತೀರ್ಪನ್ನು ಕಡೆಗಣಿಸಿ ರಾವ್ ಸೂಚನೆಯಂತೆ ನನ್ನನ್ನು ಅಂಡಮಾನ್ ನಿಕೊಬಾರ್‌ಗೆ ಕಳುಹಿಸಲಾಯಿತು ಎಂದು ಬಸ್ಸಿ ತಿಳಿಸಿದ್ದಾರೆ. ಜನವರಿ 11ರಂದು ತನ್ನ ವರ್ಗಾವಣೆಯ ಬಗ್ಗೆ ಹೊರಡಿಸಲಾದ ಆದೇಶದಲ್ಲಿ, ಸರ್ವೋಚ್ಚ ನ್ಯಾಯಾಲಯವು ವರ್ಮಾರನ್ನು ಅಧಿಕಾರದಲ್ಲಿ ಮರುಸ್ಥಾಪಿಸಲು ನೀಡಿದ ತೀರ್ಪಿನಲ್ಲಿ ನೀಡಿದ್ದ ನಿರ್ದೇಶನಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಬಸ್ಸಿ ಮೇಲ್ಮನವಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News