ಲೋಕಪಾಲದಿಂದ ರಫೇಲ್ ಹಗರಣ ತಡೆಯಬಹುದಿತ್ತು: ಅಣ್ಣಾ ಹಝಾರೆ

Update: 2019-01-21 16:32 GMT

ಹೊಸದಿಲ್ಲಿ,ಜ.21: ಲೋಕಪಾಲ ಜಾರಿಯಲ್ಲಿದ್ದಿದ್ದರೆ ರಫೇಲ್ ಹಗರಣ ನಡೆಯುತ್ತಿರಲಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ಸೋಮವಾರ ತಿಳಿಸಿದ್ದಾರೆ.

ರೈತರ ಬೇಡಿಕೆಗಳು ಮತ್ತು ಭ್ರಷ್ಟಾಚಾರ ವಿರೋಧಿ ಕಾನೂನಿನ ಜಾರಿಯ ಬೇಡಿಕೆ ಈಡೇರಿಸದಿರುವ ಹಿನ್ನೆಲೆಯಲ್ಲಿ ಜನವರಿ 30ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹಝಾರೆ ಘೋಷಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಆದೇಶದ ಹೊರತಾಗಿಯೂ ಲೋಕಾಯುಕ್ತ ಕಾಯ್ದೆ 2013 ಮತ್ತು ಲೋಕಪಾಲ ಜಾರಿ ಮಾಡದಿರುವ ವಿರುದ್ಧ ಕೇಂದ್ರ ಸರಕಾರವನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ದೇಶವು ಸರ್ವಾಧಿಕಾರದತ್ತ ಹೊರಳುತ್ತಿರುವ ಅಪಾಯ ಎದುರಾಗಿದೆ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಎಂಟು ವರ್ಷಗಳಲ್ಲಿ ಲೋಕಪಾಲವನ್ನು ಆಗ್ರಹಿಸಿ ಹಝಾರೆ ನಡೆಸುತ್ತಿರುವ ಮೂರನೇ ಉಪವಾಸ ಸತ್ಯಾಗ್ರಹ ಇದಾಗಿದೆ. ಲೋಕಪಾಲಕ್ಕೆ ಆಗ್ರಹಿಸಿ 2011ರ ಎಪ್ರಿಲ್‌ನಲ್ಲಿ ಮೊದಲ ಬಾರಿಗೆ ಅಣ್ಣಾ ಹಝಾರೆ ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಲೋಕಪಾಲ ಇದ್ದಿದ್ದರೆ ರಫೇಲ್‌ನಂಥ ಹಗರಣಗಳು ನಡೆಯುತ್ತಿರಲಿಲ್ಲ. ರಫೇಲ್‌ಗೆ ಸಂಬಂಧಪಟ್ಟಂತೆ ನನ್ನಲ್ಲಿ ಬಹಳಷ್ಟು ದಾಖಲೆಗಳಿದ್ದು ಅವುಗಳನ್ನು ಎರಡು ದಿನಗಳ ಕಾಲ ಅಧ್ಯಯನ ನಡೆಸಿದ ನಂತರ ಪ್ರತ್ಯೇಕ ಪತ್ರಿಕಾಗೋಷ್ಟಿ ಕರೆಯಲಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಜನವರಿ 30ರಂದು ರಲೆಗನ್ ಸಿದ್ಧಿ ಗ್ರಾಮದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿ ಸರಕಾರ ತನ್ನ ಬೇಡಿಕೆ ಈಡೇರಿಸುವವರೆಗೆ ಮುಂದುವರಿಸುವುದಾಗಿ ಹಝಾರೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News