ನಿಜ ಶರಣನ ಹಾದಿ

Update: 2019-01-21 18:30 GMT

ವಿದ್ಯಾರ್ಥಿಯಾಗಿ ಬಂದು ಮಠಾಧ್ಯಕ್ಷರಾದ ಶಿವಣ್ಣ

ಕರ್ನಾಟಕ ರತ್ನ, ಕಾಯಕ ಯೋಗಿ ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಕಳಕಳಿಯಿರುವ ಸ್ವಾಮೀಜಿ, ಮುಂದಿನ ಪೀಳಿಗೆಯ ಬೆಳವಣಿಗೆಗಾಗಿ ಪಣತೊಟ್ಟವರು, ಸಮಾಜದ ಎಷ್ಟೋ ಗಣ್ಯರ ಬಾಲ್ಯ ಜೀವನಗಳ ಪರಿವರ್ತನೆಗೆ ಕಾರಣರಾದವರು, ತಮ್ಮ ಮಠದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯವನ್ನಿತ್ತು ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬಂದಿದ್ದವರು ಡಾ.ಶಿವಕುಮಾರ ಶ್ರೀಗಳು.

ಶ್ರೀಗಳ ಬಾಲ್ಯ, ಶೆಕ್ಷಣಿಕ ಜೀವನ
ಮಾಗಡಿ ತಾಲೂಕಿನ ವೀರಾಪುರದ ದಂಪತಿ ಹೊನ್ನೇಗೌಡ ಮತ್ತು ಗಂಗಮ್ಮನವರಿಗೆ ಎಪ್ರಿಲ್ 1, 1907ರಲ್ಲಿ 13ನೇ ಮಗನಾಗಿ ಜನಿಸಿದವರೆ ಶಿವಣ್ಣ. ಹೊನ್ನೇಗೌಡ ದಂಪತಿಗೆ ಎಂಟು ಮಂದಿ ಗಂಡು ಮಕ್ಕಳು ಹಾಗೂ ಐದು ಹೆಣ್ಣು ಮಕ್ಕಳು. ಎಲ್ಲರಿಗಿಂತಲೂ ಕಿರಿಯರಾದ ಶಿವಣ್ಣನವರೆಂದರೆ ತಂದೆ ತಾಯಿಗೆ ಅಪಾರ ಪ್ರೀತಿ. ವೀರಾಪುರದಲ್ಲಿಯೇ ಇದ್ದ ಕೂಲಿಮಠದಲ್ಲಿ ಮರಳಿನ ಮೇಲೆ ಅಕ್ಷರ ಬರೆಯುವ ಮೂಲಕ ಶಿವಣ್ಣನ ಶೈಕ್ಷಣಿಕ ಜೀವನ ಆರಂಭವಾಯಿತು.
  ಆನಂತರ ಪ್ರಾಥಮಿಕ ವಿದ್ಯಾಭ್ಯಾಸಕ್ಕಾಗಿ ಪಕ್ಕದಲ್ಲಿಯೇ ಇರುವ ಪಾಲನಹಳ್ಳಿಯ ಶಾಲೆಗೆ ದಾಖಲಾದರು. ತಮ್ಮ ಪ್ರಾಥಮಿಕ ಶಾಲಾ ದಿನಗಳಲ್ಲಿಯೇ ತಾಯಿಯನ್ನು ಕಳೆದುಕೊಡ ಶಿವಣ್ಣ ಆನಂತರ ಬೆಳೆದಿದ್ದು ಅಕ್ಕನ ಆಸರೆಯಲ್ಲಿ. ತುಮಕೂರು ಬಳಿ ಇರುವ ನಾಗವಲ್ಲಿಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿದ ಶಿವಣ್ಣ 1922ರಿಂದ ತುಮಕೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಕಲಿತು 1926ರಲ್ಲಿ ಮೆಟ್ರಿಕ್ಯುಲೇಷನ್ ಪಡೆದಿದ್ದರು. 1927ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀಉದ್ಧಾನ ಶಿವಯೋಗಿಗಳ ಒಡನಾಟ ಆಯಿತು. ಅದೇ ವರ್ಷ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಬೆಂಗಳೂರಿನಲ್ಲಿ ‘ರಾವ್ ಬಹದ್ದೂರ್ ಧರ್ಮಪ್ರವರ್ತಕ ಶ್ರೀ ಗುಬ್ಬಿ ತೋಟದಪ್ಪಧರ್ಮ ಛತ್ರ’ದಲ್ಲಿ ಉಳಿದುಕೊಂಡು, ಸೆಂಟ್ರಲ್ ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಶಿವಣ್ಣನವರು ಶಿಸ್ತುಬದ್ಧವಾದ ಕಟ್ಟು ನಿಟ್ಟಾದ ವಿದ್ಯಾರ್ಥಿ ಜೀವನ ನಡೆಸಿದ್ದರು. ವಿದ್ಯಾಭ್ಯಾಸದೊಂದಿಗೆ ಸಿದ್ದಗಂಗಾ ಮಠದ ಒಡನಾಟವಂತೂ ಮುಂದುವರಿದೇ ಇತ್ತು. ಹಿರಿಯ ಗುರುಗಳಾದ ಶ್ರೀ ಉದ್ದಾನ ಸ್ವಾಮೀಜಿ ಹಾಗೂ ಆಗ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರ ಸಂಗ ಶಿವಣ್ಣನವರಿಗೆ ಒಂದು ಹಿತಾನುಭೂತಿ ನೀಡುತ್ತಿತ್ತು. ಶಿವಣ್ಣನವರು ಎಲ್ಲ ಸಮಯಗಳಲ್ಲೂ ಮಠದ ಹಿತವನ್ನು ಬಯಸುತ್ತಾ ಮಠಕ್ಕೆ ಬಂದು ಹೋಗಿ ಮಾಡುತ್ತಿದ್ದರು. ಎಷ್ಟರ ಮಟ್ಟಿಗೆ ಎಂದರೆ ಇಡೀ ತುಮಕೂರು ಜಿಲ್ಲೆ ಒಮ್ಮೆ ಭೀಕರ ಪ್ಲೇಗ್ ರೋಗದಿಂದ ತತ್ತರಿಸಿತ್ತು. ಹಾಗಿದ್ದಾಗ್ಯೂ ಶಿವಣ್ಣನವರ ಹಾಗೂ ಮಠದ ಒಡನಾಟ ಎಂದಿನಂತೆಯೇ ಇತ್ತು.

ಮಠಾಧಿಕಾರದ ಆರಂಭದ ದಿನಗಳು
ಶ್ರೀಗಳು ಮಠದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ ಸಂದರ್ಭದಲ್ಲಿ ಮಠದ ಆದಾಯ ತುಂಬಾ ಕಡಿಮೆ ಇತ್ತು. ಮಠಕ್ಕೆಂದು ಮೀಸಲಾಗಿದ್ದ ಜಮೀನಿನಲ್ಲಿ ಬೆಳೆ ಬೆಳೆದು ಅದರಿಂದ ಬಂದ ಲಾಭದಿಂದ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟದಾಯಕವಾಗಿತ್ತು. ಮಠದ ಭೂಮಿಯೆಲ್ಲ ಮಳೆಯಾಧಾರಿತವಾದದ್ದು ಮತ್ತು ತೊಡಕಾಗಿ ಅತಿವೃಷ್ಟಿ, ಅನಾವೃಷ್ಟಿಗಳಂತಹ ಸಮಯದಲ್ಲಿ ಬಹಳ ಕಷ್ಟವಾಗುತ್ತಿತ್ತು. ಇದನ್ನೆಲ್ಲಾ ಧೈರ್ಯವಾಗಿ ಮೆಟ್ಟಿ ನಿಂತ ಶ್ರೀಗಳು ಭಕ್ತರ ಮನೆಗೆ ಬಿನ್ನಹವೇ ಮೊದಲಾದ ಆದ್ಯತೆಗಳ ಮೇರೆಗೆ ನಡೆದುಕೊಂಡೇ ಹೋಗಿ ಅಲ್ಲಿಂದ ದವಸ ಧಾನ್ಯಗಳನ್ನು ತಂದಿದ್ದೂ ಉಂಟು. ಕೇವಲ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಷ್ಟೇ ಅಲ್ಲದೆ ನಿತ್ಯ ಮಠದಲ್ಲಿ ನಡೆಯಬೇಕಾದ ಧಾರ್ಮಿಕ ಕಾರ್ಯಗಳು, ಮಠಕ್ಕೆ ಭಕ್ತರ ಹಾಗೂ ಗಣ್ಯರ ಭೇಟಿ, ಮಠದ ಆರ್ಥಿಕ ನಿರ್ವಹಣೆಗಳೂ ಸೇರಿ ಶ್ರೀಗಳಿಗೆ ಬಿಡುವಿಲ್ಲದ ಕಾರ್ಯ ಪಟ್ಟಿಯೇ ಇರುತ್ತಿತ್ತು. ಆರಂಭದ ದಿನಗಳಲ್ಲಿ ‘ಶ್ರೀಗಳಿಂದ ಇವನ್ನೆಲ್ಲ ನಿಭಾಯಿಸಲು ಸಾಧ್ಯವಿಲ್ಲ’ ಎಂಬ ಆಡು ನುಡಿಗಳೂ ಕೇಳಿ ಬಂದಿದ್ದವು. ಇದ್ಯಾವುದಕ್ಕೂ ಧೃತಿಗೆಡದ ಶ್ರೀಗಳು, ಲಿ. ಶ್ರೀ ಅಟವೀ ಸ್ವಾಮೀಜಿ ಹಾಗೂ ಲಿ. ಶ್ರೀ ಉದ್ಧಾನ ಸ್ವಾಮೀಜಿಗಳ ಆಶಯದಂತೆ ಯಾವುದೇ ತೊಡಕುಗಳಾಗದಂತೆ ಮಠದ ಶಿಕ್ಷಣ ಸಂಸ್ಥೆ, ವಿದ್ಯಾರ್ಥಿ ನಿಲಯ, ಪ್ರಸಾದ ನಿಲಯಗಳನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗಿದ್ದರು.
ಅಷ್ಟರಲ್ಲಾಗಲೇ ಸ್ವಾತಂತ್ರ ಕಂಡು ಸ್ವಾಯತ್ತೆಯೆಡೆಗೆ ಅಡಿಯಿಡುತ್ತಿದ್ದ ಭಾರತ ಶಿಕ್ಷಣದ ಮಹತ್ವವನ್ನು ದೇಶದೆಲ್ಲೆಡೆ ಪಸರಿಸಲು ಹಾಗೂ ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಪ್ರಾಮುಖ್ಯತೆಯನ್ನು ತಿಳಿಸಲು ಸರಕಾರವೂ ಸೇರಿದಂತೆ ಅನೇಕ ಮಹನೀಯರು ಮೊದಲಾದರು.
  ಆದರೆ, ಸಿದ್ದಗಂಗೆಯಲ್ಲಿ ಅದಾಗಲೇ ಅವೆಲ್ಲವೂ ಕಾರ್ಯರೂಪಕ್ಕೆ ಬಂದಾಗಿತ್ತು. ಸಾಲದ್ದಕ್ಕೆ ಅಲ್ಲಿ ಕಲಿಯುತ್ತಿದ್ದ ಬಹುಪಾಲು ಎಲ್ಲರೂ ಗ್ರಾಮೀಣ ಮಕ್ಕಳೇ. ಈ ಕಾರ್ಯ ರಾಷ್ಟ್ರ ಮಟ್ಟದಲ್ಲೂ ಬಹಳ ಶ್ಲಾಘನೆಗೆ ಒಳಗಾಗಿ, ಸಿದ್ದಗಂಗೆಯ ಕೀರ್ತಿ ಎಲ್ಲೆಡೆ ಹರಡಲು ಪ್ರಾರಂಭವಾಯಿತು. ಸಿದ್ದಗಂಗೆಯ ಕೀರ್ತಿ ಪಸರಿಸಿದಂತೆ ಅಲ್ಲಿನ ಭಕ್ತ ವರ್ಗವೂ, ವಿದ್ಯಾರ್ಥಿ ಸಂಕುಲವೂ ಕಾಲಕ್ರಮೇಣ ಹೆಚ್ಚುತ್ತಾ ಹೋಯಿತು. ಇದು ಸ್ವಾಮೀಜಿ ಅವರ ದೂರದರ್ಶಿತ್ವಕ್ಕೆ ಒಂದು ಉದಾಹರಣೆ. 1979ರಲ್ಲಿ ಸಂಜೆಯ ಪಾರ್ಥನೆ ವೇಳೆಗೆ ಆಗಮಿಸಿದ್ದ ಅಂದಿನ ಮಾಜಿ ಪ್ರಧಾನ ಮಂತ್ರಿ ಮೊರಾರ್ಜಿ ದೇಸಾಯಿ, ಊಟ ವಸತಿ ಪಡೆದು ಇಷ್ಟೊಂದು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವುದನ್ನು ನಾನು ಇದೇ ಮೊದಲು ನೋಡಿದ್ದು’ ಎಂದು ಉದ್ಗರಿಸಿದ್ದರು.

ಮಠಾಧಿಪತಿಯಾಗಿ ಶಿವಕುಮಾರ ಶ್ರೀ 
   ಶ್ರೀರಕ್ಷೆಯಿಂದ ಉತ್ತಮವಾಗಿ ನಡೆಯುತ್ತಿದ್ದ ಸಿದ್ದಗಂಗಾ ಮಠಕ್ಕೆ 1930 ಜ.16ರಂದು ಬರ ಸಿಡಿಲು ಬಡಿದಂತಹ ಒಂದು ಘಟನೆ ನಡೆಯುತ್ತದೆ. ಉದ್ಧಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾಗುತ್ತಾರೆ. ಆಗ ಶ್ರೀ ಉದ್ದಾನ ಶಿವಯೋಗಿಗಳಲ್ಲಿ ಒಂದು ಚಿಂತೆ ಕಾಡುತ್ತದೆ. ಮುಂದಿನ ಉತ್ತರಾಧಿಕಾರಿ ಯಾರನ್ನು ಮಾಡಬೇಕು ಎಂಬ ವಿಚಾರದಲ್ಲಿ ಕುಳಿತಾಗ ತುಮಕೂರಿನ ದಾವೂದ್ ಸಾಹೇಬರು ಮಠದ ಉತ್ತರಾಧಿಕಾರಿ ಆಯ್ಕೆಗಾಗಿ ಜನಾಭಿಪ್ರಾಯದ ಸಹಿ ಸಂಗ್ರಹದಲ್ಲಿ ತೊಡಗಿಕೊಳ್ಳುತ್ತಾರೆ. ಆಗ ಭಕ್ತರ ವಲಯದಲ್ಲಿ ಶಿವಣ್ಣನವರ ಹೆಸರು ಕೇಳಿ ಬರುತ್ತದೆ. ಅಷ್ಟರಲ್ಲಾಗಲೇ ಶಿವಣ್ಣನವರ ಹಿನ್ನೆಲೆಯ ಅರಿವಿದ್ದ ಉದ್ಧಾನ ಶ್ರೀಗಳು ಯಾರ ಹೇಳಿಕೆಗೂ ಕಾಯದೆ ಶಿವಣ್ಣನೇ ಈ ಮಠದ ಉತ್ತರಾಧಿಕಾರಿ ಎಂದು ಘೋಷಿಸಿ ಮಾರ್ಚ್ 3ರಂದು ಶ್ರೀಮಠದ ಜವಾಬ್ದಾರಿ ವಹಿಸಿಕೊಟ್ಟಿದ್ದರು. ಸನ್ಯಾಸತ್ವ ಸ್ವೀಕಾರದ ನಂತರವೂ ವಿದ್ಯಾಭ್ಯಾಸ ಮುಂದುವರಿಸಿದ ಶಿವಣ್ಣನವರು ಮತ್ತೆ ಬೆಂಗಳೂರಿಗೆ ಬಂದು ಸನ್ಯಾಸತ್ವದ ರೀತಿ ರಿವಾಜುಗಳನ್ನು ಸಂಪ್ರದಾಯಬದ್ಧವಾಗಿ ಪಾಲಿಸುತ್ತ ಶಿಸ್ತುಬದ್ಧ ವಿದ್ಯಾರ್ಥಿಯಾಗಿ ತಮ್ಮ ಒಡನಾಡಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ವಿದ್ಯಾಭ್ಯಾಸ ಮುಗಿದು ಸ್ವಾಮೀಜಿ ಅವರು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಸಿದ್ದಗಂಗಾ ಮಠಕ್ಕೆ ಹಿಂದಿರುಗಿ, ಅಂದಿನಿಂದ ತಮ್ಮ ಪೂರ್ಣ ಸಮಯವನ್ನು ಮಠದ ಏಳಿಗೆಗಾಗಿ ಮೀಸಲಿಡುತ್ತಿದ್ದರು. ಮುಂದೆ 1941ರ ಜ.11ರಂದು ಶ್ರೀ ಉದ್ಧಾನ ಶಿವಯೋಗಿಗಳು ಶಿವೈಕ್ಯರಾದಾಗ ಮಠದ ಸಕಲ ಆಡಳಿತವೂ, ಮಠದ ವಿದ್ಯಾರ್ಥಿಗಳ, ಶಿಕ್ಷಣ ಸಂಸ್ಥೆಗಳ ಯೋಗಕ್ಷೇಮದ ಜವಾಬ್ದಾರಿಯೂ ಶ್ರೀಗಳಿಗೇ ಹಸ್ತಾಂತರವಾಯಿತು.

ಮಠದ ಶಿಕ್ಷಣ ಸಂಸ್ಥೆಗಳು

ಎಣ್ಣೆ-ಬತ್ತಿಗೂ ಕಾಸಿಲ್ಲದ ಕಾಲದಲ್ಲಿ ಪೀಠವೇರಿದ ಶ್ರೀಗಳು ಅಪಾರ ಸಾಧನೆ ಮಾಡಿದ್ದಾರೆ. ಕಾಯಕವೇ ಕೈಲಾಸವೆಂಬ ಬಸವಣ್ಣನವರ ವಚನವನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರು. ಶ್ರೀಮಠದ ಶೈಕ್ಷಣಿಕ ಸಾಧನೆಗಳು ಅವರ ಮಾತಿಗೆ ಪುಷ್ಟಿಕೊಡುವಂತಿದೆ. ಶಿವಕುಮಾರ ಶ್ರೀಗಳು ಅಧಿಕಾರ ವಹಿಸಿಕೊಂಡಾಗ ಕೇವಲ ಒಂದು ಶಿಕ್ಷಣ ಸಂಸ್ಥೆ ಮಾತ್ರ ಇತ್ತು. ತದನಂತರ ಒಂದೊಂದಾಗಿ ಶಿಕ್ಷಣ ಸೇವೆ ಬೆಳೆಯುತ್ತಾ ಪ್ರಸ್ತುತ 130 ವಿದ್ಯಾ ಸಂಸ್ಥೆಗಳು ನಾಡಿನಾದ್ಯಂತ ವ್ಯಾಪಿಸಿವೆ. ಅದರಲ್ಲಿ 56 ಪ್ರೌಢ ಶಾಲೆಗಳು, 20 ಸಾಂಸ್ಕೃತಿಕ ಪಾಠ ಶಾಲೆಗಳು, 14 ಪ್ರಾಥಮಿಕ ಶಾಲೆಗಳು, 8 ಪದವಿ ಪೂರ್ವ ಕಾಲೇಜುಗಳು, 4 ಪದವಿ ಕಾಲೇಜುಗಳು, ಬಿಸಿನೆಸ್ ಮ್ಯಾನೇಜ್‌ಮೆಂಟ್, ಪಾಲಿಟೆಕ್ನಿಕ್, ಫಾರ್ಮಸಿ, ನರ್ಸಿಂಗ್, ಬಿ.ಎಡ್, ಡಿಎಡ್. ಸೇರಿದಂತೆ ಹಲವಾರು ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳು ಸಿದ್ದಗಂಗಾ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಮಠದ ಕೊಡುಗೆ ಸಿಂಹಪಾಲು
ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ ಎಷ್ಟೊ ವಿದ್ಯಾರ್ಥಿಗಳು ರಾಜ್ಯ, ದೇಶ, ವಿದೇಶದ ತುಂಬೆಲ್ಲ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಮಠ ಇಲ್ಲದಿದ್ದರೆ ತುಮಕೂರು ಜಿಲ್ಲೆ ವಿದ್ಯೆಯ ವಿಷಯದಲ್ಲಿ ಬಹು ಹಿಂದೆ ಉಳಿದು ಬಿಡುತ್ತಿದ್ದುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ ಅಲ್ಲಿನ ಭಕ್ತರು. ಶೂನ್ಯ ಸಂಪಾದನೆಗೆ ಅಂತಿಮ ರೂಪವನ್ನಿತ್ತ ಗೂಳೂರ ಸಿದ್ದವೀರಣ್ಣೊಡೆಯನ ಜನ್ಮತಾಣಕ್ಕೆ ಸನಿಹವಾದ ಸಿದ್ದಗಂಗೆಯು ಈಗ ತುಮಕೂರು ಜಿಲ್ಲೆ ವಿದ್ಯಾ ಕ್ಷೇತ್ರದಲ್ಲಿ ಕರ್ನಾಟಕದ ಒಂದು ಪ್ರಮುಖ ಕೇಂದ್ರವಾಗಿರುವುದರ ಹಿಂದೆ ಸಿದ್ಧಗಂಗಾ ಮಠದ ಕೊಡುಗೆ ಸಿಂಹಪಾಲಿನದು.

ಮಠದ ಹಿಂದಿನ ಶ್ರೀಗಳು

600 ವರ್ಷಗಳ ಹಿಂದೆ ಘೋಷಲ ಸಿದ್ದೇಶ್ವರ ಸ್ವಾಮೀಜಿ ಸಿದ್ದಗಂಗಾ ಮಠವನ್ನು ಸ್ಥಾಪಿಸಿದರು. ಇವರ ಪರಂಪರೆಯ ಶಂಕರ ಪ್ರಭು, ಚನ್ನಬಸವೇಶ್ವರ, ತೋಂಟದ ಸಿದ್ದಲಿಂಗೇಶ್ವರ, 18 ಶತಮಾನದಿಂದೀಚೆಗೆ ನಂಜುಡಸ್ವಾಮೀಜಿ, ರುದ್ರಮುನಿಗಳು, ಸಿದ್ದಲಿಂಗ ಸ್ವಾಮೀಜಿ, ಉದ್ದಾನ ಶಿವಯೋಗಿ, ನಂತರ ಶಿವಕುಮಾರ ಶ್ರೀಗಳು ಮಠದ ಹೆಸರನ್ನು ದೇಶದ ಉದ್ದಗಲಕ್ಕೂ ಪರಿಚಯಿಸಿದ್ದರು. ಶ್ರೀಗಳು 1988ರಲ್ಲಿ ಸಿದ್ದಲಿಂಗ ಶ್ರೀಗಳನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಿದ್ದರು. ಬಳಿಕ 2011ರಲ್ಲಿ ಸಿದ್ದಲಿಂಗ ಶ್ರೀಗಳಿಗೆ ಮಠದ ಅಧ್ಯಕ್ಷ ಪದವಿಯನ್ನು ವರ್ಗಾವಣೆ ಮಾಡಿದ್ದರು.

 ಶ್ರೀಮಠಕ್ಕೆ ವಿದ್ಯಾರ್ಥಿಗಳ ಆಯ್ಕೆ ಹೇಗೆ?

ಶ್ರೀಮಠಕ್ಕೆ ವಿದ್ಯಾರ್ಥಿಗಳ ಆಯ್ಕೆಯನ್ನು ಸ್ವತಃ ಶಿವಕುಮಾರ ಶ್ರೀಗಳು ನೇರವಾಗಿ ಮಾಡುತ್ತಿದ್ದರು. ಶ್ರೀಮಠಕ್ಕೆ ಆಯ್ಕೆ ಯಾಗಬೇಕೆಂದರೆ ವಿದ್ಯಾರ್ಥಿಗಳಲ್ಲಿ ಮೊದಲು ವಿದ್ಯೆಯ ಹಸಿವಿರಬೇಕು. ಬಳಿಕ ಕಡುಬಡವರಾಗಿರಬೇಕು. ಇಂತಹ ವಿದ್ಯಾರ್ಥಿಗಳನ್ನು ಶ್ರೀಗಳು ಸಂದರ್ಶನ ಮಾಡಿ ಆಯ್ಕೆ ಮಾಡಿಕೊಂಡು ಲಕ್ಷಾಂತರ ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಳ್ಳಲು ಆಶ್ರಯದಾತರಾಗಿದ್ದರು.

ಮೊದಲು ಶಿಕ್ಷಣ ಸೇವೆ ಪ್ರಾರಂಭಿಸಿದ್ದು ಯಾರು? 

ಅಂದಿನ ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀ ಉದ್ದಾನ ಶಿವಯೋಗಿ ಉಚಿತ ಊಟ, ವಸತಿ ಶಿಕ್ಷಣ ವ್ಯವಸ್ಥೆ ಆರಂಭ ಮಾಡಿದರು. ಮೊದಲ ವರ್ಷದಲ್ಲಿ 53 ವಿದ್ಯಾರ್ಥಿಗಳಿದ್ದರು. ಹಾಗೆಯೇ ದಿನಗಳು ಉರುಳಿದಂತೆ ತ್ರಿವಿಧ ದಾಸೋಹ ಬೆಳೆಯುತ್ತಾ ಶಿವಕುಮಾರ ಶ್ರೀಗಳ ಅಧಿಕಾರದ ಅವಧಿಯಲ್ಲಿ ಸುಮಾರು 10 ಸಾವಿರ ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದರು.

ಮಠಕ್ಕೆ ಸಿದ್ದಗಂಗಾ ಹೆಸರು ಹೇಗೆ ಬಂತು?

ಒಂದು ಕಥೆಯ ಪ್ರಕಾರ ಮಠವನ್ನು ಸ್ಥಾಪಿಸಿದ ಬಳಿಕ ಶ್ರೀ ಘೋಷಲ ಸಿದ್ದೇಶ್ವರರು ಹಲವಾರು ವಿರಕ್ತರೊಂದಿಗೆ ಇಲ್ಲಿನ ಬೆಟ್ಟಕ್ಕೆ ಬಂದು ತಪಸ್ಸಿಗೆ ಕುಳಿತರು. ಅಂದು ರಾತ್ರಿ ವೃದ್ಧ ವಿರಕ್ತರಿಗೆ ಬಾಯಾರಿಕೆ ಆಯಿತು. ಆಗ ಘೋಷಲ ಸಿದ್ದೇಶ್ವರ ಶ್ರೀಗಳು ಒಂದು ಕಲ್ಲು ಬಂಡೆಗೆ ಮೊಣಕಾಲಿಂದ ಗುದ್ದಿದರು. ಆಗ ಅಲ್ಲಿ ನೀರು ಉದ್ಭವವಾಯಿತು. ವಿರಕ್ತರು ನೀರು ಕುಡಿದು ಬಾಯಾರಿಕೆ ನೀಗಿಸಿಕೊಂಡರು. ಬಳಿಕ ಸಿದ್ದೇಶ್ವರರ ಸಂಕಲ್ಪದಿಂದ ಗಂಗೆ ಉದ್ಭವವಾಗಿದ್ದರಿಂದ ‘ಸಿದ್ದಗಂಗಾ’ ಮಠವಾಗಿ ಪ್ರಸಿದ್ಧಿ ಪಡೆಯಿತು.

ದಿನಚರಿಯಲ್ಲಿ ಭಕ್ತರ ಭೇಟಿಗೆ ಆದ್ಯತೆ
ಶ್ರೀಮಠದ ಪ್ರಸಾದ ನಿಲಯದ ಮುಂಭಾಗದ ಮಂಚದ ಮೇಲೆ ಆಸೀನರಾಗುತ್ತಿದ್ದರು. ಭಕ್ತರ ಕಷ್ಟ-ಸುಖಕ್ಕೆ ಸ್ಪಂದಿಸುತ್ತಿದ್ದರು. ಮಧ್ಯಾಹ್ನ ಮೂರು ಗಂಟೆಯ ವರೆಗೆ ನಿರಂತರವಾಗಿ ಇದು ಸಾಗುತ್ತಿತ್ತು. ಮಠಕ್ಕೆ ಭೇಟಿ ಕೊಡುವ ಬಹುತೇಕ ಭಕ್ತರು ರೈತಾಪಿ ವರ್ಗದವರಾದ್ದರಿಂದ ಶ್ರೀಗಳು ಬೇರೆ ಬೇರೆ ಪ್ರದೇಶದಿಂದ ಬಂದ ರೈತರಲ್ಲಿ ಮಳೆ ಬೆಳೆಗಳ ಬಗ್ಗೆ ಪ್ರಶ್ನಿಸುತ್ತಿದ್ದರು. ಇದರ ಬಳಿಕ ಶ್ರೀಗಳು, ನೇರವಾಗಿ ಮಠಕ್ಕೆ ಸಾಗಿ, ಸ್ನಾನ ಪೂಜೆಗಳಲ್ಲಿ ಮಗ್ನರಾಗುತ್ತಿದ್ದರು. ಇದರ ಬಳಿಕ, ಒಂದು ಎಳ್ಳೆಕಾಯಿ ಗಾತ್ರದ ಮುದ್ದೆ, ಸ್ವಲ್ಪವೇ ಅನ್ನ, ಮತ್ತು ತೊಗರಿಬೇಳೆ ಸಾಂಬಾರ್ ಊಟ ಮಾಡುತ್ತಿದ್ದರು. ಸಂಜೆ 4 ಗಂಟೆಯ ನಂತರ ಪುನಃ ಭಕ್ತರ ಭೇಟಿ. ಮಠದಲ್ಲಿ ಉಳಿದುಕೊಂಡು ವಿದ್ಯಾರ್ಜನೆ ಮಾಡುವ ಮಕ್ಕಳ ಕುಶಲೋಪರಿ, ದಾಸೋಹದ ಮಾಹಿತಿ ಸುಮಾರು ರಾತ್ರಿ 9 ಗಂಟೆಯವರೆಗೂ ನಡೆಸುತ್ತಿದ್ದರು.

ಶ್ರೀಗಳ ತತ್ವಗಳು
ಧರ್ಮ ಅಧರ್ಮಗಳಲ್ಲಿನ ನಂಬುಗೆಗಿಂತ, ಅವರವರ ಭಕ್ತಿಗೆ ತಕ್ಕಂತೆ ಅವರವರ ಭಾವಕ್ಕೆ ತಕ್ಕಂತೆ ನಡೆದುಕೊಳ್ಳುವುದನ್ನೇ ಧರ್ಮವಾಗಿಸಿಕೊಂಡಿದ್ದರು. ಸಾಲಕ್ಕೆ ಬಡ್ಡಿ ಎನ್ನುವುದು ಕೃತಜ್ಞತೆಗಾಗಿ ಕೊಡುವ ಧನವಾಗಿರಬೇಕೇ ಹೊರತು, ಬಡವರ ರಕ್ತ ಹೀರುವ ಜಿಗಣೆಯಾಗಬಾರದು. ಒಂದು ಅಗುಳು ಅನ್ನದ ಹಿಂದೆ ಸಾವಿರಾರು ಜನರ ಪರಿಶ್ರಮವಿದೆ. ಆದ್ದರಿಂದ ಪ್ರಸಾದ ಸೇವಿಸುವಾಗ ವ್ಯರ್ಥ ಮಾಡುವುದು ಶ್ರೇಯಸ್ಕರವಲ್ಲ. ದೇಹಕ್ಕೆ ಹಸಿವಾದರೆ ಪ್ರಸಾದದ ಅಗತ್ಯವುಂಟು, ಹಾಗೆಯೇ ಮನಸ್ಸಿನ ಹಸಿವಿಗೆ ಪ್ರಾರ್ಥನೆಯ ಅಗತ್ಯವುಂಟು. ಪ್ರಸಾದ ಸೇವನೆಯಲ್ಲೂ, ಪ್ರಾರ್ಥನೆಯಲ್ಲೂ ಏಕಾಗ್ರತೆ ಅತ್ಯವಶ್ಯಕ ಎಂಬುದೇ ಶ್ರೀಗಳ ಜೀವನ ತತ್ವಾದರ್ಶಗಳಾಗಿದ್ದವು.

ವಿಶ್ರಾಂತಿ
ರಾತ್ರಿ 10:30ಕ್ಕೆ ಸ್ವಾಮೀಜಿ ಮಲಗುವ ವೇಳೆ ಪುಸ್ತಕ ಓದಿ ಮಲಗುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಇದು ಕನಿಷ್ಠ ಅರ್ಧತಾಸಾದರೂ ನಡೆಯುತ್ತದೆ. 11 ಗಂಟೆಗೆ ಮಲಗುತ್ತಾರೆ. ಓದಿನೊಂದಿಗೆ ಆರಂಭವಾಗುವ ಶ್ರೀಗಳ ದಿನಚರಿ, ಓದಿನೊಂದಿಗೆ ಮುಕ್ತಾಯವಾಗುತ್ತದೆ. ಮತ್ತೆ ಏಳುವುದು 3 ಗಂಟೆಗೆ. ಎದ್ದವರು ಕೆಲವು ದಾರ್ಶನಿಕರ ನುಡಿಮುತ್ತುಗಳನ್ನು ಓದಿ ಬಳಿಕ ಪೂಜೆಗೆ ತೆರಳುತ್ತಿದ್ದರು. ದೀರ್ಘಕಾಲದ ಪೂಜೆಯ ಬಳಿಕ ಭಕ್ತರಿಗೆ ಶ್ರೀಗಳು ದರ್ಶನ ನೀಡುತ್ತಿದ್ದರು. ಹಲವು ದಿನಗಳಲ್ಲಿ, ಕೆಲವಾರು ಧಾರ್ಮಿಕ ಸಮಾರಂಭ ಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆಹ್ವಾನಿಸುವ ಭಕ್ತರ ಮನೆಗಳಿಗೂ ಭೇಟಿ ನೀಡುತ್ತಿದ್ದರು. ದೂರದ ಊರುಗಳಿಗೂ ಓಡಾಡುತ್ತಿದ್ದರು. ಪ್ರಸಾದ ಸ್ವೀಕರಿಸುವ ವೇಳೆಯಲ್ಲಿ ಮಾತ್ರ ಬಿಸಿನೀರು ಸೇವಿಸುತ್ತಿದ್ದರು. ಬಾಕಿ ಸಂದರ್ಭದಲ್ಲಿ ಏನನ್ನೂ ಸೇವಿಸುತ್ತಿರಲಿಲ್ಲ. ಕಳೆದ 8 ದಶಕಗಳ ಜೀವನ ಇದೇ ರೀತಿ ಸಾಗಿತ್ತು.

ಶ್ರೀಗಳ ದಿನಚರಿ
ಪ್ರತಿದಿನವೂ ಶ್ರೀಗಳು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಸ್ನಾನಮಾಡಿ, ಪೂಜಾ ಕೋಣೆಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ಧ್ಯಾನದಲ್ಲಿ ತಲ್ಲೀನರಾಗುತ್ತಿದ್ದರು. ನಂತರ ಇಷ್ಟಲಿಂಗ ಪೂಜೆ. ದೂರದಿಂದ ಸ್ವಾಮಿಗಳ ದರ್ಶನಕ್ಕಾಗಿ ಬರುವ ಭಕ್ತರಿಗೆ ತ್ರಿಪುಂಢ ಭಸ್ಮವನ್ನು ಕೊಟ್ಟು ತಾವೂ ಧರಿಸಿ, ಪೂಜೆಯನ್ನು ಮುಗಿಸುತ್ತಿದ್ದರು. ನಂತರ ಆಹಾರ ಸೇವನೆ ಮುಂಜಾನೆ 6:30ಕ್ಕೆ. ಒಂದು ಅಕ್ಕಿ ಇಡ್ಲಿ, ಸ್ವಲ್ಪ ಹೆಸರು ಬೇಳೆ-ತೊವ್ವೆ, ‘ಸಿಹಿ’ ಹಾಗೂ ‘ಖಾರ ಚಟ್ನಿ’ ಸೇವನೆ. ಎರಡು ತುಂಡು ಸೇಬು. ಇದರ ಬಳಿಕ, ‘ಬೇವಿನ ಚಕ್ಕೆ ಕಷಾಯ’ ಸೇವನೆ ಮಾಡುತ್ತಿದ್ದರು.

ಶ್ರೀಗಳ ಪ್ರಾರ್ಥನೆ
ಬೆಳಗ್ಗೆ ಮತ್ತು ಸಂಜೆ ಮಠದ ಆವರಣದಲ್ಲಿ ಮಕ್ಕಳಿಂದ ನಡೆಯುವ ಪ್ರಾರ್ಥನೆಯಲ್ಲಿ ಶ್ರೀಗಳು ಪಾಲ್ಗೊಳ್ಳುತ್ತಿದ್ದರು. ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಹಿಡಿದು ಪದವಿ ಅಭ್ಯಾಸದಲ್ಲಿರುವ ತರುಣರ ವರೆಗೂ ಸಾವಿರಾರು ಮಂದಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದನ್ನು ನೋಡಲು ಕಣ್ಣುಗಳು ಪುಣ್ಯ ಮಾಡಿರಬೇಕು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಮಠದ ಆವರಣದಲ್ಲಿರುವ ವಿದ್ಯಾರ್ಥಿ ನಿಲಯದ ಮುಂದಿರುವ ವಿಶಾಲವಾದ ಬಯಲಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಒಟ್ಟಿಗೆ ಪ್ರಾರ್ಥನೆ ಮಾಡುವುದನ್ನು ನೋಡುವುದೂ ಸಿದ್ದಗಂಗೆಯ ಒಂದು ಪ್ರಮುಖ ಆಕರ್ಷಣೆ. ಪ್ರಾರ್ಥನೆಯ ನಂತರ ಕಚೇರಿಗೆ ಆಗಮಿಸುವ ಶ್ರೀಗಳು ದಿನ ಪತ್ರಿಕೆಗಳನ್ನು ಓದುತ್ತಾರೆ. ಅಲ್ಲಿಗೆ ಬಂದ ಭಕ್ತರಿಗೆ, ದರ್ಶನಾರ್ಥಿಗಳಿಗೆ ದರ್ಶನ ನೀಡುತ್ತಾರೆ. ಮಳೆ-ಬೆಳೆ, ಕುಶಲೋಪರಿ ವಿಚಾರ, ಗಣ್ಯರ ಭೇಟಿ, ಮಠದ ಆಡಳಿತ ಕಡತಗಳ ಪರಿಶೀಲನೆ, ಪತ್ರ ವ್ಯವಹಾರ ಸೇರಿದಂತೆ ಹಲವಾರು ಕಾರ್ಯಗಳಲ್ಲಿ ನಿರತರಾಗಿರುತ್ತಿದ್ದರಲ್ಲದೆ ಇಳಿವಯಸ್ಸಿನಲ್ಲೂ ದಣಿವರಿಯದೇ ಕಾರ್ಯನಿರತರಾಗಿ ಕಾಯಕವೇ ಕೈಲಾಸ ಎಂಬುದನ್ನು ನಡೆ ನುಡಿಯಲ್ಲೂ ತೋರಿಸಿಕೊಟ್ಟಿದ್ದಾರೆ.

 ಶ್ರೀಗಳಿಗೆ ಸಂದ ಪ್ರಶಸ್ತಿ, ಸನ್ಮಾನಗಳು

 ಜಾತ್ಯತೀತ, ಧರ್ಮಾತೀತ ಶಿಕ್ಷಣ ಸೇವೆಯನ್ನು ಪರಿಗಣಿಸಿ 1965ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯವು ಶಿವಕುಮಾರ ಶ್ರೀಗಳಿಗೆ ಡಿ.ಲಿಟ್ ನೀಡಿ ಗೌರವಿಸಿದೆ. ಶ್ರೀಗಳ 100ನೇ ವರ್ಷದ ಹುಟ್ಟು ಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಅವರ ಜೀವಮಾನ ಸಮಾಜ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರಕಾರ ರಾಜ್ಯದ ಮಹೋನ್ನತ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.ಶ್ರೀಗಳ ಪಟ್ಟಾಧಿಕಾರವಾಗಿ 80 ವರ್ಷದ ಬಳಿಕ 2013ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟ್‌ರೇಟ್ ನೀಡಿ ಗೌರವಿಸಿದೆ. 2015ರಲ್ಲಿ ಭಾರತ ಸರಕಾರ ‘ಪದ್ಮಭೂಷಣ’ ಪ್ರಶಸ್ತಿ ನೀಡಿ ಗೌರವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ