ಇದು ರಾಜಕೀಯ ಲಾಭದ ಜಾಣ ನಡೆಯೇ?

Update: 2019-01-21 18:32 GMT

ಮಾನ್ಯರೇ,

ಮೇಲ್ಜಾತಿ ಬಡವರು ಮತ್ತು ಮೀಸಲಾತಿ ರಾಜಕೀಯ ಕೇಂದ್ರದ ಬಿಜೆಪಿ ಸರಕಾರಕ್ಕೆ ಈ ದೇಶದ ಮೇಲ್ಜಾತಿ ಬಡವರ ಬಗ್ಗೆ ದಿಢೀರನೆ ಕಾಳಜಿ ಮತ್ತು ಜವಾಬ್ದಾರಿ ಬಂದಿರುವುದಕ್ಕೆ ದೇಶದೆಲ್ಲೆಡೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಅಸಲಿಗೆ ಇದೊಂದು ರಾಜಕೀಯ ಲಾಭಕ್ಕಾಗಿ ಕೈಗೊಂಡ ಸ್ವಾರ್ಥ ನಿರ್ಧಾರ. ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ತಾನು ನೀಡಿದ ಯಾವ ಭರವಸೆಯನ್ನು ಈಡೇರಿಸಲಾಗದ ಪ್ರಧಾನಿ ಮೋದಿ ಅವರು ಇದೀಗ ತಮ್ಮ ವೈಫಲ್ಯಗಳನ್ನು ಮರೆಮಾಚಲು ಮೇಲ್ಜಾತಿ ಬಡವರಿಗೆ ಮೀಸಲಾತಿ ನೀಡುವ ಮತ್ತೊಂದು ದೊಡ್ಡ ನಾಟಕದ ಷಡ್ಯಂತ್ರ ರೂಪಿಸಿದ್ದಾರೆ.

ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಯಾವುದೇ ತಜ್ಞರ ಸಮಿತಿಯನ್ನು ನೇಮಿಸಿ, ಅಧ್ಯಯನ ನಡೆಸದೆ, ಯಾವುದೇ ಅಂಕಿ ಅಂಶಗಳ ಆಧಾರವಿಲ್ಲದೆ ಅವೈಜ್ಞಾನಿಕವಾಗಿ ಮನಬಂದಂತೆ ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಇದೆಯೇ? ಸಂವಿಧಾನದ 368ನೇ ವಿಧಿಯ ಪ್ರಕಾರ ಸಂವಿಧಾನದ ಭಾಗ ಮೂರರ ಮೂಲಭೂತ ಹಕ್ಕಿನಲ್ಲಿ ಬರುವ ಸಮಾನತೆ ಹಕ್ಕಿನ 15ನೇ ವಿಧಿ ಮತ್ತು 16ನೇ ವಿಧಿಗೆ ತಿದ್ದುಪಡಿ ಮಾಡುವ ಮೂಲಕ ಈ ದೇಶದ ಮೇಲ್ಜಾತಿಯ ಬಡವರಿಗೆ 10 ಶೇ. ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗದಲ್ಲಿ ನೀಡಲಾಗುವುದೆಂದು ಕೇಂದ್ರದ ವಾದ. ಆದರೆ 1993ರ ಮಂಡಲ ಕಮಿಷನ್ ಪ್ರಕಾರ ಎಂದೇ ಪ್ರಖ್ಯಾತರಾಗಿರುವ ಇಂದಿರಾ ಸ್ವಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿಯ ಪ್ರಮಾಣ 50 ಶೇ. ಮೀರುವಂತಿಲ್ಲ ಎಂಬ ಸ್ಪಷ್ಟವಾದ ತೀರ್ಪನ್ನು ನೀಡಿದೆ. ಈ ವಿಚಾರ ಗೊತ್ತಿದ್ದೂ ಕೇಂದ್ರ ಸರಕಾರ ಪುನಃ ಶೇ. 10 ಮೀಸಲಾತಿಯನ್ನು ಕಲ್ಪಿಸಲು ಹೊರಟಿರುವ ಹಿಂದೆ ಒಂದು ರಾಜಕೀಯ ಲಾಭದ ಜಾಣ ನಡೆ ಇದೆ. ಈಗಾಗಲೇ ಸಂಸತ್ತಿನಲ್ಲಿ ಅನುಮೋದನೆ ಪಡೆದಿರುವ ಈ ಮಸೂದೆಯು ಒಂದು ವೇಳೆ ಸುಪ್ರೀಂಕೋರ್ಟಿನಿಂದ ತಿರಸ್ಕೃತಗೊಂಡರೆ ಇಲ್ಲಿ ಸುಪ್ರೀಂ ಕೋರ್ಟನ್ನು ಖಳನಾಯಕನ ಸ್ಥಾನದಲ್ಲಿ ನಿಲ್ಲಿಸಿ ತಾನು ಜನತೆಯ ಅನುಕಂಪ ಗಿಟ್ಟಿಸುವ ಹುನ್ನಾರ ಕೇಂದ್ರ ಸರಕಾರದ್ದು. ಈ ಮೂಲಕ ರಾಜಕೀಯ ಲಾಭದ ಲೆಕ್ಕಾಚಾರ ಅಸ್ತ್ರವನ್ನು ಆಯೋಜಿಸಿರುವುದು ಸ್ಪಷ್ಟವಾಗಿದೆ. ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಮತ್ತು ರಾಮಜನ್ಮಭೂಮಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟನ್ನು ಈಗಾಗಲೇ ಖಳನಾಯಕನ ಸ್ಥಾನದಲ್ಲಿ ನಿಲ್ಲಿಸಲಾಗಿದೆ ಎಂಬ ವಿಚಾರವನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. 

Writer - ರಮೇಶ್ ಎಂ. ಚಿತ್ರದುರ್ಗ

contributor

Editor - ರಮೇಶ್ ಎಂ. ಚಿತ್ರದುರ್ಗ

contributor

Similar News