ಗ್ರಾಮೀಣ ರಸ್ತೆಗಳು ಅಭಿವೃದ್ಧಿಯಾಗಲಿ

Update: 2019-01-21 18:32 GMT

ಮಾನ್ಯರೇ,

 ಯಾವುದೇ ಜನಪ್ರತಿನಿಧಿ ಮತ್ತು ಅಧಿಕಾರಿಗಳು ಗ್ರಾಮೀಣ ಭಾಗಕ್ಕೆ ಬಂದಾಗ ದುಸ್ಥಿತಿಯಲಿರುವ ರಸ್ತೆಗಳನ್ನು ಕಂಡು ಸಮಸ್ಯೆ ಪರಿಹರಿಸುವ ಭರವಸೆ ನೀಡುತ್ತಾರೆ ಆದರೆ, ಆ ನಂತರ ಯಾವುದೇ ಕ್ರಮ ಕೈಗೊಳ್ಳುವುದು ಕಾಣುತ್ತಿಲ್ಲ. ಜನಪ್ರತಿನಿಧಿಗಳು ಭಾಷಣಗಳಲ್ಲಿ ಮಾತ್ರ ದೇಶದ ಅಭಿವೃದ್ಧಿಯು ಹಳ್ಳಿಗಳ ಪ್ರಗತಿಯಿಂದ ಮಾತ್ರ ಸಾಧ್ಯ ಎನ್ನುತ್ತಾರೆ. ಇಂದು ತುರ್ತಾಗಿ ರೋಗಿಯನ್ನು ಆಸ್ಪತ್ರೆಗೆ ಸೇರಿಸಲು ಗ್ರಾಮಗಳಿಗೆ ಬರಬೇಕಾದ ಆ್ಯಂಬುಲೆನ್ಸ್‌ಗಳು ಸಂಚರಿಸಲು ಸಾಧ್ಯವಾಗದೆ ಪರದಾಡುತ್ತವೆ. ಇನ್ನ್ನು ಬಸ್‌ಗಳಂತೂ ಕುಂಟು ನೆಪಗಳನ್ನು ಹೇಳಿಕೊಂಡು ಬರುವುದೇ ಇಲ್ಲ, ಹೀಗಾಗಿ ಕಾಲ್ನಡಿಗೆಯಲ್ಲೇ ಜನರು ಕಿ.ಮೀ. ಗಟ್ಟಲೆ ದೂರವಿರುವ ಹೋಬಳಿ ಕೇಂದ್ರಗಳಿಗೆ ಬರಬೇಕಾಗಿದೆ. ಸರಕಾರಗಳು ರಸ್ತೆಯ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡುತ್ತಿವೆ. ಆದರೆ, ಅಸಮರ್ಪಕ ಬಿಲ್ ಮಂಜೂರು, ಕಮಿಷನ್ ದಂಧೆ ಮತ್ತು ಅವ್ಯವಹಾರ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುತ್ತಿಲ್ಲ. ಇದರಿಂದ ಬಹುತೇಕ ರಸ್ತೆಗಳು ಆರೇಳು ತಿಂಗಳು ಕಳೆಯುವಷ್ಟರಲ್ಲಿ ಹಾಳಾಗಿರುತ್ತವೆ. ಕೆಲುವು ಕಡೆಗಳಲ್ಲಂತೂ ಚುನಾವಣೆ ಸಂದರ್ಭದಲ್ಲಿ ಒಂದಿಷ್ಟು ತೇಪೆ ಕೆಲಸ ನಡೆಯುತ್ತವೆಯೇ ಹೊರತು ಉಳಿದ ವೇಳೆಯಲ್ಲಿ ಧೂಳಿನ ಸ್ನಾನವೇ ಜನರ ಪಾಲಿನ ಭಾಗ್ಯವಾಗುತ್ತದೆ. ಇಂತಹ ಗುಂಡಿಗಳಿಂದ ಕೂಡಿರುವ ರಸ್ತೆಗಳಿಂದ ಅನೇಕ ಅಪಘಾತಗಳಾಗಿ ಅಮೂಲ್ಯ ಜೀವಗಳು ಬಲಿಯಾಗುತ್ತಿವೆ. ಆದ್ದರಿಂದ ಇನ್ನಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರಾಜ್ಯದ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಬೇಕಾಗಿದೆ.

Writer - -ಪ್ರೇಮ ಎಸ್. ಎನ್., ಬೆಂಗಳೂರು

contributor

Editor - -ಪ್ರೇಮ ಎಸ್. ಎನ್., ಬೆಂಗಳೂರು

contributor

Similar News