ಶೋಕಸಾಗರದಲ್ಲಿ ಮಲೆನಾಡಿನ ಭಕ್ತಗಣ

Update: 2019-01-21 18:35 GMT

ಶಿವಮೊಗ್ಗ, ಜ. 21: ಸಿದ್ದಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ವಿಧಿವಶರಾದ ವಿಚಾರವು ಮಲೆನಾಡು ಭಾಗದಲ್ಲಿರುವ ಅವರ ಅಪಾರ ಭಕ್ತಾದಿಗಳನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ.

ಸ್ವಾಮೀಜಿಯವರು ವಿಧಿವಶರಾದ ವಿಷಯ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ, ಸ್ವಾಮೀಜಿಯವರ ಭಕ್ತ ಸಾಗರದ ಮನದಲ್ಲಿ ಮೌನ ಮಡುಗಟ್ಟುವಂತೆ ಮಾಡಿತ್ತು. ಶ್ರೀಗಳು ಇಹಲೋಕ ತ್ಯಜಿಸಿದ್ದು ನಿಜವೇ? ಎಂಬುದನ್ನು ಖಚಿತಪಡಿಸಿಕೊಳ್ಳಲು ಕೆಲ ಭಕ್ತರು ಆತಂಕದಿಂದ ತಮ್ಮ ಆಪ್ತರ ಬಳಿ ವಿಚಾರಿಸುತ್ತಿದ್ದ ದೃಶ್ಯ ಕಂಡುಬಂದಿತು. ಮತ್ತೊಂದೆಡೆ ಇನ್ನೂ ಹಲವರು ಶ್ರೀಗಳ ಪಾರ್ಥಿವ ಶರೀರದ ಅಂತಿಮ ವಿಧಿವಿಧಾನ ಯಾವಾಗ ನಡೆಯಲಿದೆ ಎಂಬುದರ ವಿವರ ಕಲೆ ಹಾಕುವುದರಲ್ಲಿ ತಲ್ಲೀನರಾಗಿದ್ದರು. ಮಂಗಳವಾರ ಸಂಜೆ 4 ಗಂಟೆಗೆ ಅಂತಿಮ ವಿಧಿ ವಿಧಾನ ನೆರವೇರಿಸಲಾಗುವುದು ಎಂಬ ಸಿದ್ಧಗಂಗಾ ಮಠದ ಅಧಿಕೃತ ಸಂದೇಶ ಹೊರಬೀಳುತ್ತಿದ್ದಂತೆ, ಜಿಲ್ಲೆಯ ವಿವಿಧೆಡೆಯಿಂದ ನೂರಾರು ಭಕ್ತರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ತುಮಕೂರಿನತ್ತ ತೆರಳಿದರು. ಭಕ್ತ ಸಮೂಹ: ಸಿದ್ಧ್ದಗಂಗಾ ಶ್ರೀಗಳಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಅಪಾರ ಭಕ್ತ ಸಮೂಹವಿದೆ.

ಹಲವು ದಶಕಗಳ ಹಿಂದಿನಿಂದಲೂ ಅವರು ಜಿಲ್ಲೆಯಲ್ಲಿ ಧಾರ್ಮಿಕ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. 2007-08 ನೇ ಸಾಲಿನಲ್ಲಿ ಬಿ.ಎಸ್. ಯಡಿಯೂರಪ್ಪ ಕುಟುಂಬ ಒಡೆತನಕ್ಕೆ ಸೇರಿದ ಶಿಕ್ಷಣ ಸಂಸ್ಥೆಯೊಂದರ ಉದ್ಘಾಟನೆಗೆ ಅವರು ಕೊನೆಯ ಬಾರಿ ಆಗಮಿಸಿದ್ದರು.

Writer - ಬಿ. ರೇಣುಕೇಶ್

contributor

Editor - ಬಿ. ರೇಣುಕೇಶ್

contributor

Similar News